Tuesday 20 December 2022

 ಸದ್ದಿಲ್ಲದ ಸೇವೆಗೆ ರಾಷ್ಟ್ರಪತಿ ಪುರಸ್ಕಾರ 

 


 



ಸರಕಾರಿ ಸೇವೆಯಲ್ಲಿರುವವರು  ಆಡಿದ ಮಾತಿಗಿಂತ  ಮಾಡಿದ ಕೆಲಸ, ಜನರೊಂದಿಗಿನ ಅವರ ಒಡನಾಟ  ಸದಾ ಪರಿಗಣಿಸಲ್ಪಡುತ್ತದೆ. ಜೊತೆಗೆ ಗೌರವಯುತ ಸಂಬಂಧ, ಮುಕ್ತ ವ್ಯವಹಾರ ಇಟ್ಟುಕೊಂಡವರು ಸದಾಕಾಲ ನೆನಪಿನಲ್ಲಿರುತ್ತಾರೆ. ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಾರೆ.  

ಈ ಮಾತು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ  ಬೆರಳಚ್ಚು ವಿಭಾಗದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ, ಸುಮಾರು  ೨೭ ವರ್ಷದಿಂದ ಇಲಾಖೆಯಲ್ಲಿರುವ, ೨೦೨೦ರ  ಸ್ವಾತಂತ್ರ್ಯೋತ್ಸವದ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿರುವ ಅತಿಕ್ ಉರ್ ರೆಹಮಾನ್ ಅವರಿಗೆ ಅನ್ವಯಿಸುತ್ತದೆ. ಅವರಿಗೆ ಕಳೆದ ವಾರ ಈ ಪ್ರಶಸ್ತಿಯನ್ನು ರಾಜ್ಯಪಾಲರು ಪ್ರದಾನ ಮಾಡಿದ್ದಾರೆ. 

  ರೆಹಮಾನ್ ಅವರದು ನಯ-ವಿನಯ, ಇನ್ನೊಬ್ಬರನ್ನು ಗೌರವದಿಂದ ಕಾಣುವ, ಸೌಮ್ಯ ಸ್ವಭಾವ, ಸದಾ ನಗುಮೊಗ, ಒಂದಿನಿತೂ ಸಿಡಿಮಿಡಿಗೊಳ್ಳದ ಸ್ವಭಾವ. ತಮ್ಮ ಉತ್ತಮ ಸೇವೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮೇಲಧಿಕಾರಿಗಳ ಮನಗೆದ್ದಿದ್ದಾರೆ. ರೆಹಮಾನ್ ಎಂದರೆ ಬೆರಳಚ್ಚು ವಿಭಾಗದವರು ಎಂದೇ ಪರಿಚಿತರು. ಅಷ್ಟೊಂದು ಖ್ಯಾತಿಯನ್ನು ಪಡೆದವರು. ೨೬ ವರ್ಷಗಳಿಂದ ಬೆರಳಚ್ಚು ವಿಭಾಗದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸಿರುವುದರಿಂದಲೇ ರಾಷ್ಟ್ರಪತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಲತಃ ಚೆನ್ನಗಿರಿ ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದವರಾದ ಇವರು ಅಲ್ಲಿಯೇ ಪದವಿಯವರೆಗೆ ಓದಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಮುಗಿಸಿ ಆನಂತರ ೧೯೯೩ರಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದರು. ಕಾನ್ಸ್ಟೇಬಲ್ ಆಗಿ ಆನವಟ್ಟಿಯಲ್ಲಿ, ಡಿಸಿಐಬಿಯಲ್ಲಿ ಕೆಲಸ ಮಾಡಿದ್ದಾರೆ. ಬೆರಳಚ್ಚು ಮುದ್ರೆ ವಿಭಾಗದಲ್ಲಿ ಕಾನ್‌ಸ್ಟೇಬಲ್‌ನಿಂದ ಪ್ರಭಾರ ಪಿಎಸ್‌ಐವರೆಗೆ ಕೆಲಸ ಮಾಡಿದ್ದಾರೆ. ಅಷ್ಟೊಂದು ಸುಲಭವಲ್ಲದ ಅಖಿಲ ಭಾರತ ಬೆರಳಚ್ಚುಮುದ್ರೆ ತಜ್ಞರ ಪರೀಕ್ಷೆಯಲ್ಲಿ ೨೦೦೧ರಲ್ಲಿ ಪಾಸಾಗಿ ತಜ್ಞರೆಂದು ಪ್ರಮಾಣಪತ್ರ ಪಡೆದಿದ್ದಾರೆ.  ಈ ಪರೀಕ್ಷೆ ತೆಗೆದುಕೊಳ್ಳುವಾಗ ಬೆಂಗಳೂರಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ  ಆಯ್ಕೆಯಾಗಬೇಕು. ಅಂದರೆ ಈ ವಿಭಾಗದಲ್ಲಿ ಅಷ್ಟೊಂದು ಸೂಕ್ಷ್ಮತೆ ಮತ್ತು ಬುದ್ಧಿಮತ್ತೆಯನ್ನು ಹೊಂದಿರಬೇಕು. ಕನಿಷ್ಠ ಮೂರು ವರ್ಷ ಈ ವಿಭಾಗದಲ್ಲಿ ಸೇವೆ ಸಲ್ಲಿಸಿರಬೇಕೆಂಬ ನಿಯವಿದೆ. ಅಂತಹವರನ್ನು ಮಾತ್ರ ಅಖಿಲ ಭಾರತ ಮಟ್ಟದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

 ಇಷ್ಟೊಂದು ಕಷ್ಟದ ಪರೀಕ್ಷೆಯನ್ನು ಪಾಸು ಮಾಡಿ ಬೆರಳಚ್ಚು ವಿಭಾಗದಲ್ಲ್ಲಿಯೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಿವಿಲ್ ಪೊಲೀಸರಾದರೂ ಹಿರಿಯ ಅಧಿಕಾರಿಗಳು ಇತರೆ ಕೆಲಸಕ್ಕೆ ಎಂದೂ ಇವರನ್ನು ನೇಮಿಸಿಲ್ಲ. ಹಿರಿಯ ಅಧಿಕಾರಿಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ಅವರು ಮಾಡಿದ ಸಾಧನೆ ಗಮನಿಸಿ ಸುಮಾರು ೧೬೦ಕ್ಕೂ ಅಧಿಕ ನಗದು ಬಹುಮಾನ ಲಭಿಸಿದೆ. ಜೊತೆಗೆ ಸುಮಾರು ೨೫ ಗುಡ್ ಸರ್ವೀಸ್ ಎಂಟ್ರಿ, ಎಡಿಜಿಪಿ, ಎಸ್‌ಪಿ ಅವರಿಂದ ನಾಲ್ಕೈದು ಕಮಾಂಡೇಶನ್ ಲೆಟರ್ ಸಹ ಲಭಿಸಿದೆ.

 ನಿವೃತ್ತಿ ಅಂಚಿನಲ್ಲಿರುವ ರೆಹಮಾನ್ ಯಾರೊಂದಿಗೂ ಮುನಿಸಿಕೊಂಡಿದ್ದಿಲ್ಲ, ಜಗಳವಾಡಿದ್ದಿಲ್ಲ ಎನ್ನುತ್ತಾರೆ ಅವರ ಸಹಪಾಠಿಗಳೂ ಕೂಡ. ಅಷ್ಟೊಂದು ಶಾಂತಸ್ವಭಾವದ, ಸಹೃದಯಿ ವ್ಯಕ್ತಿ ಇವರಾಗಿದ್ದಾರೆ. ಇವರು ಕೆಲಸ ಮಾಡುವ ವಿಭಾಗ ಸಾರ್ವಜನಿಕರೊಂದಿಗಿನ ಸಂಪರ್ಕದ್ದಲ್ಲವಾದರೂ ಹೆಚ್ಚಿನ ಮಿತ್ರರನ್ನು ಅವರು ಹೊರಗಡೆ ಹೊಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠರೂ ಸಹ ರೆಹಮಾನ್ ಸಾಧನೆ ಮೆಚ್ಚಿ  ಅಭಿನಂದನೆ ಸಲ್ಲಿಸಿದ್ದಾರೆ. 

published on 19 Dec. 20202


......................... 


No comments:

Post a Comment