Tuesday 20 December 2022

 ಅಂಗವೈಕಲ್ಯವನ್ನೇ ಮೆಟ್ಟಿಲಾಗಿಸಿಕೊಂಡ 

ಶಿವಕುಮಾರ್

 



 ನಿಮ್ಮ ಅಂಗವೈಕಲ್ಯದ ಬಗ್ಗೆ ಯೋಚಿಸಬೇಡಿ, ಸಾಧನೆಯತ್ತ ಗಮನವಿಡಿ. ಅದು ಸಾಧನೆಗೆ ಎಂದೂ ಅಡ್ಡಿಯಾಗದು.

ಈ ಮಾತನ್ನು ಹೇಳಿದವರು ಜೀವನಪರ್‍ಯಂತ ಅಂಗವೈಕಲ್ಯನಾಗಿ, ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದ ವಿಜ್ಞಾನಿ ಸ್ಟೀಫನ್ ಹಾಕಿಂಗ್.

 ಈತನ ಮಾತು ಲಕ್ಷಾಂತರ ಅಂಗವಿಕಲರಿಗೆ ಸ್ಫೂರ್ತಿಯಾಗಿದೆ.  ಅನೇಕ ಸಾಧನೆ ಮಾಡಲು ನಾಂದಿಯಾಗಿದೆ. ಅಂಗವೈಕಲ್ಯ ಮರೆತು ಸ್ವಾವಲಂಬಿ ಜೀವನ ಸಾಗಿಸುವುದಕ್ಕೂ ಅನುಕೂಲವಾಗಿದೆ. 

ಶಿವಮೊಗ್ಗ ಸಮೀಪದ ಆಯನೂರು  ಚನ್ನಹಳ್ಳಿಯ ಸಿ. ಆರ್. ಶಿವಕುಮಾರ್ ಹುಟ್ಟುವಾಗ ಎಲ್ಲರಂತೆಯೇ ಚೆನ್ನಾಗಿಯೇ ಇದ್ದರು. ನಾಲ್ಕನೆಯ ವಯಸ್ಸಿನಲ್ಲಿ ಸಂಭವಿಸಿದ ಒಂದು ಸಣ್ಣ ಎಡವಟ್ಟಿನಿಂದ ಎರಡು ಕಾಲುಗಳ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ಅಂಗವಿಕಲರಾದರೂ ಛಲಬಿಡದೆ ಓದಿ, ವಿವಿಧೆಡೆ ಕೆಲಸ ಮಾಡುತ್ತ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ, ಅಂಗವಿಕಲರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈ ವರ್ಷದ ಅಂಗವಿಕಲರ ದಿನ ಸರಕಾರ  ಕೊಡಮಾಡುವ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶಿವಕುಮಾರ್ ಡಿಪ್ಲೊಮಾ ಇನ್ ಕಂಪ್ಯೂಟರ್ ಓದಿದ್ದಾರೆ. ಇದಕ್ಕೆ ಕಾರಣ, ಅಂಗವಿಕಲತೆಯನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿದ ಕ್ರೀಡಾಪಟು ಮಾಲತಿ ಹೊಳ್ಳ. ಅವರ ಸಂಸ್ಥೆಯು ಇವರಿಗೆ ಈ ಶಿಕ್ಷಣ ಕೊಡಿಸಿದೆ. ಬಳಿಕ ಕಾಲ್ ಸೆಂಟರ್‌ಗಳಲ್ಲಿ ಕೆಲವು ವರ್ಷ ಕೆಲಸ ಮಾಡಿ ಸದ್ಯ “ಸಕ್ಷಮ” (ವಿಶೇಷ ಚೇತನರ  ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟೀಯ ಸಂಘಟನೆ) ಯಲ್ಲಿ ಜಿಲ್ಲಾ  ಸಂಚಾಲಕರಾಗಿದ್ದಾರೆ. ಒಂದರಿಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧನಾ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ. ತಿಂಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಎಲ್ಲಾ ವರ್ಗದ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸುತ್ತಿದ್ದಾರೆ. ಕಥೆ, ಕವನಗಳನ್ನು ರಚಿಸುತ್ತಾರೆ.   

 ಸಕ್ಷಮದ ವತಿಯಿಂದ ಜಿಲ್ಲೆಯ ಎಲ್ಲಾ   ಗ್ರಾಮ ಪಂಚಾಯಿತಿಗೆ ಒಳಪಟ್ಟಂತಹ ಹಳ್ಳಿಗಳ ವಿಶೇಷಚೇತನರಿಗೆ  ಅವರ ನ್ಯೂನತೆಗಳ ಬಗ್ಗೆ ತಿಳಿಸಿ ಅದರ ಆಧಾರದ ಮೇಲೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ಮಾಡಿಸಿಕೊಟ್ಟಿದ್ದಾರೆ. ಗ್ರಾಮ ಪಂಚಾಯ್ತಿ, ಮಹಾನಗರ ಪಾಲಿಕೆ, ಪುರಸಭೆಗಳಲ್ಲಿ, ಜಿಪಂ, ತಾಪಂಗಳಲ್ಲಿ ಸಿಗುವ ಸೌಲಭ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ೨೫೦೦ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಸಾಮಗ್ರಿಗಳನ್ನು ವಿತರಿಸುವಲ್ಲಿ ಮುಂಚೂಣಿಯಲ್ಲಿದ್ದರು..

 ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನು ಕೊಡಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದು,  ೪೫ ಜನ ವಿಶೇಷಚೇತನರಿಗೆ ವ್ಹೀಲ್‌ಚೇರ್‌ಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಸಕ್ಷಮ ಕೇಂದ್ರದಲ್ಲೇ ಕೆಲಸ ಮಾಡುತ್ತಾ ಅಲ್ಲಿಗೆ ಬರುವ ಅಂಗವಿಕಲರ ಎಲ್ಲಾ ಕುಂದುಕೊರತೆಗಳನ್ನು ಆಲಿಸಿ ಅದಕ್ಕೆ ಸಮರ್ಪಕ ಪರಿಹಾರೋಪಾಯದ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.  

ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಇವರು,  ಕರುನಾಡ ಕಣ್ಮಣಿ, ಕರುನಾಡ ಯುವರತ್ನ, ಹೆಮ್ಮೆಯ  ಸಾಧಕ, ಪ್ರಜಾಸೇವಾರತ್ನ, ಸೇವಾ ಸುರಭಿ, ಸೇವಾರತ್ನ, ಕೊರೊನಾ ವಾರಿಯರ್ ಮೊದಲಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೧೫೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾನೇ ಒಬ್ಬ ಅಂಗವಿಕಲನಾಗಿ ತನ್ನಂತಹ ಸಾವಿರಾರು ಜನರಿಗೆ ದಾರಿದೀಪವಾಗುವ ಕೆಲಸವನ್ನು ಸಕ್ಷಮದ ಬೆಂಬಲದಿಂದ ಮಾಡುತ್ತಿದ್ದಾರೆ.  ಇತರರ ಬಾಳಿಗೆ ಅನುಕೂಲ ಕಲ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 

published on dec, 12 2022.

 .............................


No comments:

Post a Comment