Saturday 17 December 2016

 ಹೋರಾಟಕೆ ಮಾದರಿಯಾದ
ದಿ. ಕಡ್ಲೆಕಾಯಿ ಮಂಜುನಾಥ



ಹೆಸರಿಗಾಗಿ ಹೋರಾಟ ಮಾಡುವವರಿದ್ದಾರೆ, ಹಣಗಳಿಸಲು ಹೋರಾಟ ಮಾಡುವವರಿದ್ದಾರೆ. ತೀಟೆಗಾಗಿ ಪ್ರತಿಭಟಿಸುವವರಿದ್ದಾರೆ. ಆದರೆ, ನಿಜಕ್ಕೂ ಸಮಸ್ಯೆಗಳಿಗೆ ಅಥವಾ ಜನಸಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಹೋರಾಡುವವರು ತೀರಾ ವಿರಳ. ಅಂತಹವರಲ್ಲಿ ಒಬ್ಬರಾಗಿದ್ದವರು ದಿವಂಗತ ಕಡ್ಲೆಕಾಯಿ ಮಂಜುನಾಥ.
ಕಡ್ಲೆಕಾಯಿ ಮಂಜುನಾಥ ಹೆಸರೇ ವಿಶಿಷ್ಟವಾದುದು. ಶಿವಮೊಗ್ಗದಲ್ಲಿ ಬಹುತೇಕ ಜನರಿಗೆ ಇವರು ಪರಿಚಿತರು. ಯಾರೇ ಎದುರು ಸಿಕ್ಕರೂ ಅಣ್ಣಾ, ಸಾರ್ ಎಂದು ಕೈ ಮುಗಿದೇ ಸಂಬೋಧಿಸುವ ಸೌಮ್ಯ ಸ್ವಭಾವದ, ನಿಸ್ವಾರ್ಥ ಮನೋಭಾವದ, ಯಾರೊಡನೆಯೂ ಜಗಳ ಮಾಡದ, ಸಮಸ್ಯೆ ಇರುವವರನ್ನು ಕಟ್ಟಿಕೊಂಡು ಕಚೇರಿಯಿಂದ ಕಚೇರಿಗೆ ಅಲೆದು ಅಧಿಕಾರಿಗಳಿಗೂ ಗೌರವ ಕೊಟ್ಟು ಕೆಲಸ ಮಾಡಿಸಿಕೊಡುವ ಮಂಜುನಾಥ ಕಾಲವಾಗಿದ್ದಾರೆ. ಮಾ 18ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಎಷ್ಟೋ ಜನರು ಮಂಜುನಾಥಗೆ ಈ ಸಾವು ಬರಬಾರದಿತ್ತು. ಇಂತಹ ಪ್ರಾಮಾಣಿಕ, ನಿಗರ್ವಿ, ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು ಎಂದು ಮರುಗಿದವರು ಬಹಳ ಜನ.
ಕೆಲವರು ಸತ್ತರೂ ಸುದ್ದಿಯಾಗುವುದಿಲ್ಲ, ಕೆಲವರು ಇದ್ದರೂ ಸುದ್ದಿಯಾಗುವುದಿಲ್ಲ. ಆದರೆ ಮಂಜುನಾಥ ಜೀವವಿದ್ದಾಗಲೂ, ಸತ್ತ ನಂತರವೂ ಜನರ ಪ್ರಶಂಸೆ, ಅಭಿಮಾನ ಪಡೆದವರು.
ಕಾಯಕವೇ ಕೈಲಾಸ ಎನ್ನುವುದ್ಕಕೆ ಉತ್ತಮ ಉದಾಹರಣೆ ಇವರು. ನಡೆದಾಡಿಕೊಂಡೇ ನಗರ ಸುತ್ತುತ್ತಿದ್ದರು. ದುರ್ಗಿಗುಡಿಯಲ್ಲಿ ರೂಮು ಮಾಡಿಕೊಂಡು ವಾಸವಾಗಿದ್ದ ಮಂಜುನಾಥ ಬಳಿ ಯಾರಾದರೂ ರೇಶನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ ಇನ್ನಿತರ ಸಮಸ್ಯೆ ಹೇಳಿಕೊಂಡು ಹೋದರೆ ಸಾಕು, ಅವರನ್ನು ಕರೆದುಕೊಂಡು ನೇರವಾಗಿ ಸಂಬಂಧಿತ ಅಧಿಕಾರಿಗಳ ಕಚೇರಿಗೆ ತೆರಳುತ್ತಿದ್ದರು. ಅಧಿಕಾರಿಗಳಿಗೂ ಕಡ್ಲೆಕಾಯ ಸ್ವಭಾವ ಗೊತ್ತಿದ್ದರಿಂದ ಸುಲಭದಲ್ಲಿ ಕೆಲಸವಾಗುತ್ತಿತ್ತು. ಕೆಲಸವಾದ ನಂತರ ಯಾರಿಂದಲೂ ಒಂದು ಪೈಸೆಯನ್ನೂ ಯಾಚಿಸದ ಕೈ ಅವರದ್ದಾಗಿತ್ತು. ಅಷ್ಟೊಂದು ಶುದ್ಧ ಕಚ್ಚೆ- ಕೈ- ಬಾಯಿ ಅವರದ್ದಾಗಿತ್ತು. ಅನ್ಯಾಯವನ್ನು ಸಹಿಸದ,ಸುಳ್ಳು ಹೇಳದ, ಹೆಸರಿಗಾಗಿ,  ಪಟ್ಟಕ್ಕಾಗಿ ಎಂದೂ ಹಂಬಲಿಸದ ಅಪರೂಪದ ವ್ಯಕ್ತಿ ಅವರಾಗಿದ್ದರು.
 ಕಲ್ಲೂರು ಮೇಘರಾಜ್ ಮುಖಂಡತ್ವದ ಶಾಂತವೇರಿ ಗೋಪಾಲಗೌಡ  ಸಮಿತಿಯ ಎಲ್ಲ ಹೋರಾಟಗಳಲ್ಲಿ ಕಡ್ಲೆಕಾಯಿ ಮುಂದು. ಮೇಘರಾಜ್ ಅವರ ಬಲಗೈ ಯಂತಿದ್ದರು. ಎಷ್ಟೋ ಜನ ಮೇಘರಾಜ್ ಜತೆ ಇದ್ದರೂ ನಂತರ ಕೈಬಿಟ್ಟು ಹೋದರು. ಆದರೆ ಕಡ್ಲೆಕಾಯಿ ಮಾತ್ರ ಎಂದೂ ಕೈಕೊಡಲಿಲ್ಲ. ಅಷ್ಟೊಂದು ವಿಶ್ವಾಸಿಗರಾಗಿದ್ದರು. ಯಾವುದೇ ಹೋರಾಟ, ಪತ್ರಿಕಾಗೋಷ್ಠಿ ಪ್ರತಿಭಟನೆ, ಧರಣಿ ಇರಲಿ, ಎಲ್ಲರಿಗಿಂತ ಮೊದಲೇ ಬಂದು ವ್ಯವಸ್ಥೆ ಮಾಡಿ ಪತ್ರಕರ್ತರನ್ನು  ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ದುರ್ಗಿಗುಡಿ ಕನ್ನಡ ಸಂಘದಲ್ಲಿ ಕೆಲಸ ಮಾಡಿದ ಮಂಜಣ್ಣ, ಮಹಾನ್ ದೈವಭಕ್ತರೂ ಆಗಿದ್ದರು. ಇಂತಹ ಮಂಜುನಾಥ ಈಗ ನೆನಪು ಮಾತ್ರ.
ಸದಾ ಕಿತ್ತು ತಿನ್ನುವ ಬಡತನವಿದ್ದರೂ, ಸದಾ ತನ್ನ ಅಳಲನ್ನು ಮರೆತು ನೊಂದವರಿಗೆ ಹೆಗಲು ಕೊಡುತ್ತಿದ್ದರು, ಅವರ ಪರ ಹೋರಾಡುತ್ತಿದ್ದರು. ಭ್ರಷ್ಟರ ಜಾತಕವನ್ನು ಆರ್‌ಟಿಐ ಮೂಲಕ ಪಡೆದು ಹೋರಾಟಕ್ಕೆ ನೆಲೆಗಟ್ಟು ಹಾಕುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಸಂಪಾದಿಸಬಹದಿತ್ತು. ಆದರೆ ಜನಪ್ರಿಯತೆ, ಗೆಳೆತನ ಸಂಪಾದಿಸಿದರು. ನಿಜವಾದ ಹೋರಾಟಗಾರನಿಗೆ ಇದಕ್ಕಿಂತ ಹೆಚ್ಚಿನ ಗೌರವ ಇನ್ನೇನು ಬೇಕು?      
ಮೂಲತಃ ಶಿವಮೊಗ್ಗದವರೇ ಅದ ಮಂಜುನಾಥ ತಂದೆ ಮುನಿಯಪ್ಪ ಗಾಂಧಿ ಪಾರ್ಕಿನಲ್ಲಿ ಕಡ್ಲೆಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಅಲ್ಲಿಂದ ಆ ಹೆಸರೇ ಅಂಟಿಕೊಂಡಿತು. ಮಂಜುನಾಥ ಸಹ ಇದೇ ಹೆಸರನ್ನು ಇಟ್ಟುಕೊಂಡರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆತ್ಮೀಯರಾಗಿದ್ದ ಮುನಿಯಪ್ಪ ‘ಶ್ರಮಜೀವಿ’ ಎಂಬ ಬಿರುದನ್ನು ಅವರಿಂದ ಪಡೆದು ಸನ್ಮಾನಿಸಲ್ಪಟ್ಟಿದ್ದರು. ಅಪ್ಪನಂತೆ ಮಗನೂ ಸಹ ಶ್ರಮಜೀವಿಯಾಗಿ, ಸ್ನೇಹಜೀವಿಯಾಗಿ, ಸಂಘಜೀವಿಯಾಗಿ, ಬಡವರಪರ ಜೀವಿಯಾಗಿ ದುಡಿದು ಅಳಿದಿದಿದ್ದಾರೆ. ಮಂಜಣ್ಣನ  ನೆನೆಪು ಸದಾ ಅಮರ.
Published on Marsch 19, 2016
................................
ಸಹಕಾರ ಕ್ಷೇತ್ರದ ದಿಟ್ಟೆ
ಪಿ. ವೀರಮ್ಮ

ಸಹಕಾರ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಮಹಿಳೆಯರು ತೀರಾ ವಿರಳ. ಶಿವಮೊಗ್ಗದ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷೆ ಪಿ. ವೀರಮ್ಮ ಈ ಖ್ಯಾತಿಗೆ ಭಾಜನರಾಗಿದ್ದಾರೆ. ಅದಕ್ಕೆ ಕಾರಣ ಅವರ ದಿಟ್ಟ ಹೆಜ್ಜೆ, ನಡೆ-ನುಡಿ. ಮಹಿಳಾ ಸಬಲೀಕರಣಕ್ಕೆ ನಿರಂತರ ಪ್ರಯತ್ನ ಮಾಡುತ್ತಿರುವ ಇವರು, 5ನೆಯ ಬಾರಿಗೆ ಈ ಬ್ಯಾಂಕಿನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ವೀರಮ್ಮ ನೇರ, ದಿಟ್ಟ, ನಿರಂತರ ಎಂಬ ತತ್ವದವರು. ಜೊತೆಗೆ ಖಂಡಿತವಾದಿ, ಇದರಿಂದಾಗಿಯೇ ಸೂಪರ್‌ಸೀಡ್ ಆಗಿ, ರಿಸರ್ವ್ ಬ್ಯಾಂಕ್ ಲೈಸೆನ್ಸನ್ನು ಹಿಂದೆಗೆದುಕೊಳ್ಳಬೇಕೆಂಬ ನಿರ್ಧಾರದಲ್ಲಿರುವಾಗ ಸಹ್ಯಾದ್ರಿ ಬ್ಯಾಂಕ್‌ನ  ಜವಾಬ್ದಾರಿ ಹೊತ್ತ ಇವರು, ಇಂದು ಬ್ಯಾಂಕನ್ನು ತಮ್ಮ ಸತತ ಪರಿಶ್ರಮದಿಂದ ಎ ಗ್ರೇಡ್‌ಗೆ ಏರಿಸಿದ್ದಾರೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇದ್ದರೆ ಮಾತ್ರ ಸಹಕಾರ ಕ್ಷೇತ್ರ ಬೆಳೆಯಬಲ್ಲುದು ಎನ್ನುವುದನ್ನು  ತೋರಿಸಿಕೊಟ್ಟಿದ್ದಾರೆ.  ಬ್ಯಾಂಕ್ ನಷ್ಟದಲ್ಲಿದ್ದುದನ್ನು ಕಂಡು ದಿನನಿತ್ಯ ಠೇವಣಿದಾರರು ತಮ್ಮ ಠೇವಣಿಯನ್ನು ವಾಪಸ್ ಪಡೆಯುತ್ತಿದ್ದ ವೇಳೆ ಹೇಗಾದರೂ ಮಾಡಿ ಮತ್ತೆ ಬ್ಯಾಂಕನ್ನು ಕಟ್ಟಿ ನಿಲ್ಲಿಸಲೇಬೇಕೆಂಬ ಛಲ ತೊಟ್ಟ ಈ ಧೀರೆ, ಅದನ್ನು ಎರಡೇ ವರ್ಷದಲ್ಲಿ ಸಾಧಿಸಿ ಲಾಭದ ಹಾದಿಯಲ್ಲಿ ತಂದು ನಿಲ್ಲಿಸಿದ ನೀರೆ. ಇಂದು ಬ್ಯಾಂಕ್ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುತ್ತಾ ಬೆಳೆದಿದೆ. ಸುಮಾರು 11 ಸಾವಿರ ಮಹಿಳಾ ಸದಸ್ಯರನ್ನು ಹೊಂದಿದೆ.
ವೀರಮ್ಮ ಮೂಲತಃ  ಚಳ್ಳಕೆರೆಯವರು. ಅಷ್ಟೇನೂ ಓದಿರದ ಇವರನ್ನು ಬುಕ್ಕಾಂಬುಧಿಯ ಪರಮೇಶ್ವರಪ್ಪ ಎನ್ನುವವರಿಗೆ ಮದುವೆ ಮಾಡಿಕೊಡಲಾಯಿತು. ನಂತರ ಶಿವಮೊಗ್ಗ ವಾಸಿಯಾದ ಇವರು 1994ರಲ್ಲಿ ಆರಂಭವಾದ ಈ ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದುಕೊಂಡರು. ಆದರೆ 2007ರವರೆಗೆ ಅವರು ಯಾವ ಅಧಿಕಾರದಲ್ಲೂ ಇರಲಿಲ್ಲ. ಅಲ್ಲಿಂದ ಅಧಿಕಾರ ಹಿಡಿದು, ಇಂದು ಈ ಬ್ಯಾಂಕ್ ರಾಜ್ಯದಲ್ಲಿರುವ 24 ಮಹಿಳಾ ಬ್ಯಾಂಕ್‌ಗಳಲ್ಲೇ  ಹೆಸರುವಾಸಿಯಾಗುವಂತೆ  ಮಾಡಿದ್ದಾರೆ. ಇದಕ್ಕಾಗಿ ಅವರು ಸುರಿಸಿದ ಬೆವರು ಅಷ್ಟಿಷ್ಟಲ್ಲ. ಬ್ಯಾಂಕನ್ನು ಹೇಗಾದರೂ ಮೇಲೆತ್ತಿ ಜಿಲ್ಲೆಯ ಮಹಿಳೆಯರ ಗೌರವ ಕಾಪಾಡಬೇಕು, ಒಮ್ಮೆ ಮುಳುಗಿದ ಬ್ಯಾಂಕ್ ಮೇಲೇಳದಿದ್ದರೆ ಅದು ಮಹಿಳೆಯರಿಗೂ, ಜಿಲ್ಲೆಗೂ ಅವಮಾನ ಎಂದರಿತು ಸಾಲ ತೆಗೆದುಕೊಂಡವರ ಮನೆಗೆ ಸ್ವತಃ ಹತ್ತಾರು ಬಾರಿ ತೆರಳಿ ಸಾಧ್ಯವಾದಷ್ಟು ಸಾಲ ವಸೂಲು ಮಾಡಿದರು. ನಂತರ ಸಾಕಷ್ಟು ಸದಸ್ಯತ್ವ ಪಡೆದರು. ಈ ಮೂಲಕ ನಿಧಾನವಾಗಿ ಮತ್ತೆ ಬ್ಯಾಂಕನ್ನು ಕಟ್ಟಿ ಬೆಳೆಸಿ ನಿಲ್ಲಿಸಿದ್ದಾರೆ.
ಈಗ ಬ್ಯಾಂಕಿಗೆ ಸ್ವಂತ ನಿವೇಶನ ಮಾಡಿಟ್ಟಿದ್ದಾರೆ. ಎರಡು ವಿಸ್ತರಣಾ ಶಾಖೆ ಮತ್ತು ಭದ್ರಾವತಿಯಲ್ಲಿ ಒಂದು ಶಾಖೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ನಯ-ವಿನಯತೆ, ಸೌಮ್ಯ ಸ್ವಭಾವ ಇದಕ್ಕೆಲ್ಲ ಕಾರಣ. ಯಾವತ್ತೂ, ಯಾರೊಂದಿಗೂ ವೈಮನಸ್ಸು ಕಟ್ಟಿಕೊಂಡವರಲ್ಲ. ಬ್ಯಾಂಕಿನ ಚುನಾವಣೆ ನಡೆದರೆ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದರಿತು ಅವಿರೋಧವಾಗಿಯೇ ಆಯ್ಕೆ ಮಾಡಲು ಪ್ರತಿ ಬಾರಿ ಯತ್ನಿಸಿ ಸಫಲರಾದ ವೀರಮ್ಮ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿಯೂ ಹೌದು. ಸರ್ಕಾರದ ಶೇರಿನಿಂದಲೇ 450 ಸದಸ್ಯರನ್ನು ಮಾಡಿಕೊಂಡು ವಚನಶ್ರೀ ಮಹಿಳಾ  ಸಹಕಾರ ಸಂಘವನ್ನು ಆರಂಭಿಸಿದ್ದಾರೆ. ಉತ್ತಮ ಮಹಿಳಾ ಸಹಕಾರಿ ಪ್ರಶಸ್ತಿ ಇವರ ಮುಡಿಗೇರಿದೆ. ಶಿವಮೊಗ್ಗ ನಗರಸಭೆಯು ಉತ್ತಮ ನಾಗರಿಕ ಎಂಬ ಬಿರುದು ನೀಡಿ ಸನ್ಮಾನಿಸಿದೆ. ದುಬೈನಲ್ಲಿ ಅಂತಾರಾಷ್ಟ್ರೀಯ ಗೋಲ್ಡನ್ ಸ್ಟಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ರಾಜೀವ್ ಗಾಂಧಿ ಪ್ರಶಸ್ತಿ ಸಹ ಇವರ ಕಿರೀಟಕ್ಕೆ ಸೇರಿಕೊಂಡಿದೆ.
ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚೆಚ್ಚು ಮುಂದೆ ಬರಬೇಕು. ಸಿಗುವ ಸವಲತ್ತನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಮಹಿಳೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎನ್ನುವ ಇವರು, ಪ್ರಾಮಾಣಿಕ ಪ್ರಯತ್ನ, ಸಾಧಿಸುವ ಛಲ, ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಕೆಲಸ ಮಾಡುವ ಮನೋಭಾವ ಇದ್ದರೆ ಪರಿಶ್ರಮಕ್ಕೆ ಫಲ ಇದ್ದೇ ಇದೆ ಎನ್ನುತ್ತಾರೆ.
Published on March, 12, 2016
ಸಾಹಿತ್ಯ,  ಕೃಷಿ ಬದುಕಿನ ಸಮನ್ವಯದ
 ಡಿ ಬಿ ಶಂಕರಪ್ಪ 


ಕೆಲವೊಂದು ಕಾರ್ಯಕ್ಷೇತ್ರದ  ಪ್ರವೇಶಕ್ಕೆ ಮೂಲಭೂತವಾದ ಅರ್ಹತೆ ಬೇಕಾಗುತ್ತದೆ. ಈ ಅರ್ಹತೆ ಹೆಚ್ಚುತ್ತ ಹೋಗುವುದು ನಮ್ಮ ಸಾಧನೆಯಿಂದ, ಶೋಧನೆಯಿಂದ. ಕಲಿತುದಕ್ಕಿಂತ ಕಲಿಯಬೇಕಾದುದು, ತಿಳಿಯಬೇಕಾದುದು ಹೆಚ್ಚು. ಮಾಡಿದ್ದಕ್ಕಿಂತ ಮಾಡಬೇಕಾದದ್ದು ಹೆಚ್ಚು. ಈ ಅರಿವು ಇದ್ದಾಗ ಮಾತ್ರ ಅವರವರ ಕಾರ್ಯಕ್ಷೇತ್ರದಲ್ಲಿ ಅವರವವರ ಅರ್ಹತೆ ಹೆಚ್ಚುತ್ತದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ನೂತನ ಸಾರಥಿಯ ಆಗಮನವಾಗಿದೆ. ಅವರೇ ಡಿ.ಬಿ. ಶಂಕರಪ್ಪ. ಶಂಕರಪ್ಪ ಸಾಹಿತಿ, ನಾಟಕಕಾರ, ನಿವೃತ್ತ ಅಧ್ಯಾಪಕ. ಜೊತೆಗೆ ಉತ್ತಮ ಕೃಷಿಕ.
ಶಂಕರಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರು. ನಾಟಕಕಾರಾಗಿ, ಕಾದಂಬರಿಕಾರರಾಗಿ, ಅಂಕಣ ಬರೆಹಗಾರರಾಗಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕಸಾಪದಲ್ಲೂ ಕೆಲಸ ಮಾಡಿದ ಅನುಭವ ಜೊತೆಗಿದೆ.
ಹೊನ್ನಾಳಿ ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ  ಶಾಲಾ ಶಿಕ್ಷಕ ಬಸಪ್ಪ- ವೀರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು, ತಂದೆಯಂತೆಯೇ ಶಿಕ್ಷಕ ವೃತ್ತಿಗೆ ಸೇರಿದರು. ನ್ಯಾಮತಿ, ಚನ್ನಗಿರಿಯಲ್ಲಿ ಓದು ಆರಂಭಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎ ಪದವಿ ಪಡೆದು, ನ್ಯಾಶನಲ್ ಕಾಲೇಜ್ ಆಫ್ ಎಜುಕೇಶನ್‌ನಲ್ಲಿ ಬಿಇಡಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ ಮುಗಿಸಿದ ಶಂಕರಪ್ಪ ನಂತರ ಹೈಸ್ಕೂಲು ಅಧ್ಯಾಪಕರಾಗಿ ಆನವಟ್ಟಿ, ಹಿತ್ತಲ, ಜಿನಹಳ್ಳಿ, ನ್ಯಾಮತಿಯಲ್ಲಿ ಕೆಲಸ ಮಾಡಿದರು. ವಿಷಯ ಪರೀಕ್ಷಕರಾಗಿ ಹೊನ್ನಾಳಿಯಲ್ಲಿ ಕೆಲಸ ಮಾಡಿದ ನಂತರ ಭಡ್ತಿ ಪಡೆದು ನ್ಯಾಮತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾದರು. ಇದೇ ವೇಳೆ ಕನ್ನಡ ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ. ನಾಟಕರ ಂಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಕುರುಕ್ಷೇತ್ರ ನಾಟಕದಲ್ಲಿ ಭೀಮ ಮತ್ತು ದೇವದಾಸಿ ನಾಟಕದಲ್ಲಿ ವಸಂತಶೇಖರ ಪಾತ್ರ ಮಾಡಿ ಜನಮನ ಗೆದ್ದಿದ್ದಾರೆ. ಉತ್ತಮ ಶಿಕ್ಷಕರೆಂದು ಗುರುತಿಸಲ್ಪಟ್ಟ ಇವರಿಗೆ 1992ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪಿ. ಲಂಕೇಶ್ ಶಿಷ್ಯರಾದ ಶಂಕರಪ್ಪ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರಾಗಿಯೂ ಕೆಲಸ ಮಾಡಿದ್ದಾರೆ. ಇದೇ ವೇಳೆ ‘ಗಿಡ್ಡಜ್ಜಿಯ ಬಯಲು’ ಕಾದಂಬರಿ ಬರೆದಿದ್ದಾರೆ. 2014ರ ಕನ್ನಡ ಸಾಹಿತ್ಯ ಪರಿಷತ್  ದತ್ತಿ ಪ್ರಶಸ್ತಿಯಿಂದ ಇದು ಪುರಸ್ಕೃತಗೊಂಡಿದೆ. ಹೊಸ ಕಾದಂಬರಿ ‘ಬೂದಿಬಸಪ್ಪ ನಾಯಕ’ ಬಿಡುಗಡೆಗೆ ಸಿದ್ಧಗೊಂಡಿದೆ. ‘ಬೆಳಗು ಹರಿಯುವ ಮುನ್ನ’ ಎನ್ನುವುದು ಇವರ ಇನ್ನೊಂದು ಕಾದಂಬರಿ. ಹೊನ್ನಾಳಿ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ, ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು 4 ತಾಲೂಕು ಸಮ್ಮೇಳನ ನಡೆಸಿದ್ದಾರೆ. ಗಾಜನೂರಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ್ದು ಇನ್ನೂ ಅಚ್ಚಳಿಯದೆ ಎಲ್ಲರ ನೆನಪಿನಲ್ಲಿದೆ.
ನಿವೃತ್ತಿ ನಂತರ ಹೊನ್ನಾಳಿಯಲ್ಲಿ ಕೃಷಿ ಜಮೀನಿನಲ್ಲಿ ತರಕಾರಿ ಬೆಳೆಯುವ ಮೂಲಕ ಅಲ್ಲಿಯೂ ಉತ್ತಮ ಸಾಧನೆ ಮಾಡಿ ಉತ್ತಮ ತರಕಾರಿ ಕೃಷಿಕ ಎಂಬ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸಾಹಿತ್ಯಿಕ, ಸಾಮಾಜಿಕ,  ಮತ್ತು ಕೃಷಿ ಬದುಕಿನ ಸಮನ್ವಯದ ಶಂಕರಪ್ಪ, ಜಿಲ್ಲೆಯ ಸದಭಿರುಚಿಯ ಸಾಂಸ್ಕೃತಿಕ ಮನಸ್ಸುಗಳು ಬೆಳೆಯುವ ಕೆಲಸ ಮಾಡಬೇಕಿದೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಸಾಗಿ ಬಂದಿರುವ ಇವರಿಗೆ ಲಂಕೇಶ್ ಆದರ್ಶಗಳೇ ಮಾದರಿಯಾಗಿದ್ದು, ಆ ಪ್ರಕಾರ ಸಾಹಿತ್ಯಿಕ ಕೆಲಸ ಮಾಡುವ ಇರಾದೆ ಹೊಂದಿದ್ದಾರೆ. ಇವರ ಸಹೋದರ ಡಿ.ಬಿ. ಗಂಗಪ್ಪ ಹೊನ್ನಾಳಿ ಶಾಸಕರಾಗಿ ಕೆಲಸ ಮಾಡಿದ್ದಾರೆ.  
 ಪರಿಷತ್ತಿನ ಕಾರ್ಯಕ್ರಮಗಳನ್ನು ಮನೆ-ಮನಗಳಿಗೆ ತಲುಪಿಸುವುದು, ಹಿಂದಿನ ಅಧ್ಯಕ್ಷರು ಜಾರಿಗೊಳಿಸಿದ್ದ ಜನಪ್ರಿಯ ಕಾರ್ಯಕ್ರಮ ತಿಂಗಳ ಸಾಹಿತ್ಯ ಹುಣ್ಣಿಮೆ ಮಾದರಿಯಾಗಿದೆ. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಆದ್ಯತೆ ಕೊಡಲಾಗುವುದು. .ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು, ಉತ್ತಮ ಬರಹಗಾರರಿಗೆ ಉತ್ತೇಜನ ನೀಡಲು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು. ಸಾಹಿತ್ಯ ಪರಿಷತ್ತಿನಲ್ಲಿ ಈಗಿರುವ ಸದಸ್ಯತ್ವವನ್ನು 12000ಕ್ಕೆ ಏರಿಸುವ ಗುರಿ ಹೊಂದಿರುವುದಾಗಿ ಅವರು ಹೇಳುತ್ತಾರೆ.
Published on 5 march, 2016
.................................
ವಾಮನಮೂರ್ತಿಯ ತ್ರಿವಿಕ್ರಮ ಸಾಧನೆ 
ಎಂ. ಕೆ. ಶ್ರೀಧರ ಶೆಟ್ಟಿ. 


ಸಂಗೀತ, ನೃತ್ಯ ಇಂದು ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಭಾಗವಾಗಿದೆ. ಬಹುತೇಕ ವಿದ್ಯಾರ್ಥಿಗಳು ತಮ್ಮ  ಪಠ್ಯದ ಜೊತೆ  ಈ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಕೆಲವೆಡೆ ಶಾಲೆಗಳಲ್ಲಿ ಇವುಗಳನ್ನು ಕಲಿಯುವ ಅವಕಾಶವಿದ್ದರೆ, ಇನ್ನು ಕೆಲವೆಡೆ ಖಾಸಗಿಯಾಗಿ ಹೇಳಿಕೊಡುತ್ತಿದ್ದಾರೆ. ನೃತ್ಯ ಎಂದಾಕ್ಷಣ ಕೇವಲ ಭರತನಾಟ್ಯ ಒಂದೇ ಅಲ್ಲ, ಇದರಲ್ಲಿ ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ ಸಹ ಸೇರುತ್ತದೆ. ಪಾಶ್ಚಾತ್ಯ ಡಾನ್ಸ್ ಅಥವಾ ರ‌್ಯಾಪ್ ಬೀಟ್ಸ್ ಹೇಳಿಕೊಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಶಿವಮೊಗ್ಗ ನಗರದಲ್ಲಿದ್ದಾರೆ. ಸುಮಾರು 27 ವರ್ಷಗಳಿಂದ ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಯ ಕೆಲವೆಡೆ ರ‌್ಯಾಪ್ ಡಾನ್ಸ್  ಮತ್ತು ಜಾನಪದ ಡಾನ್ಸ್ ಹೇಳಿಕೊಡುತ್ತ  ಸದ್ದಿಲ್ಲದೆ ಕಾಯಕನಿರತರಾಗಿ ತ್ರಿವಿಕ್ರಮ ಸಾಧನೆ ಮಾಡಿದ ಮಹನೀಯರೊಬ್ಬರಿದ್ದಾರೆ. ಅವರೇ ಎಂ. ಕೆ. ಶ್ರೀಧರ ಶೆಟ್ಟಿ.
’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತೊಂದಿದೆ. ಇದಕ್ಕೆ ಶ್ರೀಧರ್ ಶೆಟ್ಟಿ ಉತ್ತಮ  ಉದಾಹರಣೆಯಾಗಿ ನಿಲ್ಲುತ್ತಾರೆ. ಸುಮಾರು 50ರ ಹರೆಯದ ಇವರು, ವಿನಯವಂತ, ಸೌಜನ್ಯಶೀಲ ವ್ಯಕ್ತಿ. ಇವರದ್ದು ಮಾತು ಕಡಿಮೆ ಸಾಧನೆ ಹೆಚ್ಚು ಎಂಬ ವ್ಯಕ್ತಿತ್ವ. ಬೆಳಗ್ಗೆಯಿಂದ ಸಂಜೆಯವರೆಗೆ ಕೆಇಬಿ ಸರ್ಕಲ್‌ನಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುವ ಇವರು, ಸಂಜೆಯಾದೊಡನೆ ಮನೆಯಲ್ಲೇ ಡಾನ್ಸ್ ಕ್ಲಾಸ್ ನಡೆಸುತ್ತಾರೆ. ಅಂದ ಹಾಗೆ ಇವರಲ್ಲಿ ಹಾಲಿ ನೂರಕ್ಕೂ ಹೆಚ್ಚು  ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.  
ತಿಲಕ್‌ನಗರದ 4ನೆಯ ತಿರುವಿನಲ್ಲಿ ದೊಡ್ಡ ಬಾಡಿಗೆ  ಮನೆಯೊಂದನ್ನು ಪಡೆದು,  ಅಲ್ಲಿಯೇ ಪ್ರತಿದಿನ ಎರಡು ಗಂಟೆ ಕ್ಲಾಸ್ ನಡೆಸುತ್ತಿದ್ದಾರೆ. ತಮ್ಮ ಡಾನ್ಸ್ ಶಾಲೆಗೆ ಪ್ರತ್ಯಕ್ಷ  ಇನ್ಸ್‌ಟಿಟ್ಯೂಟ್ ಆಫ್ ಡಾನ್ಸ್ ಎಂದು ಹೆಸರಿಟ್ಟಿದ್ದಾರೆ. ಭಾನುವಾರ ಮಾತ್ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತರಗತಿ ಹೇಳಿಕೊಡುತ್ತಾರೆ. ಶ್ರೀಧರ್ ಶೆಟ್ಟಿ ಮೂಲತಃ ಕುಂದಾಪುರ ತಾಲೂಕು ಬೆಳ್ವೆ ಗ್ರಾಮದವರು. 7ನೆಯ ತರಗತಿಯವರೆಗೆ ಮಾತ್ರ ಓದಿರುವ ಇವರು, ಶಾಲೆ ಬಿಟ್ಟು ಮುಂಬೈಗೆ ತೆರಳಿ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಬಾಲಿವುಡ್ ಸಿನಿಮಾ ನೋಡುತ್ತಿದ್ದ ಅವರಿಗೆ ಖ್ಯಾತ ನಟರ ಡಾನ್ಸ್‌ಗಳು ಪ್ರೇರಣೆಯಾದವು. ನಟರಾದ ಮಿಥುನ್ ಚಕ್ರವರ್ತಿ, ಗೋವಿಂದ ಅವರ ಡಾನ್ಸ್‌ಗೆ ಮಾರುಹೋಗಿ ಅದೇ ರೀತಿ ಡಾನ್ಸ್ ಮಾಡಲಾರಂಭಿಸಿದ್ದರು. ಬರಬರುತ್ತ ಅದಕ್ಕೇ ಆದ್ಯತೆ ಕೊಟ್ಟು ಪರಿಣತಿ ಹೊಂದಿದರು. ಮುಂಬೈಯಿಂದ ಸುಮಾರು 35 ವರ್ಷಗಳ ಹಿಂದೆ  ಶಿವಮೊಗ್ಗಕ್ಕೆ ಬಂದಾಗ, ಇಲ್ಲಿಯೂ ಅದರ ಗುಂಗಿನಲ್ಲೇ ಕಾಲಕಳೆಯುತ್ತಿರುವಾಗ ಗಾಂಧಿಬಜಾರ್‌ನಲ್ಲಿ  ರವಿಕುಮಾರ್ ಎನ್ನುವವರು ರ‌್ಯಾಪ್ ಡಾನ್ಸ್ ಹೇಳಿಕೊಡುತ್ತಿರುವ ವಿಚಾರ ತಿಳಿಯಿತು. ಅವರಲ್ಲಿ ಮತ್ತೆ ಕಲಿಕೆಗೆ ತೊಡಗಿ ಸುಮಾರು 5 ವರ್ಷಗಳಲ್ಲಿ ಆ ಕಲೆಯನ್ನು ಸಿದ್ಧಿಸಿಕೊಂಡರು. ಇದಾದ ಬಳಿಕ ತಾವಿರುವ ಬಾಡಿಗೆ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಾ ಬೆಳೆದುಬಂದಿದ್ದಾರೆ.
 ವಿನೋಬನಗರದ ನೇತಾಜಿ ಶಾಲೆಯ ಮಕ್ಕಳಿಗೆ ಒಮ್ಮೆ ಡಾನ್ಸ್ ಕಲಿಸಲು ಹೋದಾಗ ಅಲ್ಲಿಯೇ ಕಲಿಕಾ ಕೇಂದ್ರ ತೆರೆಯಲು ಅವರು ಅನುಮತಿ ಕೊಟ್ಟಿದ್ದರಿಂದ ಸುಮಾರು 10 ವರ್ಷ ಅಲ್ಲಿಯೇ ಕ್ಲಾಸ್ ನಡೆಸಿದರು. ಅನಂತರ ರವೀಂದ್ರನಗರದ ಸರ್ಕಾರಿ ಶಾಲೆಯಲ್ಲಿ  ಡಾನ್ಸ್ ಶಾಲೆ ನಡೆಸಿದರು. ಇವರಡಿಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಶೆಟ್ಟಿ ಅವರೂ ಸಹ ಹಲವಾರು ರಾಜ್ಯ, ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿ, ಅಂತಾರಾಜ್ಯದಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಜಾನಪದ, ಕಂಸಾಳೆ ಡಾನ್ಸ್ ಹೇಳಿಕೊಡುವುದರಲ್ಲಿ ಶೆಟ್ಟಿ ಸಿದ್ದಹಸ್ತರು. ಕಳೆದ ವಾರ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ರ‌್ಯಾಪ್ ಬೀಟ್ಸ್ ಸ್ಪರ್ಧೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಂತಹ ಸ್ಪರ್ಧೆಯನ್ನು ಅವರು ನಡೆಸುವ ಮೂಲಕ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ; ಪ್ರೋತ್ಸಾಹಿಸುತ್ತಿದ್ದಾರೆ.
ಎರಡು ಧಾರಾವಾಹಿಯಲ್ಲಿ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಶೆಟ್ಟಿ ಅವರು ಕಲಾವಿದರಾಗಿಯೂ  ಮಿಂಚಿದ್ದಾರೆ.
Published on Feb 27, 2016
 .......................................
ಭಾವನಾ ಡಿ. ರಾವ್ 


ನವಜೀವ ನವಭಾವ ನವರಸದ ಸತ್ವದಲಿ
ನಮ್ಮೆಲ್ಲ ಕಲೆಗಳೂ ತುಂಬಿ ನಿಲಬೇಕು
ಎಂಬ ಕವಿವಾಣಿಯಂತೆ ಕಲೆಯಲ್ಲಿ ಇರುವುದೇ ಸೌಂದರ್ಯ. ಇದು ಎಲ್ಲರನ್ನೂ ಸೆಳೆಯುವಂತಹುದು. ಕಲೆಯಲ್ಲಿ ಕೇವಲ ಬಾಹ್ಯ ಚೆಲುವಷ್ಟೇ ಅಲ್ಲ, ಆತ್ಮದ ಒಳ ಹಸಿರೂ ಸಹ ಇದೆ. ಅದನ್ನೇ ರಸ ಎನ್ನುತ್ತಾರೆ. ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ  ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ. ಇಂತಹ ಕಲೆಗಳಲ್ಲಿ ಭರತನಾಟ್ಯಕ್ಕೆ  ಮೊದಲ ಸ್ಥಾನ. ಶಿವಮೊಗ್ಗದಲ್ಲಿ ಭರತನಾಟ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ  ಯುವಪೀಳಿಗೆ ಇದನ್ನು ಅಪಾರವಾಗಿ ಗೌರವಿಸುತ್ತಿದೆ, ಬೆಳೆಸುತ್ತಿದೆ. ಈ ಕಲೆಯ ಮೂಲಕ ಯುವಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಹೊಮ್ಮುತ್ತಿದ್ದಾರೆ. ಅಂತಹವರಲ್ಲಿ ಭಾವನಾ ಡಿ. ರಾವ್ ಒಬ್ಬರು.
ಭಾವನಾ ನಟನಂ ನೃತ್ಯ ಕೇಂದ್ರದ ಕೇಶವಕುಮಾರ್ ಪಿಳ್ಳೈ ಅವರ ಶಿಷ್ಯೆ. ವಿದ್ವತ್ ಮುಗಿಸಿ ಮೊನ್ನೆಯಷ್ಟೇ ರಂಗಪ್ರವೇಶ ಮಾಡಿದ್ದಾರೆ. ನಟನಂನಲ್ಲಿ ಹಲವು ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ. ತನ್ನ 8ನೆಯ ವಯಸ್ಸಿನಿಂದ ಕೇಶವಕುಮಾರ್ ಬಳಿ ಭರತನಾಟ್ಯ ಅಭ್ಯಾಸ ಮಾಡಿ ಜೂನಿಯರ್, ಸೀನಿಯರ್ ವಿದ್ವತ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಡಿವಿಎಸ್‌ನಲ್ಲಿ ಬಿಸಿಎ ಮುಗಿಸಿ ಜೆಎನ್‌ನ್‌ಸಿಇಯಲ್ಲಿ ಎಂಸಿ ಪದವಿ ಪಡೆದು ಕುವೆಂಪು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಮೈಸೂರಿನ ಅಲ್ಲಮಪ್ರಭು ವಿವಿಯಲ್ಲಿ ಎಂ. ಡಾನ್ಸ್ ಪದವಿಯನ್ನು ಪಡೆದಿದ್ದಾರೆ. ಇದರೊಟ್ಟಿಗೆ ಕರ್ನಾಟಕ ಸಂಗೀತ ಶಿಕ್ಷಣವನ್ನೂ ವಿದುಷಿ ಮಂಜುಳಾ ಅವರಲ್ಲಿ ಅಭ್ಯಸಿಸಿ, ಪ್ರಸ್ತುತ ಸೀನಿಯರ್ ಸಂಗೀತ ಶಿಕ್ಷಣವನ್ನು ವಿದುಷಿ ಪೂರ್ಣಿಮಾ ಅವರಲ್ಲಿ ಕಲಿಯುತ್ತಿದ್ದಾರೆ.
ಕಾಲೇಜು ದಿನದಲ್ಲೇ ಭರತನಾಟ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿರುವ ಭಾವನಾ, ಕುವೆಂಪು ವಿವಿಯ ಸಹ್ಯದ್ರಿ ಉತ್ಸವದಲ್ಲಿ ಸತತ ಮೂರು ವರ್ಷ ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಕರ್ನಾಟಕ ಪರಿಕ್ಷಾ ಮಂಡಳಿಯವರು ನಡೆಸುವ ಭರತನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ಸಹಿತ ಇತರೇ ರಾಜ್ಯಗಳಲ್ಲಿ ನೃತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಲ್ಲದೆ, ಸ್ವತಃ ಕಾರ್ಯಾಗಾರವನ್ನೂ ನಡೆಸಿಕೊಟ್ಟಿದ್ದಾರೆ. ಪಕ್ಕದ ಮನೆಯ ಗೆಳತಿ ನೃತ್ಯ ಕಲಿಯುವುದನ್ನು ಗಮನಿಸಿ ಪಾಲಕರಲ್ಲಿ ಹಠ ಮಾಡಿ ಕಲಿಕೆಗೆ ಹೆಜ್ಜೆ ಇಟ್ಟ ಭಾವನಾ, ಈಗ ಶಿವಮೊಗ್ಗಕ್ಕೆ ಹೆಸರು ತರುವ ಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ.
ಶಿವಮೊಗ್ಗದ ಸಹ್ಯಾದ್ರಿ ಉತ್ಸವ, ಕೊಡಚಾದ್ರಿ ಉತ್ಸವ, ದಸರಾ, 73ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಇಕ್ಕೇರಿ ಉತ್ಸವ, ಇತರೆ ಜಿಲ್ಲೆಗಳ ಹಾನಗಲ್ ಉತ್ಸವ, ಬಾಗಲಕೋಟೆ ಉತ್ಸವ, ದಾಸ ಸಾಹಿತ್ಯೋತ್ಸವ, ಕರ್ನಾಟಕ ಕಲಾ ವೈಭವ, ವಿಪ್ರ ಸಮಾವೇಶಗಳಲ್ಲಿ, ಕನ್ನಡ ವಾಹಿನಿಯೊಂದರ ಹೆಜ್ಜೆಗೊಂದು ಹೆಜ್ಜೆ ಕಾರ್ಯಕ್ರಮದಲ್ಲಿ, ಶಂಕರ ಮತ್ತು ಚಂದನ ವಾಹಿನಿಯಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಹೊರತಾಗಿ ದೆಹಲಿ, ಗೋವಾ, ಬೆಂಗಳೂರು, ಮೈಸೂರು  ಸಹಿತ ಕರ್ನಾಟಕದೆಲ್ಲೆಡೆ ಕಲೆ ಪ್ರದರ್ಶಿಸಿದ್ದಾರೆ. ತನ್ನೆಲ್ಲ ಸಾಧನೆಗಳಿಗೆ ತಂದೆ ದತ್ತರಾಜ್ ಮತ್ತು ತಾಯಿ ಕುಸುಮಾ, ಗುರು ವಿದ್ವಾನ್ ಕೇಶವಕುಮಾರ್ ಪಿಳ್ಳೈ ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಸದಾ ನೆನೆಯುವ ಭಾವನಾ. ಭರತನಾಟ್ಯ ವಿಷಯದಲ್ಲೇ ಪಿಎಚ್‌ಡಿ ಮಾಡಲು ತಯಾರಿ ನಡೆಸಿದ್ದಾರೆ. ಜೊತೆಗೆ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುವಂತಹ ಸಾಧನೆ ಮಾಡುವ ಇಚ್ಛೆಯನ್ನು ಅವರು ಹೊಂದಿದ್ದಾರೆ.
ಭಾವನಾ ನಡೆ-ನುಡಿಯಲ್ಲಿ ವಿನಯವಂತೆ. ಕಲಿಕಾ ಶೃದ್ಧೆ ಉಳ್ಳವಳು. ಆರಂಭದಿಂದಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾಳೆ. ಸತತ ಆಸಕ್ತಿ ಹೊಂದಿರುವುದರಿಂದ ಈಗ ವಿದ್ವತ್ ಪೂರೈಸಿ ರಂಗಪ್ರವೇಶ ಮಾಡಿದ್ದಾಳೆ. ನಟನಂನಲ್ಲಿ ನೂರಾರು ಮಕ್ಕಳಿಗೆ ಶಿಕ್ಷಕಿಯಾಗಿದ್ದಾಳೆ. ಭರತನಾಟ್ಯದಲ್ಲಿ ಇಷ್ಟೊಂದು ಸಾಧನೆ ಮಾಡುವ ಮೂಲಕ ತಮಗೂ, ತಮ್ಮ ಸಂಸ್ಥೆಗೂ ಕೀರ್ತಿ ತಂದಿದ್ದಾಳೆ ಎನ್ನುತ್ತಾರೆ ನಟನಂ ಕೇಂದ್ರದ ಗುರು ಕೇಶವಕುಮಾರ್ ಅವರು.
Published on Feb 20. 2016
.........................................
ಕೃಷಿ ಯಂತ್ರಗಳ ಯುವ ಸಂಶೋಧಕ
ನಿತಿನ್ ಹೇರಳೆ
..............................


ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ- ನೆಸೆಸಿಟಿ ಈಸ್ ದ ಮದರ್ ಆಫ್ ಇನ್ವೆನ್ಶನ್ ಎಂದು. ಮನುಷ್ಯನಿಗೆ ಯಾವುದರ ಅನಿವಾರ್ಯತೆ ಇರುತ್ತದೆಯೋ ಆ ವಸ್ತುವನ್ನು ಪಡೆಯಲು ಹೆಚ್ಚು ಗಮನ ಕೊಡುತ್ತಾನೆ. ಅದಕ್ಕಾಗಿ ಯೋಚಿಸುಸುತ್ತಾನೆ, ಯತ್ನಿಸುತ್ತಾನೆ, ಸಂಶೋಧಿಸುತ್ತಾನೆ.
 ಇಲ್ಲೊಬ್ಬ ಯುವಕನಿದ್ದಾನೆ. ವಯಸ್ಸು ಸುಮಾರು 24ರ ಆಸುಪಾಸು. ತನ್ನ ಅಡಿಕೆ ತೋಟದಲ್ಲಿ ಮರಗಳಿಗೆ  ಔಷಧಿ ಸಿಂಪಡಿಸಲು ಜನರು ಸಿಗದಿದ್ದಾಗ ಆತನೇ ಸ್ವತಃ ಮರ ಹತ್ತಿ ಇಳಿಯುವ ಮಾನವ ಚಾಲಿತ ಯಂತ್ರ (ಅರೆಕಾ ಟ್ರೀ ಕ್ಲೈಂಬರ್)ವೊಂದನ್ನು ಕಂಡುಹಿಡಿದ. ಇದಾದ ಬಳಿಕ ಹುಲ್ಲನ್ನು ಮತ್ತು ಬೇಡವಾದ ವಸ್ತುಗಳನ್ನು ಕತ್ತರಿಸಿ ಗೊಬ್ಬರಕ್ಕೆ ಹಾಕಲು ಚಾಪ್ ಕಟರ್ ಎನ್ನುವ ಇನ್ನೊಂದು ಯಂತ್ರ ತಯಾರಿಸಿದ. ಬಳಿಕ ಅಡಿಕೆ ಗೊನೆಯಿಂದ ಅಡಿಕೆಯನ್ನು ಬೇರ್ಪಡಿಸಲು ಮತ್ತೊಂದು ಯಂತ್ರ, ಇದಾದ ಮೇಲೆ ಚಾಲಿ ಸುಲಿದು, ಸಿಪ್ಪೆ ಮತ್ತು ಅಡಿಕೆ ಬೇರೆಯಾಗುವಂತಹ ಮತ್ತೊಂದು ಯಂತ್ರ ತಯಾರಿಸಿದ. ಹಾಗಂತ ಈತನೇನು ಇಂಜಿನಿಯರಿಂಗ್ ಓದಿದವನಲ್ಲ; ವಿಜ್ಞಾನವನ್ನೂ ಓದಿಲ್ಲ,  ಸೂಕ್ಷ್ಮಮತಿ ಮತ್ತು ಸಂಶೋಧನಾ ಬುದ್ಧಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಈತ ತೋರಿಸಿಕೊಟ್ಟಿದ್ದಾನೆ. ಈ ಯುವಕ ಬೇರಾರೂ ಅಲ್ಲ, ನಿತಿನ್ ಹೇರಳೆ.
ಸಿವಿಲ್ ಡಿಪ್ಲೋಮಾ ಓದಿರುವ ಈತ ಶಿವಮೊಗ್ಗ ಸಮೀಪದ ಗಾಜನೂರಿನವನು. ಈಗ ತನ್ನೆಲ್ಲ ಯಂತ್ರ ಮಾದರಿಗಳಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿದ್ದಾನೆ. ಹಲವೆಡೆ ಯಂತ್ರಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ನೀಡಿದ್ದಾನೆ. ತಾನೇ ಸ್ವತಃ ಯಂತ್ರವನ್ನು ತಯಾರಿಸುವ ಘಟಕವನ್ನು ಗಾಜನೂರಿನಲ್ಲಿ ಸ್ಥಾಪಿಸಿ ಸುಮಾರು 15 ಜನರಿಗೆ ಉದ್ಯೋಗ ಕಲ್ಪಿಸಿದ್ದಾನೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಕಾಸರಗೋಡು, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ತನ್ನ ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. ಜನರು ಇದನ್ನು ಖರೀದಿಸಿ, ಈತನ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಅಡಿಕೆ ಮರ ಏರುವವರು, ಅಡಿಕೆ ಸುಲಿಯುವವರು ಸಿಗದ ಕಾರಣ ಈ ಯಂತ್ರಗಳನ್ನು ಸಂಶೋಧಿಸಿದ ನಿತಿನ್, ಗ್ರಾಹಕರ ಕೈಗೆಟುಕುವ ಬೆಲೆಗೆ  ನೀಡುತ್ತಿದ್ದಾನೆ. ಗ್ರಾಹಕರಿಗೂ ಖರೀದಿ ಅನಿವಾರ್ಯ ಎನ್ನುವಂತಾಗಿರುವುದರಿದಂ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ, ತೆಂಗು, ಭತ್ತ ಮೊದಲಾದವುಗಳಿಗೆ ಸಂಬಂಧಿಸಿದ ಇನ್ನಷ್ಟು ಹೊಸ ಯಂತ್ರಗಳನ್ನು ತಯಾರಿಸುವ ಉತ್ಸಾಹದಲ್ಲಿದ್ದಾರೆ.
ಈಗ ತೆಂಗಿನಕಾಯಿ ತುರಿಯುವುದು, ಗೋಡಂಬಿ ಸಿಪ್ಪೆ ತೆಗೆಯುವುದು, ನಿಂಬೆ ರಸ ತೆಗೆಯುವುದು ಮೊದಲಾದ ಸಣ್ಣ ಪ್ರಮಾಣದ ಯಂತ್ರಗಳನ್ನು ತಯಾರಿಸುತ್ತಿದ್ದಾನೆ. ಶಿರಸಿಯ ತೋಟಗಾರ್ಸ್ ಕೊ- ಆಪರೇಟಿವ್ ಸೇಲ್ಸ್ ಸೊಸೈಟಿಯವರು ಇವರನ್ನು ಕರೆಯಿಸಿ ಪ್ರಾತ್ಯಕ್ಷಿಕೆ ಕೊಡಿಸಿ ಸನ್ಮಾನಿಸಿದ್ದಾರೆ. ಪುತ್ತೂರಿನಲ್ಲಿರುವ ಕ್ಯಾಂಪ್ಕೋದವರೂ ಸಹ ಕಳೆದ ವರ್ಷ ನಡೆಸಿದ ಯಂತ್ರೋಪಕರಣಗಳ ಮೇಳದಲ್ಲಿ ಈತನ ಸಂಶೋಧನೆಗಳನ್ನು ಪ್ರದರ್ಶಿಸಿ ಗೌರವಿಸಿದ್ದಾರೆ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯವರು ಪ್ರತಿ ವರ್ಷ ನಡೆಸುವ ಕೃಷಿ ಮೇಳಗಳಲ್ಲೂ ಈತನ ಸಂಶೋಧನೆ ಪ್ರದರ್ಶಿತವಾಗಿದೆ. ಇಲ್ಲಿಯೂ ಹಲವು ಸಂಶೋಧಕರು, ಕೃಷಿ ವಿಜ್ಞಾನಿಗಳು ಇದನ್ನು ಗಮನಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
  ನಿತಿನ್  ಸಂಶೋಧನೆಯನ್ನು ಮುಂದುವರೆಸಿ, ಅದರಲ್ಲಿ ಹೊಸತನವನ್ನು ಸಾಧಿಸುತ್ತಿದ್ದಾನೆ. ಈ ವರ್ಷದ ಜನವರಿಯಲ್ಲಿ ಮೈಸೂರಿನಲ್ಲಿ ಜರುಗಿದ 103ನೆಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಈತ ಪ್ರದರ್ಶಿಸಿದ ಮಾದರಿಗೆ ಬಹುಮಾನ ದಕ್ಕಿದೆ.
 ಡಿಪ್ಲೊಮಾ ಮಾಡಿದರೂ ಸಂಶೋಧನೆಗೆ  ನೆರವಿನ ದಾರಿಯೇ ಕಾಣುತ್ತಿಲ್ಲ. ಸರ್ಕಾರಗಳು ಬಜೆಟ್‌ನಲ್ಲಿ ಕೃಷಿ ಯಂತ್ರೋಪಕರಣಗಳ  ಸಂಶೋಧನೆಗೆ ನೂರಾರು ಕೋಟಿ ರೂ. ಮೀಸಲಿಡುತ್ತವೆಯಾದರೂ ಅದು ಯಾರಿಗೆ ತಲುಪುತ್ತದೆ, ಎಲ್ಲಿಗೆ ಹೋಗುತ್ತದೆ, ಅದನ್ನು ಪಡೆಯುವುದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾನೆ ನಿತಿನ್.
ಈಗ ಸ್ವತಃ ಕೃಷಿಕನಾಗಿ ಸಂಶೋಧನಾ ಪ್ರವೃತ್ತಿಯನ್ನು ಮುಂದುವರೆಸಿದ್ದರ ಫಲವಾಗಿ ಅನೇಕ ಉಪಯುಕ್ತ ಯಂತ್ರಗಳನ್ನು ಕಂಡುಹಿಡಿದಿರುವ ಈತ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಷಿನ ಯಶಸ್ಸು ಕಾಣಲಿ.
Published on Feb 13, 2016
..............................................
ದರ್ಪವಿಲ್ಲದ ದಕ್ಷ ಪೊಲೀಸ್ ಅಧಿಕಾರಿಯ ಮುಡಿಗೆ
ರಾಷ್ಟ್ರಪತಿ ಪ್ರಶಸ್ತಿ


ಬಳಿಗೆ ಬಾರದು ಕೋಪ: ಸುಳಿಯಲಾರದು ತಾಪ
ಸಿಗದು ಮೋಹ ಕಲಾಪ: ತಾಗದು ಆಸೆಯ ಲೇಪ
ಭಯ, ಭ್ರಾಂತಿ, ವಿದ್ವೇಷ ಲವಲೇಶವಿನಿತಿಲ್ಲ: ನೋಡಿದರೆ ಶಾಂತಚಿತ್ತ
ಈ ರೀತಿ ಗುಣ ಹೊಂದಿದವರು ಎಲ್ಲಿ ಕಾಣಸಿಗುತ್ತಾರೆ? ಉತ್ತಮ ಬದುಕು, ಪ್ರಾಮಾಣಿಕತೆ, ಸತ್ಸಂಗ, ಸದಾಚಾರ ಸಂಪನ್ನರಾಗಿರುವವರು ತೀರಾ ವಿರಳ. ಇಂದಿನ ದಿನಗಳಲ್ಲಿ ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇಂತಹ ವ್ಯಕ್ತಿಯೊಬ್ಬರು ಇದ್ದಾರೆನ್ನುವುದೇ ನಂಬಲಸಾಧ್ಯವಾದ ಸತ್ಯ. ಇಂತಹ ಸಿದ್ಧಿ-ಸಾಧನೆಯ ಫಲದಿಂದಾಗಿ ಇದೇ ಕಳೆದ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾದ ಅಪೂರ್ವ ಪೊಲೀಸ್ ಅಧಿಕಾರಿಯೊಬ್ಬರಿದ್ದಾರೆ. ಅವರೇ ತೀರ್ಥಹಳ್ಳಿಯ ಸಿಪಿಐ ಕಚೇರಿಯಲ್ಲಿ ಎಎಸ್‌ಐ ಆಗಿರುವ ಎಚ್. ಬಿ. ಜ್ಞಾನೇಂದ್ರ.
ಜ್ಞಾನೇಂದ್ರ ಎಂದ ಕೂಡಲೇ ನೆನೆಪಾಗುವುದು ಅವರ  ಸದಾಚಾರ, ಸಂಪನ್ನತೆಯ ವ್ಯಕ್ತಿತ್ವ.  ಆ ಇಲಾಖೆಯವರಷ್ಟೇ ಅಲ್ಲ, ಅವರ ಆತ್ಮಿಯರೂ ಸಹ ಇದನ್ನು ಹೇಳುತ್ತಾರೆ. 58ರ ಹರೆಯದ ಇವರು, ಪೊಲೀಸ್ ಇಲಾಖೆಗೇ ಮಾದರಿ ಎಂದರೆ ತಪ್ಪೇನಿಲ್ಲ. ಸದಾ ಕೆಲಸದ ಒತ್ತಡದಿಂದ ಬಳಲುತ್ತಿದ್ದರೂ, ಯಾವುದೇ ನೋವಿದ್ದರೂ ಅದನ್ನು ತೋರಗೊಡದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಜ್ಞಾನೇಂದ್ರ. ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್‌ಗಳಿಗೂ ಇವರನ್ನು ಕಂಡರೆ ವಿಶೇಷ ಪ್ರೀತಿ, ಮಮಕಾರ. ತಮ್ಮ ಕೆಳಗಿನ ನೌಕರರನ್ನು ಎಂದೂ ನೋಯಿಸಿದೆ, ಗೋಳುಹೊಯ್ದುಕೊಳ್ಳದೆ, ಗೌರವದಿಂದಲೇ ಕಾಣುವುದು ಇವರ ವಿಶೇಷ ಗುಣವೇ ಸರಿ.
ಮೂಲತಃ ಕೃಷಿಕ ಕುಟುಂಬದಿಂದ ಬಂದ ಇವರು, ತೀರ್ಥಹಳ್ಳಿ ತಾಲೂಕಿನ ಸಾಲೂರು-ಬಾಳಗೋಡು ಗ್ರಾಮದವರು. ಕೋಣಂದೂರಿನಲ್ಲಿ ಪಿಯುವರೆಗೆ ಶಿಕ್ಷಣ ಪಡೆದು  ಪೊಲೀಸ್ ಕೆಲಸವನ್ನು ಆಯ್ಕೆ ಮಾಡಿಕೊಂಡರು. ಚನ್ನಪಟ್ಟಣದಲ್ಲಿ ತರಬೇತಿಯನ್ನು ಪಡೆದು ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯಲ್ಲಿ 1979ರಲ್ಲಿ ಕೆಲಸಕ್ಕೆ ಪಾದಾರ್ಪಣೆ ಮಾಡಿದರು. ಅನಂತರ ನ್ಯಾಮತಿ, ಚನ್ನಗಿರಿ, ಹೊನ್ನಾಳಿ, ಮಾಳೂರು, ತೀರ್ಥಹಳ್ಳಿಯಲ್ಲಿ ಸೇವೆ.  ನಿವೃತ್ತಿ ಅಂಚಿನಲ್ಲಿರುವ ಇವರು, ಯಾವತ್ತೂ ತನ್ನ ವೃತ್ತಿಗೆ ಅಪಚಾರ ಮಾಡಿದವರಲ್ಲ; ಹೆಸರು ಕೆಡಿಸಿಕೊಂಡವರಲ್ಲ.
ಕಚೇರಿಯಲ್ಲೂ ಸಹ ಇವರದು ಶಿಸ್ತು-ಸಂಯಮದ ಕೆಲಸ. ಸಾರ್ವಜನಿಕರು ಬಂದರೆ ಗೌರವ ಕೊಟ್ಟು ಅವರ ಅಹವಾಲು ಕೇಳಿ ಅಷ್ಟೇ ವಿನಯದಿಂದ ಮಾತನಾಡಿಸುತ್ತಾರೆ. ಹಾಗಾಗಿಯೇ, ಇವರಿರುವ ಸಂದರ್ಭ ನೋಡಿಯೇ ಕಚೇರಿಗೆ ಸಾರ್ವಜನಿಕರು ಹೆಚ್ಚು ಪ್ರಮಾಣದಲ್ಲಿ ಬರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮದೇ ಆದ ಮಾರ್ಗೋಪಾಯಗಳನ್ನು ಇವರು ಅರಿತಿದ್ದಾರೆ. ವಿಶೇಷವಾಗಿ, ತನಿಖಾ ಕಾರ್ಯದಲ್ಲಿ ಪರಿಣತಿ ಹೊಂದಿರುವ ಜ್ಞಾನೇಂದ್ರ, ಹಲವಾರು ಮಹತ್ವದ ತನಿಖೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವಂತೆ ಮಾಡುವ ಮೂಲಕ ಹೆಸರು ಗಳಿಸಿದ್ದಾರೆ.  ತಮ್ಮ 37 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆಯನ್ನು ಇವರು ಹೊಂದಿಲ್ಲ. ಹಾಗಾಗಿಯೇ ಇವರನ್ನು ತೀರ್ಥಹಳ್ಳಿ ಸಿಪಿಐ ಕಚೇರಿಯಲ್ಲಿ ಪ್ರಕರಣಗಳ ವಿಶೇಷ ತನಿಖೆಗಾಗಿ ನೇಮಿಸಲಾಗಿದೆ. ಇವರ ವೃತ್ತಿಪರತೆ ಮತ್ತು ಕಾರ್ಯನಿಷ್ಠೆ ಪ್ರಶ್ನಾತೀತವಾದುದು. ಇದನ್ನೆಲ್ಲ ಗಮನಿಸಿಯೇ ಜಿಲ್ಲಾ ಪೊಲೀಸ್ ವರಿಷ್ಠರು ಇವರನ್ನು ರಾಷ್ಟ್ರಪತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದರು.
 ‘ಇಲಾಖೆ ತನ್ನನ್ನು ಬೆಳೆಸಿದೆ. ಪ್ರೋತ್ಸಾಹಿಸಿದೆ. ನಿಷ್ಠೆ, ಪ್ರಾಮಾಣಿಕತೆ ನಮ್ಮಲ್ಲಿದ್ದರೆ ಎಲ್ಲರೂ ಗುರುತಿಸುತ್ತಾರೆ. ಮೊದಲು ನಮ್ಮ ಬಗ್ಗೆ ನಾವು ಗೌರವ ಬೆಳೆಸಿಕೊಳ್ಳಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎನ್ನುವ ಇವರಿಗೆ ಇದೇ ಕಾರಣಕ್ಕೇ ರಾಷ್ಟ್ರಪತಿ ಪ್ರಶಸ್ತಿ  ಬಂದಿದೆ ಎಂದರೆ ತಪ್ಪಾಗಲಾರದು. ಇವರ ಮಗ-ಮಗಳು ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.  ದರ್ಪ, ಸಿಟ್ಟು, ಅಹಂಕಾರ ಇವರ ಬಳಿ ಎಂದೂ ಸುಳಿದಿಲ್ಲ. ಸದಾ ನಗುಮೊಗದ ಸೇವೆ, ಸಂಸ್ಕಾರಯುತ ಗುಣದ ಜೊತೆ ಉತ್ತಮ ಆರೋಗ್ಯವನ್ನು ಇವರು ಹೊಂದಿ, ಇಲಾಖೆಯಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಭಾಜನರಾಗಿದ್ದಾರೆ.
ಪೊಲೀಸರೆಂದರೆ ಸಾಕು-ಒಂದು ರೀತಿ ಸಂಶಯದಿಂದಲೇ ನೋಡುವ ಈ ಕಾಲದಲ್ಲಿ ಜ್ಙಾನೇಂದ್ರ ಅವರು ನಿಜಕ್ಕೂ ಅನುಕರಣೀಯರು; ಅನುಸರಣೀಯರು.
published on Feb, 9, 2016
..................................   

ಸ್ಕೇಟಿಂಗ್‌ನ ಚಿನ್ನದ ಹುಡುಗ 
ಆತೀಶ್



ಮನುಷ್ಯನಲ್ಲಿ ನಾನು ಇನ್ನೊಬ್ಬ ಸಾಧಕನಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಇರುತ್ತದೆ. ಆದರೆ, ನಾನು ನಾನಾಗಿ ಎದ್ದು ನಿಲ್ಲಬೇಕು, ಕಾಣಿಸಿಕೊಳ್ಳಬೇಕೆಂಬ  ಛಲ ಇರುವುದು ಕೆಲವರಲ್ಲಿ ಮಾತ್ರ. ಮಹತ್ವಾಕಾಂಕ್ಷೆ ಇಲ್ಲದೆ ಯಾರೂ ಏನನ್ನೂ ಸಾಧಿಸಲಾರರು ಎಂಬ ಮಾತಿದೆ. ಮಹತ್ತಾದುದನ್ನು ಸಾಧಿಸಲು ಯಾರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕಿಲ್ಲ. ಪ್ರಬಲ ಇಚ್ಛಾಶಕ್ತಿ, ಮನೋಬಲ ಮತ್ತು ಆತ್ಮವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು.
ಚುಮುಚುಮು ಬೆಳಕಿರುವಾಗಲೇ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ (ರೋಲರ್ ಸ್ಕೇಟಿಂಗ್)  ಯುವಕನೊಬ್ಬನನ್ನು  ನೀವು ಗಮನಿಸಿರಬಹುದು. ಕಾಲಿಗೆ ಕ್ವಾಡ್ ಅಥವಾ ಇನ್‌ಲೈನ್ ಧರಿಸಿ ರಸ್ತೆಯನ್ನೇ ಸ್ಕೇಟಿಂಗ್ ರಿಂಕ್ ಮಾಡಿಕೊಂಡು ಹೆಲಿಪ್ಯಾಡ್ ವೃತ್ತದಿಂದ ತ್ಯಾವರೆಕೊಪ್ಪದ ಹುಲಿ,ಸಿಂಹಧಾಮದವರೆಗೆ  ದಿನನಿತ್ಯ ಹೋಗಿಬರುತ್ತಾನೆ. ಇಷ್ಟೇ ಏಕೆ, ಭಾರತದ ಅತ್ಯಂತ ವೇಗದ ಸ್ಕೇಟರ್ ಎಂಬ ಪ್ರಸಿದ್ಧಿಯನ್ನು ಈತ ಪಡೆದಿದ್ದಾನೆ.
ಇಲ್ಲಿನ ನ್ಯಾಶನಲ್ ಜೂನಿಯರ್ ಕಾಲೇಜಿನಲ್ಲಿ ದ್ವಿತಿಯ ಪಿಯು ಓದುತ್ತಿರುವ ಆರ್. ಆತೀಶ್ ಈ ಯುವಕ. ಮೊದಲಿನಿಂದಲೂ ಸಾಹಸಿ ಬುದ್ಧಿಯನ್ನು ಹೊಂದಿರುವ ಈತ, ಒಮ್ಮೆ ಮೈಸೂರಿಗೆ ಹೋಗಿದ್ದ ವೇಳೆ ಅಲ್ಲಿ ಸ್ಕೇಟಿಂಗ್ ಮಾಡುತ್ತಿರುವವರನ್ನು ಕಂಡಿದ್ದೇ ತಡ, ಈತನಿಗೂ ಅದನ್ನು ಅಭ್ಯಾಸ ಮಾಡಬೇಕೆಂಬ ಬಯಕೆ ಹುಟ್ಟಿತು. ತಂದೆ-ತಾಯಿಯನ್ನು ಕಾಡಿ-ಬೇಡಿ ಸ್ಕೇಟಿಂಗ್ ಖರೀದಿಸಿ ತಾನೇ ಯತ್ನ ಆರಂಭಿಸಿದ. ನಂತರ ಮೈಸೂರಿಗೆ ಮತ್ತೆ ತೆರಳಿ ಸುಮಾರು 2 ವರ್ಷಗಳ ಕಾಲ ಸ್ಕೇಟಿಂಗ್‌ನಲ್ಲಿ ಏಕಲವ್ಯ ಪ್ರಶಸ್ತಿ ಪಡೆದಿರುವ ಶ್ರೀಕಾಂತ್‌ರಾವ್ ಎನ್ನುವವರಲ್ಲಿ ತರಬೇತಿ ಪಡೆದ. ಈತನಲ್ಲಿರುವ ಅಸಾಧಾರಣ ಸಾಧನೆಯ ಶಕ್ತಿಯನ್ನು ಗಮನಿಸಿದ ರಾವ್, ಸರಿಯಾಗಿ ತಿದ್ದಿ, ತೀಡಿ ಬೆಳೆಸಿದರು. ಪರಿಣಾಮವಾಗಿ, ಈತ ಈಗ 52ನೆಯ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ (16 ವರ್ಷ ಮೇಲ್ಪಟ್ಟವರ ವಿಭಾಗ) ದಲ್ಲಿ ಚಿನ್ನವನ್ನು ಗೆದ್ದುಕೊಂಡು ಬಂದಿದ್ದಾನೆ. ಜೊತೆಗೆ ರಿಂಕ್-2 ಎ ವಿಭಾಗದಲ್ಲಿ ಬೆಳ್ಳಿಯನ್ನೂ ತನ್ನದಾಗಿಸಿಕೊಂಡಿದ್ದಾನೆ.
2014ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಪದಕ, ಬಳ್ಳಾರಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನದ ಪದಕ, ರಿಂಕ್ -2 ಎ ವಿಭಾಗದಲ್ಲೂ ಚಿನ್ನದ ಪದಕ, ಬೆಂಗಳೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾನೆ. ಆತೀಶ್ ಇಲ್ಲಿನ ಎಎನ್‌ಕೆ ರಸ್ತೆ ವಾಸಿ ರವಿ ಅವರ ಪುತ್ರ. ರವಿ ತಿಲಕ್‌ನಗರದಲ್ಲಿ ಕಾರ್ ಬಿಡಿಭಾಗಗಳ ವ್ಯಾಪಾರ ನಡೆಸುತ್ತಿದ್ದಾರೆ. ಮಗನ ಎಲ್ಲ ಕನಸನ್ನು ಈಡೇರಿಸುವಲ್ಲಿ ತಂದೆ-ತಾಯಿ ತಮ್ಮ ಸಮಯ ವ್ಯಯಿಸುತ್ತಿದ್ದಾರೆ. ತನಗಂತೂ ಆಸೆ ಇದ್ದರೂ ಸ್ಕೇಟರ್ ಆಗಲು ಸಾಧ್ಯವಾಗಲಿಲ್ಲ. ಆದರೆ ಮಗನ ಮೂಲಕವಾದರೂ ಅದು ಈಡೇರುತ್ತಿದೆ ಎಂಬ ಸಂತಸ ಅವರಲ್ಲಿದೆ.
ಆತೀಶ್ ದಿನನಿತ್ಯ ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಸಂಜೆ ಒಂದುವರೆ ಗಂಟೆ  ಸುಮಾರು 40 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾನೆ. ಜೊತೆಗೆ ಬೇಸಿಗೆ ರಜೆಯಲ್ಲಿ ನೂರಾರು ಮಕ್ಕಳಿಗೆ ವಿಶೇಷ ತರಬೇತಿಯನ್ನು ಸ್ಕೇಟಿಂಗ್ ನಲ್ಲಿ ನೀಡುತ್ತಿದ್ದಾನೆ. 2014ರಲ್ಲಿ ಆಂದ್ರದ ಕಾಕಿನಾಡಿನ ಈಶ್ವರ್ ಅವರು ಸ್ಥಾಪಿಸಿದ್ದ ವೇಗದ ಸ್ಕೇಟಿಂಗ್  ದಾಖಲೆಯನ್ನು ಈತ ಅಳಿಸಿ ಹಾಕಿದ್ದಾನೆ. ಅವರಿಗಿಂತ 18 ಮೈಕ್ರೊ ಸೆಕೆಂಡ್ ಮುಂಚೆ  ಸ್ಕೇಟಿಂಗ್ ಮಾಡಿ ದಾಖಲೆ ಮಾಡಿದ್ದಾನೆ.
ನನಗಾಗಿ ತಂದೆ-ತಾಯಿ ಸಾವಿರಾರು ರೂ. ವ್ಯಯಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸ್ಕೇಟರ್ ಆಗಬೇಕೆಂಬ ಆಸೆ ಇದೆ ಎನ್ನುತ್ತಾನೆ ಆತೀಶ್. ಈತನ ಅಣ್ಣ ವಿಶ್ವಾಸ್ ಸಹ 2013ರಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದನು. ಏನೂ ಸೌಲಭ್ಯ ಇಲ್ಲದ ಶಿವಮೊಗ್ಗದಲ್ಲಿ ರೋಲರ್ ಸ್ಕೇಟಿಂಗ್‌ಗೆ ಸ್ಥಾನ ಸಿಗುವಂತೆ ಆತೀಶ್ ಮಾಡಿದ್ದಾನೆ.  ತನ್ನಂತೆ ನೂರಾರು ಸ್ಕೇಟರ್‌ಗಳನ್ನು ಬೆಳೆಸುತ್ತಿದ್ದಾನೆ.
.........................................

Thursday 15 December 2016

ರಸಪೂರ್ಣ ಕಲೆಯ ಉಪಾಸಕ
ರಾಕೇಶ್


ಈ ಸೃಷ್ಟಿಯೇ ಆನಂದಮಯ. ಅದನ್ನು ಕಾಣುವ ಕಣ್ಣು ಎಲ್ಲರಲ್ಲೂ ಇರುವುದಿಲ್ಲ, ಅನುಭವಿಸುವ ಹೃದಯ ಬೇಕು. ಆಗ ಅದು ಸುಂದರವಾಗಿ ಕಾಣುತ್ತದೆ. ಕಲೆಯನ್ನು ಉಪಾಸನೆಯ ಮಾಧ್ಯಮವನ್ನಾಗಿ ಸ್ವೀಕರಿಸಿ, ಅದರಲ್ಲಿ ಪಾವಿತ್ರ್ಯತೆಯನ್ನು ಕಂಡಾಗ ಚೆಲುವಷ್ಟೇ ಅಲ್ಲ, ಅದು ಆತ್ಮದ ಒಳಗಿನ ಹಸಿರು ಕಾಣುತ್ತದೆ. ಅದು ರಸಪೂರ್ಣವಾಗಿದ್ದಾಗ ಬಹುಕಾಲ ಮರೆಯದೆ ಉಳಿಯುತ್ತದೆ. ಇಂತಹ ರಸಪೂರ್ಣ ವಿದ್ಯಾರ್ಥಿ ಕಲಾವಿದನೊಬ್ಬ ನಗರದಲ್ಲಿ ಈಗ ಹೆಸರು ಮಾಡುತ್ತಿದ್ದಾನೆ.
ಸದಾ ಏನಾದರೊಂದನ್ನು ಮಾಡಬೇಕೆಂಬ ಹುಮ್ಮಸ್ಸು, ತುಡಿತ, ಛಲ ಇದ್ದರೆ ಸಾಧನೆ ಸಾಧ್ಯ. ಆರಂಭಿಸಿದ ಕೆಲಸವನ್ನು ಏಕಾಗ್ರತೆಯಿಂದ ಮುನ್ನಡೆಸಿಕೊಂಡು ಹೋದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ನಗರದ ವಿದ್ಯಾರ್ಥಿ ಕೆ. ರಾಕೇಶ್  ಉತ್ತಮ ಉದಾಹರಣೆ. ಈತ ಈ ವರ್ಷ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯವರು ನಡೆಸಿದ ರಾಜ್ಯಮಟ್ಟದ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಚಿತ್ರಕಲೆಯಲ್ಲಿ ಮೊದಲ ಸ್ಥಾನಿಯಾಗಿ ಜಿಲ್ಲೆಯ ಹೆಸರನ್ನು ಮೆರೆಸಿದ್ದಾನೆ.
ರಾಕೇಶ್ ನಗರದ ಪೇಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಾನೆ. ಎರಡನೆಯ ತರಗತಿಯಿಂದಲೇ ಚಿತ್ರಕಲೆ ಆರಂಭಿಸಿ ಇಂದಿಗೂ ಅದರಲ್ಲಿ ಮುಂದುವರೆದು ರಾಜ್ಯಮಟ್ಟದಲ್ಲಿ ಸಾಧನೆ ಮುಂದುವರೆಸಿದ್ದಾನೆ. ತನ್ನ ಅಕ್ಕಪಕ್ಕದ ಮನೆಯ ಹುಡುಗರು, ಗೆಳೆಯರು ಚಿತ್ರ ಬಿಡಿಸುತ್ತಿದ್ದುದನ್ನು ಗಮನಿಸಿ ತಾನೂ ಸಹ ಚಿತ್ರಕಲೆಯನ್ನು ಏಕೆ ಕಲಿಯಬಾರದೆಂದು ನಿರ್ಧರಿಸಿ, ಪಾಲಕರ  ಒಪ್ಪಿಗೆ ಪಡೆದು ನಗರದ ರವಿವರ್ಮ ಚಿತ್ರಕಲಾ ಸಂಸ್ಥೆಯಲ್ಲಿ ಕಲಿಕೆ ಆರಂಭಿಸಿ, 10 ವರ್ಷ ಪೂರೈಸಿದ್ದಾನೆ. ಈತ ಇಲ್ಲಿಯವರೆಗೆ ಪಡೆದಿರುವ ಪ್ರಶಸ್ತಿಗಳ ಸಂಖ್ಯೆ ಅಗಣಿತ. ಮನೆ ತುಂಬಾ ಪ್ರಶಸ್ತ್ತಿಗಳೇ ತುಂಬಿವೆ.
ಈತ ಭಾಗವಹಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಖಚಿತ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾನೆ. ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಸಂದಿವೆ. ಓದಿನಲ್ಲೂ ಮುಂದಿರುವ ಈತ ಮುಂದೆ ಇಂಜಿನೀಯರಿಂಗ್ ಮಾಡುವ ಬಯಕೆ ಹೊಂದಿದ್ದು, ಅದರಲ್ಲಿ ವಾಸ್ತುಶಿಲ್ಪವನ್ನು ಆಯ್ಕೆ ಮಾಡಿಕೊಂಡು ಚಿತ್ರಕಲೆಯ ಲಾಭ ಪಡೆಯಲು ಯೋಚಿಸಿದ್ದಾನೆ.
ರಾಜೇಂದ್ರನಗರದ  ವಾಸಿ ಕೆ.ಸಿ.ರವಿಕುಮಾರ್ ಮತ್ತು ಶೋಭಾ ಅವರ ಪುತ್ರನಾಗಿರುವ ರಾಕೇಶ್  ಸಾಧನೆಯಲ್ಲಿ ಪಾಲಕರ ಪಾತ್ರ ಎಷ್ಟಿದೆಯೋ ಅಷ್ಟೇ ಆತನ ಚಿತ್ರಕಲಾ ಶಾಲೆಯ ಗುರು ಶ್ರೀಧರ್ ಕಂಬಾರ್ ಪಾತ್ರವೂ ಇದೆ. ಸದಾ ಆತನನ್ನು ತಿದ್ದಿ, ತೀಡಿ, ಸಾಧನೆಗೆ ನೀರೆರೆದಿದ್ದಾರೆ. ರಾಕೇಶ್ ಸಾಧನೆ ಬಗ್ಗೆ ಅವರು ಅಪಾರ ಹೆಮ್ಮೆಪಡುತ್ತಾರೆ.
ಚಿತ್ರಕಲೆ ಹೊರತಾಗಿ ಈತ, 2006-07ರಲ್ಲಿ ರಾಜ್ಯ ಮಟ್ಟದ ನವೋದಯ ಸಮಾಜ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಮತ್ತು ಚಿನ್ನದ ಪದಕ ಗಳಿಸಿದ್ದಾನೆ. ಚಿತ್ರಕಲೆಯಲ್ಲಿ 2011ರಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಭಾ  ಪುರಸ್ಕಾರ ಮತ್ತು ಚಿನ್ನದ ಪದಕ, ಚಿತ್ರಕಲಾ ಅಕಾಡೆಮಿಯವರು ನಡೆಸಿದ ಸ್ಪರ್ಧೆಯಲ್ಲಿ 2010 ಮತ್ತು 11ರಲ್ಲಿ ಎರಡು ಬಾರಿ ಚಿನ್ನದ ಪದಕ, ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ಸ್‌ನವರು ನಡೆಸಿದ ಸ್ಪರ್ಧೆಯಲ್ಲಿ ಚಿನ್ನ, ತುಮಕೂರಿನ ಕಲರ್ಸ್ ಗ್ರೂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಇದರೊಟ್ಟಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ಇನ್ನೂ ಹಲವಾರು ಸ್ಪರ್ಧೆಗಳಲ್ಲಿ ಮೊದಲಿಗನಾಗಿ ಮೆರೆದಿದ್ದಾನೆ. ಘನತ್ಯಾಜ್ಯ ವಿಲೇವಾರಿ, ಪರಿಸರ ದಿನಾಚರಣೆ, ಇನಶೂರೆನ್ಸ್ ವೀಕ್, ವನ್ಯ ಜೀವಿ ಸಪ್ತಾಹ, ವಿಶ್ವ ಪರ್ಯಟನ ದಿನ ನಿಮಿತ್ತ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲೂ ಈತನಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.
 ಇಲ್ಲಿಯವರೆಗೆ ಆತ ಮಾಡಿದ ಸಾಧನೆಯ ಜೊತೆ ಇನ್ನೊಂದು ಬೃಹತ್ ಗರಿ ಈಗ ಮೂಡಿದಂತಾಗಿದೆ. ಚಿತ್ರಕಲೆಯಲ್ಲಿ ಸಾಧನೆ ಮಾಡಲು ಏಕಾಗ್ರತೆ ಮತ್ತು ತಾಳ್ಮೆ ಅವಶ್ಯ. ನಮ್ಮಲ್ಲಿರುವ ಪ್ರತಿಭೆ ಹೊರಬರಲು ಚಿತ್ರಕಲೆ ಪ್ರಮುಖ ವೇದಿಕೆಯಾಗಿದೆ. ಚಿತ್ರಕಲೆಯಿಂದಲೇ ತನಗೆ ಅಪಾರ ಗೌರವ ಲಭಿಸಿದೆ. ಇನ್ನು ಮುಂದೆಯೂ ಇದರಲ್ಲೇ ಸಾಧನೆ ಮಾಡುವ ವಿಚಾರವಿದೆ ಎನ್ನುತ್ತಾನೆ ರಾಕೇಶ್.

published on 23, 1, 2016

Wednesday 14 December 2016

ಕರಾಟೆವೀರ, ಪದಕಗಳ ಸರದಾರ
ಚಂದ್ರಕಾಂತ್ ಭಟ್



"ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದು ಒಂದು ಸುಭಾಷಿತ. ಕರಾಟೆ ಕಲಿಗಳ ಮಟ್ಟಿಗಂತೂ ಇದು ಹೆಚ್ಚು ಒಪ್ಪುವಂತಿದೆ. ಈಗಲೂ ನಮ್ಮಲ್ಲಿ ಅನೇಕರ ಮನಸ್ಸಿನಲ್ಲಿ ಕರಾಟೆಯೆಂದರೆ ಹೊಡೆದಾಟ-ಬಡಿದಾಟಗಳ ಕಲೆ ಎಂಬ ತಪ್ಪುಗ್ರಹಿಕೆಯೊಂದಿದೆ; ಶಕ್ತಿಪ್ರದರ್ಶನದ ಕಲೆ ಎನ್ನುವ ಭಾವನೆಯೂ ಇದೆ. ನಿಜವಾಗಿ ನೋಡಿದರೆ ಇದು ಆತ್ಮರಕ್ಷಣೆಯ ಸಾಹಸಕಲೆ; ದೈಹಿಕ ಕಸರತ್ತಿನ ಕಲೆ; ಮಾನಸಿಕ ದೃಢತೆಯನ್ನು ತಂದೀಯುವ ಕಲೆ; ಆರೋಗ್ಯವರ್ಧನೆಯ ಕಲೆ ಎಂದರೆ ತಪ್ಪಾಗಲಾರದು.
ಸಾಹಸ ಕಲೆಗಳು ಇತ್ತೀಚಿನ ವರ್ಷಗಳಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಕಾರಣ ಅವುಗಳನ್ನು ಕಲಿಸುವವರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯರಿರುವುದೇ ಇದಕ್ಕೆ ಕಾರಣ.  ಅಂತಹ ಸಾಹಸ ಕಲೆಗಳಲ್ಲಿ ಕರಾಟೆಯೂ ಒಂದು. ಶಿವಮೊಗ್ಗ ನಗರದಲ್ಲಿ ಕಳೆದ 24 ವರ್ಷಗಳಿಂದ  ಕರಾಟೆಯನ್ನು ಕಲಿಯುತ್ತ, ಕಳೆದ 17 ವರ್ಷಗಳಿಂದ ಕರಾಟೆ ತರಬೇತಿ ತರಗತಿಗಳನ್ನು ನಡೆಸುತ್ತಿರುವ ಚಂದ್ರಕಾಂತ್ ಭಟ್ ಬಹುತೇಕ ನಗರದ ಎಲ್ಲಜನತೆಗೂ ಚಿರಪರಿಚಿತರು. ಕಳೆದ ವಾರ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿ ಅವರು ಚಿನ್ನದ ಪದಕ ಗಳಿಸಿ ಬರುವಂತೆ ಮಾಡಿದ್ದಾರೆ.
ಇಂಟರ್‌ನ್ಯಾಶನಲ್ ಶೊಟೊಕಾಯ್ ಕರಾಟೆ-ಡೊ ಫೆಡರೇಶನ್‌ನ ಶಿವಮೊಗ್ಗ ಜಿಲ್ಲಾ ಘಟಕದ ಮುಖ್ಯಸ್ಥರಾಗಿರುವ ಭಟ್,  ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಸ್ವತಃ ಭಾಗವಹಿಸಿ ಸಾಕಷ್ಟು ಪದಕಗಳ ಸರಮಾಲೆಯನ್ನೇ ಧರಿಸಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಟ್ ಶಿವಮೊಗ್ಗಕ್ಕೆ ಬಂದು ನೆಲೆನಿಂತವರು. ಇಲ್ಲಿಯೇ ಓದಿ ಎನ್‌ಇಎಸ್ ಸಂಸ್ಥೆಯ ಲಾ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದಾರೆ. ಅನಂತರ, ಮುಕ್ತ ವಿವಿಯಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಆದರೆ ವಕೀಲಿ ವೃತ್ತಿಗೆ ಮುಂದಾಗದೆ, ಕರಾಟೆಯಲ್ಲೇ ತಮ್ಮ ಜೀವನ ಮುಂದುವರೆಸಿದ್ದಾರೆ.
ಭಟ್ ಅವರು ಕರಾಟೆ ಕಲಿತದ್ದು ನಗರದ ಸತೀಶ್ ಎನ್ನುವವರಲ್ಲಿ. ನಂತರ ಪ್ರವೀಣ್ ರಾಂಕಾ, ಸುಜಯ್, ಪ್ರಸಾದ್, ಸುನಿಲ್‌ಕುಮಾರ್ ಅವರಲ್ಲೂ ತರಬೇತಿಯನ್ನು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪಡೆದಿದ್ದಾರೆ. ಜಪಾನ್‌ಗೆ ತೆರಳಿ ಅಂತಾರಾಷ್ಟ್ರೀಯ ಖ್ಯಾತರಲ್ಲೂ ವಿಶೇಷ ತರಬೇತಿ ಪಡೆದ ನಂತರ ನಗರದಲ್ಲಿ ಹಲವೆಡೆ ತರಬೇತಿ ನೀಡಲು ಪ್ರಾರಂಭಿಸಿದ್ದಾರೆ. ನಗರದ ವಿಪ್ರ ಟ್ರಸ್ಟ್ ಮತ್ತು ಜೆಸಿ ನಗರದ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ  ತರಗತಿಗಳನ್ನು ನಡೆಸುತ್ತಿದ್ದು, ಇಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕರಾಟೆ ಕಲಿಯುತ್ತಿದ್ದಾರೆ. ಆನವಟ್ಟಿಯ ಎವೆರಾನ್ ಸ್ಕೂಲ್‌ನಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ 400 ವಿದ್ಯಾರ್ಥಿಗಳಿಗೆ  ತಲಾ ಒಂದೂವರೆ ಗಂಟೆ  ಕರಾಟೆ ಕಲಿಸುತ್ತಿದ್ದಾರೆ. ಇದರೊಟ್ಟಿಗೆ ಸರ್ವ ಶಿಕ್ಷಾ ಅಭಿಯಾನದಡಿ ಜಿಲ್ಲೆಯ ಹಲವು ಹೈಸ್ಕೂಲ್‌ಗಳಲ್ಲಿ ವರ್ಷದಲ್ಲಿ 3 ತಿಂಗಳು ಕರಾಟೆ ಕಲಿಸುತ್ತಾರೆ.
 ಕರಾಟೆಯಿಂದ ಏಕಾಗ್ರತೆ, ಶಾಂತತೆ ಪಡೆಯಲು ಅನುಕೂಲ. ಶಿವಮೊಗ್ಗದಲ್ಲಿ ಇತ್ತೀಚೆಗೆ ಕರಾಟೆಗೆ ಅಪಾರ ಬೆಂಬಲ ಸಿಗುತ್ತಿದೆ. ಎಲ್ಲ ವಯಸ್ಸಿವರು ಇದನ್ನು ಕಲಿಯಲು ಮುಂದೆ ಬರುತ್ತಿದ್ದಾರೆ. ಒಟ್ಟಿನಲ್ಲಿ ಕಲಿಕೆಗೆ ಆಸಕ್ತಿ ಮುಖ್ಯ ಎನ್ನುತ್ತಾರೆ ಅವರು. 2004ರಲ್ಲಿ ಜಪಾನ್, 2005ರಲ್ಲಿ ದ. ಕೊರಿಯಾ, ಮೆಲ್ಬೋರ್ನ್, ಥೈಲ್ಯಾಂಡ್, ಸಿಂಗಪುರ್ ಮೊದಲಾದೆಡೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿರುವ ಇವರು, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗೆದ್ದ ಪದಕಗಳಿಗೆ ಲೆಕ್ಕವೇ ಇಲ್ಲ. ಇವರಿಂದ ತರಬೇತಿ ಪಡೆದ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪದಕ ಗೆದ್ದಿದ್ದಾರೆ, ಗೆಲ್ಲುತ್ತಿದ್ದಾರೆ.
2007ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಕ್ರೀಡಾ ವಿಭಾಗದಿಂದ ಭಟ್ ಅವರನ್ನು ವಿಶೇಷ ಸಾಧನೆಗಾಗಿ ಗೌರವಿಸಿದ್ದರು. ಕರಾಟೆಯಲ್ಲಿ ಅಪಾರ ಸಾಧನೆ ಮಾಡಿದ ಇವರನ್ನು ರಾಜ್ಯ ಸರಕಾರ ಅಥವಾ ಇನ್ನಿತರ ಸಂಘ-ಸಂಸ್ಥೆಗಳು ಇನ್ನಾದರೂ ಗುರುತಿಸಿ ಗೌರವಿಸಲಿ ಎನ್ನುವುದು ನಮ್ಮೆಲ್ಲರ ಆಶಯ.

Published on Jan 9, 2016
.....................................
.........................................
ಹಿಂದೂಸ್ಥಾನಿ ಸಂಗೀತದ ಧ್ರುವತಾರೆ
ನೌಷದ್ ಹರ್ಲಾಪುರ


’ತಾಯಿಯಂತೆ ಮಗಳು; ನೂಲಿನಂತೆ ಸೀರೆ’ ಎನ್ನುವುದು ಜನಜನಿತವಾದ ಮಾತು. ಆದರೆ ಇಲ್ಲಿ ಹಾಗಲ್ಲ. ’ತಂದೆಯಂತೆ ಮಗ’. ಏಕೆಂದರೆ ತಂದೆಯ ಕಲೆಯನ್ನು ಇನ್ನಷ್ಟು ಬೆಲೆಗೊಳ್ಳುವಂತೆ ಮಾಡಿದ ಕೀರ್ತಿ ಮಗನಿಗೆ ಸಲ್ಲಬೇಕು. ಅಪ್ಪನ ತೊಡೆಯೇರಿದ್ದೇ ತಪ್ಪಾಗಿ, ಐದರ ಹರೆಯದಲ್ಲೇ ಕಾಡಿಗೆ ತೆರಳಿ, ಭಗವಂತನನ್ನು ಒಲಿಸಿಕೊಂಡ ಧ್ರುವನ ಕಥೆ ನಮಗೆಲ್ಲ ಗೊತ್ತು.  ತನ್ನ ಐದರ ಹರೆಯದಲ್ಲೇ ಅಪ್ಪನ ತೊಡೆಯೇರಿದ್ದೇ ವರವಾಗಿ ಸಂಗೀತಾಭ್ಯಾಸಕ್ಕೆ ತೊಡಗಿದ ಈತನಿಗೆ ಸಂಗೀತ ಸರಸ್ವತಿ ಒಲಿದೇ ಬಿಟ್ಟಳು. ಇವನ ಕಂಠಸಿರಿಯಲ್ಲಿ ಸಂಗೀತ ಶಾರದೆ ಲೀಲಾಜಾಲವಾಗಿ ನರ್ತಿಸುತ್ತಾಳೆ. ಸಂಗೀತವೇ ಇವನ ಉಸಿರು; ಇದರ ಫಲಶ್ರುತಿಯೇ ’ವಾಯ್ಸ್ ಆಫ್ ಇಂಡಿಯಾ ’ ಪ್ರಶಸ್ತಿಯ ಗರಿ!
ಸಂಗೀತಕ್ಕೆ ಮಾರು ಹೋಗದವರಾರೂ ಇಲ್ಲ. ಎಂತಹ ಮನಸ್ಸನ್ನಾದರೂ ಅದು ಸೆಳೆಯುತ್ತದೆ, ರಂಜಿಸುತ್ತದೆ. ಕಲೆಯ ಗುಣವೇ ಅಂತಹುದು. ಕಲೆ ಒಂದು ಆನಂದದ ಅನುಭೂತಿಯನ್ನು ತಂದೀಯುತ್ತದೆ. ಆನಂದದಲ್ಲಿ ಹುಟ್ಟಿ, ಚಲಿಸಿ, ಅದರಲ್ಲೇ ಲೀನವಾಗಬೇಕೆಂಬ ಆತ್ಯಂತಿಕವಾದ ಹಂಬಲಕ್ಕ್ಕೂ ಕಾರಣವಾಗುತ್ತದೆ. ಅಂತಹ ಒಂದು ಆನಂದವನ್ನು  ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಮಗೆ ನೀಡುತ್ತದೆ.
ನೌಷದ್  ಖ್ಯಾತ ಹಿಂದುಸ್ಥಾನಿ ಗಾಯಕ ಹುಮಾಯೂನ್ ಹರ್ಲಾಪುರ ಅವರ ಹಿರಿಯ ಮಗ. ತನ್ನ ಏಳರ ಹರೆಯದಲ್ಲಿ ಮೊದಲ ಪ್ರದರ್ಶನವನ್ನು ನೀಡಿದ ಕೀರ್ತಿಗೆ ಭಾಜನನಾಗಿದ್ದಾನೆ. ಈಗ 23ರ ಹರೆಯದ ಈತ, ಮುಂಬೈ, ಬೆಂಗಳೂರು, ಭೋಪಾಲ್, ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸ್ವತಂತ್ರವಾಗಿ ಪ್ರದರ್ಶನ ನೀಡಿದ್ದಾನೆ. ತಂದೆಯ ಜೊತೆಗೂ ಸಾಕಷ್ಟು ಪ್ರದರ್ಶನ ನೀಡಿ ಜನರನ್ನು ರಂಜಿಸಿದ್ದಾನೆ. ಈತನಿಗೆ ತನ್ನ ತಂದೆಯೇ ಗುರು.  ನೌಷದ್ ಈಗ ಹಿಂದೂಸ್ಥಾನಿ ಸಂಗೀತದ ಮಾಂತ್ರಿಕ ಧಾರವಾಡದ ಪಂಡಿತ್ ಸೋಮನಾಥ್ ಮರಡೂರು ಅವರಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾನೆ.
ನೌಷದ್ ಪ್ರಾಥಮಿಕ ವಿದ್ಯಾಭ್ಯಾಸವನ್ನು  ನಗರದ ಗಾಯತ್ರಿ ವಿದ್ಯಾಲಯದಲ್ಲಿ, ಹೈಸ್ಕ್ಕೂಲನ್ನು ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ, ಪಿಯುವನ್ನು ಡಿವಿಎಸ್‌ನಲ್ಲಿ ಓದಿ, ನಂತರ ಗದುಗಿನ ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯಕ್ಕೆ ಸೇರ್ಪಡೆಗೊಂಡು ಸಂಗೀತದಲ್ಲೇ ಪದವಿ ಪೂರೈಸಿದ್ದಾನೆ. ಸದ್ಯ ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯದಲ್ಲಿ ಸಂಗೀತ ಎಂ.ಎ. ಓದುತ್ತಿದ್ದಾನೆ. ಅದರ ಮಧ್ಯೆ ತಂದೆ ಜೊತೆ ಸೇರಿ ಕೆಲವೊಮ್ಮೆ ಸ್ವತಂತ್ರವಾಗಿ ಕಾರ್ಯಕ್ರಮ ನೀಡುವುದನ್ನು ಮುಂದುವರೆಸಿದ್ದಾನೆ. ಈ ತರಬೇತಿಯೇ ಆತನನ್ನು ಸಂಗೀತದ ಆಳಕ್ಕೆ ಕೊಂಡೊಯ್ದಿದೆ.
2013-14, 14-15 ಮತ್ತು 15-16ನೆಯ ಸಾಲಿಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಪಡೆಯುತ್ತಿರುವ ನೌಷದ್‌ನದ್ದು ವಯಸ್ಸಿಗೆ ಮೀರಿದ ಹಾಡುಗಾರಿಕೆ. ಲಯ, ಸ್ವರ ಮತ್ತು ತಾಳದೊಂದಿಗೆ ರಾಗಬದ್ಧವಾಗಿ ಹಾಡಲು ಕುಳಿತನೆಂದರೆ ಎಂತಹವರೂ ಮಾರುಹೋಗಬೇಕು.. ತಂದೆಗೆ ಹಿನ್ನೆಲೆಯಾಗಿಯೂ ಹಾಡುತ್ತಿದ್ದಾನೆ. ಕೇವಲ ಹಿಂದುಸ್ಥಾನಿ ಗಾಯನವೊಂದೇ ಅಲ್ಲ, ವಚನ, ಭಕ್ತಿಗೀತೆ, ಭಾವಗೀತೆಯನ್ನೂ ರಾಗಬದ್ಧವಾಗಿ ಹಾಡುವುದರಲ್ಲಿ ಈತ ಎತ್ತಿದಕೈ. ಕೇಂದ್ರದ ಸಂಸ್ಕೃತಿ ಇಲಾಖೆಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಈತ, 2002ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಕಲಾಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಮತ್ತು ವಿದ್ಯಾರ್ಥಿದೆಸೆಯಲ್ಲಿರುವಾಗಲೇ ಅಂದರೆ 2008ರಲ್ಲಿ ಪ್ರತಿಭಾ ಕಾರಂಜಿಯಲ್ಲೂ ರಾಜ್ಯಕ್ಕೆ  ಹಿಂದೂಸ್ಥಾನಿ ಗಾಯನ ಮತ್ತು ಭಾವಗೀತೆಯಲ್ಲಿ ಮೊದಲ ಸ್ಥಾನ  ಗಳಿಸಿದ್ದಾನೆ. ಕಳೆದ ತಿಂಗಳು ಲಕ್ನೋದಲ್ಲಿ ನಡೆದ ’ಕ್ಲಾಸಿಕಲ್ ವಾಯ್ಸ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದು, ಅಲ್ಲಿನ  ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ ಸ್ವೀಕರಿಸಿದ್ದಾನೆ. ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗುತ್ತಿದ್ದಾನೆ.
ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಸಂಗೀತದಲ್ಲೇ ಪಿಎಚ್‌ಡಿ ಮಾಡುವ ಹಿರಿದಾಸೆ ಇವನದು. ತಂದೆಯ ಪ್ರೋತ್ಸಾಹದ ನೆರಳಿನಲ್ಲಿ ಮತ್ತು ಮರಡೂರು ಅವರ ಅಪಾರ ವಿದ್ವತ್ತಿನ ನೆರವಿನಿಂದ ಬೆಳೆಯುತ್ತಿರುವ ಈ ಪ್ರತಿಭೆ ನಾಡಿನೆಲ್ಲೆಡೆ ತನ್ನ ಸಂಗೀತದ ಕಂಪನ್ನು ಪಸರಿಸಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

published on Jan 2, 2016
...........................................

Monday 14 November 2016

ಏಕಲವ್ಯ ನಿಷ್ಠೆಯ ಕಲಾಕಾರ
 ಮಂಜೇಶ್

"ಕಲಿಯೆ ಮನಸಿರೆ ಸಾಕು, ಕಲಿಸೆ ಮಣ್ಣಿನ ಗೊಂಬೆ" ಇದು ರಸಋಷಿ ಕುವೆಂಪು ಅವರ ’ಬೆರಳ್ಗೆ ಕೊರಳ್’ ನಾಟಕದ ಒಂದು ನುಡಿ; ಏಕಲವ್ಯನ ನಿಷ್ಠೆಗೆ ಹಿಡಿದ ಕೈಗನ್ನಡಿ. ಪ್ರಾಯಶಃ ಈ ಮಾತು ಬಹುಮುಖೀ ಪ್ರತಿಭೆಯ ಮಂಜೇಶ್ ಅವರಿಗೂ ಅನ್ವಯವಾಗುತ್ತದೆ. ಹಿತ್ತಲಗಿಡ ಮದ್ದಲ್ಲ’ ಎಂಬಂತಿರುವ, ಪ್ರಚಾರದ ಗೀಳಿಲ್ಲದೆ ಕಲಾರಾಧನೆಯಲ್ಲಿ ತೊಡಗಿರುವ ಅಸಾಮಾನ್ಯ ಕಲಾವಿದ ಈತ.
ಕಲೆಗೂ ಬಡತನಕ್ಕೂ ಅದೆಂತಹ ನಂಟಿದೆಯೋ ಗೊತ್ತಿಲ್ಲ. ಬಹುತೇಕ ಕಲಾವಿದರೆಲ್ಲ ಬಡವರಾಗಿರುತ್ತಾರೆ. ಆದರೂ ತಮ್ಮ ಪ್ರತಿಭೆಯನ್ನು  ಬೆಳೆಸಿಕೊಂಡು ಅವಕಾಶಕ್ಕಾಗಿ ತಡಕಾಡುತ್ತಾರೆ. ಅದೃಷ್ಟ ಜತೆಗಿದ್ದವರಿಗೆ ಅವಕಾಶದ ಮೂಲಕ ಕಲಾವಿದರಾಗುವ ಭಾಗ್ಯ; ಅದೃಷ್ಟಹೀನರಿಗೆ ಅವರಲ್ಲಿರುವ ಕಲೆ ಅರಳುವ ಬದಲು ಕಮರುವ ದೌರ್ಭಾಗ್ಯ.   ಮಂಜೇಶ್‌ಗೆ ಹೇಳಿಕೊಳ್ಳುವಂತಹ ಅವಕಾಶ ಸಿಗದೇ ಹೋದರೂ, ಮಿಂಚುತ್ತಿರುವ ಅಪರೂಪದ ಬಹುಮುಖೀ ಪ್ರತಿಭೆ.
ಬಡತನದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ಈ ಯುವಕ ಒಂದಲ್ಲ, ಎರಡಲ್ಲ, ನಾಲ್ಕಾರು ಕಲೆಗಳ ಮೂಲಕ ಪ್ರಕಾಶಿಸುತ್ತಿದ್ದಾನೆ. ರಾಜ್ಯಾದ್ಯಂತ ಕಾರ್ಯಕ್ರಮ ನೀಡುತ್ತಿದ್ದಾನೆ. ಹಿಂದೂಸ್ಥಾನಿ ಸಂಗೀತ, ವಾಲ್ ಪೇಂಟಿಂಗ್, ಗಾಯನಕ್ಕೆ ತಕ್ಕಂತೆ ಚಿತ್ರ ಬಿಡಿಸುವುದು, ಆರ್ಟ್ ಡೆಕೋರೇಶನ್, ವಚನ, ಭಕ್ತಿಗೀತೆಗಳ ಹಾಡುಗಾರಿಕೆಯ ಜೊತೆಗೆ ಅವುಗಳಿಗೆ ಸಂಗೀತ ನಿರ್ದೇಶನ ನೀಡುವ ಮಟ್ಟಕ್ಕೆ ಬೆಳೆದಿದ್ದಾನೆ.
ನಗರದ ಸಮನ್ವಯ ಕಚೇರಿಗೆ ಹೋದವರು ಅಲ್ಲಿ ಗೋಡೆಯ ಮೇಲಿನ ಚಿತ್ರ ಗಮನಿಸಿ, ಚಿತ್ರದ ವಿನ್ಯಾಸಕ್ಕೆ ಮಾರುಹೋಗುತ್ತಾರೆ; ಕಲಾಕಾರ ಯಾರೆಂದು ಪ್ರಶ್ನಿಸುತ್ತಾರೆ. ಮಂಜೇಶ್ ಇವುಗಳ ಜನಕ. ಉತ್ತಮ ಕಂಠ ಮಾಧುರ್ಯವೂ ಈತನಿಗೆ ವರವಾಗಿದೆ. ವಚನವಿರಲಿ, ಭಕ್ತಿಗೀತೆ ಇರಲಿ, ಭಾವಗಿತೆ ಇರಲಿ ಎಲ್ಲವನ್ನು ಅಷ್ಟೇ ಸುಂದರವಾಗಿ ಹಾಡುವುದರಲ್ಲಿ ಈತ ನಿಸ್ಸೀಮ. ಹಳೆಯ ಹಾಡುಗಳನ್ನಂತೂ ಆಯಾಯ ಗಾಯಕರ ಧ್ವನಿಯಲ್ಲೇ ಮಧುರವಾಗಿ ಹಾಡುತ್ತ ಪ್ರೇಕ್ಷಕರನ್ನು ಗಂಧರ್ವಲೋಕಕ್ಕೆ ಕರೆದೊಯ್ಯುತ್ತಾನೆ.
ಮಂಜೇಶ್ ನಾಗರಾಜಪುರ ಬಡಾವಣೆಯ ವಾಸಿ. ಐಸ್ ಮಾರುವ ತಂದೆ, ತರಕಾರಿ ಮಾರುವ ತಾಯಿಯನ್ನು ಸಾಕುವ ಜವಾಬ್ದಾರಿಯನ್ನು ಹೊತ್ತ ಮಂಜೇಶ್ ಪಿಯುವರೆಗೆ ಓದಿದ ನಂತರ ಆರಿಸಿಕೊಂಡಿದ್ದು, ಚಿತ್ರಕಲೆಯನ್ನು.  ಪೆನ್ಸಿಲ್ ಮೂಲಕ ಅತ್ಯಂತ ಮನೋಜ್ಞವಾಗಿ ಚಿತ್ರ ಬಿಡಿಸಿ ಗಮನ ಸೆಳೆದ ಈತ ಅಲ್ಲಿಂದ ಮುಂದೆ ಹೆಜ್ಜೆ ಇಟ್ಟು ಗೋಡೆಗಳ ಮೇಲೆ ಅವುಗಳನ್ನು ಬಿಡಿಸುವುದನ್ನು ಆರಂಭಿಸಿದ. ಇದರಿಂದ ಕಲೆ ಮತ್ತಷ್ಟು ಸಿದ್ದಿಸಿತು. ಖಾಸಗಿ ಕಂಪನಿಗಳು ತಮ್ಮ ಜಾಹೀರಾತನ್ನು ಗೋಡೆಗಳ ಮೇಲೆ ಬರೆಯಲು ಈತನನ್ನು ಆಯ್ಕೆಮಾಡಿಕೊಂಡರು. ರಾಜ್ಯದಾದ್ಯಂತ ಸುತ್ತಿ ಈ ಕೆಲಸ ಮಾಡುತ್ತಿರುವಂತೆಯೇ  ಹಾಡಿಗೆ ತಕ್ಕ ಚಿತ್ರವನ್ನೇಕೆ ಬರೆಯಬಾರದೆಂಬ ಆಲೋಚನೆ ಎದುರಾಯಿತು. ಇದನ್ನೂ ಶುರುವಿಟ್ಟುಕೊಂಡ. ಅದರಲ್ಲೂ ಯಶಸ್ವಿಯಾದ.
 ಹಿಂದುಸ್ಥಾನಿ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇದ್ದುದರಿಂದ ಭದ್ರಾವತಿಯಲ್ಲಿ ಅಭ್ಯಾಸ ಆರಂಭಿಸಿದ. ಕಳೆದ 8 ವರ್ಷಗಳಿಂದ ಶಿವಮೊಗ್ಗ ವೇಣುಗೋಪಾಲ್ ಅವರಲ್ಲಿ ಹಾಡುಗಾರಿಕೆ ಕಲಿಕೆ ಮುಂದುವರೆಸಿದ್ದಾನೆ ದಾಸರಪದ, ಭಜನೆ, ಭಕ್ತಿಗೀತೆ, ಭಾವಗೀತೆಗಳಿಗೆ ರಾಗ ಸಂಯೋಜನೆಯನ್ನೂ ಕೈಗೆತ್ತಿಕೊಂಡು ಅದರಲ್ಲೂ ಸೈ ಎನಿಸಿಕೊಂಡಿದ್ದಾನೆ. ವಿಶೇಷವೆಂದರೆ, ಈತ  ಕಲಿಯಲಾರಂಭಿಸಿದ ಎಲ್ಲ ಕಲೆಗಳಲ್ಲೂ ಯಶಸ್ವಿಯಾಗಿ, ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಹಂಸಲೇಖ ಅವರ ಗಾನಯಾನ ಸಂಗೀತ ತಂಡದಲ್ಲಿ ಸೇರಿಕೊಳ್ಳಲು ಆಹ್ವಾನ ಬಂದಿದ್ದರೂ ಅದನ್ನು ನಿರಾಕರಿಸಿ ಸ್ವತಃ ಕಲಾ ಪ್ರದರ್ಶನ ನಡೆಸುತ್ತಿದ್ದಾನೆ. ಸದ್ಯ ಅಯ್ಯಪ್ಪಸ್ವಾಮಿಯ ಕುರಿತಾದ ಹಾಡುಗಳ ಆಡಿಯೋ ವೀಡಿಯೊ ಕಾರ್ಯವನ್ನು ನಡೆಸುತ್ತಿದ್ದಾನೆ.  ಇದರೊಟ್ಟಿಗೆ ಮದುವೆಮಂಟಪಗಳ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುವುದು, ಆಸಕ್ತರಿಗೆ ಮನೆಯ ಗೋಡೆಯನ್ನು ಅಲಂಕರಿಸಿಕೊಡುವುದು ಇವರ ಕೆಲಸ.
 ಸಮನ್ವಯ ಸಂಸ್ಥೆಯ ಮುಖ್ಯಸ್ಥ ಕಾಶೀನಾಥ, ಈತನ ಪ್ರತಿಭೆಯನ್ನು ಕಂಡು ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಅಲ್ಲಿ ಹಾಡುಗಾರ, ಆಡಿಶನ್ ನಡೆಸಿಕೊಡುವವನಾಗಿ ಕೆಲಸ ಮಾಡುತ್ತಿದ್ದಾನೆ. ಇಂತಹ ಬಹುಮುಖ ಪ್ರತಿಭೆಯ ಯುವಕನನ್ನು ಜನತೆ ಇನ್ನಷ್ಟು ಪ್ರೋತ್ಸಾಹಿಸಬೇಕಿದೆ. ರಾಜ್ಯಮಟ್ಟದಲ್ಲಿ ಮಂಜೇಶ್ ಹೆಸರು ಪಸರಿಸುವಂತಾಗಬೇಕಿದೆ.
published on 26-12.2015

....................................................
ಅನಾಥ ಮಕ್ಕಳ ಪಾಲಿನ ’ಅಮ್ಮ
’ ಸಹನಾರಾವ್ 



ಅನಾಥರಿಗೆ, ನಿರ್ಗತಿಕರಿಗೆ ಬೇಕಾಗಿರುವುದು ಅನುಕಂಪವಲ್ಲ; ಪ್ರೀತಿಯ ಸಿಂಚನ - ಎಂದು ಬಲವಾಗಿ ನಂಬಿ, ಹಾಗೆಯೇ ಬದುಕಿ, ಸಾರ್ಥಕ ಜೀವನ ನಡೆಸುತ್ತಿರುವ ಅಪೂರ್ವ ಚೇತನ ಸಹನಾರಾವ್.  ನಿರ್ಗತಿಕ ಮಕ್ಕಳನ್ನು ಅನಾಥಾಶ್ರಮದಲ್ಲಿ ಸಾಕಿ ಸಲಹುತ್ತ, ಅದಕ್ಕೆ ಸಮಾಜಸೇವೆಯ ಲೇಪಹಚ್ಚಿ, ಪ್ರಚಾರಗಿಟ್ಟಿಸುವ ಲಾಭಕೋರರೇ ತುಂಬಿರುವ ಈ ಸಮಾಜದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಗೆ ಹಪಹಪಿಸದೆ, ಅನಾಥ ಮಕ್ಕಳಿಗೆ ’ಅಮ್ಮನ ಪ್ರೀತಿ’ಯ ಸುಧೆ ಉಣಿಸುತ್ತಿದ್ದಾರೆ. ಇಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗೆಲ್ಲ ಸಹನಾರಾವ್ ಅವರೇ ಪ್ರೀತಿಯ ಒಡಲು; ಮಮತೆಯ ಕಡಲು. ನಿಜಕ್ಕೂ ಈ ಅನಾಥಾಲಯಕ್ಕೆ ’ಮಾತೃಛಾಯಾ’ ಎನ್ನುವ ಹೆಸರು ಸಾರ್ಥಕ; ಅನ್ವರ್ಥಕ!
  ಗೋಪಾಳದಲ್ಲಿರುವ ಈ ’ಮಾತೃಛಾಯಾ’ ಅನಾಥಾಶ್ರಮ 18 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಆರಂಭದಲ್ಲೇ  40 ಅನಾಥ ಮಕ್ಕಳಿಗೆ ಇದು ’ಅಮ್ಮನ ಮನೆ’ ಆದದ್ದು ಉಲ್ಲೇಖನೀಯ.  ಸುಮಾರು 18 ಜನ ಮಕ್ಕಳಿರುವ ಈ ಅನಾಥಾಲಯ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗೀಕಾರಗೊಂಡಿದೆ. 5ರಿಂದ 18ರ ವಯೋಮಾನದವರಿಗೆ ಮಾತ್ರ ಇಲ್ಲಿ ಅವಕಾಶವಿದೆ. ಇಲಾಖೆಯವರೇ ಇಲ್ಲಿಗೆ ಮಕ್ಕಳನ್ನು ಕಳುಹಿಸುತ್ತಾರೆ.  ಈ ಅನಾಥಾಲಯದ ಮೇಲ್ವಿಚಾರಣೆಗೆಂದು ಸಮಿತಿಯೊಂದನ್ನು ರಚಿಸಲಾಗಿದ್ದು, 9 ನಿರ್ದೇಶಕರನ್ನು ಇದು ಒಳಗೊಂಡಿದೆ.
ಇಲ್ಲಿಯ ಮಕ್ಕಳು ನಗರದ ವಿವಿಧ ಶಾಲೆಗಳಲ್ಲಿ  ಶಿಕ್ಷಣ ಪಡೆಯುತ್ತಿದ್ದಾರೆೆ. ಕೆಲವೆಡೆ ಉಚಿತ ಶಿಕ್ಷಣ ಲಭ್ಯವಿದ್ದರೆ,  ಇನ್ನೂ ಕೆಲವೆಡೆ, ನಿರ್ದಿಷ್ಟ ಶುಲ್ಕವನ್ನು ಅನಾಥಾಲಯವೇ ಭರಿಸುತ್ತಿದೆ. ಎಷ್ಟೇ ಕಷ್ಟ ಎದುರಾದರೂ ಈ ಆಶ್ರಮದ ಮುಖ್ಯಸ್ಥೆಯಾಗಿರುವ ಸಹನಾರಾವ್ ಅವರೇ ಸ್ವತಃ ಮುಂದೆ ನಿಂತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಅನಾಥಾಲಯದಲ್ಲಿ ಜತನದಿಂದ ನೋಡಿಕೊಳ್ಳುವ ಅವರು, ಇಲ್ಲಿ ಸಿಸಿ ಕ್ಯಾಮರಾ ಕೂಡ ಹಾಕಿಸಿದ್ದಾರೆ. ಇಷ್ಟೂ ಸಾಲದೆಂಬಂತೆ ದಿನಕ್ಕೆ 6-8 ಬಾರಿ ಭೇಟಿ ನೀಡುತ್ತಾರೆ. ಆದಿಚುಂಚನಗಿರಿ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿ ತಮ್ಮ ವಿದ್ಯಾಸಂಸ್ಥೆಗೆ ಇಲ್ಲಿನ ಹಲವು ಮಕ್ಕಳನ್ನು ಸೇರಿಸಿಕೊಂಡು ಉಚಿತ ಶಿಕ್ಷಣ, ಸಮವಸ್ತ್ರ ನೀಡಿ ಶಿಕ್ಷಣ ನೀಡುತ್ತಿರುವುದನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಇಲ್ಲಿಯ ಕೆಲವು ಮಕ್ಕಳು ಸರಕಾರಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾರೆ. ವಿಶೇಷವೆಂದರೆ, ಇಲ್ಲಿ ಮಕ್ಕಳೇ ಅಡುಗೆ ಮಾಡಿಕೊಂಡು ತಮ್ಮೆಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ಸ್ವಂತ ಮಕ್ಕಳಂತೆ ಈ ಅನಾಥ ಮಕ್ಕಳನ್ನು ಕಾಣುವ ಸಹನಾ ಅವರು, ತಮ್ಮ ದಿನದ ಬಹುತೇಕ ಸಮಯವನ್ನು ಅಲ್ಲಿಯ ಮಕ್ಕಳೊಂದಿಗೇ ಕಳೆಯುತ್ತಾರೆ. ಇವರ ಪತಿ ಜಗದೀಶರಾವ್  ಮತ್ತು ಮಕ್ಕಳೂ ಸಹ ಇದಕ್ಕೆ ನೆರವಾಗುತ್ತಿದ್ದಾರೆ. ಹಲವು ದಾನಿಗಳು ಮಕ್ಕಳಿಗೆ ವಿಶೇಷ ದಿನದಂದು ಊಟ, ತಿಂಡಿಯ ನೆರವನ್ನು ನೀಡುತ್ತಾರೆ. ಇನ್ನೂ ಹಲವರು ಜನ್ಮದಿನದ ನೆನಪಿಗಾಗಿ ಒಂದು ದಿನದ ಖರ್ಚನ್ನು (ಒಂದು ಸಾವಿರ ರೂ.) ನೀಡಿ ಮಕ್ಕಳಿಗೆ ನೆರವಾಗುತ್ತಿದ್ದಾರೆ.  
 ಹಲವಾರು ಜಿಲ್ಲಾ ಮಟ್ಟದ ಅಧಿಕಾರಿಗಳು ಇಲ್ಲಿನ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಂತ ಅಪ್ಪ- ಅಮ್ಮ ಇಲ್ಲದಿದ್ದರೂ ಅವರನ್ನು ಮಕ್ಕಳು ಸಹನಾ ಅವರಲ್ಲಿ ಕಾಣುತ್ತಿದ್ದಾರೆ. ಮಕ್ಕಳು ತಮ್ಮ ತಾಯಿಯ ನೆರಳನ್ನು ಇಲ್ಲಿ ಕಾಣುತ್ತಿರುವುದರಿಂದ ಮಾತೃಛಾಯಾ ಎಂಬ ಹೆಸರನ್ನು ಇಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿನಿಗೆ ತಾವೇ ಮುಂದಾಗಿ ಉಚಿತ ನರ್ಸಿಂಗ್ ತರಬೇತಿ ಕೊಡಿಸಿ ಮದುವೆಯನ್ನೂ ಮಾಡಿಸಿದ್ದಾರೆ. ಜೊತೆಗೆ ಮಕ್ಕಳ ಆರೋಗ್ಯ ತಪಾಸಣೆಯನ್ನು ಡಾ. ಶ್ರೀನಿವಾಸರೆಡ್ಡಿ ಎನ್ನುವವರು ಉಚಿತವಾಗಿ ನಡೆಸಿಕೊಡುತ್ತ್ತಿದ್ದಾರೆ.
 ಸದ್ಯ ಬಾಡಿಗೆ ಕಟ್ಟಡದಲ್ಲಿ ಇದು ನಡೆಯುತ್ತಿದ್ದು, ಗೋಪಾಲಗೌಡ ಬಡಾವಣೆಯ ನ್ಯಾಯಾಧೀಶರ ವಸತಿಗೃಹದ ಪಕ್ಕದಲ್ಲೇ ನಿವೇಶನ ಪಡೆದು ಸ್ವಂತ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಸಾರ್ವಜನಿಕರಿಂದ ಧನಸಹಾಯ ಪಡೆಯುತ್ತಿದ್ದಾರೆ. ದಾನಿಗಳು (9448857102 -ಸಹನಾರಾವ್) ಇಲ್ಲಿಗೆ ಸಂಪರ್ಕಿಸಿ ನೆರವು ನೀಡಬಹುದಾಗಿದೆ. ಇದಕ್ಕೆ ತೆರಿಗೆ ವಿನಾಯಿತಿ ಸಹ ಇದೆ.
published on-5-12-2015

.......................................
ಕುಂಚದೊಂದಿಗೆ ಸರಸವಾಡುವ ಚಿಣ್ಣ
ಪ್ರಣೀಲ್

"ಬೆಳೆಯ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತೊಂದಿದೆ. ಮಕ್ಕಳು ಬಾಲ್ಯದಲ್ಲಿ ಯಾವ ಕ್ಷೇತ್ರದಲ್ಲಿ ಆಸಕ್ತಿ ಇಟ್ಟು ಕಲಿಯುತ್ತಾರೋ, ಯಾವ ವಿಷಯಕ್ಕೆ ಗಮನ ಕೊಡುತ್ತಾರೊ ಆ ಕ್ಷೇತ್ರ ಅಥವಾ ವಿಷಯದಲ್ಲಿ ನಿಷ್ಣಾತರಾಗುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ನಗರದ ವಿದ್ಯಾರ್ಥಿ ಪ್ರಣೀಲ್ ಬಿ. ಸತಾರೆ.
ಹೌದು, ನಗರದ ವಾಸವಿ ಶಾಲೆಯ ವಿದ್ಯಾರ್ಥಿ ಪ್ರಣೀಲ್ ಚಿತ್ರಕಲೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯಪ್ರಶಸ್ತಿಗೆ ಭಾಜನನಾಗಿದ್ದಾನೆ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈತ  ಕಲಾತ್ಮಕವಾಗಿ ಚಿತ್ರಗಳನ್ನು  ಬಿಡಿಸುವುದರಲ್ಲಿ ಸಿದ್ಧಹಸ್ತ. ಐದನೆಯ ತರಗತಿಯಲ್ಲಿ ಓದುತ್ತಿರುವ ಈತ, ನಗರದ ಖ್ಯಾತ ರವಿವರ್ಮ ಚಿತ್ರಕಲಾ ಶಾಲೆಯ ವಿದ್ಯಾರ್ಥಿ. ಈತನಿಗೆ ಚಿತ್ರಕಲೆಯಲ್ಲಿರುವ ಪ್ರತಿಭೆಯನ್ನು ಗುರಿತಿಸಿ, ಅದಕ್ಕೆ ಪ್ರೋತ್ಸಾಹದ ನೀರು-ಗೊಬ್ಬರ ಹಾಕಿ ಬೆಳೆಸಿದವರು ರವಿವರ್ಮ ಚಿತ್ರಕಲಾ ಶಾಲೆಯ ಗುರುಗಳಾದ ಶ್ರೀಧರ ಕಂಬಾರ್ .
 ಪ್ರಣೀಲ್ ಚಿತ್ರಕಲೆಯಲ್ಲಷ್ಟೇ ಅಲ್ಲ, ವಿದ್ಯಾಭ್ಯಾಸದಲ್ಲೂ ಮುಂದು. ಈತ ನಗರದ ದಂತವೈದ್ಯ ಡಾ. ಭರತ್ ಮತ್ತು ಡಾ. ಲಲಿತಾ ಅವರ ಪುತ್ರ. ಬಾಲ್ಯದಲ್ಲೇ ಈತನ ಚಿತ್ರಕಲಾ ಆಸಕ್ತಿ ಗಮನಿಸಿ ಪಾಲಕರು ಪಠ್ಯದ ಜೊತೆ  ಚಿತ್ರಕಲೆ ಕಲಿಯಲು ಪ್ರೇರೇಪಿಸಿ ಚಿತ್ರಕಲಾ ಶಾಲೆಗೆ ಸೇರಿಸಿದರು. ಪರಿಣಾಮವಾಗಿ ಅದರಲ್ಲಿ ಈಗ ಮಹತ್ತರ ಸಾಧನೆಯನ್ನು ಮಾಡುತ್ತಿದ್ದಾನೆ. ಈವರೆಗೆ ಸುಮಾರು 200ಕ್ಕೂ ಹೆಚ್ಚು ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ, ಪ್ರಶಸ್ತಿ ಗಳಿಸಿದ್ದಾನೆ. ರಾಜ್ಯದಲ್ಲಿ ಎಲ್ಲೇ ಚಿತ್ರಕಲಾ ಸ್ಪರ್ಧೆ ಇದ್ದರೂ  ಕಲಾಶಿಕ್ಷಕ ಕಂಬಾರ್ ಅವರ ಮಾರ್ಗದರ್ಶನ ಪಡೆದು ಆತನನ್ನು ಪಾಲಕರು ಕರೆದೊಯ್ಯುತ್ತಿದ್ದಾರೆ.
  ಇತ್ತೀಚೆಗೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಏರ್ಪಡಿಸಿದ್ದ ಹಸಿರು ಉಳಿಸಿಕೊಂಡು ಸ್ಮಾರ್ಟ್ ಸಿಟಿ ನಿರ್ಮಿಸುವುದು ಹೇಗೆ  ಎಂಬ ಪರಿಕಲ್ಪನೆಯ ಚಿತ್ರಕಲಾ ಸ್ಪರ್ಧೆಯಲ್ಲೂ ಪಾಲ್ಗೊಂಡು ತನ್ನ ಚಿತ್ರದ ಮೂಲಕ ಇದನ್ನು ನಿರೂಪಿಸಿ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಈತನಲ್ಲಿ ಎಳೆವೆಯಿಂದಲೇ ಚಿತ್ರಕಲೆ ಮೈಗೂಡಿ ಬಂದಿರುವುದರಿಂದ ಹಂತಹಂತವಾಗಿ ಅದು ಮೈದುಂಬಿಕೊಂಡಿದೆ. ಈತನ ಕುಂಚದಿಂದ ಬಣ್ಣ ತುಂಬಿಕೊಂಡ ಚಿತ್ರಗಳು ಜೀವಪಡೆದು ನಲಿಯುವಂತೆ ಭಾಸವಾಗುತ್ತವೆ. ಈ ಪೋರನ ಅನುಪಮ ಸಾಧನೆಯನ್ನು ಗಮನಿಸಿಯೇ 2015ರ ಸಾಲಿನ ’ಅಸಾಧಾರಣ ಪ್ರತಿಭೆ’ ಎಂದು  ಕರ್ನಾಟಕ ಸರ್ಕಾರ ಗುರುತಿಸಿದೆ.  ಮಾತ್ರವಲ್ಲ, ಇತ್ತೀಚೆಗೆ ನಡೆದ ಮಕ್ಕಳ ದಿನಾಚರಣೆಯಂದು ಬೆಂಗಳೂರಿನ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಂದ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.
ಅಂಚೆ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಈತ ಮೂರನೆಯ ಸ್ಥಾನ ಗಳಿಸಿದ್ದರೆ, ಮಂಡ್ಯದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. ಕಳೆದ ವರ್ಷ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈತನನ್ನು ಸನ್ಮಾನಿಸಿ ಗೌರವಿಸಿದೆ. ವಾಸವಿ ಶಾಲೆಯವರೂ ಸಹ ಈತನ ಪ್ರತಿಭೆ ಗಮನಿಸಿ ಗೌರವಿಸಿದ್ದಾರೆ. ತೋಟಗಾರಿಕಾ ಇಲಾಖೆಯ ಫಲಪುಷ್ಪ ಮೇಳದ ನಿಮಿತ್ತ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲೂ ಎರಡನೆಯ ಸ್ಥಾನ ಗಳಿಸಿದ್ದಾನೆ.
  ಮುಂದಿನ ದಿನಗಳಲ್ಲಿ ಈತನನ್ನು ಗ್ರೇಡ್ ಪರೀಕ್ಷೆಗಳಿಗೆ ತಯಾರು ಮಾಡುವ ಹಂಬಲವನ್ನು ಪಾಲಕರು ಹೊಂದಿದ್ದಾರೆ. ಚಿತ್ರಕಲೆಯಲ್ಲಿ ಹೇಳಿಕೊಟ್ಟ ವಿಷಯಗಳನ್ನು ಸರಿಯಾಗಿ ಗ್ರಹಿಸುವ ಶಕ್ತಿ ಈತನಲ್ಲಿದೆ. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡುವ ಮೂಲಕ ಸಾಧನೆ ಮಾಡುತ್ತಿದ್ದಾನೆ ಎನ್ನುತ್ತಾರೆ ಶಿಕ್ಷಕ ಕಂಬಾರ್.
 ಕಲೆ ಸರ್ವೋತ್ಕೃಷ್ಟವಾದುದು, ಸರ್ವಜನಾನಂದಕಾರಿಯಾದುದು. ಜನರ ಮೈ-ಮನ, ಹೃದಯದಲ್ಲಿ ಅದು ನೆಲೆಗೊಳ್ಳುವಂತಹುದು.  ರಸದೃಷ್ಟಿ, ರಸಸೃಷ್ಟಿ ಕಲೆಯ ಅಂತರಂಗದಲ್ಲಿ ಅಡಗಿದೆ ಎನ್ನುತ್ತಾರೆ ಕವಿಗಳು. ಅದರಂತೆ ಇದನ್ನು ಸಾಕ್ಷೀಕರಿಸುವ ಮೂಲಕ ದೇಶ ಮೆಚ್ಚುವಂತಹ, ವಿಶ್ವ ಬೆಳಗುವಂತಹ ಉತ್ತಮ ಕಲಾವಿದನಾಗಿ ಪ್ರಣೀಲ್ ಕೀರ್ತಿಯ ಉತ್ತುಂಗ ಶಿಖರವನ್ನು ತಲುಪಲಿ ಎನ್ನುವುದು ಎಲ್ಲರ ಆಶಯ.
published on28-11-2015

ಕನ್ನಡ ಕಂಪು ಪಸರಿಸುತ್ತಿರುವ 
ಕನ್ನಡ ಮೂರ್ತಿ

 ..
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕುವೆಂಪು ಕವಿತೆಯ ಈ ಸಾಲುಗಳು ಕೇವಲ ಪಠ್ಯದ ಸಾಲುಗಳಾಗಿಯೋ, ಅಥವಾ ನವೆಂಬರ್ ತಿಂಗಳಲ್ಲೋ ನಮಗೆ ನೆನಪಾಗಬಹುದು. ಆದರೆ ಕನ್ನಡವನ್ನೇ ಉಸಿರಾಗಿಸಿಕೊಂಡು, ತನ್ನ ಕಾಯಕದೊಂದಿಗೆ ಕನ್ನಡ ನಾಡು-ನುಡಿಯ ಸೇವೆ ಮಾಡುತ್ತಿರುವ ಅಪರೂಪದ ವ್ಯಕ್ತಿಯೊಬ್ಬರು  ಶಿವಮೊಗ್ಗದಲ್ಲಿದ್ದಾರೆ. ಕನ್ನಡಕ್ಕಾಗಿ ಇವರ ಹೃದಯ ಸದಾ ತುಡಿಯುತ್ತಿರುತ್ತದೆ; ಮನಸ್ಸು ಮಿಡಿಯುತ್ತಿರುತ್ತದೆ. ಹೌದು, ಇಂಥ ಅಪರೂಪದ ವ್ಯಕ್ತಿಯೇ  ನರಸಿಂಹಮೂರ್ತಿ. ಉಹ್ಞುಂ, ಹೀಗೆಂದರೆ ಯಾರೊಬ್ಬರಿಗೂ ಅರ್ಥವಾಗಲಾರದು. ಆದರೆ ’ಕನ್ನಡ ಮೂರ್ತಿ’ಯೆಂದರೆ ಎಲ್ಲರಿಗೂ ಅರ್ಥವಾದೀತು.
 ಎಲ್ಲರಿಗಿಂತ ಭಿನ್ನವಾಗಿ, ವಿಶಿಷ್ಟವಾಗಿ ಗುರುತಿಸಿಕೊಂಡು, ಕನ್ನಡದ ಕೀರ್ತಿಪತಾಕೆಯನ್ನು ಹಾರಿಸಿದವರು ಕನ್ನಡಮೂರ್ತಿ! ಶಿವಮೊಗ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅಶೋಕ ಹೊಟೇಲ್ ಎದುರಿಗಿರುವ ಇಸ್ತ್ರಿ ಅಂಗಡಿಯೇ ಇವರ ಕಾಯಕ ಸ್ಥಾನ. ಈ ಪುಟ್ಟ ಅಂಗಡಿಯ ತುಂಬೆಲ್ಲ ಕನ್ನಡದ ಅತಿರಥ-ಮಹಾರಥರ ಭಾವಚಿತ್ರಗಳೇ ತುಂಬಿವೆ. ತನ್ನ ಕಾಯಕದ ಮಧ್ಯೆಯೇ ಕನ್ನಡವೇ ಸರ್ವಸ್ವ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ. ಸುಮಾರು 25 ವರ್ಷದಿಂದ ಅಂಗಡಿ ನಡೆಸುತ್ತಿರುವ ಅವರು, ಕನ್ನಡ  ಜಾಗೃತಿ ಮೂಡಿಸುತ್ತಿದ್ದಾರೆ. ಅಶೋಕ ಹೊಟೇಲ್‌ಗೆ ಬಂದ ಬಹುತೇಕರು ಈ ಅಂಗಡಿಯನ್ನು ಗಮನಿಸಿ ಭೇಟಿ ನೀಡುತ್ತಾರೆ. ಅಷ್ಟೊಂದು ಸೂಜಿಗಲ್ಲಿನ ಸೆಳೆತ ಮೂರ್ತಿಯವರ ಅಂಗಡಿಗಿದೆ. ನೋಡಲು ಚಿಕ್ಕದಾದ ಅಂಗಡಿಯಾದರೂ, ಅದು ಚೊಕ್ಕವಾದ ಸಾಹಿತ್ಯದ ಮನೆಯೇ ಆಗಿದೆ. ಕನ್ನಡ ಭುವನೇಶ್ವರಿ, ಕುವೆಂಪು ಮತ್ತು ವರನಟ ರಾಜಕುಮಾರ್ ಅವರ ಬೃಹತ್ ಚಿತ್ರಗಳು, ಎಲ್ಲ ಸಾಹಿತ್ಯ ದಿಗ್ಗಜಗಳ ಫೋಟೊ, ಅವರ ಸಾಹಿತ್ಯ ಸೇವೆಯ ವಿವರ, ಸಾಧನೆಗಳನ್ನು ಸಂಗ್ರಹಿಸಿ ಅಲ್ಬಂ ಮಾಡಿಸಿಟ್ಟಿದ್ದಾರೆ.
ಅಂಗಡಿಯಲ್ಲಿ ಕನ್ನಡದ ಕೆಲವು ಪ್ರಮುಖ ಸಾಹಿತಿಗಳ ಕುರಿತಾದ ಕಿರು ಪುಸ್ತಕ ಪ್ರಕಟಿಸಿ ಇಟ್ಟುಕೊಂಡಿದ್ದು, ಬಂದವರ ಕೈಗೆ ಕೊಟ್ಟು ಓದುವಂತೆ ಪ್ರೇರೇಪಿಸುತ್ತಾರೆ. ಪ್ರತಿವರ್ಷ ತಮ್ಮ ಅಂಗಡಿ ಎದುರು ಪೆಂಡಾಲ್ ಹಾಕಿ ರಾಜ್ಯೋತ್ಸವ ಆಚರಿಸುತ್ತಾರೆ.  ಕನ್ನಡ ಸೇವೆಗೆ ಯಾರಿಂದಲೂ ಬಿಡಿಗಾಸನ್ನೂ ಪಡೆಯದೆ, ತಮ್ಮ ದುಡಿಮೆಯ ಹಣದಿಂದಲೇ ಕನ್ನಡಸೇವೆ ಮಾಡುತ್ತಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರಾದ ಮೂರ್ತಿ, ಎಸ್ಸೆಸ್ಸೆಲ್ಸಿ ನಂತರ ತಾಯಿಯ ತವರು ಶಿವಮೊಗ್ಗಕ್ಕೆ ಬಂದು ನೆಲೆಸಿದರು.  ಹೈಸ್ಕೂಲ್ ಓದುವಾಗಲೇ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿತು. ಅಲ್ಲಿಂದ ಶುರುವಾಗಿ ಇಂದಿನವರೆಗೂ ಬೆಳೆದು ಈ  ಮಟ್ಟಕ್ಕೆ ಬೆಳೆದು ನಿಂತಿದೆ. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರನ್ನು ಗುರು ಎಂದೇ ಕಾಣುವ ಮೂರ್ತಿ, ತನ್ನ ಅಂಗಡಿಗೆ ಅವರು ಭೇಟಿ ನೀಡಿದಾಗ ‘ಕನ್ನಡ ಕಸ್ತ್ತೂರಿ ಇಸ್ತ್ರಿ ಅಂಗಡಿ’ ಎಂದು ಬರೆಯಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅದೇ ಹೆಸರನ್ನು ಇಟ್ಟುಕೊಂಡಿದ್ದಾರೆ. ಸಾಹಿತಿ ನಾ. ಡಿಸೋಜಾ ಈ ಅಂಗಡಿಗೆ ಭೇಟಿ ನೀಡಿದ್ದನ್ನು ಅವರು ಸ್ಮರಿಸುತ್ತಾರೆ.
ಎಲ್ಲರೂ ಬೆಳಿಗ್ಗೆ ದೇವರಿಗೆ ಪೂಜೆ ಮಾಡಿದರೆ ಮೂರ್ತಿ ದೇವರ ಜೊತೆ  ಕನ್ನಡಾಂಬೆಯ ಪೂಜೆ ಮಾಡುತ್ತಾರೆ. ರಾಜ್ಯೋತ್ಸವ ಸಂದರ್ಭದಲ್ಲಿ ಶಾಲೆಗಳಿಗೆ ಸ್ವಂತ ಖರ್ಚಿನಲ್ಲಿ ಕನ್ನಡ ಬಾವುಟ ವಿತರಿಸುತ್ತಾರೆ. ಶಿವಮೊಗ್ಗಕ್ಕೆ ಯಾವುದೇ ಸಾಹಿತಿ, ಕಲಾವಿದರು ಬಂದರೆ ತಮ್ಮ ಅಂಗಡಿಗೆ ಆಹ್ವಾನಿಸಿ ಗೌರವಿಸುತ್ತಾರೆ.  ಪ್ರತಿಯೊಬ್ಬರೂ ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಕನ್ನಡದ ಬಗ್ಗೆ ಮಮಕಾರವಿರಬೇಕು; ಕನ್ನಡಾಂಬೆಗೆ ತಮ್ಮ ಕೈಲಾದ ಸೇವೆಯನ್ನು ಮಾಡಬೇಕು; ನಾಡಿಗೆ ಏನಾದರೂ ಕಾಣಿಕೆ ನೀಡಬೇಕು ಅನ್ನುತ್ತಾರೆ. ಪ್ರಾಯಶಃ ಕವಿ ಕುವೆಂಪು ಅವರ ಕನ್ನಡಕ್ಕಾಗಿ ಕೊರಳೆತ್ತು-ನಿನ್ನ ಧ್ವನಿ ಪಾಂಚಜನ್ಯವಾಗುತ್ತದೆ; ಕನ್ನಡಕ್ಕಾಗಿ ನಿನ್ನ ಕಿರುಬೆರಳೆತ್ತ್ತಿದರೂ ಸಾಕು- ಅದು ಗೋವರ್ಧನಗಿರಿಯಾಗುತ್ತದೆ ಎನ್ನುವ ಮಾತು ಮೂರ್ತಿಯವರಿಗೆ ಸ್ಫೂರ್ತಿಯಾಗಿರಲೂಬಹುದು.
ಕನ್ನಡ ಪುಸ್ತಕಗಳ ಉಚಿತ ಗ್ರಂಥಾಲಯವನ್ನು ಸ್ಥಾಪಿಸುವ ಮಹದಾಸೆ ಹೊಂದಿರುವ ಕನ್ನಡ ಮೂರ್ತಿಯವರ ಕನಸು ನನಸಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
published on nov 21, 2015

....................................
ಸಮರಕಲಾ ಸಾಧಕಿ
ಸಬಾ ತಸ್ಕಿನ್


ಇತಿಹಾಸ ಕಾಲದಲ್ಲಿ ಸಮರಕಲೆ (ವುಶು) ಅಭ್ಯಾಸ ಮತ್ತು ಪ್ರದರ್ಶನ ಮಾಡುತ್ತಿದ್ದ ಬಗ್ಗೆ ಕೇಳಿದ್ದೇವೆ. ಆದರೆ ನಂತರದ ದಿನಗಳಲ್ಲಿ ಅದು ಕಣ್ಮರೆಯಾಗಿತ್ತು. ಮೂಲತಃ ಚೀನಾದ ಈ ಕಲೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಮತ್ತೆ ಮನೆಮಾತಾಗುತ್ತಿದೆ. ಶಿವಮೊಗ್ಗದಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಲವು ಯುವಕ-ಯುವತಿಯರು ಮುಂದಾಗಿದ್ದಾರೆ. ಅಷ್ಟೇ ಏಕೆ, ರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ತರುವ ಮೂಲಕ ಸಬಾ ತಸ್ಕಿನ್ ಎಂಬ ವಿದ್ಯಾರ್ಥಿನಿ ರಾಷ್ಟ್ರದಲ್ಲೇ ಶಿವಮೊಗ್ಗದ ಕೀರ್ತಿಯನ್ನು ಮೆರೆಸಿದ್ದಾರೆ.
ಸಬಾ ಗೋಪಿಶೆಟ್ಟಿಕೊಪ್ಪ ಬಡಾವಣೆ ವಾಸಿ ಶಬ್ಬೀರ್ ಅಹಮದ್ ಅವರ ಪುತ್ರಿ. ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೆಯ ತರಗತಿಯಲ್ಲಿ ಓದುತ್ತಿರುವ ಈಕೆ, ವುಶುವಿನಷ್ಟೇ ಓದಿನಲ್ಲೂ ಮುಂದೆ.  ತಂದೆ ಶಬ್ಬೀರ್ ಅಹಮದ್ ಜಿಲ್ಲಾ ವುಶು ಅಸೋಸಿಯೇಶನ್ ಅಧ್ಯಕ್ಷರಾಗಿ ಸಾವಿರಾರು ಮಕ್ಕಳಿಗೆ ಇದನ್ನು ಕಲಿಸಿದ್ದಾರೆ; ಕಲಿಸುತ್ತಿದ್ದಾರೆ. ತಂದೆಯಿಂದ ಬಳುವಳಿಯೆಂಬಂತೆ ಈಕೆಗೂ ಈ ಕಲೆ ಕರಗತವಾಗಿದೆ. ತಂದೆಯ ಪ್ರದರ್ಶನವನ್ನು ನೋಡಿಯೇ ಹೆಚ್ಚುಕಡಿಮೆ ಈಕೆಯೂ ಇದನ್ನು ಕಲಿತಿದ್ದಾಳೆ. ಇತ್ತೀಚಿನ ದಿನಗಳವರೆಗೆ ವುಶು ಕೆಲವೇ ಜನರಿಗೆ ಮಾತ್ರ ತಿಳಿದಿತ್ತು. ಯಾರೂ ಅದಕ್ಕೆ ಅಷ್ಟೊಂದು ಮಹತ್ವ ಕೊಟ್ಟಿರಲಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಪ್ರಸಿದ್ಧವಾಗಿರುವ ಈ ಕಲೆ ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಲಿಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ.
ಕಳೆದ ಆರು ವರ್ಷಗಳಿಂದ ತಂದೆಯ  ಮಾರ್ಗದರ್ಶನದಲ್ಲಿ ವುಶು ಕಲಿತ ಸಬಾ, ಶಿವಮೊಗ್ಗಕ್ಕೆ ಮೊತ್ತಮೊದಲ ಪದಕ ತಂದಿದ್ದಾಳೆ. ಜೊತೆಗೆ ಅಂತಾರಾಷ್ಟ್ರಿಯ ಚಾಂಪಿಯನ್‌ಶಿಪ್‌ಗೂ ಆಯ್ಕೆಯಾಗಿದ್ದಾಳೆ. ಸೌಮ್ಯ ಸ್ವಭಾವದ, ಅಷ್ಟೇ ಪ್ರತಿಭಾನ್ವಿತೆಯಾದ ಈಕೆ, ಈಗಾಗಲೇ 2010, 2012ರ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಳು. 2015ರಲ್ಲಿ ಕೇರಳದಲ್ಲಿ ನಡೆದ ನ್ಯಾಶನಲ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಈಕೆ, 2015ರ ಅಕ್ಟೋಬರ್‌ನಲ್ಲಿ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದ 14ನೆಯ  ಜೂನಿಯರ್ ರಾಷ್ಟ್ರಿಯ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾಳೆ.
ಇದಕ್ಕೂ ಮುನ್ನ ಬಾಗಲಕೋಟೆಯಲ್ಲಿ ಜರುಗಿದ ರಾಜ್ಯ ವುಶು ಚಾಂಪಿಯನ್‌ಶಿಪ್‌ನಲಿ ್ಲಎರಡು ಚಿನ್ನದ ಪದಕಗಳನ್ನು ಗೆದ್ದ ಹಿರಿಮೆ ಈಕೆಯದ್ದು.
ಪ್ರತಿನಿತ್ಯ ಒಂದು ಗಂಟೆ ತಾಳ್ಮೆಯಿಂದ ವುಶು ಅಭ್ಯಾಸ ಮಾಡುತ್ತಿದ್ದೇನೆ. ತಂದೆ ಶಬ್ಬೀರ್ ಮತ್ತು ಅಣ್ಣ ಮೊಹಮದ್ ಇಬ್ರಾಹಿಂ (ಈತ ಪಿಯು ವಿದ್ಯಾರ್ಥಿ)ಕಲಿಕೆಗೆ ನೆರವಾಗುತ್ತಿದ್ದಾರೆ. ವುಶು ಕಲಿಯಲು ಕಷ್ಟವೇನಲ್ಲ, ಆದರೆ ಸತತ ತರಬೇತಿ ಅಗತ್ಯ. ತೀರ ವಿರಳವಾದ ಈ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರತಿ ಶಾಲಾ, ಕಾಲೇಜುಗಳಲ್ಲಿ ಕರಾಟೆಯಂತೆ ಇದನ್ನು ಕಲಿಸುವ ವ್ಯವಸ್ಥೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಲ್ಲದೆ, ಏಕಾಗ್ರತೆಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು ಎಂದು ಹೇಳುವ ಈಕೆ,   ಮಹಿಳಾ ಹಾಸ್ಟೆಲ್ ಮತ್ತು  ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಲ್ಲಿ ಈ ವಿದ್ಯೆಯನ್ನು ಕಲಿಸಲು ನಿರ್ಧರಿಸಿದ್ದೇನೆ ಎನ್ನುತ್ತಾಳೆ.  
ವುಶು ರಾಷ್ಟ್ರೀಯ ಪ್ರಮುಖ ಕ್ರೀಡೆಯಾಗಿ ಪರಿಗಣಿತವಾಗಿದೆ. ಇದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಸಿಇಟಿಯಲ್ಲೂ ಚೆನ್ನಾಗಿ ಸ್ಕೋರ್ ಮಾಡಿದರೆ ಅಂತಹವರಿಗೆ ಕ್ರೀಡಾ ವಿಭಾಗದಿಂದ ಇಂಜಿ      ನಿಯರಿಂಗ್, ಮೆಡಿಕಲ್‌ಗೆ ಉಚಿತ ಸೀಟು ಸಿಗಲಿದೆ. ಸಬಾ ಎಂಬಿಬಿಎಸ್ ಮಾಡುವ ಮಹದಾಸೆ ಇಟ್ಟುಕೊಂಡಿದ್ದಾಳೆ. ಈಕೆಯ  ಸಾಧನೆ ಮತ್ತು ಮುಂದಿನ ವರ್ಷಗಳ ಸಾಧನೆ ಉಚಿತ ಸೀಟು ಗಿಟ್ಟಿಸಲು ನೆರವಾಗಲಿದೆ ಎನ್ನುವ ತಂದೆ ಶಬ್ಬೀರ್ ಮಗಳ ಉತ್ತಮ ಸಾಧನೆ ಬಗ್ಗೆ ಅಪಾರ ಹೆಮ್ಮೆಪಡುತ್ತಾರೆ. ಸಬಾ ಇನ್ನಷ್ಟು ಉಜ್ವಲ ಭವಿಷ್ಯವನ್ನು ಈ ಅಪರೂಪದ ವಿದ್ಯೆಯಲ್ಲಿ ಗಳಿಸಲಿ ಎಂಬ ಹಾರೈಕೆ ನಮ್ಮೆಲ್ಲರದು.
published on 14-11-2015
...................................
ಗ್ರಾಮಾಭಿವೃದ್ಧಿ ತುಡಿತದ ಬ್ಯಾಂಕ್ ಅಧಿಕಾರಿ 
ಎನ್. ಟಿ. ಯರ‌್ರಿಸ್ವಾಮಿ


ಬ್ಯಾಂಕ್ ಅಧಿಕಾರಿಗಳೆಂದರೆ ಸಾಮಾನ್ಯವಾಗಿ ಜನರ ಬಳಿ ಹೋಗದಿರುವವರು, ಜನರ ಸಂಕಷ್ಟಕ್ಕೆ ಸ್ಪಂದಿಸದಿರುವವರು, ಸಾಮಾಜಿಕ ಚಿಂತನೆ ಇಲ್ಲದಿರುವವರು ಎಂದೇ ತಿಳಿಯಲಾಗುತ್ತಿದೆ. ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡು ತಾನೂ ಸಹ ಸಮಾಜಜೀವಿ, ಸಮಾಜದಿಂದ ಬೇರೆಯಲ್ಲ, ಸಮಾಜದೊಂದಿಗೆ ಸಮರಸವಾಗಿ ಬೆರೆಯಬೇಕೆನ್ನುವ ಮನೋಭಾವದ ಅಧಿಕಾರಿಗಳು ತೀರ ವಿರಳವೆಂದೇ ಹೇಳಬೇಕು. ಆದರೆ ಇದಕ್ಕೆ ಅಪವಾದವೆನ್ನುವಂತೆ ಸುಂದರವಾದ, ಸುಭದ್ರವಾದ, ಸಶಕ್ತವಾದ ಸಮಾಜವನ್ನು ತಾನು ತನ್ನ ಅಧಿಕಾರದ ಪರಿಧಿಯಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಪರಿಕಲ್ಪನೆ ಹೊತ್ತ, ಜನಸಾಮಾನ್ಯರಲ್ಲಿ ತಾನೂ ಒಬ್ಬ ಎಂದು ತಿಳಿದಿರುವ ಸರಳಾತಿಸರಳ ಬ್ಯಾಂಕ್ ಅಧಿಕಾರಿಯೊಬ್ಬರು ನಮ್ಮ ನಡುವೆ ಇದ್ದಾರೆ. ಅವರೇ ಎನ್. ಟಿ. ಯರ‌್ರಿಸ್ವಾಮಿ.
ಶಿವಮೊಗ್ಗದ ನೆಹರೂ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಿರಿಯ ಪ್ರಬಂಧಕರಾಗಿ ಸುಮಾರು ಒಂದು ವರ್ಷದಿಂದ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಜನರ ಸೇವೆ ಮತ್ತು ಗ್ರಾಮೀಣಾಭಿವೃದ್ಧಿಯೇ ಇವರ ತಾರಕಮಂತ್ರ. ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಹಲವಾರು ಕೃತಿಗಳನ್ನು ಬರೆದು, ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯವಲಯದಲ್ಲೂ ಚಿರಪರಿಚಿತರಾಗಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆ ಜಗಳೂರಿನ ಹಾಲೇಹಳ್ಳಿಯವರಾದ ಯರ‌್ರಿಸ್ವಾಮಿ, 36 ವರ್ಷಗಳಿಂದ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡಿದಲ್ಲೆಲ್ಲ ತನ್ನ ಸರಳ-ಸಜ್ಜನಿಕೆಯಿಂದ ಜನಮಾನಸದಲ್ಲಿ ಉಳಿದುಬಂದಿರುವುದು ನಿಜಕ್ಕೂ ವಿಶೇಷ. ಬ್ಯಾಂಕಿನ ಹಲವಾರು ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ (ರುಡ್‌ಸೆಟ್, ಆದರ್ಶ ಗ್ರಾಮ ಯೋಜನೆ, ಸ್ವಸಹಾಯ ಸಂಘ ರಚನೆ,  ಗ್ರಾಮೀಣ ಜನರಲ್ಲಿ ಬ್ಯಾಂಕಿಂಗ್ ಅರಿವು ಮೂಡಿಸುವುದು, ಉದ್ಯೊಗ ತರಬೇತಿ ನೀಡುವುದು, ಮಹಿಳಾ ಸಬಲೀಕರಣ ಇತ್ಯಾದಿ) ಹೆಚ್ಚಿನ ಸೇವೆಯನ್ನು ಕಳೆದಿದ್ದಾರೆ. ಬ್ಯಾಂಕಿನ  ಈ ಯೋಜನೆಗಳ ಮೂಲಕ ಸಾಕಷ್ಟು ಜನರಿಗೆ ಸ್ವಯಂ ಉದ್ಯೋಗಕ್ಕೆ ನೆರವಾಗಿದ್ದಾರೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಆ ಮೂಲಕ ಅವರು ಸ್ವಾವಲಂಬಿ ಜೀವನ ನಡೆಸುವಲ್ಲಿ ನೆರವಾಗಿದ್ದಾರೆ.
ಬ್ಯಾಂಕಿನ ತಮ್ಮ ಕಚೇರಿಯಲ್ಲೂ ಸಹ ಗ್ರಾಹಕರೊಂದಿಗೆ ಅಂತಸ್ತು ನೋಡದೆ ಮುಕ್ತವಾಗಿ ವ್ಯವಹರಿಸುತ್ತಾರೆ. ಬಿಡುವಿಲ್ಲದ ಕೆಲಸದ ನಡುವೆಯೂ ನಗುಮೊಗದಿಂದಲೇ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾರೆ. ಸಿಟ್ಟು. ಅಸಹನೆಯಿಂದ ಗಾವುದ ದೂರವಿರುವ ಇವರು ಗ್ರಾಹಕರೊಂದಿಗೆ ವಿಶ್ವಾಸ ಕಾಪಾಡಿಕೊಂಡಿದ್ದಾರೆ. ತಾವು ಮಾಡಿದ ಕೆಲಸದ ಕುರಿತು, ತಮ್ಮ ಸಾಧನೆಯ ಕುರಿತು ಎಂದೂ ಹೇಳಿಕೊಂಡವರಲ್ಲ. ಹೀಗಾಗಿಯೇ  ಎಲೆಮರೆಯ  ಕಾಯಿಯಂತೆ ಕಾರ್ಯತತ್ಪರರಾಗಿದ್ದಾರೆ.  "ಸೇವೆಗಾಗಿ ಬದುಕನ್ನು ಮುಡಿಪಾಗಿಡಬೇಕು. ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ಕರ್ಮಶುದ್ಧಿ. ಕರ್ತವ್ಯವೇ ಪೂಜೆ, ಸಂತೃಪ್ತಿಯೇ ಪ್ರಸಾದ ಎಂದು ಅರಿತು ಕೆಲಸ ಮಾಡಬೇಕು. ಮನವಚನ ಕಾಯದಲಿ ಶುದ್ಧಿಯೊಂದಿರೆ ಸಾಕು, ತನಗೆ ತಾನೇ ಬರಲಿಹುದು ಸಿದ್ಧಿ" ಎನ್ನುತ್ತಾರೆ ಅವರು.
ಕಾಯಕಯೋಗಿಯಾದ ಯರ‌್ರಿಸ್ವಾಮಿಯವರ ಬ್ಯಾಂಕಿಂಗ್ ಸೇವೆ ಎಷ್ಟು ಅನುಪಮವೋ,  ಸಾಹಿತ್ಯ ಸೇವೆ ಕೂಡ ಅಷ್ಟೇ ಅಮೋಘವಾದುದು. ಕನ್ನಡದಲ್ಲಿ 14 ಕೃತಿಗಳಲ್ಲಿನ್ನು ಈಗಾಗಲೇ ರಚಿಸಿದ್ದಾರೆ. ಇದರಲ್ಲಿ ಕಥೆ, ಕವನ, ಕಾದಂಬರಿಗಳು  ಸೇರಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಕುರಿತಾಗಿಯೇ 6 ಕೃತಿಗಳನ್ನು ರಚಿಸಿದ ಹಿರಿಮೆ ಇವರದ್ದು.
ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ದಾವಣಗೆರೆ ಜಿಲ್ಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೆನರಾ ಬ್ಯಾಂಕ್ ಮಾಸಿಕ ಶ್ರೇಯಸ್ ನೀಡುವ ಬ್ಯಾಂಕರ್ ಪ್ರಶಸ್ತಿ-1998, ಬೆಂಗಳೂರಿನ ಗೊರೂರು ಸಾಹಿತ್ಯ ಪ್ರಶಸ್ತಿ  ಮೊದಲಾದವು ಇವರ ಸಾಧನಿಗೆ ಸಂದ ಗೌರವದ ಗರಿಗಳು.
ಪ್ರಸ್ತುತ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಹಿತ್ಯದ ಕಂಪನ್ನು ಇಲ್ಲಿಯೂ ಪಸರಿಸುತ್ತಿದ್ದಾರೆ.   published on nov 7, 2015

...............................................
  
ನಗರದ ಏಕೈಕ ಮಹಿಳಾ ಕಂಡಕ್ಟರ್ 
ಪವಿತ್ರಾ 



ಸಿಕ್ಕ ಕೆಲಸದಲ್ಲಿ ಆತ್ಮತೃಪ್ತಿ ಪಟ್ಟುಕೊಳ್ಳುವವರ ಸಂಖ್ಯೆ ತೀರಾ ಕಡಿಮೆ. ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ದುಡಿದರೆ ಯಾವ ವೃತ್ತಿಯಾದರೂ ಕೈಹಿಡಿಯುತ್ತದೆ. ವ್ಯಕ್ತಿಗೆ ಗೌರವವೂ ಸಿಗುತ್ತದೆ. ಆತನ ಅನುಭವದ ಆಳವೂ ಹೆಚ್ಚಾಗುತ್ತದೆ, ಜನಪ್ರಿಯತೆಯೂ ಬೆಳೆಯುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಶಿವಮೊಗ್ಗದ ಸಿಟಿಬಸ್‌ನಲ್ಲಿ ಏಕೈಕ ಮಹಿಳಾ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಪವಿತ್ರಾ (ಪೂರ್ಣಿಮಾ).
 ಇತ್ತೀಚಿನ ಅನೇಕ ವರ್ಷಗಳಿಂದ ಸರ್ಕಾರಿ ಬಸ್‌ಗಳಲ್ಲಿ  ಮಹಿಳಾ ಕಂಡಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾರಿಗೆ ಇಲಾಖೆಯಲ್ಲೂ ಮಹಿಳಾ ಮೀಸಲಾತಿ ನೀಡಲಾಗಿದೆ. ಆದರೆ ಖಾಸಗಿ  ಬಸ್‌ಗಳಲ್ಲಿ ಇದಕ್ಕೆ ಅವಕಾಶ ಕಡಿಮೆ ಎಂದೇ ಹೇಳಬಹುದು. ಶಿವಮೊಗ್ಗ ನಗರದಲ್ಲಿ ನೂರಾರು ಸಿಟಿಬಸ್‌ಗಳಿವೆ. ಆದರೆ ಮಹಿಳಾ ಕಂಡಕ್ಟರ್ ಇರುವುದು ಇವರೊಬ್ಬರೇ.  ಪ್ರಾಯಶಃ ಹೆಣ್ಣುಮಕ್ಕಳ ಅಧೈರ್ಯದ ಜೊತೆಗೆ ’ರಿಸ್ಕ್ ಯಾಕೆ’ ಎನ್ನುವ ಖಾಸಗಿ ಬಸ್ ಮಾಲಕರ ಧೋರಣೆ ಕೂಡ ಇದಕ್ಕೆ ಕಾರಣವಾಗಿರಬಹುದು. ನಗರದ ಬಹುತೇಕ ಬಸ್ ಪ್ರಯಾಣಿಕರಿಗೆ ಈ ಮಹಿಳಾ ಕಂಡಕ್ಟರ್ ಚಿರಪರಿಚಿತರು. ತಮ್ಮ ಸೌಜನ್ಯದಿಂದ, ಗಟ್ಟಿತನದಿಂದ, ಸ್ಥಿರ-ಶಾಂತ ವರ್ತನೆಗಳಿಂದ ಪವಿತ್ರಾ ಹೆಸರುವಾಸಿ.
ಮೂಲತಃ ತೀರ್ಥಹಳ್ಳಿ ತಾಲೂಕು ಕೆಂದಾಳಬೈಲ್ ಗ್ರಾಮದವರಾದ ಪವಿತ್ರಾ, ಪದವಿಯವರೆಗೆ ಓದಿದ ನಂತರ ಸ್ವಂತ ಕಾಲ ಮೇಲೆ ನಿಲ್ಲಲು ನಿರ್ಧರಿಸಿ ಕೆಲಸ ಹುಡುಕಲು ಆರಂಭಿಸಿದರು. ಈ ಸಂದರ್ಭದಲ್ಲಿ ಅವರ ತಂದೆ  ಕೃಷ್ಣಪ್ಪ ಗೌಡರು ಸಂಬಂಧಿಯೂ, ಬಸ್ ಮಾಲಕರೂ ಆದ ಟೀಕಪ್ಪ ಗೌಡರಲ್ಲಿ ಕಂಡಕ್ಟರ್ ಕೆಲಸಕ್ಕೆ ಮನವಿ ಮಾಡಿದರು. ಅವರು ಪರಿಚಿತರಲ್ಲಿ ಈ ಬಗ್ಗೆ ಕೇಳಿ ಕೆಲಸ ಕೊಡಿಸಿದರು. ಇದಕ್ಕೆ ಇನ್ನಷ್ಟು ಸಹಕಾರ ನೀಡಿದವರು ಎಸ್‌ವಿಟಿ ಸಿಟಿ ಬಸ್‌ನಲ್ಲಿ ಕಂಡಕ್ಟರ್ ಆಗಿರುವ ಕುಂಸಿ ನಾಗರಾಜ್ ಅವರು. ಇವರೆಲ್ಲರ ಸಹಕಾರದಿಂದ ಎಸ್‌ವಿಟಿ ಬಸ್ ಮಾಲಕ ಸುರೇಶ್ ಅವರನ್ನು ಭೇಟಿ ಮಾಡಿ ಕಂಡಕ್ಟರ್ ಕೆಲಸ ಪಡೆದುಕೊಂಡರು.
 ಕೆಲಸ ಹೊಸತು. ಬಸ್‌ನಲ್ಲಿ ಹುಡುಗರು ಕಿಚಾಯಿಸುತ್ತಾರೆ, ಬೆಳಿಗ್ಗಿನಿಂದ ಸಂಜೆಯವರೆಗೆ ಬಿಡುವಿಲ್ಲದ ಕೆಲಸ, ಸರಿಯಾದ ವೇಳೆಗೆ ಊಟ, ತಿಂಡಿ ಇಲ್ಲ, ಮುಂತಾದ ಸಮಸ್ಯೆಗಳು ಎದುರಾದವಾದರೂ ಅವುಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ಹುಡುಗಿಯರೂ ಸಹ ಧೈರ್ಯವಾಗಿ ಕಂಡಕ್ಟರ್ ಆಗಿ ಕೆಲಸ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಕಳೆದ 9 ವರ್ಷದಿಂದ ಎಸ್‌ವಿಟಿ ಬಸ್‌ನಲ್ಲಿ ಕೆಲಸ ಮಾಡುತ್ತಿರುವ ಪವಿತ್ರಾ, ತಮ್ಮ ಬಸ್ ಮಾಲಕರ ಸಹಕಾರವನ್ನು ಸದಾ ಸ್ಮರಿಸುತ್ತಾರೆ. ಆರಂಭದಲ್ಲಿ ಕೆಲವು ಕಾಲ ತೊಂದರೆ ಎದುರಿಸಿದರೂ ಬರಬರುತ್ತ ಎಲ್ಲರ ಪರಿಚಯವಾಗತೊಡಗಿತು. ಉತ್ತಮ ಸಹಕಾರ ಕೊಡುತ್ತಾರೆ. ಅಕ್ಕ ಎಂದು ಕಿರಿಯರು ಕರೆಯುತ್ತಾರೆ. ಯಾರೂ ಈವರೆಗೆ ತನಗೆ ತೊಂದರೆ ಕೊಟ್ಟಿಲ್ಲ. ತಾನು ಸಹ ಎಲ್ಲರನ್ನೂ ವಿಶ್ವಾಸ, ಗೌರವದಿಂದ ಕಾಣುತ್ತಿದ್ದೇನೆ. ಹಿರಿಯರಿಗೆ ವಿಶೇಷ ಗೌರವ ಕಡುವ ಮುಲಕ ಅವರ ವಿಶ್ವಾಸ ಗಳಿಸಿದ್ದೇನೆ ಎಂದು ಹೇಳುತ್ತಾರೆ.
ಕೆಲಸದಲ್ಲಿ ಸಮಸ್ಯೆ, ತೊಂದರೆ -ತೊಡಕು ಇದ್ದೇ ಇರುತ್ತದೆ. ಆದರೆ ಅವುಗಳನ್ನು ಧೈರ್ಯದಿಂದ ಎದುರಿಸಬೇಕೇ ವಿನಾ ಹೆದರಬಾರದು. ಇಂದಿನ ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಕಂಡಕ್ಟರ್ ಆಗಲು ಮುಂದೆ ಬರಬೇಕು ಎನ್ನುವ ಪವಿತ್ರಾ, ಎಲ್ಲ ಬಸ್‌ನ ಚಾಲಕ-ನಿರ್ವಾಹಕರು ತನಗೆ ಗೌರವ ಕೊಡುತ್ತಾರೆ. ಯಾರೂ ಕೆಟ್ಟದಾಗಿ ವರ್ತಿಸಿಲ್ಲ. ಸಹೋದರಿಯಂತೆ ಕಾಣುತ್ತಿದ್ದಾರೆ. 9 ವರ್ಷದ ಕೆಲಸ ತೃಪ್ತಿ ನೀಡಿದೆ ಎನ್ನುತ್ತಾರೆ.
ಇವರ ಸೇವೆಯನ್ನು ಕಂಡು ಶಾಶ್ವತಿ ಮಹಿಳಾ ವೇದಿಕೆಯವರು, ಸಹ್ಯಾದ್ರಿ ಕಲಾ ಕಾಲೇಜಿನವರು, ಜೂನಿಯರ್ ಚೇಂಬರ್ (ಜೇೀಸಿ), ಕನ್ನಡ ಪರ ಸಂಘಟನೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಭದ್ರಾವತಿ ಆಕಾಶವಾಣಿಯಲ್ಲೂ ಒಮ್ಮೆ ಇವರ ಸಂದರ್ಶನ ಪ್ರಸಾರವಾಗಿದೆ. ಶಿವಮೊಗ್ಗದ ಏಕೈಕ ಮಹಿಳಾ ಕಂಡಕ್ಟರ್ ಆಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಪವಿತ್ರಾ .
published on oct-30, 2015
ಮಹಿಳಾ ಸಮಷ್ಟಿಯ ಚಿಂತಕಿ
ಶಾಂತಾ ಸುರೇಂದ್ರ


ಪ್ರಕಟಿತ ದಿನಾಂಕ- 17=10-2015

ನಮ್ಮಲ್ಲಿ ಬಹಳ ಜನ ಚಿಂತೆ ಮಾಡುತ್ತಾರೆ. ಎಲ್ಲೋ ಕೆಲವರು ಮಾತ್ರ ಚಿಂತನೆ ಮಾಡುತ್ತಾರೆ. ಅದರಲ್ಲೂ ಕೆಲವರು ಮಾತ್ರ ಚಿಂತನೆ ಮಾಡಿದ್ದನ್ನು ಕಾರ್ಯರೂಪಕ್ಕಿಳಿಸುತ್ತಾರೆ. ಅಂತಹವರಲ್ಲಿ ಶಿವಮೊಗ್ಗ ನಗರದ ಶಾಶ್ವತಿ ಮಹಿಳಾ ವೇದಿಕೆ ಮತ್ತು ಚುಂಚಾದ್ರಿ ಮಹಿಳಾ ವೇದಿಕೆ ಮತ್ತು ಮಲ್ನಾಡ್ ಕ್ರಿಯೇಟಿವ್ ಫೌಂಡೇಶನ್ ಅಧ್ಯಕ್ಷೆ ಶಾಂತಾ ಸುರೇಂದ್ರ ಒಬ್ಬರು.
  ನೆಲೆಯಿಲ್ಲದವರಿಗೆ ನೆಲೆ ಕಲ್ಪಿಸುವುದು, ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದವರಿಗೆ ನ್ಯಾಯ ಒದಗಿಸುವುದು, ವೇಶ್ಯಾವಾಟಿಕೆಯಲ್ಲಿ ಸಿಲುಕಿರುವ ಮಹಿಳೆಯರನ್ನು ಅದರಿಂದ ಪಾರು ಮಾಡಿ ಸ್ವಾವಲಂಬಿ ಜೀವನಕ್ಕೆ ನೆರವಾಗುವುದು, ಅನ್ಯಾಯವಾದ ಮಹಿಳೆಗೆ, ಯುವಕರು ಕೈಕೊಟ್ಟ ಯುವತಿಯರಿಗೆ ನ್ಯಾಯ,  ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ವಿವಿಧ ಕೌಶಲ್ಯ ತರಬೇತಿ ಕೊಡಿಸುವುದು, ಅವರು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು, ಮಹಿಳೆಯರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದು, ಬಡ ಗರ್ಭಿಣಿಯರಿಗೆ ಸೀಮಂತ ಮಾಡುವುದು, ಮಹಿಳಾ  ಆರೋಗ್ಯ ಶಿಬಿರ ಏರ್ಪಡಿಸುವುದು, ಕೊಳಚೆ ಪ್ರದೇಶದ ಮಹಿಳೆಯರಲ್ಲಿ ಉಳಿತಾಯ ಮನೋಭಾವ ಸೃಷ್ಟಿಸಿ ಅವರ ಜೀವನಾಧಾರಕ್ಕೆ ಹಾದಿ ಮಾಡಿಕೊಡುವುದು, ಮಹಿಳಾ ಬ್ಯಾಂಕ್ ಸ್ಥಾಪನೆ... ಹೀಗೆ ಹತ್ತಾರು ಸಮಾಜ ಸೇವಾ ಕೆಲಸದಲ್ಲಿ ಅದರಲ್ಲೂ ಮಹಿಳಾ ಪರ  ಕೆಲಸದಲ್ಲಿ ಸದಾ ಕಾರ್ಯತತ್ಪರರು. ಇಷ್ಟೇ ಅಲ್ಲದೆ, ವಿವಿಧ ಸರಕಾರಿ ಶಾಲೆಗಳಿಲ್ಲಿ ತಮ್ಮ ವೇದಿಕೆ ವತಿಯಿಂದ ಪುಸ್ತಕ, ಪೆನ್ನು, ಶಾಲಾಚೀಲ ವಿತರಣೆ, ವನಮಹೋತ್ಸವ ಮಾಡುತ್ತಾರೆ. ಇದರ ಜೊತೆಗೆ ಸಾಕ್ಷರತೆ ಬಗ್ಗೆ ಗ್ರಾಮಾಂತರ ಶಾಲೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ.
ನಾವು ಸುಖವಾಗಿ ಬದುಕಿದರೆ ಸಾಕು, ಇನ್ನೊಬ್ಬರ ಗೊಡವೆ ನಮಗೇಕೆ ಬೇಕು ಎಂದು ಚಿಂತಿಸುವ ಜನರೇ ಹೆಚ್ಚಿರುವ ಇಂದಿನ ದಿನದಲ್ಲಿ, ಶಾಂತಾ ನೂರಾರು ಮಹಿಳೆಯರ ಪಾಲಿಗೆ ದೇವರಂತಾಗಿದ್ದಾರೆ. ಅವರನ್ನು ಇಂದಿಗೂ ಆ ಮಹಿಳೆಯರು ನೆನಪಿಸಿಕೊಳ್ಳುತ್ತಾರೆ.  ಪೊಲೀಸ್ ಠಾಣೆ, ಆಸ್ಪತ್ರೆ, ವಿವಿಧ ಇಲಾಖಾ ಕಚೇರಿಗಳಿಗೆ ಹೋಗಿ ನ್ಯಾಯ ಕೊಡಿಸುವುದು ಇವರ ಕೆಲಸ. ಹಣಕಾಸಿನ ವಿಚಾರವಾಗಿ ಗಂಡಿನ ಕಡೆಯವರು ಮಂಟಪದಲ್ಲಿ ಮದುವೆಯನ್ನು ನಿಲ್ಲಿಸಿದ ವಿಚಾರ ತಿಳಿದು ಅಲ್ಲಿಗೆ ಧಾವಿಸಿ ಸ್ವತಃ ತಾವೇ ಹಣ ನೀಡಿ ಮತ್ತೆ ಅದೇ ವಧು-ವರನಿಗೆ ಮದುವೆ ಮಾಡಿಸಿದ್ದನ್ನು ಎಂದೂ ಮರೆಯುವಂತಿಲ್ಲ. ಮಾಡಿದ ಕೆಲಸಕ್ಕೆ ಒಬ್ಬರಿಂದಲೂ ಒಂದು ರೂಪಾಯಿ ಪಡೆದವರಲ್ಲ. ಪ್ರಚಾರಕ್ಕಾಗಿಯೂ ಕೆಲಸ ಮಾಡಿದವರಲ್ಲ. ಸಮಾಜ ಸೇವೆ ಎಂದರೇನು ಎನ್ನುವುದನ್ನು ಇತರರಿಗೆ ತಮ್ಮ ಕೆಲಸದ ಮೂಲಕವೇ ಇವರು ತೋರಿಸಿಕೊಟ್ಟಿದ್ದಾರೆ.
ಸಾಮಾಜಿಕ ಚಿಂತನೆ ಯಾವತ್ತ್ತೂ ದೀರ್ಘವಾಗಿರುತ್ತದೆ ಎನ್ನುವ ಮಾತಿದೆ. ಅದೇ ದಾರಿಯಲ್ಲಿ ಸಾಗಿರುವ ಶಾಂತಾ ಮಹಿಳೆಯರಿಗಾಗಿ ವರ್ಷದ ಹಿಂದೆ ಚುಂಚಾದ್ರಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವನ್ನು ತಾವೇ ಹಲವು ಮುಂದಾಳು ಮಹಿಳೆಯರೊಡಗೂಡಿ ತೆರೆದಿದ್ದಾರೆ. ಇದರ ಮೂಲಕ ನೂರಾರು ಮಹಿಳೆಯರಿಗೆ ಸ್ವಾವಲಂಬಿಯಾಗಲು  ಸಾಲ ನೀಡಿದ್ದಾರೆ.
 ಸಹಾಯ ಕೇಳಿ ಬಂದವರನ್ನು ಯಾವತ್ತೂ ನೋಯಿಸಿ ಕಳುಹಿಸಿಲ್ಲ, ಅವರಿಗೆ ನೆರವಾಗಿದ್ದೇನೆ. ಸರ್ಕಾರಿ ಕಚೇರಿಯಿಂದಲೂ ಕೆಲಸ ಮಾಡಿಸಿಕೊಟ್ಟಿದ್ದೇನೆ.  ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವುದು ತನ್ನ ಗುರಿ. ನ್ಯಾಯಕ್ಕಾಗಿ ಪ್ರತಿಭಟನೆ, ಹೋರಾಟವನ್ನು ನಡೆಸಿದ್ದೇನೆ. ಅಧಿಕಾರಿಗಳು ಕೆಲಸ ಮಾಡಿಕೊಡದಿದ್ದಾಗ ಅವರಿಗೂ ಧಿಕ್ಕಾರ ಹಾಕಿದ್ದೇನೆ. ತನ್ನೆಲ್ಲ ಕೆಲಸಕ್ಕೆ ವೇದಿಕೆಯ ಸದಸ್ಯರಿದ್ದಾರೆ. ಅವರೆಲ್ಲರ ನೆರವಿನಿಂದ ಇಷ್ಟೆಲ್ಲ ಕಾಂರ್ ಸಾಧ್ಯವಾಯಿತೆನ್ನುತ್ತಾರೆ ಶಾಂತಾ.    
ಶಾಂತಾ ಅವರ ಅಸಾಧಾರಣ ಹೋರಾಟ ಮನೋಭಾವ, ಮಹಿಳೆಯರ ಧ್ವನಿಯಾಗಿ ಅವರ ಹಿತಕ್ಕೆ ಕಟಿಬದ್ಧರಾಗಿರುವುದನ್ನು ಗಮನಿಸಿ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನದಂದು ಕಿತ್ತೂರು ಚೆನ್ನಮ್ಮ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರದಾನ ಮಾಡಿ ಗೌರವಿಸಿದೆ. ಇದರೊಟ್ಟಿಗೆ ಜಿಲ್ಲಾ ಸೇವಾ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಮಹಿಳಾ ಧ್ವನಿ ಪ್ರಶಸ್ತಿ ಸಹ ಇವರ ಪಾಲಾಗಿದೆ.  ರಾಜ್ಯ ಒಕ್ಕಲಿಗ ಮಹಿಳಾ ಸಮಾವೇಶವನ್ನು ಯಶಸ್ವಿಯಾಗಿ ಶಿವಮೊಗ್ಗದಲ್ಲಿ ನಡೆಸಿದ ಕೀರ್ತಿ ಇವರದ್ದು.
..........................................

Saturday 12 November 2016

ಗಮಕ ಕ್ಷೇತ್ರದ ಅರಳುಪ್ರತಿಭೆ 
ರಕ್ಷಿತಾ ಅವಧಾನಿ


ಪ್ರಕಟಿತ ದಿನಾಂಕ& 10.10.2015

’ಹಿತ್ತಲ ಗಿಡ ಮದ್ದಲ್ಲ’ ಎನ್ನುವುದಕ್ಕೆ ಜ್ವಲಂತ ನಿದರ್ಶನ ನಮ್ಮ ಭಾರತೀಯ ಯುವಜನತೆ. ಹೆಜ್ಜೆಹೆಜ್ಜೆಗೂ ಪಾಶ್ಚಾತ್ಯರ ಅಂಧಾನುಕರಣೆ! ಉಡುಗೆ-ತೊಡುಗೆ. ಆಹಾರ-ವಿಹಾರ, ಕ್ಲಬ್-ಪಬ್, ಕುಣಿತ-ಸಂಗೀತ ಎಲ್ಲದರಲ್ಲೂ ಪಾಶ್ಚಾತ್ಯ ಸಂಸ್ಕೃತಿಯ ವಿಕೃತವಾದ, ಮೌಲ್ಯವಿಹೀನವಾದ ಅನುಕರಣೆ, ಅನುಸರಣೆ! ಕಿವಿಗಡಚ್ಚಿಕ್ಕುವ ವಾದ್ಯಗಳ ಆರ್ಭಟಕ್ಕೆ ಒಂದೋ ಕಿವಿತಮಟೆ ಹರಿದುಹೋಗಬೇಕು; ಇಲ್ಲವೇ ಕಿವಿ ಕಿವುಡಾಗಬೇಕು. ಇನ್ನು ಕುಣಿತವೋ .... ಮದಿರೆಯೇರಿಸಿದ ಮರುಳರ ಹಾಗೆ. ಹೌದು, ಪಾಶ್ಚಾತ್ಯ ಸಂಸ್ಕೃತಿಯ ಅಗ್ಗದ, ಅಬ್ಬರದ ಮನರಂಜನೆಗೆ ಮರುಳಾಗಿ ಅದರ ಪ್ರಭಾವಕ್ಕೊಳಗಾಗಿ, ಈ ನೆಲದ ಸಾರ-ಸತ್ವವನ್ನು ಮರೆತೇ ಬಿಟ್ಟಿರುವ ನಮ್ಮ ಯುವಜನಾಂಗದ ನಡುವೆಯೇ, ಈ ನೆಲದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಯುವಪ್ರತಿಭೆಗಳು ಅಲ್ಲೊಂದು -ಇಲ್ಲೊಂದು ಇವೆ ಎನ್ನುವುದು ನಿಜಕ್ಕೂ ಸಮಾಧಾನದ ಸಂಗತಿ. ಅಂತಹ ಅಪರೂಪದ ಅರಳುಪ್ರತಿಭೆ ಗಮಕ ಗ್ರಾಮ ಹೊಸಹಳ್ಳಿಯ ಗಮಕಿ ರಕ್ಷಿತಾ ಅವಧಾನಿ.
ಉತ್ತಮ ಸ್ವರಮಾಧುರ್ಯ ಹೊಂದಿರುವ ರಕ್ಷಿತಾ ತನ್ನ ವಿದ್ಯಾಭ್ಯಾಸದ ಜೊತೆಜೊತೆಗೆ ಭರತನಾಟ್ಯ, ಕರ್ನಾಟಕ ಸಂಗೀತ, ಗಮಕ ವಾಚನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದಿನ ತಲೆಮಾರಿಗೆ ಗಮಕ ಕಲೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಅಪಸ್ವರದ ನಡುವೆಯೇ ರಕ್ಷಿತಾ ಅವಧಾನಿ ತಾನು ಗಮಕ ಸಂಗೀತವನ್ನು ಅಭ್ಯಸಿಸುತ್ತಲೇ ಇತರರಿಗೆ ಹೇಳಿಕೊಡುತ್ತಿರುವುದು ವಿಶೇಷವೇ. ಎಂ.ಕಾಂ ವಿದ್ಯಾರ್ಥಿನಿಯಾಗಿರುವ ರಕ್ಷಿತಾ ಹೊಸಹಳ್ಳಿಯ ವಿದ್ವಾಂಸ, ಪ್ರಖ್ಯಾತ ಗಮಕಿ ರಾಜಾರಾಮಮೂರ್ತಿ ಮತ್ತು ವಿಜಯಲಕ್ಷ್ಮೀ ಅವರ ಸುಪುತ್ರಿ. ತಂದೆ ನಡೆದ ದಾರಿಯಲ್ಲೇ ಮುಂದುವರೆಯುತ್ತಿರುವ ರಕ್ಷಿತಾ ತಂದೆಯಂತೆಯೇ ಗಮಕವನ್ನು ಉಳಿಸಿ-ಬೆಳೆಸಲು ಮುಂದಾಗಿದ್ದಾರೆ. ಇಂದಿನ ಯುವ ಗಮಕಿಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಆರಂಭದಲ್ಲಿ ಕೇಶವಮೂರ್ತಿಯವರ ಬಳಿ ಗಮಕ ಕಲಿಕೆ ಆರಂಭಿಸಿ, ನಂತರ ತಂದೆಯ ಮಾರ್ಗದರ್ಶನದಲ್ಲಿ ಗಮಕ ಅಭ್ಯಾಸ ಮುಂದುವರೆಸಿದರು. ಈಗ ಗಮಕ ವಾಚನ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಗಮಕದಲ್ಲಿ ಪ್ರಥಮ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಇವರು, ಈಗಾಗಲೇ ಮಕ್ಕಳ ಗಮಕ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ತುಮಕೂರು, ಉಡುಪಿ, ಬೆಂಗಳೂರು ಮತ್ತು ಶಿವಮೊಗ್ಗದ ಹಲವೆಡೆ ಇವರ ಹತ್ತಾರು ಕಾರ್ಯಕ್ರಮ ನಡೆದಿದೆ. ಗಮಕ ವಾಚನ ಮತ್ತು ವ್ಯಾಖ್ಯಾನ ಇವರ ಆಸಕ್ತಿಯ ಕ್ಷೇತ್ರ. ಇವರ ಹಾಡುಗಾರಿಕೆಗೆ ಎಂತಹವರೂ ತಲೆದೂಗಲೇಬೇಕು.
ರಕ್ಷಿತಾ ಶಿವಮೊಗ್ಗದ ಸಮನ್ವಯ ಸಂಸ್ಥೆಯಲ್ಲಿ ಕಳೆದ 5 ವರ್ಷಗಳಿಂದ ಸಕ್ರಿಯ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದು, ಅವರು ಆಯೋಜಿಸುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುವ ಪ್ರಮುಖರಲ್ಲಿ ಒಬ್ಬರು. ಜೊತೆಗೆ ಜೂನಿಯರ್ ಗಾಯಕರಿಗೆ ಇವರು ಮಾರ್ಗದರ್ಶನ ಮಾಡುತ್ತಾರೆ. ಆಡಿಷನ್‌ಗಳನ್ನು ನಡೆಸಿಕೊಡುತ್ತಾರೆ. ಸಮನ್ವಯ ಸಂಸ್ಥೆಯ ಹಿರಿಯ ಸದಸ್ಯೆಯಾಗಿ ಅದರ ಯಶಸ್ಸಿನಲ್ಲಿ ಭಾಗಿಯಾಗಿರುವ ಕಾರಣ ಸಂಸ್ಥೆಯ ಮುಖ್ಯಸ್ಥ ಕಾಶೀನಾಥ್ ’ಸಮನ್ವಯ ಸಾಧನೆ ಪ್ರಶಸ್ತಿ’ಯನ್ನು ಕಳೆದ ಸ್ವಾತಂತ್ರ್ಯೋತ್ಸವದಲ್ಲಿ  ಪ್ರದಾನ ಮಾಡಿ ಪ್ರೋತ್ಸಾಹಿಸಿದ್ದಾರೆ.
ತಾನು ತೊಡಗಿಸಿಕೊಂಡಿರುವ ಕೆಲಸದಲ್ಲಿ ಯಶಸ್ಸು ಸಾಧಿಸುವುದಕ್ಕಾಗಿ ನಿರಂತರ ಶ್ರಮ ಪಡುವುದು ಇವರ ವೈಶಿಷ್ಟ್ಯ . ಇದರ ಜೊತೆಗೆ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನವನ್ನೂ ನೀಡಿದ್ದಾರೆ.  ಶಿವಮೊಗ್ಗದಲ್ಲಿ ನಡೆದ ವಾಯ್ಸ್ ಆಫ್ ಕರ್ನಾಟಕ ಸ್ಪರ್ಧೆಯಲ್ಲಿ ರನ್ನರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಡುಗಾರಿಕೆ ಮೂಲಕ ಉತ್ತಮ ಹೆಸರು ಗಳಿಸಿರುವ ರಕ್ಷಿತಾ, ಸಮನ್ವಯ ಸಂಸ್ಥೆಯಿಂದ ಬೆಳಕಿಗೆ ಬಂದೆ ಎನ್ನುವುದನ್ನು ಸ್ಮರಿಸುತ್ತಾರೆ. ಗಮಕದಲ್ಲೇ ಏನಾದರೂ ವಿಶೇಷ ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ. ಗಮಕ ಕಲಿಕೆಯಿಂದ ನೆನಪಿನ ಶಕ್ತಿ ಅಧಿಕವಾಗುತ್ತದೆ ಎನ್ನುವುದು ಅವರ ಅಭಿಮತ.
 ಈ ಅರಳುಪ್ರತಿಭೆ ಗಮಕ ಲೋಕದ ಉಜ್ವಲ ನಕ್ಷತ್ರವಾಗಿ ಪ್ರಜ್ವಲಿಸಲಿ.
...............................   ,,,,,,,,,,,,,,,,,,,,,,,


 ಸದ್ದು ಮಾಡದೆ ಕಲಾಸೇವಾನಿರತ 
ರಾಜಲಕ್ಷ್ಮೀ  ಇಂದುಶೇಖರ್ 


ಪ್ರಕಟಿತ ದಿನಾಂಕ ಅಕ್ಟೋಬರ್ 3, 2015

 ಬೆಂಗಳೂರನ್ನು  ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಇರುವಷ್ಟು ನೃತ್ಯ, ಸಂಗೀತ ಮತ್ತಿತರ  ಕಲಾವಿದರು ಕರ್ನಾಟಕದ ಬೇರೆ ಯಾವ ಜಿಲ್ಲೆಯಲ್ಲೂ  ಇಲ್ಲ. ಸಾಂಸ್ಕೃತಿಕ ನಗರಿಯೆಂದೇ ಕರೆಯಲ್ಪಡುವ ಇಲ್ಲಿ ಎಲ್ಲ ಕಲಾಪ್ರಕಾರದ ಕಲಾವಿದರಿದ್ದಾರೆ; ಅನೇಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಖ್ಯಾತರಾಗಿದ್ದಾರೆ. ಮತ್ತೆ ಕೆಲವರು ವನಸುಮದಂತೆ ತಮ್ಮ ಪಾಡಿಗೆ ತಾವು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆ ಸದ್ದು ಮಾಡದೆ ಕಲಾಸೇವೆ ಮಾಡುತ್ತಿರುವ ಮಲೆನಾಡಿನ ಅಪ್ಪಟ ಪ್ರತಿಭೆ ರಾಜಲಕ್ಷ್ಮೀ  ಇಂದುಶೇಖರ್ ಅವರು. ಹೌದು, ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡು, ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಸುಧೆ ಊಡಿಸುತ್ತಿರುವ ರಾಜಲಕ್ಷ್ಮೀ ಇಂದುಶೇಖರ್ ನಗರದ ಹಿರಿಯ ಸಂಗೀತ ಕಲಾವಿದೆ. ವಿನೋಬನಗರದಲ್ಲಿರುವ ತಮ್ಮ ಮನೆಯಲ್ಲೇ ’ಶ್ರೀಮಾತಾ ಸಂಗೀತ ಸಭಾ’ ದ ಮೂಲಕ ಪ್ರತಿನಿತ್ಯ ವಿದ್ಯಾರ್ಥಿನಿಯರಿಗೆ ಸಂಗೀತದ ಧಾರೆ ಎರೆಯುತ್ತಿದ್ದಾರೆ.
ಮೂಲತಃ ಕೂಡ್ಲಿಯವರಾದ ರಾಜಲಕ್ಷ್ಮೀ ಅವರ ತಂದೆ ಶಿಕ್ಷಕರಾದ ಕಾರಣ ಶಿವಮೊಗ್ಗದಲ್ಲಿ ನೆಲೆನಿಂತಾಗ ಹಾಡುಗಾರಿಕೆಯ ನಂಟು ಬೆಳೆಯಿತು.  ದಾಸರ ಪದಗಳನ್ನು ಮೊದಲು ರಾಗಬದ್ಧವಾಗಿ ಕಲಿತದ್ದನ್ನು ಇಂದಿಗೂ ಅವರು ನೆನಪಿಸುತ್ತಾರೆ. ಹಾಡುಗಾರರೂ ಆಗಿದ್ದ ಅವರಿಗೆ ವಿದ್ವಾನ್ ಚಂದ್ರಶೇಖರ್  ಭಟ್ ಅವರು ಮೊದಲ ಗುರುಗಳು. ಅನಂತರ ಚಂದ್ರಶೇಖರ್ ಗುಪ್ತಾ ಅವರಲ್ಲಿ ಸಂಗೀತಾಭ್ಯಾಸ. ಶಾಲಾ- ಕಾಲೇಜು ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಾಡಿ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದ್ದು. ಇದರಿಂದ ಇನ್ನಷ್ಟು ಸ್ಫೂರ್ತಿಗೊಂಡು, ಹಾಡುಗಾರಿಕೆಯಲ್ಲೇ ಮುಂದುವರೆಯಲು ನಿರ್ಧರಿಸಿದರು.  ಕಾಲೇಜು ಶಿಕ್ಷಣ ಮುಗಿದ ನಂತರ ಪೂರ್ಣಪ್ರಮಾಣದಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲೇ ತಮ್ಮನ್ನು ತೊಡಗಿಸಿಕೊಂಡು, ಸುಮಾರು 8 ವರ್ಷ ವಿಕಾಸ ವಿದ್ಯಾಂಸ್ಥೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅನಂತರ ಹಾಡುಗಾರಿಕೆ ಅರಸಿ ಬರುವವರು ಅಧಿಕವಾದ್ದರಿಂದ ಅವರಿಗೆ ಸಂಗೀತ ಕಲಿಸಲು ಮುಂದಾದರು.
ಸುದೀರ್ಘ 30 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿನಿಯರಿಗೆ ಸಂಗೀತ ಧಾರೆ ಎರೆಯುತ್ತಿದ್ದಾರೆ. ಇವರ ಹಲವು ಶಿಷ್ಯೆಯರು ಈಗ ಆಕಾಶವಾಣಿ ಮತು ದೂರದರ್ಶನದಲ್ಲಿ ಕಲಾವಿದೆಯರಾಗಿ ಗುರುವಿನ ಹೆಸರನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಹಾಡುಗಾರಿಕೆ ಕಲಿಯಲು ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಗಮನಿಸಿ ಶಾಲೆ ತೆರೆದರು. ಈ ಶಾಲೆಗೆ ಈಗ 14ರ ಹರೆಯ. ತಮ್ಮ ಸಂಗೀತ ಶಾಲೆಯ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಪ್ರತಿ ವರ್ಷ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನೆರವೇರಿಸುವ ಇವರು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಖ್ಯಾತಿವೆತ್ತ ಸಂಗೀತಗಾರರನ್ನು ಕರೆಯಿಸಿ ನಿರಂತರವಾಗಿ ನಗರದ ಸಂಗೀತಾಸಕ್ತರಿಗೆ ಕಲೆಯ ರಸದೌತಣ ನೀಡುತ್ತಿದ್ದಾರೆ.
  ಚೆನ್ನೈನಲ್ಲಿರುವ ಸ್ಯಾಕ್ಸೊಫೋನ್ ವಾದಕ ವಿದ್ವಾನ್ ಕುಮಾರಸ್ವಾಮಿ, ಮ್ಯಾಂಡೊಲಿನ್ ವಾದಕ ವಿದ್ವಾನ್ ಪ್ರಸನ್ನ, ಮಂಗಳೂರಿನ ಸಿತಾರ್ ವಾದಕ ರಫಿಕ್ ಖಾನ್, ಬೆಂಗಳೂರಿನ ಡಾ. ಶ್ರೀಧರ್ ಮತ್ತು ಅನುರಾಧಾ ಶ್ರೀಧರ್ ಅವರ ಭರತನಾಟ್ಯ ಪ್ರದರ್ಶನ, ವಿದ್ಯಾಭೂಷಣರಿಂದ ಹಾಡುಗಾರಿಕೆ, 22 ಕಲಾವಿದರ ನಾದ ಲಹರಿ- ನಾದವೈಭವ-ಹೀಗೆ ಸುಮಾರು 20ಕ್ಕೂ ಹೆಚ್ಚು ಸ್ಮರಣೀಯ ಕಲಾವಿದರ ಪ್ರತಿಭೆಯನ್ನು ನಗರಕ್ಕೆ ಪರಿಚಯಿಸಿದ ಹಿರಿಮೆ ಇವರದ್ದು.
ಪ್ರತಿದಿನ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಂಗೀತ ಕಲಿಸುವ ಇವರು, ಮಧ್ಯಾಹ್ನ 3ರಿಂದ 4ರವರೆಗೆ ಮಹಿಳೆಯರಿಗೆ ದೇವರ ನಾಮ, ಸೌಂದರ್ಯ ಲಹರಿ ಕಲಿಸುತ್ತಾರೆ. 20 ರಿಂದ 70ರ ವಯಸ್ಸಿನ ಸುಮಾರು 35 ಮಹಿಳೆಯರು ಇಲ್ಲಿ ಸಂಗೀತ ಕಲಿಯಲು ಬರುತ್ತಾರೆ.  ಸಂಜೆ ವಿದ್ಯಾರ್ಥಿನಿಯರಿಗೆ ಹಾಡುಗಾರಿಕೆ ಹೇಳಿಕೊಡುತ್ತಿದ್ದಾರೆ. ಇದರ ಜೊತೆಗೆ ವಿದ್ಯಾಲಕ್ಷ್ಮೀ ಭಜನಾ ಮಂಡಳಿಯನ್ನು ಸ್ಥಾಪಿಸಿರುವ ಇವರು ಹಲವಾರು ಕಾಂರ್ಕ್ರಮಗಳಲ್ಲಿ  ತಮ್ಮ ತಂಡದ ಪ್ರತಿಭೆ ಮೆರೆಸಿದ್ದಾರೆ. ಪ್ರತಿ ಶನಿವಾರ ಶುಭಮಂಗಳ ಶನೈಶ್ಚರ ದೇವಾಲಯದಲ್ಲಿ ಇವರ ಭಜನಾ ಮಂಡಳಿಯವರು ಒಂದು ಗಂಟೆ ಕಾಲ ಭಜನಾ ಕಾರ್ಯಕ್ರಮ ನೀಡುತ್ತಾರೆ. ಪ್ರಚಾರದಿಂದ ದೂರವೇ ಉಳಿದಿರುವ ರಾಜಲಕ್ಷ್ಮೀ ಅವರು, ತನ್ನದೇನಿದ್ದರೂ ಸಂಗೀತ ಸೇವೆ. ಕಲೆಗೆ ತನ್ನಿಂದಾದ ಸೇವೆಯನ್ನು ಮಾಡುತ್ತೇನೆ. ಹಲವಾರು ಬಡ ವಿದ್ಯಾರ್ಥಿಯರಿಗೆ ಉಚಿತವಾಗಿ ಕಲಿಸುತ್ತಿದ್ದೇನೆ. ಪ್ರತಿಭೆಗೆ ನೀರೆರೆಯುವ ಕೆಲಸವನ್ನು ಸದಾ ಮಾಡುತ್ತೇನೆ ಎನ್ನುತ್ತಾರೆ ತೃಪ್ತ ಮನಸ್ಸಿನಿಂದ. ಇವರ ಎಲ್ಲ ಕೆಲಸಕ್ಕೆ ಪತಿ ಇಂದುಶೇಖರ್ ಬೆನ್ನೆಲುಬಾಗಿ ನಿಂತಿದ್ದಾರೆ. ಇವರೂ ಸಹ ಸಂಗೀತಾಸಕ್ತರಾಗಿದ್ದು, ಭಜನೆಗಳನ್ನು ಹಾಡುತ್ತಾರೆ.
.........................................
ತುಂಡು ಭೂಮಿಯಲ್ಲಿ ಚಿನ್ನದ ಬೆಳೆ ತೆಗೆವ
ಅಪೂರ್ವ ರೈತ ಧರ್ಮಪ್ಪ
........................................................

ನೇಗಿಲ ಯೋಗಿಯು ನಾನು
ಮಣ್ಣಿನ ಭೋಗಿಯು ನಾನು
ಎನ್ನುವ ಪಲ್ಲವಿ, ಅನುಪಲ್ಲವಿಯನ್ನೇ ಉಸಿರಾಗಿಸಿಕೊಂಡು, ನಿಸರ್ಗದ ಬಯಲು ವೇದಿಕೆೆಯಲ್ಲಿ ’ಕಾಯಕವೇ ಕೈಲಾಸ’ ಎಂದು ಬದುಕುತ್ತಿರುವ ಸ್ವಾಭಿಮಾನಿ, ಮಾದರಿ ರೈತ ಧರ್ಮಪ್ಪ.  ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಧರ್ಮಪ್ಪ ಅವರು ದಾರಿದೀಪವಾಗಿದ್ದಾರೆ. ಧರ್ಮಪ್ಪ ಅವರ ಬಳಿ ಇರುವುದು ಕೇವಲ ಎರಡೇ ಎರಡು ಎಕರೆ ಭೂಮಿ. ಅದರಲ್ಲೂ ಒಂದು ಎಕರೆ ಮಾತ್ರ ನೀರಾವರಿ ಭೂಮಿ;  ಇನ್ನೊಂದು ಎಕರೆ ಒಣಭೂಮಿ. ಧರ್ಮಪ್ಪನವರ ಕೃಷಿಸಾಹಸ ಈ ದೇಶದ ಅನ್ನದ ಸಮಸ್ಯೆಗೊಂದು ಸಮರ್ಥವಾದ ಉತ್ತರ. ಕೃಷಿಗೆ ಫಲವತ್ತಾದ ಭೂಮಿ ಬೇಕು; ಸಮೃದ್ಧವಾದ ನೀರು ಬೇಕು; ಅದನ್ನು ಎತ್ತಿ ಹಾಕಲು ಪಂಪು ಬೇಕು; ಪಂಪಿಗೆ ಕರೆಂಟು ಬೇಕು; ಸುಧಾರಿತ ಬೀಜ ತಳಿ ಬೇಕು; ಬ್ಯಾಂಕಿನಿಂದ ಇದಕ್ಕೆಲ್ಲ ಸಾಲ ಬೇಕು; ಸಬ್ಸಿಡಿ ಬೇಕು ಎಂದು ಬೊಬ್ಬೆ ಹೊಡೆಯುವ, ಕೃಷಿ ಫೂಮಿಯನ್ನು ಪಾಳು ಬಿಡುವ ಸೋಮಾರಿ ಕೃಷಿಕರಿಗೆ ಧರ್ಮಪ್ಪ ಅವರು ನಿಜಕ್ಕೂ ಮಾದರಿ.
 ತುಂಡುಭೂಮಿಯ ಕೃಷಿಕನೊಬ್ಬ ಉತ್ತಮವಾಗಿ ಕಟ್ಟಿಕೊಂಡು, ತನ್ನ ಮೂವರೂ ಪುತ್ರರಿಗೆ ಇಂಜಿನಿಯರಿಂಗ್ ಓದಿಸಿ, ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ರೈತ ಆತ್ಮಹತ್ಯೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ರೈತ ಅದ್ಹೇಗೆ  ಸಾಧನೆ ಮಾಡಿದ ಎಂದು ಗಮನಿಸಿದರೆ ಎಂತಹವರಾದರೂ ಮೂಗಿನ ಮೇಲೆ ಬೆರಳಿಡಬೇಕು.
ಧರ್ಮಪ್ಪ ಭದ್ರಾವತಿ ಸಮೀಪದ ಸಂಕ್ಲೀಪುರ ಗ್ರಾಮದವರು. ಓದಿದ್ದು ಒಂದನೆಯ ಕ್ಲಾಸು. ಇರುವುದು ಎರಡು ಎಕರೆ ಜಮೀನು. . ಇಂತಹ ಸ್ಥಿತಿಯಲ್ಲಿ ಜಮೀನು ಮಾಡಿಕೊಂಡು ಮೂವರು ಗಂಡುಮಕ್ಕಳೊಂದಿಗೆ ಸಂಸಾರ ಸಾಗಿಸುವುದೇ ದುಸ್ತರ. ಆದರೂ ಇವರು  ಕಷ್ಟಪಟ್ಟು, ಇಷ್ಟಪಟ್ಟು ದುಡಿದು ಬದುಕನ್ನು ಕಟ್ಟಿಕೊಂಡಿದ್ದಾರೆ. ತನ್ನ ಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ.
ಒಂದು ಎಕರೆ ನೀರಾವರಿ ಭೂಮಿಯಲ್ಲಿ ಕಬ್ಬು-ಭತ್ತ ಬೆಳೆದರೆ, ಇನ್ನೊಂದು ಎಕರೆ ಒಣಭೂಮಿಯಲ್ಲಿ ಏನು ಬೆಳೆಯಬೇಕೆಂದು ಚಿಂತಿಸುವಾಗಲೇ ಅಡಕೆ ಬೆಳೆಯುವಂತೆ ಮಿತ್ರರಾರೋ ಕೊಟ್ಟ ಸಲಹೆ ಪ್ರಕಾರ ಅದನ್ನು ನೆಟ್ಟರು. ಈಗ ತೋಟ ಉತ್ತಮ ಫಸಲು ನೀಡುತ್ತಿದೆ. ಒಣಭೂಮಿಯಲ್ಲಿ ಪಂಪ್‌ಸೆಟ್ ಹಾಕಿಸಿ ಅಡಕೆ ತೋಟ ನಳನಳಿಸುವಂತೆ ಮಾಡಿದ್ದಾರೆ. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರೂ ಹೆದರದೆ ಅದನ್ನೆಲ್ಲ ತೀರಿಸಿದ್ದಾರೆ. ಈ ಮಧ್ಯೆ ಮೂವರು ಮಕ್ಕಳಿಗೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿಸಿದ್ದಾರೆ. ಇವರ ಶಿಕ್ಷಣಕ್ಕೂ ಸಾಲ ಮಾಡಿ, ಅದನ್ನೂ ಸಹ ಬೆಳೆಯಿಂದ ಬಂದ ಹಣದಲ್ಲೇ ತೀರಿಸಿದ್ದಾರೆ. ಇಬ್ಬರು ಮಕ್ಕಳು ಈಗ ಎಚ್‌ಎಎಲ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ದುಡಿಯುತ್ತಿದ್ದಾರೆ. ಇನ್ನೊಬ್ಬ ನೌಕರಿಯ ಹುಡುಕಾಟದಲ್ಲಿದ್ದಾನೆ.
ತಾನು ಮತ್ತು ಪತ್ನಿ ಕೇವಲ ಒಂದನೆಯ ತರಗತಿ ಓದಿದ್ದರೂ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಿ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಹೊಲ, ತೋಟದ ಕೆಲಸ ಮುಗಿಸಿ ಗ್ರಾಮದ ಇತರ ಮನೆಗಳಿಗೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇಷ್ಟೊಂದು ದುಡಿಮೆಯ ವ್ಯಕ್ತಿಯನ್ನು ಭೂತಾಯಿ ಚೆನ್ನಾಗಿ ಸಾಕಿ ಸಲುಹಿದೆ. ‘ದುಡಿಮೆಯೇ ದುಡ್ಡಿನ ತಾಯಿ’ ಎನ್ನುವ ಮಾತು ಇವರಂತಹವರಿಗೆ ಅಕ್ಷರಶಃ. ಸಲ್ಲುತ್ತದೆ. ಈಗ ಟಿಲ್ಲರ್, ಬೈಕ್ ಖರೀದಿಸಿದ್ದಾರೆ. ಆರ್‌ಸಿಸಿ ಮನೆ ಕಟ್ಟಿಕೊಂಡಿದ್ದಾರೆ.ಯಾವುದೇ ದುಶ್ಚಟಗಳು ಇವರಲ್ಲಿಲ್ಲ. ಹೊಲ, ಮನೆ, ದುಡಿಮೆ ಇವೇ ಅವರ ಮಂತ್ರ.
ಹೈನುಗಾರಿಕೆಯಲ್ಲೂ ಇವರು ಹಿಂದೆ ಬಿದ್ದಿಲ್ಲ. ಜಮೀನು ಜೊತೆಯೇ ಆಕಳು, ಎಮ್ಮೆಯನ್ನು ಕಟ್ಟಿಕೊಂಡಿದ್ದಾರೆ. ಹೊಲಕ್ಕೆ ಬೇಕಾಗುವಷ್ಟು ಗೊಬ್ಬರವನ್ನು  ತಯಾರು ಮಾಡಿಕೊಳ್ಳುತ್ತಾರೆ. ಏಕವ್ಯಕ್ತಿಯಾಗಿ ದುಡಿಯುವ ಗಂಡನಿಗೆ ಹೆಂಡತಿ ಸಾಥ್ ನೀಡುತ್ತಿದ್ದಾಳೆ. ಕಡಿಮೆ ಜಮೀನಿದೆ ಎಂದು ಯಾವತ್ತೂ ಕೊರಗದೆ ಇರುವ ಜಮೀನನ್ನೇ ಹೊನ್ನು ಬೆಳೆಯುವ ಭೂಮಿಯನ್ನಾಗಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ಇವರು ಮಾಡಿದ ಸಾಧನೆ ಕಂಡು ಇಡೀ ಗ್ರಾಮಸ್ಥರೇ ಅಚ್ಚರಿಪಟ್ಟಿದ್ದಾರೆ    
ಕೃಷಿಯಲ್ಲಿ ಲಾಭ ಗಳಿಸಬೇಕಾದರೆ ಹೆಚ್ಚು ಭೂಮಿ ಇರಬೇಕೆನ್ನುವವರೇ ಅಧಿಕ. ಆದರೆ ಇರುವ ಜಮೀನಿನಲ್ಲೇ ಹೇಗೆ ರ್ಜರಿ ಲಾಭ ಮಾಡಬಹುದು ಎನ್ನುವುದಕ್ಕೆ ಮಾರ್ಗ ಗೊತ್ತಿರಬೇಕು. ಸಾಂಪ್ರದಾಯಿಕ ಕೃಷಿಗೆ ಕಟ್ಟುಬೀಳಬಾರದು. ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿಕೊಳ್ಳಬೇಕು. ಆಗ ಮಾತ್ರ ಸ್ವಾವಲಂಬಿಗಳಾಗಲು ಸಾಧ್ಯ ಎನ್ನುವ ಧರ್ಮಪ್ಪ, ತನ್ನ ಜಮೀನಿಗೆ ಅನೇಕರು ಭೇಟಿ ನೀಡಿ ಸಾಧನೆ ನೋಡಿ ’ಭೇಷ್’ ಎಂದು ಬೆನ್ನುತಟ್ಟಿದ್ದಾರೆ ಎಂದು ಸಂತಸದಿಂದ ನುಡಿಯುತ್ತಾರೆ.
 ಸಾಲ ಮಾಡಿಕೊಂಡಾಕ್ಷಣ ಹೆದರಬಾರದು. ಒಂದೇ ಬೆಳೆಗೆ ಜೋತುಬೀಳಬಾರದು. ಭೂಮಿಯ ಜೊತೆ ಚೆನ್ನಾಗಿ ತೊಡಗಿಸಿಕೊಂಡರೆ ಸಾಧನೆ ಮಾಡಿ ಸಾಲ ತೀರಿಸಲು ಸಾಧ್ಯ. ರೈತರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಸಾಗುವಳಿ ಮಾಡಬೇಕು ಎನ್ನುತ್ತಾರೆ ಧರ್ಮಪ್ಪ.
"ಭೂಮಿತಾಯಿ ಎಂದೂ ಬಂಜೆಯಲ್ಲ; ಬರಡಲ್ಲ. ನನ್ನ  ಹಾಗೆಯೇ ನೀವೂ ಹಸುರಿನ ಬೀಜಬಿತ್ತಿ; ಕಷ್ಟಪಟ್ಟು, ಇಷ್ಟಪಟ್ಟು ದುಡಿಯಿರಿ. ಪ್ರಕೃತಿಮಾತೆ ನಿಮ್ಮನ್ನು ತಕ್ಕೈಸಿಕೊಂಡು ಬೆಳೆಸುತ್ತಾಳೆ" ಎನ್ನುವುದು ರೈತಸಮುದಾಯಕ್ಕೆ ಧರ್ಮಪ್ಪನವರ ಕಿವಿಮಾತು.
Published on sep- 26, 2015
...........................................

ಕಷ್ಟಕ್ಕೆ ಅಂಜದ ಛಲಗಾರ್ತಿ 
ಶಾರದಾ ಭಟ್


ಜೀವನದಲ್ಲಿ ಕಷ್ಟಗಳು ಬಂದಾಗ ಅದಕ್ಕೆ ಎದೆಗುಂದದೆ ಧೈರ್ಯದಿಂದ ಏನನ್ನಾದರೂ ಸಾಧನೆ ಮಾಡಿ ಆ ಮೂಲಕ ಬಡತನಕ್ಕೆ ಸವಾಲೊಡ್ಡಿ ನಿಲ್ಲುವವರು ವಿರಳ. ಬಡತನ ಬಂತೆಂದರೆ ಅದಕ್ಕೆ ಹೆದರುವವರೇ ಅಧಿಕ. ಅದರ ವಿರುದ್ದ ಸೆಟೆದು ನಿಲ್ಲುವವರು ತೀರಾ ವಿರಳ. ಆದರೆ ಇಲ್ಲೊಬ್ಬ ಧೀರ ಮಹಿಳೆ  ಚಹಾ ಮಾರುವ ಮೂಲಕ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸವನ್ನೂ ಮಾಡಿಸುತ್ತ ಗೌರವಯುತ ಮತ್ತು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.  
ಇಲ್ಲಿನ ವಿನೋಬನಗರದ ಭಗವತಿ ಶಾಲೆಯ ಬಳಿ ವಾಸವಾಗಿರುವ ಶಾರದಾ ಭಟ್ ಎನ್ನುವವರೇ  ಸ್ವಂತ ದುಡಿಮೆ ಮೂಲಕ ಬದುಕನ್ನು ಕಟ್ಟಿಕೊಂಡವರು. ತೀರಾ ಬಡತನದ ಇವರ ಕುಟುಂಬದ ಜೀವನಾಧಾರಕ್ಕೆ ಏನೂ ಇಲ್ಲದ ಸ್ಥಿತಿಯಲ್ಲಿ ಇವರು ಕಂಡುಕೊಂಡ ದಾರಿ ಇದು. ಇಂದು ಇವರು ದಿನಕ್ಕೆ 7ರಿಂದ  10 ಲೀಟರ್‌ನಷ್ಟು ಹಾಲಿನಿಂದ ಚಹಾ ಮಾಡಿ ಶಿವಮೊಗ್ಗದ ಬಹುತೇಕ ಸರ್ಕಾರಿ ಮತ್ತು ಕೆಲವು ಖಾಸಗಿ ಕಚೇರಿಗಳಿಗೆ ವೇಳೆಗನುಗುಣವಾಗಿ  ಚಹಾ ಪೂರೈಸುತ್ತಿದ್ದಾರೆ. ಈ ಹಿಂದೆ  ಗಾಂಧಿಬಜಾರ್ ಮತ್ತು ಕೆಲವು ಕಾರ್ಖಾನೆಗಳಿಗೆ ಮಜ್ಜಿಗೆ ಪೂರೈಸುತ್ತಿದ್ದ ಇವರು, ಚಹಾಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಅರಿತು ಅದರ ತಯಾರಿಕೆ ಮೂಲಕ ಈಗ ಬದುಕು ಸಾಗಿಸುತ್ತಿದ್ದಾರೆ.
ಚಹಾ ತಯಾರಿಸಿ, ಮಾರಾಟ ಮಾಡಿ ಗ್ರಾಹಕರಿಂದ ಹಣ ಪಡೆಯುವುದು ಸುಲಭದ ಕೆಲಸವಲ್ಲ. ಇದನ್ನು ಕಂಡ ಕೆಲವು ಮಹಿಳೆಯರು ಇವರನ್ನು ವ್ಯಂಗ್ಯ ಮಾಡಿದ್ದ್ದೂ ಇದೆ. ಆದರೆ ಅವರ ದಿಟ್ಟ ನಿರ್ಧಾರ ಇದು. ನನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೋ ಅದಕ್ಕೆ ಮಾರ್ಗವನ್ನು ನಾನು ರೂಪಿಸಿಕೊಳ್ಳುತ್ತಿದ್ದೇನೆ. ನಾನು ಚಹ ಮಾರಿದರೆ ನಿಮಗೇನು ನಷ್ಟ, ಅಥವಾ ಅವಮಾನವೇ. ನನ್ನ ಜೀವನ ನಿರ್ವಹಣೆಗೆ ಇದು ದಾರಿ ಮಾಡಿಕೊಟ್ಟಿದೆ ಎಂದು ಹೇಳುವ ಮೂಲಕ  ಅವರ ಬಾಯ್ಮುಚ್ಚಿಸುತ್ತಾರೆ. ಹೀಗೆ ಎಲ್ಲ ರೀತಿಯ  ಕಷ್ಟಗಳನ್ನುಂಡ ಅವರು ಈಗ ‘ಈಸಬೇಕು ಇದ್ದು ಜೈಸಬೇಕು. ಕಷ್ಟಕ್ಕೆ ಹೆದರಿ ಓಡಿಹೋಗಬಾರದು. ಸತ್ತರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಜೀವನ ಮುಗಿಯದು. ಇದ್ದು ಸಾಧಿಸಿ ತೋರಿಸಬೇಕೆನ್ನುವ ಛಲ ತೊಡಬೇಕು’ ಎನ್ನುತ್ತಾರೆ. ಅದೇ ರೀತಿ ತಮ್ಮ ಕಾಯಕ ಮುಂದುವರೆಸಿದ್ದಾರೆ.
ಇಬ್ಬರು ಮಕ್ಕಳಲ್ಲಿ ಹಿರಿಯವನಾದ ಮಗ 8ನೆಯ ತರಗತಿಯಲ್ಲಿ, ಮಗಳು 6ನೆಯ ತರಗತಿಯಲ್ಲಿ   ಓದುತ್ತಿದ್ದಾಳೆ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂಬ ಹಂಬಲ ಇವರದ್ದು. ಇದಕ್ಕಾಗಿ ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಇವರ ಪತಿ ರಾಘವೇಂದ್ರ ಭಟ್ ಶುಭಮಂಗಳ ಕಲ್ಯಾಣಮಂಟಪದ ಶನೈಶ್ಚರ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಬೆಳಗಿನ ಉಪಹಾರವನ್ನು ಒದಗಿರುವ ಮೊಬೈಲ್ ವಾಹನವನ್ನು ಖರೀದಿಸಿ ಅವಶ್ಯವಿರುವವರಿಗೆ ಪೂರೈಸುವ ಗುರಿಯನ್ನು ಶಾರದಾ ಭಟ್ ಹೊಂದಿದ್ದಾರೆ. ಮಳೆ, ಗಾಳಿ, ಚಲಿ ಎನ್ನದೆ ತಮ್ಮ ಸ್ಕೂಟಿಯಲ್ಲಿ ಬೆಳಿಗ್ಗೆಯೇ ಚಹಾ ಮಾಡಿಕೊಂಡು ಫ್ಲಾಸ್ಕ್‌ನಲ್ಲಿ ತೆಗೆದುಕೊಂಡು ಕಚೇರಿಗಳಿಗೆ ಧಾವಿಸುತ್ತಾರೆ. ಈಗ ಅವರಿಗೆ ಚಹಾ ಕುಡಿಯುುವ ಖಾಯಂ ಗ್ರಾಹಕರಿದ್ದಾರೆ. ಹಾಗಾಗಿ ಸ್ವಲ್ಪ ನಿರಾಳರಾಗಿದ್ದಾರೆ. ಜೊತೆಗೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಬೇಡಿಕೆ ಬಂದರೂ ಸಹ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಬಡತನ ಎನ್ನುುತ್ತಾ ಕಂಡವರಲ್ಲಿ ಬೇಡುವ ಪ್ರವೃತ್ತಿಯನ್ನು ಇವರು ಬೆಳೆಸಿಕೊಂಡಿಲ್ಲ. ಗೌರವಯುತವಾಗಿ ಚಹಾ ಪೂರೈಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.  ಇದರಿಂದಾಗಿ ತೃಪ್ತಿ ಇದೆ. ಆದ್ದರಿಂದ, ಟೀಕೆ ವ್ಯಂಗ್ಯ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಾನಾಯಿತು, ತನ್ನ  ದುಡಿಮೆಯಾಯಿತು. ಮಗನನ್ನು ವೇದಾಗಮ ಪಂಡಿತನನ್ನಾಗಿ ಮಾಡುವ ಇಚ್ಛೆ ಇವರದ್ದು. ಅದಕ್ಕಾಗಿ ಶೃಂಗೇರಿಯಯಲ್ಲಿ  ಈತನಿಗೆ ಮುಂದೆನ  ಶಿಕ್ಷಣ ಕೊಡಿಸಲು ತೀರ್ಮಾನಿಸಿದ್ದಾರೆ. ಮಗಳಿಗೆ ಐಎಎಸ್ ಮಾಡಿಸುವ ಬಯಕೆ ಹೊಂದಿದ್ದಾರೆ. ತನಗಂತೂ ಓದುವ ಭಾಗ್ಯ ಸಿಗಲಿಲ್ಲ್ಲ. ಬುದ್ದಿವಂತೆಯಾಗಿರುವ ಮತ್ತು ಭರತನಾಟ್ಯ ಕಲಿಯುತ್ತಿರುವ ಮಗಳಾದರೂ ಅವಳ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲಿ. ಅದಕ್ಕೆ ಎಲ್ಲಾ ರೀತಿಯ ಸಹಾಯ ಮಾಡುತ್ತೇನೆ ಎನ್ನುತ್ತಾರೆ ಶಾರದಾ ಭಟ್.
published on sep19, 2015
..............................................

Friday 11 November 2016




ಭಾರದ್ವಾಜ್ ಮಲೆನಾಡಿನ ಅಪ್ಪಟ ಪ್ರತಿಭೆ 
ಸಹನಾ ಭಾರದ್ವಾಜ್ 


 ನೃತ್ಯ, ಸಾಹಿತ್ಯ, ಸಂಗಿತ, ಶೈಕ್ಷಣಿಕ ಮುಂತಾದ ಹಲವಾರು ಪ್ರಾಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಶ್ರದ್ಧೆ , ಆಸಕ್ತಿಯಿಂದ ಅಭ್ಯಾಸ ಮಾಡುತ್ತಿರುವ ಕುಮಾರಿ ಸಹನಾ ಎಸ್. ಭಾರದ್ವಾಜ್ ಮಲೆನಾಡಿನ ಅಪ್ಪಟ ಪ್ರತಿಭೆ.
ಇತ್ತೀಚೆಗೆ  ಭುವನೇಶ್ವರದಲ್ಲಿ ನಡೆದ ಬಿಎಸ್‌ಎನ್‌ಎಲ್ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂರನೆಯ ಸ್ಥಾನವನ್ನು ಗಳಿಸುವ ಮೂಲಕ ಶಿವಮೊಗ್ಗಕ್ಕೆ ಕೀರ್ತಿ ತಂದಿರುವ ಈಕೆ, ಏಳನೆಯ ವಯಸ್ಸಿನಲ್ಲಿ ಶಿವಮೊಗ್ಗದ ವಿದುಷಿ ಪುಷ್ಪಾ ಕೃಷ್ಣಮೂರ್ತಿ ಅವರಲ್ಲಿ  ಶಾಸ್ತ್ರೀಯ ಭರತನಾಟ್ಯ ಕಲಿಕೆ ಆರಂಭಿಸಿ, ಜ್ಯೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ. ಈಗ ವಿದ್ವತ್ ಮಾಡುತ್ತಿದ್ದು, ರಂಗಪ್ರವೇಶವನ್ನೂ 2013ರಲ್ಲೇ ಮಾಡಿದ್ದಾಳೆ. ಈಕೆಯದು ಬಹುಮುಖ ಪ್ರತಿಭೆ. ತನ್ನ ತಾಯಿ ರಮಾ ಸುಬ್ರಹ್ಮಣ್ಯ ಅವರ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಆರಂಭಿಸಿ,  ಜ್ಯೂನಿಯರ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ. ಶಿವಮೊಗ್ಗದ ಹಿಂದುಸ್ತಾನಿ ಸಂಗೀತದ ಹಿರಿಯ ಗುರು ಉಸ್ತಾದ್ ಹುಮಾಯೂನ್ ಹರ್ಲಾಪುರ ಅವರಲ್ಲಿ ಹಿಂದೂಸ್ತಾನಿ ಸಂಗೀತ ಕಲಿಕೆ ಆರಂಭಿಸಿ ಅಲ್ಲಿಯೂ ಜ್ಯೂನಿಯರ್, ಸೀನಿಯರ್ ಪಾಸು ಮಾಡಿದ್ದಾಳೆ. ನಗರದವರೇ ಆದ ಶುಭಾ ಅವರಲ್ಲಿ ವೀಣೆಯನ್ನೂ ಕಲಿಯುತ್ತಿದ್ದಾಳೆ. ರಂಗೋಲಿ, ಚಿತ್ರಕಲೆ ಮತ್ತು ಆ್ಯಂಕರಿಂಗ್‌ನಲ್ಲೂ ಅತೀವ ಆಸಕ್ತಿ. ಈಗಾಗಲೇ ತನ್ನ ಸಹೋದರಿ ಮಾನಸಾ ಅವರೊಂದಿಗೆ ಸೇರಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ರಾಜ್ಯದ ಹಲವೆಡೆ ನೀಡಿದ್ದಾಳೆ.
ಈ ಟಿವಿಯಲ್ಲಿ ಜನಪ್ರಿಯವಾದ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಸೆಮಿಫೈನಲ್‌ವರೆಗೆ ಭಾಗವಹಿಸಿದ್ದಳು. ಇದರ ನಿರೂಪಕ, ಹಾಡುಗಾರ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಪ್ರಶಂಸೆಗೊಳಗಾಗಿದ್ದಾರೆ.  ಚಂದನ ಚಾನೆಲ್‌ನ ‘ಮಧುರ ಮಧುರವೀ ಮಂಜುಳಗಾನ’ ಹಾಗೂ ‘ಚಂದನೋತ್ಸವ’ದಲ್ಲಿ, ಜಿ ಕನ್ನಡದ ‘ಸರಿಗಮಪ’ ಕಾರ್ಯಕ್ರಮದಲ್ಲೂ ಹಾಡಿದ್ದಾಳೆ. ಸುವರ್ಣಾ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ  ‘ಸಿಂಧೂರ’ ಧಾರಾವಾಹಿಯ ಶೀರ್ಷಿಕೆ ಗೀತೆಯ ಟ್ರ್ಯಾಕ್ ಹಾಡಿದ್ದಾಳೆ. ಓದಿನಲ್ಲೂ ಪ್ರತಿಭಾನ್ವಿತೆಯಾದ ಈಕೆ, ಕಮಲಾ ನೆಹರೂ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾಳೆ. ಈ ಕಲಿಕೆಯ ವೇಳೆಯಲ್ಲೂ ಕಾಲೇಜು ಹಂತದ ಬಹುತೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾಳೆ. ಸದ್ಯ ಎಂಕಾಂ ಅಧ್ಯಯನ ಮಾಡುತ್ತಿರುವ ಈಕೆಯ ಪ್ರತಿಭೆಯನ್ನು ಪಸರಿಸಲು ತಂದೆ, ಬಿಎಸ್ಸೆನ್ನೆಲ್ ಉದ್ಯೋಗಿ ಕೆ.ಎಸ್. ಸುಬ್ರಹ್ಮಣ್ಯ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪಾರು ವೈಫ್ ಆಫ್ ದೇವದಾಸ್ ಕನ್ನಡ ಚಲನಚಿತ್ರದ ಶೀರ್ಷಿಕೆ ಗೀತೆಯಲ್ಲಿ ಈಕೆಯ ಕಂಠವಿದೆ. ವಾಯ್ಸ್ ಆಫ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಭದ್ರಾವತಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿ 2010ರಲ್ಲಿ ಆಯ್ಕೆಯಾಗಿದ್ದಾಳೆ. ವಾಯ್ಸ್ ಆಫ್ ಶಿವಮೊಗ್ಗ ಮತ್ತು ವಾಯ್ಸ್ ಆಫ್ ಮಲ್ನಾಡ್ ಎಂಬ ಬಿರುದನ್ನೂ ಈಕೆ ಪಡೆದಿದ್ದಾಳೆ. ಚನ್ನಗಿರಿ, ಭದ್ರಾವತಿ, ಧರ್ಮಸ್ಥಳದ ರಾಮಕ್ಷೇತ್ರದಲ್ಲಿ, ಶಿವಮೊಗ್ಗದ ಕೊಡಚಾದ್ರಿ ಉತ್ಸವದಲ್ಲಿ, ಬೆಂಗಳೂರಿನಲ್ಲಿ ಜಿ. ವಿ. ಅತ್ರಿ ಅವರ ಸಂಗೀತ ಗಂಗಾ ಶಾಲೆಯಲ್ಲಿ ನಡೆದ ಋತುಗಾನ ಕಾರ್ಯಕ್ರಮದಲ್ಲಿ ಮಿಂಚಿದ್ದಾಳೆ.
ಶಿವಮೊಗ್ಗ ಮತ್ತು ಜಿಲ್ಲೆಯಲ್ಲಿ ಸಹನಾ ಅವರ ಹೆಸರು ಕೇಳದವರು ವಿರಳ. ಬಹುತೇಕ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಈಕೆಯ ಭಾಗವಹಿಸುವಿಕೆ ಇದ್ದೇ ಇರುತ್ತದೆ. ಪದವಿ ಹಂತದಲ್ಲಿ ಓದುವಾಗಲೇ ಸಾಕಷ್ಟು ಪ್ರಶಸ್ತಿಯನ್ನು ಜಿಲ್ಲಾ, ರಾಜ್ಯಮಟ್ಟದಲ್ಲಿ ಗಳಿಸಿರುವ ಈಕೆ ತಾನು ಕಲಿತ ಕಮಲಾ ನೆಹರು ಕಾಲೇಜಿಗೂ ಹೆಸರು ಗಳಿಸಿಕೊಟ್ಟಿದ್ದಾಳೆ. ಜಿಲ್ಲಾ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾಳೆ. ಈಕೆಕೆಯ ಮುಂದಿನ ಗುರು ತಾನು ಅಭ್ಯಸ ಮಾಡುತ್ತಿರುವ ಎಲ್ಲಾ ಸಂಗೀತ ಪ್ರಕಾರದಲ್ಲೂ ಯಶಸ್ಸು ಸಾಧಿಸುವುದಾಗಿದೆ. ಅಸಾಧ್ಯವಾದ ಸಾಧನೆ ಯಾವುದೂ ಇಲ್ಲ. ಆದರೆ ಸಾದಿಸುವ ಛಲ ಬೇಕು ಎನ್ನುತ್ತಾಳೆ ಸಹನಾ.  
ಈಗಾಗಲೇ ರಾಷ್ಟ್ರಮಟ್ಟದಲ್ಲೂ ಮಿಂಚುತ್ತಿರುವ ಸಹನಾ ಇನ್ನಷ್ಟು ಬೆಳೆಯಲಿ, ಅವಳ ಪ್ರತಿಭೆಗೆ ಎಲ್ಲೆಡೆ ಪ್ರೋತ್ಸಾಹ ಸಿಗಲಿ.
ಪ್ರkaಟಿತ ದಿನಾಂಕ- 12.9.2015

...........................................

  
ಬಹುಮುಖೀ ಪ್ರತಿಭೆಯ ಶಿಕ್ಷಕನಿಗೆ 
ರಾಷ್ಟ್ರಪ್ರಶಸ್ತಿಯ ಗೌರವ

ನಾವು ಮಾಡುವ ಕೆಲಸದಲ್ಲಿ ಖುಷಿಯನ್ನು ಕಂಡುಕೊಳ್ಳಬೇಕು, ಇಲ್ಲವಾದಲ್ಲಿ ಕಾರ್ಯಕ್ಷೇತ್ರದಲ್ಲಿ ಸಾಧನೆ ಕಷ್ಟ ಎನ್ನುವ ಮಾತಿದೆ. ಈ ಮಾತಿಗೆ ಬದ್ಧರಾಗಿ ಕೆಲಸ ಮಾಡಿ, ಸಾಧನೆ ಮಾಡಿದ ಶಿಕ್ಷಕ ಬಿ. ಗಣೇಶಪ್ಪ  ಈ ಬಾರಿಯ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಾಲೂಕಿನ ಬೇಡರಹೊಸಳ್ಳಿಯವರಾದ ಗಣೇಶಪ್ಪ, ಹಾಲಿ ನಗರಕ್ಕೆ ಹೊಂದಿಕೊಂಡಿರುವ ಹರಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ, ಪಾಲಕರ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಪ್ರೀತಿಪಾತ್ರ ಶಿಕ್ಷಕರಾಗಿರುವ ಇವರು,  ಕೆಲಸ ಮಾಡಿದ ಸ್ಥಳಗಳಲ್ಲೆಲ್ಲಾ ಇನ್ನೂ ಜನಮಾನಸರಾಗಿದ್ದಾರೆ. ಇವರ ಈ ಸಾಧನೆಯಿಂದಲೇ ಅವರಿಗೆ ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿಯೂ ಪ್ರದಾನವಾಗಿದೆ.
ತರಿಕೆರೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ. ಎ. ಪದವಿ ಪಡೆದ ಗಣೇಶಪ್ಪ, ನಂತರ ಟಿಸಿಎಚ್ ಮಾಡಿದವರು. ತಂದೆ ಭೀಮಪ್ಪ, ತಾಯಿ ಅನಸೂಯಮ್ಮ ಅವರು ತಮ್ಮ ಮಗ ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕನಾಗಬೇಕು. ಸಮಾಜದಲ್ಲಿ ಉತ್ತಮ ಶಿಕ್ಷಕನಾಗಿ ಹೆಸರು ಗಳಿಸಬೇಕೆಂಬ ಕನಸುಕಂಡಿದ್ದರು. ಆ ಕನಸನ್ನು ಗಣೇಶಪ್ಪ ಈಗ ನನಸಾಗಿಸಿದ್ದಾರೆ. ಇವರ ಪತ್ನಿ ಜಯಶ್ರೀ ಸಹ ತಾಲೂಕಿನ ಕುಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಈ ಶಿಕ್ಷಕ ದಂಪತಿಗಳ ಏಕಮಾತ್ರ ಪುತ್ರ ನಿತಿನ್ ಎಂಬಿಎ ಓದುತ್ತಿದ್ದಾನೆ.
ಕೇವಲ ಶಿಕ್ಷಕರಾಗಿ ಉಳಿಯದೆ, ಕ್ರೀಡೆ, ಸಾಹಿತ್ಯ ಮತ್ತು ನಾಟಕ ಕ್ಷೇತ್ರದಲ್ಲೂ ಇವರು ಸಾಕಷ್ಟು ಕೈಯಾಡಿಸಿದ್ದಾರೆ. ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಕಾರಂಜಿಯಲ್ಲಿ ಏನಾದರೊಂದು ಹೊಸತನದ ಕಲೆಯನ್ನು ಕಲಿಸಿ ಅವರು ವಿಜೇತರಾಗುವಂತೆ ಮಾಡುತ್ತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಎಲ್ಲ ಮಕ್ಕಳಿಗೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತಿದ್ದಾರೆ. ಮಕ್ಕಳನ್ನು ಕೇವಲ ವಿದ್ಯಾರ್ಥಿಗಳನ್ನಾಗಿ ಕಾಣದೆ, ಅವರವರ ಪ್ರತಿಭೆಯನ್ನು ಗುರುತಿಸಿ  ಅವರ ಬೆಳವಣಿಗೆಗೆ ಸಹಕರಿಸುತ್ತಿರುವ ಗಣೇಶಪ್ಪ,  ಸದಾ ಹೊಸತನಕ್ಕಾಗಿ ಕಾತರಿಸುವವರಾಗಿದ್ದಾರೆ. ಅವರು ಪಾಠ ಮಾಡುವುದೂ ಸಹ  ಇದೇ ರೀತಿಯದ್ದಾಗಿದೆ. ಕೇವಲ ಪಠ್ಯದಲ್ಲಿರುವನ್ನು ಕಲಿಸದೆ, ಅದಕ್ಕೆ ಸಂಬಂಧಿಸಿ ಹಿನ್ನೆಲೆಯನ್ನು ವಿವರಿಸಿ ಮಕ್ಕಳಲ್ಲಿ ಇನ್ನಷ್ಟು ಅರಿವು ಮೂಡಿಸುತ್ತ, ಹೆಚ್ಚಿನ ಜ್ಞಾನಾರ್ಜನೆಗೆ ಬೀಜಬಿತ್ತುತ್ತಿದ್ದಾರೆ.
ಶಿಕ್ಷಕರಾಗಿ ಸುದೀರ್ಘ 34 ವರ್ಷಗಳಿಂದ ಸೇವೆ ಸಲ್ಲಿಯಲ್ಲಿರುವ ಇವರು, ಸಾಗರ ತಾಲೂಕಿನ ತುಮರಿ, ಕುದರೂರು, ತಾಳಗುಪ್ಪ, ಹುಣಸೂರು, ಚನ್ನಗಿರಿ ತಾಲೂಕಿನ ಭೈರನಹಳ್ಳಿ, ಶಿವಮೊಗ್ಗ ತಾಲೂಕಿನ ಚೋರಡಿ, ಹುಬ್ಬನಹಳ್ಳಿ, ಆಯನೂರು, ಮತ್ತೂರಿನಲ್ಲಿ ಈವರೆಗೆ ಕೆಲಸ ಮಾಡಿದ್ದಾರೆ. ತಾವು ಕೆಲಸ ಮಾಡಿದಲ್ಲೆಲ್ಲ ಶಾಲೆಗೆ ಉತ್ತಮ ಹೆಸರು ಬರುವಂತೆ ಮತ್ತು ಶಾಲೆಯು ಸುಂದರವಾಗಿರುವಂತೆ, ಉತ್ತಮ ಪರಿಸರದಿಂದ ಕೂಡಿರುವಂತೆ ಮಾಡಿದ್ದಾರೆ. ಸರ್ವಶಿಕ್ಷಣ ಅಭಿಯಾನದಡಿ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಕಷ್ಟು ಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಆಟದ ಮೈದಾನ, ಹೂದೋಟ, ಶೌಚಾಲಯ ಮೊದಲಾದವನ್ನು ನಿರ್ಮಿಸಿಕೊಟ್ಟಿದ್ದಾರೆ. ಇವೆಲ್ಲವುಗಳ ಜೊತೆಗೆ ಶಾಲೆಯ ವಾತಾವರಣವನ್ನು ಸೃಷ್ಟಿಸಿರುವುದು ವಿಶೇಷ . ಇಂತಹ ಶಿಕ್ಷಕರಿರುವುದರಿಂದಲೇ ನಮ್ಮೂರ ಶಾಲೆ ಚೆಂದದ ಶಾಲೆ ಎಂದು ಹೆಸರಾಗಿದೆ.
 2003-04 ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ರಾಜ್ಯ ಪ್ರಶಸ್ತಿ, 2012-13ರಲ್ಲಿ ಅಂತಾರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಇವರಿಗೆ ದಕ್ಕಿದೆ. ಭಾರತ ಸೇವಾದಳಲ್ಲಿಯೂ ಇವರು ತಾಲೂಕು ಕಾರ್ಯದರ್ಶಿಯಾಗಿ ಎರಡು ಅವಧಿ ಕೆಲಸ ಮಾಡಿದ್ದಾರೆ. ಮತ್ತ್ತೂರು, ಹುಬ್ಬನಹಳ್ಳಿಯಲ್ಲಿರುವಾಗ ಆ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ ಬರಲು ಕಾರಣಕರ್ತರಾಗಿದ್ದಾರೆ. ಶಿವಮೊಗ್ಗ ದಸರಾ 2014-15ರಲ್ಲಿ, ಮತ್ತು ತಾಲೂಕು ಕಸಾಪ ಸಮ್ಮೇಳನದಲ್ಲಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ.  
ಶಿಕ್ಷಕನೆಂದರೆ ಬಲ್ಬ್ ಇದ್ದಂತೆ, ಆತ ಸಾಕಷ್ಟು ಬೆಳಕನ್ನು ಬೀರುತ್ತಾನೆ. ತನ್ನೆಲ್ಲಾ ಶ್ರಮವನ್ನು ಹಾಕಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾನೆ. ತನ್ನಿಂದ ಕಲಿತವರು ಉತ್ತಮ ಸಾಧನೆ ಮಾಡಿ ಹೆಸರಾಗಲಿ ಎಂದು ಹಾರೈಸುತ್ತಾನೆ. ಇದೇ ಮಾತನ್ನು ಗಣೇಶಪ್ಪ ಸಹ ಹೇಳುತ್ತಾರೆ. ಇಂದಿನ ಮಕ್ಕಳು ಬುದ್ಧಿವಂತರಿದ್ದಾರೆ. ಅವರಲ್ಲಿ ಪ್ರತಿಭೆ ಇದೆ. ಅದನ್ನು ಸದುಪಯೋಗ ಮಾಡಿಕೊಂಡು ಅವರು ಬೆಳೆಯಬೇಕು. ಶಾಲಾ ಹಂತದಲ್ಲೇ ಇದನ್ನು ಬೆಳೆಸಿಕೊಂಡು, ಉತ್ತಮ ಹವ್ಯಾಸಗಳನ್ನು ರೂಪಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಆತ ರೂಪುಗೊಳ್ಳುತ್ತನೆ ಎನ್ನುವುದು ಅವರ ಅಭಿಮತ.
ಪ್ರಕಟಿತ ದಿನಾಂಕ- 5.9.2015
           ,,,,,,,,,,,,,,,,,,,,,,,,,,,,,,,,,,,,,,,,,,,,


ವಸ್ತ್ರವಿನ್ಯಾಸದ ಅಪೂರ್ವ ಪ್ರತಿಭೆ
MEETA JAGADEESH


’ಮೀತಾಕ್ಷರ’ (ಈಗ ಇವರ ಹೆಸರು ಮೀತಾ ಜಗದೀಶ್) ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲ ಹುಬ್ಬಳ್ಳಿಯಲ್ಲಿ. ಆಟದಲ್ಲಿ, ಪಾಠದಲ್ಲಿ, ಅಷ್ಟೇ ಏಕೆ-ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಸದಾ ಎಲ್ಲರಿಗಿಂತ ಮುಂದಿದ್ದ ಈ ಹುಡುಗಿಯ ಅರಳುಗಣ್ಣುಗಳ ತುಂಬ ಕನಸುಗಳೋ ಕನಸುಗಳು. ನಾನು ಅವರಂತಾಗಬಾರದು; ನಾನು ಇವರಂತಾಗಬಾರದು. ಎಲ್ಲರಿಗಿಂತ ವಿಶಿಷ್ಟವಾಗಿ, ವಿಭಿನ್ನವಾಗಿ ಈ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಈ ಹುಡುಗಿಯ ತುಡಿತ-ಮಿಡಿತಗಳು!
ಆದರೇನು ಮಾಡುವುದು? ಕಂಡ ಕನಸುಗಳೆಲ್ಲ ಈಡೇರುವುದು ಜೀವನವಲ್ಲವಲ್ಲ? ಇವರ ಹೆತ್ತವರಿಗೆ ವ್ಯಾಪಾರದಲ್ಲಿ ಅಪಾರವಾದ ನಷ್ಟವುಂಟಾಯಿತು. ತಮ್ಮ ಮೂರು ಮಕ್ಕಳನ್ನು ಸಾಕುವುದೇ ದುಸ್ತರವೆನಿಸಿರುವಾಗ ಓದಿಸುವ ಮಾತೆಲ್ಲಿಂದ ಬರಬೇಕು? ಸ್ವಲ್ಪಮಟ್ಟಿಗೆ ಹೊಲಿಗೆ ಗೊತ್ತಿದ್ದ ತಾಯಿ, ಹೊಲಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡರು; ’ಇಂದೂಸ್ ಕಾರ್ನರ್’  ಎಂಬ ಹೆಸರಿನಲ್ಲಿ ಪ್ರಪ್ರಥಮ ಬ್ಯೂಟಿಪಾರ್ಲರ್ ತೆರೆದರು. ಫ್ಯಾಕ್ಟರಿಯೊಂದರ 650 ನೌಕರರಿಗೆ  ಊಟದ ವ್ಯವಸ್ಥೆಯ ಕಾಯಕಕ್ಕೆ ಕೈಹಾಕಿದರು. ಕೆಲಸಗಾರರನ್ನಿಟ್ಟುಕೊಳ್ಳುವ ಬದಲು, ಮಕ್ಕಳನ್ನೇ ಕೆಲಸಕ್ಕೆ ತೊಡಗಿಸಿಕೊಂಡು, ಮಕ್ಕಳ ದುಡಿಮೆಯ ಹಣದಲ್ಲೇ ಅವರನ್ನು ಓದಿಸಿದರು.
ದಿನನಿತ್ಯ ಕಾಲ್ನಡಿಗೆಯಲ್ಲಿಯೇ ಸುಮಾರು 5 ಕಿ.ಮೀ ದೂರ ಶಾಲೆಗೆ ಹೋಗಿಬರುವುದು, ಮನೆಗೆ ಬಂದ ಬಳಿಕ ಅಮ್ಮನೊಂದಿಗೆ ಹೊಲಿಗೆ ಕೆಲಸ, ಕ್ಯಾಟರಿಂಗ್ ಕೆಲಸದಲ್ಲಿ  ತೊಡಗಿಸಿಕೊಂಡ ಮೀತಾಕ್ಷರ ಕಲಿಕೆಯಲ್ಲಿ ಸಹಜವಾಗಿಯೇ ಹಿಂದೆ ಬಿದ್ದಳು. ಆಟ-ಪಾಠದಲ್ಲಿ ಎಲ್ಲರಿಗಿಂತ ಮುಂದಿದ್ದ ಹುಡುಗಿ ’ಪಾಸಾದರೆ ಸಾಕಪ’್ಪ ಎನ್ನುವಲ್ಲಿಗೆ ಬಂದು ನಿಂತಳು. ಅಂತೂ ದ್ವಿತೀಯ ಪಿಯುಸಿ ಪಾಸಾಯಿತು.  ಮುಂದೆ ಕಾಲೇಜಿಗೆ ಹೋಗಬೇಕೆನ್ನುವ ಕನಸಿದ್ದರೂ, ಓದಿಗಿಂತ ಬದುಕು ದೊಡ್ಡದು ಎನ್ನುವುದನ್ನು ಅರ್ಥೈಸಿಕೊಂಡು ಅಮ್ಮನ ಜತೆಸೇರಿ ಖ್ಯಾತ ಬ್ಯೂಟಿಷಿಯನ್ ಸಹ ಆದರು.
ತಿಪಟೂರಿನ ಜಗದೀಶ್ ಎನ್ನುವ ಉದ್ಯಮಿಯ ಕೈಹಿಡಿದು ‘ಮೀತಾ ಜಗದೀಶ್’ ಆದರು; ಶಿವಮೊಗ್ಗದಲ್ಲಿ ನೆಲೆನಿಂತರು. ಅವರ ಬುದಕು ಸುಖಮಯ ಅನ್ನಿಸಿದ್ದು ಪ್ರ್ರಾಯಶಃ ಮದುವೆಯ ಬಳಿಕವೇ.
‘‘ನಮಗೇನು ಬೇಕೋ ಅದನ್ನು ನಮ್ಮ ದುಡಿಮೆಯಿಂದಲೇ, ನಮ್ಮ ಅರ್ಹತೆಯಿಂದಲೇ ದಕ್ಕಿಸಿಕೊಳ್ಳಬೇಕು’’ ಎನ್ನುತ್ತಿದ್ದ ಅವರ ತಾಯಿಯ ಮಾತು ಮೀತಾಕ್ಷರ ಅವರಿಗೆ ದಿವ್ಯಮಂತ್ರವಾಯಿತು. ಅದನ್ನೇ ತನ್ನ ಮಕ್ಕಳಾದ ಅಭಿರಾಮ್, ವಷಿರ್ರ್ಣಿಗೂ ಅರೆದು ಕುಡಿಸಿದ ಹಿರಿಮೆ ಇವರದ್ದು.
ಶಿವಮೊಗ್ಗ ನಗರದ ಜನತೆ ‘ಮೀತಾಕ್ಷರಾಸ್  ಸಿಗ್ನೇಚರ್-ಅನೋಖೀ ಎಕ್ಸಿಬಿಷನ್’ ಎನ್ನುವುದನ್ನು ದಿನಪತ್ರಿಕೆಗಳ ಜಾಹೀರಾತುಗಳಲ್ಲಿ ಗಮನಿಸಿರಬಹುದು; ಅಥವಾ ನಗರದ ಖ್ಯಾತ ಹೊಟೇಲುಗಳಲ್ಲಿ ಪ್ರದರ್ಶನ ಮೇಳಗಳನ್ನು ಕಂಡಿರಬಹುದು. ಅಲ್ಲಿ ದೊರೆಯುವ ಅದ್ಭುತವಾದ, ವೈಶಿಷ್ಟ್ಯಪೂರ್ಣವಾದ,  ಸುಂದರವಾದ, ಕಲಾತ್ಮಕವಾದ ಬಟ್ಟೆಗಳ ವಿನ್ಯಾಸಕ್ಕೆ ಮಾರುಹೋಗಿರಲೂಬಹುದು. ಅದ್ಭುತ, ಸುಂದರ, ವೈಶಿಷ್ಟ್ಯ ಎನ್ನುವ ಅರ್ಥ ನೀಡುವ ’ಅನೋಖೀ’ ಎನ್ನುವ ಹೆಸರು ಇವರ ಸೃಜನಶೀಲ ಕಲೆಗೆೆ ಅರ್ಥಪೂರ್ಣವೇ ಸರಿ.
ರುಚಿಕಟ್ಟಾದ ಅಡುಗೆಯ ಮೂಲಕ ಮನೆಮಂದಿಗೆ, ತಮ್ಮೆಲ್ಲ ಬಂಧು-ಬಳಗದವರಿಗೆ ಅತಿ ಪ್ರೀತಿಪಾತ್ರರಾಗಿರುವ ಇವರು , ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು ನಡೆಸುವ ಸೌಂದರ್ಯ ಸ್ಪರ್ಧೆ, ಫ್ಯಾಶನ್ ಶೋ, ಅಡುಗೆ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಗುರುತಿಸಿಕೊಂಡವರು. ಇವರು ವಿನ್ಯಾಸಗೊಳಿಸಿರುವ ಡ್ರೆಸ್‌ಗಳನ್ನು ಧರಿಸಿ ಸಾರ್ವಜನಿಕ ವೇದಿಕೆಗಳಲ್ಲಿ ಮಿಂಚಿದ ಲಲನಾಮಣಿಯರೆಷ್ಟೋ?
ವಿನೂತನವಾದ ಬ್ಲೌಸ್ ಡಿಸೈನಿಂಗ್, ಪ್ಯಾಚ್ ವಕ್‌ರ್ಸ್, ಮಿರರ್ ಡಿಸೈನ್ಸ್, ಎರಡು ಬೇರೆ ಬೇರೆ ಸೀರೆಗಳನ್ನು ಸೇರಿಸಿ ವಿಭಿನ್ನ ಮಾದರಿಯ ಸೀರೆ ತಯಾರಿ, ಪೆನ್ಸಿಲ್ ಶೇಡಿಂಗ್, ಎಂಬ್ರೈಾಡರಿ, ವಸ್ತ್ರವಿನ್ಯಾಸ, ಫ್ಲವರ್ ಮೇಕಿಂಗ್, ಬ್ರೆಡ್ ಆರ್ಟ್- ಹೀಗೆ ಹತ್ತುಹಲವು ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸೃಜನಶೀಲತೆಯ ಮೂಲಕ, ಅಪೂರ್ವ ವಿನ್ಯಾಸದ ಮೂಲಕ ಎಲ್ಲರನ್ನೂ ಕೈಬೀಸಿ ಕರೆಯುತ್ತಿರುವ ‘ ಅನೋಖೀ ಎಕ್ಸಿಬಿಷನ್’    ಮೀತಾಕ್ಷರ ಅವರ ಕನಸಿನ ಕೂಸು. ಯಾರಲ್ಲೂ ಇಲ್ಲದ ಡ್ರೆಸ್, ಸೀರೆ ನನ್ನಲ್ಲಿ ಮಾತ್ರ ಇರಬೇಕೆನ್ನುವ ಹೆಣ್ಣುಮಕ್ಕಳಿಗೆ,  ಅದರಲ್ಲೂ ಹದಿಹರೆಯದ ಕಾಲೇಜು ಹುಡುಗಿಯರಿಗೆ ಇವರ ವಿನ್ಯಾಸ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.
..........................................

ಅಳಿಲ ಮೇಲಣ ಅಳ್ತಿ
NARAYANA

Published on: Aug 22, 2015


ಶಿವಮೊಗ್ಗ ಜಿಪಂ ಕಚೇರಿಗೆ ಕಾಲಿಟ್ಟರೆ ಸಾಕು- ನೀಳಕಾಯದ, ಕಟ್ಟುಮಸ್ತಾದ, ಬಿಳಿ ಪ್ಯಾಂಟು, ಬಿಳಿ ಶರ್ಟು ಧರಿಸಿರುವ, ಹಣೆಯ ಮೇಲೆ ಗಂಧದ ಉದ್ದನೆಯ ಪಟ್ಟಿ, ಅದರ ಮೇಲೊಂದು ಕುಂಕುಮದ ಸ್ವಲ್ಪ ದೊಡ್ಡದಾದ ಬೊಟ್ಟು, ಬಿಳಿ ಬಣ್ಣದ ಹುರಿ ಮೀಸೆ, ಹೆಗಲ ಮೇಲೊಂದು ಸಣ್ಣ ಟವೆಲ್ ಹೊಂದಿರುವ ವ್ಯಕ್ತಿಯೊಬ್ಬರು ಎದುರಾಗುತ್ತಾರೆ. ಈತ ಸ್ವಲ್ಪ ’ಖಡಕ್’ ಮನುಷ್ಯನೇ ಇರಬೇಕು ಎನ್ನುವುದು ಮೇಲ್ನೋಟದ ಅನಿಸಿಕೆಯಾದರೂ, ಮಾತಿಗಿಳಿದಾಗ ಮಾತ್ರ ಅವರ ಸರಳತೆ, ಮೃದುತ್ವ, ಹೃದಯವಂತಿಕೆ ಏನೆನ್ನುವುದರ ಪರಿಚಯವಾಗುತ್ತದೆ.
ಹೀಗೆ ಪರಿಚಯವಾಗುವವರೇ ನಾರಾಯಣ ಮೊದಲಿಯಾರ್. ಇವರು ಜಿಪಂನಲ್ಲಿ ಡಿ ದರ್ಜೆ ನೌಕರರಾಗಿದ್ದುಕೊಂಡು, ಸಾಮಾಜಿಕ ಸೇವೆ ಮತ್ತು ಪ್ರ್ರಾಣಿದಯೆಯ ಮೂಲಕ ಪರಿಚಿತರು. ನಾರಾಯಣ ಎನ್ನುವುದಕ್ಕಿಂತ ’ಅಳಿಲು ನಾರಾಯಣ’ ಎಂದೇ ಖ್ಯಾತರು. ಏಕೆಂದರೆ ಜಿಪಂ ಆವರಣದಲ್ಲಿರುವ ಅಳಿಲುಗಳಿಗೂ, ಇವರಿಗೂ ಅವಿನಾಭಾವ ಸಂಬಂಧ..  ನಾರಾಯಣ್ ಪಾದರಸದಂತಹ ಚಟುವಟಿಕೆಯ ವ್ಯಕ್ತಿ. ಕಚೇರಿಗೆ ಯಾರೇ ಬಂದರೂ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಕೆಲಸ ಆಗುವಲ್ಲಿ ಸಹಕರಿಸುತ್ತಾರೆ. ಪ್ರತಿ ಅಧಿಕಾರಿ, ನೌಕರರು, ಪತ್ರಕರ್ತರಿಗೆ ಇವರು ಚಿರಪರಿಚಿತರು. ಯಾವತ್ತೂ ಇವರು ತನ್ನ ಕೆಲಸಕಾರ್ಯಗಳ ಕುರಿತು ಯಾರಿಂದಲೂ ಹೇಳಿಸಿಕೊಂಡವರಲ್ಲ; ಇನ್ನೊಬ್ಬರನ್ನು ನೋಯಿಸಿದವರೂ ಅಲ್ಲ. ಸರಕಾರಿ ಸೇವೆಯಲ್ಲಿದ್ದುಕೊಂಡೂ ಜನಸಾಮಾನ್ಯರಾಗಿದ್ದಾರೆ; ಅಸಾಮಾನ್ಯರಾಗಿದ್ದಾರೆ. ಇವರು ಎಷ್ಟರಮಟ್ಟಿಗೆ  ಚಿರಪರಿಚಿತರೆಂದರೆ, ಜಿಪಂ ಕಚೇರಿಗೆ ಹೋದವರು ನಾರಾಯಣ್‌ನನ್ನು ಕಂಡು ಮಾತನಾಡಿಸಿಯೇ ಬರುತ್ತಾರೆ.
ಜಿಪಂ ಸದಸ್ಯರಾದಿಯಾಗಿ ಎಲ್ಲ, ಅಧಿಕಾರಿ, ನೌಕರರು ನಾರಾಯಣ್ ಡಿ ದರ್ಜೆ ನೌಕರ ಎಂದು ಪರಿಗಣಿಸಿಲ್ಲ. ಅಷ್ಟೊಂದು ಆತ್ಮೀಯತೆ, ಸ್ನೇಹ. ಯಾರೇ ಎದುರಾದರೂ, ಮೊದಲು ವಿಧೇಯತೆಯಿಂದ ’ನಮಸ್ಕಾರ’ ಎಂದು ಹೇಳಿಯೇ ಮಾತಿಗಿಳಿಯುತ್ತಾರೆ.
ಪರಿಚಯ:
ಮೂಲತಃ ಭದ್ರಾವತಿಯವರಾದ ನಾರಾಯಣ್ ದಿನನಿತ್ಯ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದು ಹೋಗುತ್ತಾರೆ. ಇವರ ತಂದೆ ಶ್ರೀರಾಮುಲು ಮೊದಲಿಯಾರ್. ವಿಐಎಸ್ಸೆಲ್ ನೌಕರರಾಗಿದ್ದರು. ತಾಯಿ ರಾಜೇಶ್ವರಿ. ಈ ದಂಪತಿಗಳ ಮೂವರು ಪುತ್ರದಲ್ಲಿ ನಾರಾಯಣ ಎರಡನೆಯವರು.  ನಾರಾಯಣ ಅವರ ಚಿಕ್ಕಪ್ಪ ಲಕ್ಷ್ಮಣ ಅವರಿಗೆ ಮಕ್ಕಳಿಲ್ಲದ ಕಾರಣ ಅವರು ನಾರಾಯಣ ಅವರನ್ನು ದತ್ತು ಪಡೆದು ಸಾಕಿದ್ದರು. ತಂದೆಯಂತೆಯೇ ಇಂದಿಗೂ ಅವರನ್ನು ನಾರಾಯಣ ಕಾಣುತ್ತಾರೆ.  ಇವರ ತಾಯಿ ರಾಜೇಶ್ವರಿ ಮಗನನ್ನು ಕಾಣಲು  ಶಿವಮೊಗ್ಗಕ್ಕೆ ಬಂದಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಆದರೆ ಈ ಸುದ್ದಿ ಯಾರಿಗೂ ಗೊತ್ತಾಗಲಿಲ್ಲ. ಪೊಲೀಸರು ಅನಾಥ ಶವವೆಂದು ಮಣ್ಣು ಮಾಡಿದ್ದರು. ಇದಾದ ವಾರದ ನಂತರ ತಾಯಿ ಸಾವಿನ ವಿಚಾರ ತಿಳಿಯಿತು. ಕೊನೆಗಾಲದಲ್ಲಿ ತಾಯಿಯನ್ನು ಕಾಣಲು ಬಂದರೂ  ಭೇಟಿ ಸಾಧ್ಯವಾಗದ ಬಗ್ಗೆ ಇಂದಿಗೂ ನೊಂದು ಬೇಸರ ಮಾಡಿಕೊಳ್ಳುತ್ತಾರೆ ನಾರಾಯಣ. ಇವರ ಪತ್ನಿ ಕಲ್ಯಾಣಿ, ಮಗ ಮೂರ್ತಿ, ಮಗಳು ಶಾರದಾ. ಮಗ ಭದ್ರಾವತಿಯಲ್ಲಿ ಕಂಪ್ಯೂಟರ್ ಕೇಂದ್ರ ಹೊಂದಿದ್ದರೆ,  ಅಳಿಯ ಶರವಣ ಕುವೆಂಪು ವಿವಿಯಲ್ಲಿ ಕ್ಲರ್ಕ್ ಆಗಿದ್ದಾರೆ.
ಅಳಿಲ ಸೇವೆ:
1988ರಿಂದ ಜಿಪಂನಲ್ಲಿ ಕೆಲಸ ಮಾಡುತ್ತಿರುವ ಅವರು ಅದಕ್ಕೂ ಮೊದಲು ಚನ್ನಗಿರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.  ತಮ್ಮ ಪ್ರಾಣಿ, ಪಕ್ಷಿಗಳ ಸೇವೆಯ ಮೂಲಕ ಹೆಸರಾಗಿದ್ದಾರೆ.
ಜಿಪಂ ಕಚೇರಿ ಆವರಣದಲ್ಲಿ  ಅಳಿಲುಗಳು ನೂರಾರು. ಅವು ಕಚೇರಿಯ ಕಟ್ಟಡದ ಮೇಲೆಲ್ಲ ಓಡಾಡುತ್ತ ನಲಿಯುತ್ತಿರುತ್ತವೆ. ಇದನ್ನು ಗಮನಿಸಿದ ನಾರಾಯಣ ಅವರಿಗೆ ಅದೇಕೋ ಅವುಗಳ ಬಗ್ಗೆ ಪ್ರೀತಿ ಉಕ್ಕಿ ಹರಿಯಿತು. ಅವುಗಳನ್ನು ದಿನನಿತ್ಯ ನೋಡುತ್ತ ತಮ್ಮಿಂದಾದ ಸೇವೆ ಮಾಡಲು ನಿರ್ಧರಿಸಿದರು. ಈಗ ಅಳಿಲಿಗಾಗಿ ಅಳಿಲು ಸೇವೆ ಮಾಡುತ್ತಿರುವ ಈ ಹೃದಯವಂತ ಅವುಗಳಿಗೆ ದಿನನಿತ್ಯ ಆಹಾರ  ಉುಣಿಸುವ ಕೆಲಸ ಮಾಡುತ್ತಿದ್ದಾರೆ. ಕಚೇರಿ ಎದುರಿರುವ ಮರವೊಂದಕ್ಕೆ ಎರಡು ತಟ್ಟೆ ಮತ್ತು ಎರಡು ನೀರಿನ ತೆರೆದ ಬಾಟಲ್‌ಗಳನ್ನು ಅಳವಡಿಸಿದ್ದಾರೆ. ಅವುಗಳಿಗ ಬೆಳಿಗ್ಗೆ ಸುಮಾರು 11ರ ವೇಳೆ ಆಹಾರ ಹಾಕುತ್ತಾರೆ. ತಾನು ಮನೆಯಿಂದ ತಂದ ಎಲ್ಲ ರೀತಿಯ ತಿಂಡಿಯನ್ನು ಹಾಕುತ್ತಾರೆ. ಇಡ್ಲಿ, ದೋಸೆ, ಚಿತ್ರಾನ್ನ, ಊಟ, ರೊಟ್ಟಿ ಎಲ್ಲವನ್ನೂ ಪ್ಲೇಟ್ ತುಂಬಾ ಹಾಕುತ್ತಾರೆ. ಹಾಕುತ್ತಿರುವಂತೆಯೇ ಅಳಿಲುಗಳು ಓಡೋಡಿ ಬರುತ್ತವೆ. ಸುತ್ತಮುತ್ತ ಜನರಿದ್ದರೆ ಕೆಳಕ್ಕಿಳಿಯದ ಅಳಿಲುಗಳು, ನಾರಾಯಣ ಒಬ್ಬರೇ ಇದ್ದರೆ ಅವರೆದುರೇ ಹಾಜರಾಗಿ ತಿನ್ನತೊಡಗುತ್ತವೆ. ಸುಮಾರು 150ಕ್ಕ್ಕೂ ಹೆಚ್ಚು ಅಳಿಲು ಅಲ್ಲಿವೆ. ಅದೇ ರೀತಿ ಕಚೇರಿಯ ನೌಕರರು ಊಟ ಮಾಡಿದ್ದು ಮಿಕ್ಕುಳಿದರೆ ಅದನ್ನೂ ಸಹ ಬಿಸಾಡದೆ ಅಳಿಲಿಗೆ ನೀಡುತ್ತಾರೆ. ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀಟಿಂಗ್ ನಡೆಯುತ್ತದೆ. ಆಗಲೂ ಸಹ ಅಲ್ಲುಳಿದ ತಿಂಡಿ, ಊಟವನ್ನೆಲ್ಲ ಅಳಿಲಿಗೆ  ಉಣಬಡಿಸುತ್ತಾರೆ.
ಇಷ್ಟೊಂದು ಮಾನವೀಯ ಗುಣಗಳನ್ನು ಬೆಳೆಸಿಕೊಂಡು, ಎಲ್ಲರ ವಿಶ್ವಾಸಗಳಿಸಿರುವ ನಾರಾಯಣ ಸೆಪ್ಟೆಂಬರ್ ಅಂತ್ಯಕ್ಕೆ ನಿವೃತ್ತರಾಗುತ್ತಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದರೂ ಸ್ವಲ್ಪವೂ ಹಮ್ಮಿಲ್ಲದ ಈ ಜನಸಾಮಾನ್ಯ ವ್ಯಕ್ತಿ ಎಲ್ಲರ ಬಾಯಲ್ಲೂ ತನ್ನ ಹೆಸರಿರುವಂತಹ  ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ  
ಎಲ್ಲವನ್ನೂ ಜನರ ಪ್ರೀತಿಯಿಂದ ಕಲಿತಿದ್ದೇನೆ. ಇದ್ದಷ್ಟು ದಿನ ಜನರ ಸೇವೆ ಜೊತೆಗೆ ಮೂಕಪ್ರಾಣಿಗಳ ಸೇವೆಯನ್ನೂ ಮಾಡುತ್ತೇನೆ. ಜಿಪಂ ಅಧಿಕಾರಿಗಳು ಮತ್ತು ನೌಕರರು ತನ್ನನ್ನು ಆತ್ಮೀಯತೆಯಿಂದ ಕಂಡಿದ್ದಾರೆ. ಯಾರನ್ನೂ ನಿಷ್ಠುರ ಮಾಡಿಕೊಂಡಿಲ್ಲ ಎನ್ನುವ ಅವರು,  ಅಳಿಲುಗಳನ್ನು ನನ್ನ ನಿವೃತ್ತಿ ನಂತರ ಉಳಿದವರು ನೋಡಿಕೊಳ್ಳುತ್ತಾರೆ. ಕೆಲವು ನೌಕರರು ಈಗ ತಾವು ತಂದ ಆಹಾರವನ್ನು ಹಾಕುತ್ತಿದ್ದಾರೆ. ಮಾನವ ಜನ್ಮ ದೊಡ್ಡದು  ಎಂದು ವಿನಮ್ರವಾಗಿ ನುಡಿಯುತ್ತಾರೆ.
..................................