Tuesday 20 December 2022

 ಸದ್ದಿಲ್ಲದ ಸೇವೆಗೆ ರಾಷ್ಟ್ರಪತಿ ಪುರಸ್ಕಾರ 

 


 



ಸರಕಾರಿ ಸೇವೆಯಲ್ಲಿರುವವರು  ಆಡಿದ ಮಾತಿಗಿಂತ  ಮಾಡಿದ ಕೆಲಸ, ಜನರೊಂದಿಗಿನ ಅವರ ಒಡನಾಟ  ಸದಾ ಪರಿಗಣಿಸಲ್ಪಡುತ್ತದೆ. ಜೊತೆಗೆ ಗೌರವಯುತ ಸಂಬಂಧ, ಮುಕ್ತ ವ್ಯವಹಾರ ಇಟ್ಟುಕೊಂಡವರು ಸದಾಕಾಲ ನೆನಪಿನಲ್ಲಿರುತ್ತಾರೆ. ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಾರೆ.  

ಈ ಮಾತು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ  ಬೆರಳಚ್ಚು ವಿಭಾಗದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ, ಸುಮಾರು  ೨೭ ವರ್ಷದಿಂದ ಇಲಾಖೆಯಲ್ಲಿರುವ, ೨೦೨೦ರ  ಸ್ವಾತಂತ್ರ್ಯೋತ್ಸವದ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿರುವ ಅತಿಕ್ ಉರ್ ರೆಹಮಾನ್ ಅವರಿಗೆ ಅನ್ವಯಿಸುತ್ತದೆ. ಅವರಿಗೆ ಕಳೆದ ವಾರ ಈ ಪ್ರಶಸ್ತಿಯನ್ನು ರಾಜ್ಯಪಾಲರು ಪ್ರದಾನ ಮಾಡಿದ್ದಾರೆ. 

  ರೆಹಮಾನ್ ಅವರದು ನಯ-ವಿನಯ, ಇನ್ನೊಬ್ಬರನ್ನು ಗೌರವದಿಂದ ಕಾಣುವ, ಸೌಮ್ಯ ಸ್ವಭಾವ, ಸದಾ ನಗುಮೊಗ, ಒಂದಿನಿತೂ ಸಿಡಿಮಿಡಿಗೊಳ್ಳದ ಸ್ವಭಾವ. ತಮ್ಮ ಉತ್ತಮ ಸೇವೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮೇಲಧಿಕಾರಿಗಳ ಮನಗೆದ್ದಿದ್ದಾರೆ. ರೆಹಮಾನ್ ಎಂದರೆ ಬೆರಳಚ್ಚು ವಿಭಾಗದವರು ಎಂದೇ ಪರಿಚಿತರು. ಅಷ್ಟೊಂದು ಖ್ಯಾತಿಯನ್ನು ಪಡೆದವರು. ೨೬ ವರ್ಷಗಳಿಂದ ಬೆರಳಚ್ಚು ವಿಭಾಗದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸಿರುವುದರಿಂದಲೇ ರಾಷ್ಟ್ರಪತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಲತಃ ಚೆನ್ನಗಿರಿ ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದವರಾದ ಇವರು ಅಲ್ಲಿಯೇ ಪದವಿಯವರೆಗೆ ಓದಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಮುಗಿಸಿ ಆನಂತರ ೧೯೯೩ರಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದರು. ಕಾನ್ಸ್ಟೇಬಲ್ ಆಗಿ ಆನವಟ್ಟಿಯಲ್ಲಿ, ಡಿಸಿಐಬಿಯಲ್ಲಿ ಕೆಲಸ ಮಾಡಿದ್ದಾರೆ. ಬೆರಳಚ್ಚು ಮುದ್ರೆ ವಿಭಾಗದಲ್ಲಿ ಕಾನ್‌ಸ್ಟೇಬಲ್‌ನಿಂದ ಪ್ರಭಾರ ಪಿಎಸ್‌ಐವರೆಗೆ ಕೆಲಸ ಮಾಡಿದ್ದಾರೆ. ಅಷ್ಟೊಂದು ಸುಲಭವಲ್ಲದ ಅಖಿಲ ಭಾರತ ಬೆರಳಚ್ಚುಮುದ್ರೆ ತಜ್ಞರ ಪರೀಕ್ಷೆಯಲ್ಲಿ ೨೦೦೧ರಲ್ಲಿ ಪಾಸಾಗಿ ತಜ್ಞರೆಂದು ಪ್ರಮಾಣಪತ್ರ ಪಡೆದಿದ್ದಾರೆ.  ಈ ಪರೀಕ್ಷೆ ತೆಗೆದುಕೊಳ್ಳುವಾಗ ಬೆಂಗಳೂರಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ  ಆಯ್ಕೆಯಾಗಬೇಕು. ಅಂದರೆ ಈ ವಿಭಾಗದಲ್ಲಿ ಅಷ್ಟೊಂದು ಸೂಕ್ಷ್ಮತೆ ಮತ್ತು ಬುದ್ಧಿಮತ್ತೆಯನ್ನು ಹೊಂದಿರಬೇಕು. ಕನಿಷ್ಠ ಮೂರು ವರ್ಷ ಈ ವಿಭಾಗದಲ್ಲಿ ಸೇವೆ ಸಲ್ಲಿಸಿರಬೇಕೆಂಬ ನಿಯವಿದೆ. ಅಂತಹವರನ್ನು ಮಾತ್ರ ಅಖಿಲ ಭಾರತ ಮಟ್ಟದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

 ಇಷ್ಟೊಂದು ಕಷ್ಟದ ಪರೀಕ್ಷೆಯನ್ನು ಪಾಸು ಮಾಡಿ ಬೆರಳಚ್ಚು ವಿಭಾಗದಲ್ಲ್ಲಿಯೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಿವಿಲ್ ಪೊಲೀಸರಾದರೂ ಹಿರಿಯ ಅಧಿಕಾರಿಗಳು ಇತರೆ ಕೆಲಸಕ್ಕೆ ಎಂದೂ ಇವರನ್ನು ನೇಮಿಸಿಲ್ಲ. ಹಿರಿಯ ಅಧಿಕಾರಿಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ಅವರು ಮಾಡಿದ ಸಾಧನೆ ಗಮನಿಸಿ ಸುಮಾರು ೧೬೦ಕ್ಕೂ ಅಧಿಕ ನಗದು ಬಹುಮಾನ ಲಭಿಸಿದೆ. ಜೊತೆಗೆ ಸುಮಾರು ೨೫ ಗುಡ್ ಸರ್ವೀಸ್ ಎಂಟ್ರಿ, ಎಡಿಜಿಪಿ, ಎಸ್‌ಪಿ ಅವರಿಂದ ನಾಲ್ಕೈದು ಕಮಾಂಡೇಶನ್ ಲೆಟರ್ ಸಹ ಲಭಿಸಿದೆ.

 ನಿವೃತ್ತಿ ಅಂಚಿನಲ್ಲಿರುವ ರೆಹಮಾನ್ ಯಾರೊಂದಿಗೂ ಮುನಿಸಿಕೊಂಡಿದ್ದಿಲ್ಲ, ಜಗಳವಾಡಿದ್ದಿಲ್ಲ ಎನ್ನುತ್ತಾರೆ ಅವರ ಸಹಪಾಠಿಗಳೂ ಕೂಡ. ಅಷ್ಟೊಂದು ಶಾಂತಸ್ವಭಾವದ, ಸಹೃದಯಿ ವ್ಯಕ್ತಿ ಇವರಾಗಿದ್ದಾರೆ. ಇವರು ಕೆಲಸ ಮಾಡುವ ವಿಭಾಗ ಸಾರ್ವಜನಿಕರೊಂದಿಗಿನ ಸಂಪರ್ಕದ್ದಲ್ಲವಾದರೂ ಹೆಚ್ಚಿನ ಮಿತ್ರರನ್ನು ಅವರು ಹೊರಗಡೆ ಹೊಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠರೂ ಸಹ ರೆಹಮಾನ್ ಸಾಧನೆ ಮೆಚ್ಚಿ  ಅಭಿನಂದನೆ ಸಲ್ಲಿಸಿದ್ದಾರೆ. 

published on 19 Dec. 20202


......................... 


 ಅಂಗವೈಕಲ್ಯವನ್ನೇ ಮೆಟ್ಟಿಲಾಗಿಸಿಕೊಂಡ 

ಶಿವಕುಮಾರ್

 



 ನಿಮ್ಮ ಅಂಗವೈಕಲ್ಯದ ಬಗ್ಗೆ ಯೋಚಿಸಬೇಡಿ, ಸಾಧನೆಯತ್ತ ಗಮನವಿಡಿ. ಅದು ಸಾಧನೆಗೆ ಎಂದೂ ಅಡ್ಡಿಯಾಗದು.

ಈ ಮಾತನ್ನು ಹೇಳಿದವರು ಜೀವನಪರ್‍ಯಂತ ಅಂಗವೈಕಲ್ಯನಾಗಿ, ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದ ವಿಜ್ಞಾನಿ ಸ್ಟೀಫನ್ ಹಾಕಿಂಗ್.

 ಈತನ ಮಾತು ಲಕ್ಷಾಂತರ ಅಂಗವಿಕಲರಿಗೆ ಸ್ಫೂರ್ತಿಯಾಗಿದೆ.  ಅನೇಕ ಸಾಧನೆ ಮಾಡಲು ನಾಂದಿಯಾಗಿದೆ. ಅಂಗವೈಕಲ್ಯ ಮರೆತು ಸ್ವಾವಲಂಬಿ ಜೀವನ ಸಾಗಿಸುವುದಕ್ಕೂ ಅನುಕೂಲವಾಗಿದೆ. 

ಶಿವಮೊಗ್ಗ ಸಮೀಪದ ಆಯನೂರು  ಚನ್ನಹಳ್ಳಿಯ ಸಿ. ಆರ್. ಶಿವಕುಮಾರ್ ಹುಟ್ಟುವಾಗ ಎಲ್ಲರಂತೆಯೇ ಚೆನ್ನಾಗಿಯೇ ಇದ್ದರು. ನಾಲ್ಕನೆಯ ವಯಸ್ಸಿನಲ್ಲಿ ಸಂಭವಿಸಿದ ಒಂದು ಸಣ್ಣ ಎಡವಟ್ಟಿನಿಂದ ಎರಡು ಕಾಲುಗಳ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ಅಂಗವಿಕಲರಾದರೂ ಛಲಬಿಡದೆ ಓದಿ, ವಿವಿಧೆಡೆ ಕೆಲಸ ಮಾಡುತ್ತ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ, ಅಂಗವಿಕಲರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈ ವರ್ಷದ ಅಂಗವಿಕಲರ ದಿನ ಸರಕಾರ  ಕೊಡಮಾಡುವ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶಿವಕುಮಾರ್ ಡಿಪ್ಲೊಮಾ ಇನ್ ಕಂಪ್ಯೂಟರ್ ಓದಿದ್ದಾರೆ. ಇದಕ್ಕೆ ಕಾರಣ, ಅಂಗವಿಕಲತೆಯನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿದ ಕ್ರೀಡಾಪಟು ಮಾಲತಿ ಹೊಳ್ಳ. ಅವರ ಸಂಸ್ಥೆಯು ಇವರಿಗೆ ಈ ಶಿಕ್ಷಣ ಕೊಡಿಸಿದೆ. ಬಳಿಕ ಕಾಲ್ ಸೆಂಟರ್‌ಗಳಲ್ಲಿ ಕೆಲವು ವರ್ಷ ಕೆಲಸ ಮಾಡಿ ಸದ್ಯ “ಸಕ್ಷಮ” (ವಿಶೇಷ ಚೇತನರ  ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟೀಯ ಸಂಘಟನೆ) ಯಲ್ಲಿ ಜಿಲ್ಲಾ  ಸಂಚಾಲಕರಾಗಿದ್ದಾರೆ. ಒಂದರಿಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧನಾ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ. ತಿಂಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಎಲ್ಲಾ ವರ್ಗದ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸುತ್ತಿದ್ದಾರೆ. ಕಥೆ, ಕವನಗಳನ್ನು ರಚಿಸುತ್ತಾರೆ.   

 ಸಕ್ಷಮದ ವತಿಯಿಂದ ಜಿಲ್ಲೆಯ ಎಲ್ಲಾ   ಗ್ರಾಮ ಪಂಚಾಯಿತಿಗೆ ಒಳಪಟ್ಟಂತಹ ಹಳ್ಳಿಗಳ ವಿಶೇಷಚೇತನರಿಗೆ  ಅವರ ನ್ಯೂನತೆಗಳ ಬಗ್ಗೆ ತಿಳಿಸಿ ಅದರ ಆಧಾರದ ಮೇಲೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ಮಾಡಿಸಿಕೊಟ್ಟಿದ್ದಾರೆ. ಗ್ರಾಮ ಪಂಚಾಯ್ತಿ, ಮಹಾನಗರ ಪಾಲಿಕೆ, ಪುರಸಭೆಗಳಲ್ಲಿ, ಜಿಪಂ, ತಾಪಂಗಳಲ್ಲಿ ಸಿಗುವ ಸೌಲಭ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ೨೫೦೦ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಸಾಮಗ್ರಿಗಳನ್ನು ವಿತರಿಸುವಲ್ಲಿ ಮುಂಚೂಣಿಯಲ್ಲಿದ್ದರು..

 ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನು ಕೊಡಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದು,  ೪೫ ಜನ ವಿಶೇಷಚೇತನರಿಗೆ ವ್ಹೀಲ್‌ಚೇರ್‌ಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಸಕ್ಷಮ ಕೇಂದ್ರದಲ್ಲೇ ಕೆಲಸ ಮಾಡುತ್ತಾ ಅಲ್ಲಿಗೆ ಬರುವ ಅಂಗವಿಕಲರ ಎಲ್ಲಾ ಕುಂದುಕೊರತೆಗಳನ್ನು ಆಲಿಸಿ ಅದಕ್ಕೆ ಸಮರ್ಪಕ ಪರಿಹಾರೋಪಾಯದ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.  

ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಇವರು,  ಕರುನಾಡ ಕಣ್ಮಣಿ, ಕರುನಾಡ ಯುವರತ್ನ, ಹೆಮ್ಮೆಯ  ಸಾಧಕ, ಪ್ರಜಾಸೇವಾರತ್ನ, ಸೇವಾ ಸುರಭಿ, ಸೇವಾರತ್ನ, ಕೊರೊನಾ ವಾರಿಯರ್ ಮೊದಲಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೧೫೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾನೇ ಒಬ್ಬ ಅಂಗವಿಕಲನಾಗಿ ತನ್ನಂತಹ ಸಾವಿರಾರು ಜನರಿಗೆ ದಾರಿದೀಪವಾಗುವ ಕೆಲಸವನ್ನು ಸಕ್ಷಮದ ಬೆಂಬಲದಿಂದ ಮಾಡುತ್ತಿದ್ದಾರೆ.  ಇತರರ ಬಾಳಿಗೆ ಅನುಕೂಲ ಕಲ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 

published on dec, 12 2022.

 .............................


Monday 5 December 2022

 ರಾಷ್ಟ್ರೀಯ ಕೇರಂ ಪಟು ರವಿ

 


ಕೇರಂ ಎಂದಾಕ್ಷಣ ನೆನೆಪಾಗುವುದು ಬಾಲ್ಯ. ರಜಾದಿನದಲ್ಲಿ  ಮನೆಮಂದಿ,  ನೆಂಟರಿಷ್ಟರು, ಮಿತ್ರರೊಂದಿಗೆ ಸೇರಿ ಆಡಿದ ಆಟ ಕಾಡುತ್ತದೆ. ಹೌದು, ಇಂತಹ ಆಟವನ್ನು ಮನೆಯಿಂದ ಹೊರಗೆ ಅಡಿ ಅದರಲ್ಲಿ ಯಶಸ್ಸು ಸಾಧಿಸುವವರು ಅಥವಾ ಅದೇ ಆಟವನ್ನು ಹವ್ಯಾಸವನ್ನಾಗಿ ಮಾಡಿಕೊಂಡವರು ತೀರಾ ಕಡಿಮೆ. ಏಕೆಂದರೆ ಇದಕ್ಕೆ ವಿಶೇಷ ಟೂರ್ನಿಗಳಾಗಲಿ, ಸಂಘಟನೆಗಳಾಗಲಿ, ಕಲಿಕಾ ಕೇಂದ್ರಗಳಾಗಲಿ, ವಿಶೇಷ ಕೋಚ್‌ಗಳಾಗಲಿ ಇಲ್ಲ. ಜೊತೆಗೆ ಇದನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಕೆಲಸವು ನಡೆಯುತ್ತಿಲ್ಲ. 

ಇಂತಹ ಸಂದರ್ಭದಲ್ಲೂ ಛಲ ಬಿಡದೆ ಅದನ್ನು ಕಲಿತು, ಸತತ ಮುಂದುವರೆಸಿ ಸಾಧನೆ ಮಾಡಿದವರಲ್ಲಿ ಶಿವಮೊಗ್ಗದ ಸಿ. ರವಿ ಒಬ್ಬರು. ರವಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಿ ಬಹುಮಾನ ಗಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎರಡನೆ ದರ್ಜೆ ಸಹಾಯಕರಾಗಿರುವ  ರವಿ, ಬಾಲ್ಯದಿಂದಲೇ ಕೇರಮ್‌ಗೆ ಮನಸೋತವರು. ಅವರ ಮನೆಯ ಹತ್ತಿರ ಅರಸುಕುಮಾರ್ ಎನ್ನುವವರು ನಡೆಸುತ್ತಿದ್ದ ಕೇರಂ ಕೇಂದ್ರದಲ್ಲಿ ಆಡಲು ಹೋಗುತ್ತಿದ್ದರು. ೫ ರೂ. ಕೊಟ್ಟರೆ ಒಂದು ಗಂಟೆ ಆಡಲು ಅವಕಾಶವಿತ್ತು. ಸತತವಾಗಿ ಆಡುತ್ತಾ ಅದನ್ನು ಕರಗತ ಮಾಡಿಕೊಂಡರು. ಸ್ವತಃ ಕೋಚ್ ಆಗಿದ್ದ ಅರಸುಕುಮಾರ್ ತಪ್ಪುಗಳನ್ನು ತಿದ್ದುತ್ತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಐದಾರು ವರ್ಷ ಕಲಿತ ಬಳಿಕ  ಕಾಲೇಜು ದಿನಗಳಲ್ಲಿ ಪ್ರಕಾಶ್ ಎನ್ನುವವರು ಇವರಿಗೆ ಇನ್ನಷ್ಟು ಮಾರ್ಗದರ್ಶನ ನೀಡಿದರು. ಇದರಿಂದ ಇನ್ನಷ್ಟು ಆತ್ಮವಿಶ್ವಾಸ ಮೂಡಿತು. ಸರಕಾರಿ ನೌಕರಿ ದೊರೆತಿದ್ದರಿಂದ ನೌಕರರ ಸಂಘ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಕೇರಮ್ ಇತ್ತು. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪಾಲ್ಗೊಂಡು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಗೆದ್ದು ರಾಷ್ಟೀಯ ಟೂರ್ನಿಯಲ್ಲಿ ಆಡಿದರು.

 ಇಂತಹ ಸಂದರ್ಭದಲ್ಲೂ ಛಲ ಬಿಡದೆ ಅದನ್ನು ಕಲಿತು, ಸತತ ಮುಂದುವರೆಸಿ ಸಾಧನೆ ಮಾಡಿದವರಲ್ಲಿ ಶಿವಮೊಗ್ಗದ ಸಿ. ರವಿ ಒಬ್ಬರು. ರವಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಿ ಬಹುಮಾನ ಗಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎರಡನೆ ದರ್ಜೆ ಸಹಾಯಕರಾಗಿರುವ  ರವಿ, ಬಾಲ್ಯದಿಂದಲೇ ಕೇರಮ್‌ಗೆ ಮನಸೋತವರು. ಅವರ ಮನೆಯ ಹತ್ತಿರ ಅರಸುಕುಮಾರ್ ಎನ್ನುವವರು ನಡೆಸುತ್ತಿದ್ದ ಕೇರಂ ಕೇಂದ್ರದಲ್ಲಿ ಆಡಲು ಹೋಗುತ್ತಿದ್ದರು. ೫ ರೂ. ಕೊಟ್ಟರೆ ಒಂದು ಗಂಟೆ ಆಡಲು ಅವಕಾಶವಿತ್ತು. ಸತತವಾಗಿ ಆಡುತ್ತಾ ಅದನ್ನು ಕರಗತ ಮಾಡಿಕೊಂಡರು. ಸ್ವತಃ ಕೋಚ್ ಆಗಿದ್ದ ಅರಸುಕುಮಾರ್ ತಪ್ಪುಗಳನ್ನು ತಿದ್ದುತ್ತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಐದಾರು ವರ್ಷ ಕಲಿತ ಬಳಿಕ  ಕಾಲೇಜು ದಿನಗಳಲ್ಲಿ ಪ್ರಕಾಶ್ ಎನ್ನುವವರು ಇವರಿಗೆ ಇನ್ನಷ್ಟು ಮಾರ್ಗದರ್ಶನ ನೀಡಿದರು. ಇದರಿಂದ ಇನ್ನಷ್ಟು ಆತ್ಮವಿಶ್ವಾಸ ಮೂಡಿತು. ಸರಕಾರಿ ನೌಕರಿ ದೊರೆತಿದ್ದರಿಂದ ನೌಕರರ ಸಂಘ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಕೇರಮ್ ಇತ್ತು. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪಾಲ್ಗೊಂಡು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಗೆದ್ದು ರಾಷ್ಟೀಯ ಟೂರ್ನಿಯಲ್ಲಿ ಆಡಿದರು.

 ಸುಮಾರು ಆರೇಳು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ರಾಜ್ಯಮಟ್ಟದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಕ್ರೀಡಾಕೂಟ ನಡೆದಾಗ ಬಹುಮಾನ ಇವರ ಪಾಲಾಗಿದೆ. ಇಲ್ಲಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ದೆಹಲಿಯಲ್ಲಿ ೨೦೧೯ರಲ್ಲಿ, ೨೦೨ರಲ್ಲಿ  ಮತ್ತೆ ದೆಹಲಿಯಲ್ಲಿ, ೨೦೨೧ರಲ್ಲಿ ಚೆನ್ನೈನಲ್ಲಿ, ಕಳೆದ ವಾರ ತ್ರಿಪುರಾದಲ್ಲಿ ಆಡಿ ನಾಲ್ಕನೆಯ ಸ್ಥಾನ ಗಳಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಶಾ ಅವರಿಂದ ಸ್ಮನಾನಕ್ಕೊಳಗಾಗಿದ್ದಾರೆ. 

 ಇವರ ಸಾಧನೆಗೆ ಹಲವೆಡೆ ಗೌರವ ದಕ್ಕಿದೆ, ಸನ್ಮಾನ, ಪುರಸ್ಕಾರ ದೊರೆತಿದೆ. ಕೇರಂ ಆಡುವ ಮಿತ್ರರೆಲ್ಲ ಸೇರಿ ಭಾರತ್ ಕೇರಂ ಅಕಾಡೆಮಿಯನ್ನು ನಗರದಲ್ಲಿ ಸ್ಥಾಪಿಸಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಹಲವರಿಗೆ ತರಬೇತಿ ಕೊಡುತ್ತಿದ್ದಾರೆ. ಜೊತೆಗೆ ತಾವೂ ಆಡುತ್ತಿದ್ದಾರೆ. ಸುಮಾರು ೩೫ ಸದಸ್ಯರು ಅಕಾಡೆಮಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಆಯ್ದ ಭಾಗಗಳ ಶಾಲೆಗಳಲ್ಲಿ ಚಿಕ್ಕಮಕ್ಕಳಿಗೆ ಕೇರಂ ತರಬೇತಿ ನೀಡುವ ಯೋಚನೆಯಲ್ಲಿದ್ದಾರೆ. ಈ ಮೂಲಕ ಕೇರಂನ್ನು ಬಾಲ್ಯದಿಂದಲೇ ಬೆಳೆಸಿ ಮಕ್ಕಳಲ್ಲಿ  ಕ್ಷಿಪ್ರ ಚಿಂತನೆ,  ಚುರುಕುಮತಿ,  ಅತ್ಯುತ್ತಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಮೊದಲಾದವನ್ನು ಬೆಳೆಸಲು ಸಿದ್ಧರಾಗಿದ್ದಾರೆ.

ಕೇರಂ ಬುದ್ಧಿವಂತರ ಆಟವಾದ್ದರಿಂದ ಇದನ್ನು ಕಲಿತರೆ  ಮಾನಸಿಕ ಸದೃಢತೆ ಉಂಟಾಗುವುದರ ಜೊತೆಗೆ ಚಿಕಿತ್ಸಕ ಬುದ್ಧಿ, ಕೌಶಲ್ಯ ಬೆಳೆಯುತ್ತದೆ. ನೇರ ದೃಷ್ಟಿ, ಗಮನಹರಿಸುವಿಕೆಗೆ ಈ ಕಲೆ ನೆರವಾಗುತ್ತದೆ. ಇಂತಹ ಕಲೆ ಬೆಳೆಸುವತ್ತ ಅಕಾಡೆಮಿ ವತಿಯಿಂದ ಮುಂದಾದಾಗಿದ್ದಾರೆ. ಮಕ್ಕಳು ತಂತ್ರಗಾರಿಕೆಯ ಈ ಆಟ  ಕಲಿಯುವ ಮೂಲಕ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ರವಿ. 

published on Dec 5. 2022


.............................. 



  ಸಮಯಪ್ರಜ್ಞೆಗೆ ಸಂದ  

ರಾಜ್ಯ ಶೌರ್‍ಯ ಪ್ರಶಸ್ತಿ 

 

 


ಒಂಚು ಇಂಚಿನಷ್ಟು s ಗಾತ್ರದ ಸಮಯ ಒಂದು ಇಂಚಿನಷ್ಟು ಬಂಗಾರಕ್ಕೆ ಸಮ ಎಂಬ ಚೀನಾದ ಗಾದೆ ಮಾತಿದೆ. ಸಮಯ ಮಹತ್ವವಲ್ಲ, ಸಮಯ ಪ್ರಜ್ಞೆ ಅತಿ ಮುಖ್ಯವಾದುದು ಎಂದು ಆಂಗ್ಲ ವಿದ್ವಾಂಸನೊಬ್ಬ ಹೇಳಿದ್ದಾನೆ. ಇವೆರಡೂ ಮಾತುಗಳು ಸಮಯಪ್ರಜ್ಞೆಗಿರುವ ಮಹತ್ವವನ್ನು ವಿವರಿಸುತ್ತವೆ. ಸಮಯಪ್ರಜ್ಞೆಯಿಂದ ಎಷ್ಟೆಲ್ಲ ಸಮಸ್ಯೆ ಪರಿಹರಿಸಬಹುದು, ಏನೆಲ್ಲ ಅನಾಹುತ ತಪ್ಪಿಸಬಹುದು, ಜೀವ ಉಳಿಸಬಹುದು. ಅಂತಹುದೇ ಒಂದು ಕೆಲಸವನ್ನು ಇಲ್ಲೊಬ್ಬ ಶಾಲಾ ಬಾಲಕಿ ಮಾಡುವ ಮೂಲಕ ರಾಜ್ಯ ಶೌರ್‍ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.  

ಒಂದು ವರ್ಷದ ಹಿಂದೆ ಶಾಲೆಯಿಂದ ಮನೆಗೆ ಬಂದ ೪ನೆಯ ತರಗತಿ ಓದುವ ತುಂಟ ಧನುಷ್ ಟಿವಿ ವೀಕ್ಷಣೆಗೆ ಸ್ವಿಚ್ ಹಾಕಲು ಮುಂದಾಗುತ್ತಾನೆ. ಟಿವಿ ಆನ್ ಆಗಲಿಲ್ಲ. ವೈರ್ ಹಿಡಿದು ಅಲ್ಲಾಡಿಸಲೆತ್ನಿಸಿದಾಗ ಆತನಿಗೆ ಭಾರೀ ಪ್ರಮಾಣದಲ್ಲಿ ಶಾಕ್ ಹೊಡೆಯುತ್ತದೆ. ಕಾರಣ ಆತನ ಕೈಲಿ ಹಿಡಿದಿದ್ದ ವೈರ್‌ನ ಭಾಗವನ್ನು ಇಲಿ ಕಡಿದಿತ್ತು. ಅದರಿಂದ ತಪ್ಪಿಸಿಕೊಳ್ಳಲಾಗದೆ ಆತ ಒದ್ದಾಡುತ್ತಿದ್ದ. ಹೆದರಿ ಕೂಗಾಡುತ್ತಾನೆ. ಈತನ ಜೊತೆ ಶಾಲೆಯಿಂದ ಮನೆಗೆ ಬಂದಿದ್ದ, ೫ನೆಯ ತರಗತಿ ಓದುವ  ಅಕ್ಕ ಪ್ರಾರ್ಥನಾ ಊಟ ಮಾಡುತ್ತಿದ್ದಳು. ತಮ್ಮನ ಕೂಗಾಡುವಿಕೆಯನ್ನು ಕೇಳಿ ಊಟದ ತಟ್ಟೆ ಇಟ್ಟು ಓಡಿಬಂದು ನೋಡುತ್ತಾಳೆ. ಕೈಲಿದ್ದ ವೈರ್‌ನಿಂದ ಶಾಕ್ ಹೊಡೆದು ಸಹೋದರ  ಅಪಾಯದ ಸ್ಥಿತಿಯಲ್ಲಿದ್ದ. ಕೈ ಹಿಡಿದು ಎಳೆದರೂ ಕರೆಂಟ್ ಬಿಡಲಿಲ್ಲ. ಹಿಂದೆ ಮುಂದೆ ನೋಡದೆ ಆತನ ಶರ್ಟ್ ಕಾಲರನ್ನು ಹಿಡಿದು ಬಲವಾಗಿ ಆತನನ್ನು ಎಳೆಯುತ್ತಾಳೆ. ಆಗ ವೈರ್ ಬಿಟ್ಟು ಆತ ಸರಿಯುತ್ತಾನೆ. ಇದರಿಂದ ಆತನ ಜೀವ ಉಳಿಯುತ್ತದೆ.

ಹೀಗೆ ಜೀವ ಹೋಗುವ ಹಂತದಲ್ಲಿದ್ದ ಸಹೋದರನನ್ನು ರಕ್ಷಿಸಿದ ಪ್ರಾರ್ಥನಾಳ ಕೀರ್ತಿ ಎಲ್ಲೆಡೆ ಜಾಹೀರಾಗುತ್ತದೆ. ಸನ್ಮಾನಗಳು  ನಡೆಯುತ್ತವೆ. ಶ್ಲಾಘನೆಗೆ ಒಳಗಾಗುತ್ತಾಳೆ. ಕೆಲವು ಸಂಘಟನೆಗಳು ಈಕೆಗೆ ಶೌರ್‍ಯ ಪ್ರಶಸ್ತಿ ಕೊಡಿಸಬೇಕೆಂದು ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಾರೆ. ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಂದೆಗೆ ಸಿದ್ಧಗೊಳಿಸಿ ಅಧಿಕಾರಿಗಳಿಗೆ ತಲುಪಿಸುತ್ತಾರೆ. ಅದು ಬೆಂಗಳೂರಿಗೆ ಕಳುಹಿಸಲ್ಪಟ್ಟು ಈ ವರ್ಷ ಮೊನ್ನೆ ಜರುಗಿದ ಮಕ್ಕಳ ದಿನದಂದು ಪ್ರಾರ್ಥನಾಳಿಗೆ ಕಿತ್ತ್ತೂರು ಚೆನ್ನಮ್ಮ ಶೌರ್‍ಯ ಪ್ರಶಸ್ತಿ ರಾಜ್ಯಪಾಲರಿಂದ ಕೊಡಲ್ಪಟ್ಟಿತು.   

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉರಗನಹಳ್ಳಿಯಲ್ಲಿ ನಡೆದಿದ್ದ ಘಟನೆ ಇದು. ಇಲ್ಲಿನ ರೈತ ಧನಂಜಯ ಮತ್ತು ನೀಲಾವತಿ ಅವರ ಇಬ್ಬರು ಮಕ್ಕಳಿವರು. ಉರಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಓದುತ್ತಿದ್ದಾರೆ. ಶಾಕ್ ಹೊಡೆದ ಮತ್ತು ರಕ್ಷಿಸಿದ ಸುದ್ದಿಯನ್ನು ಶಾಲೆಯ ಮುಖ್ಯ ಶಿಕ್ಷಕಿಗೆ ತಿಳಿಸುತ್ತಾರೆ. ಆನಂತರ ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿಯಾಗುತ್ತದೆ. ಸ್ಥಳೀಯರು ಪ್ರಶಸ್ತಿಗೆ ಅರ್ಜಿ ಹಾಕಲು ತಂದೆಗೆ ಸೂಚಿಸುತ್ತಾರೆ. ಆದರೆ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಅವರು ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಹೆಗಡೆ ಅವರನ್ನು ಕಾಣುತ್ತ್ತಾರೆ. ಅವರು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಿದ್ಧ್ದಪಡಿಸಿಕೊಡುವ ಮೂಲಕ ರಾಜ್ಯ ಪ್ರಶಸ್ತಿಗೆ ಶಿಫಾರಸಾಗುವಂತೆ ಮಾಡುತ್ತಾರೆ. 

 ಪ್ರಶಸ್ತಿಯು ೧೦ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಬಾಲಕಿ ಪ್ರಾರ್ಥನಾಳ ಸಮಯಪ್ರಜ್ಞೆ ಅಥವಾ ಅನಾಹುತದ ಸಮಯದಲ್ಲಿ ತೋರಿದ ಬುದ್ಧಿವಂತಿಕೆ ಸಹೋದರನ ಜೀವ ಉಳಿಸಿದೆ. ಅದಕ್ಕೆ ತಾನೆ ಹೇಳುವುದು ಸಮಯಪ್ರಜ್ಞೆ  ಮೆರೆಯಬೇಕೆಂದು. 

ಶಿವಮೊಗ್ಗ ಜಿಲ್ಲೆಗೆ ಇದೇ ಮೊದಲಬಾರಿ ಈ ಪ್ರಶಸ್ತಿ ಪ್ರಾರ್ಥನಾಳಿಂದ ಬಂದಂತಾಗಿದೆ.  

published on 21 nov 2022

.....................