Monday 5 December 2022

  ಸಮಯಪ್ರಜ್ಞೆಗೆ ಸಂದ  

ರಾಜ್ಯ ಶೌರ್‍ಯ ಪ್ರಶಸ್ತಿ 

 

 


ಒಂಚು ಇಂಚಿನಷ್ಟು s ಗಾತ್ರದ ಸಮಯ ಒಂದು ಇಂಚಿನಷ್ಟು ಬಂಗಾರಕ್ಕೆ ಸಮ ಎಂಬ ಚೀನಾದ ಗಾದೆ ಮಾತಿದೆ. ಸಮಯ ಮಹತ್ವವಲ್ಲ, ಸಮಯ ಪ್ರಜ್ಞೆ ಅತಿ ಮುಖ್ಯವಾದುದು ಎಂದು ಆಂಗ್ಲ ವಿದ್ವಾಂಸನೊಬ್ಬ ಹೇಳಿದ್ದಾನೆ. ಇವೆರಡೂ ಮಾತುಗಳು ಸಮಯಪ್ರಜ್ಞೆಗಿರುವ ಮಹತ್ವವನ್ನು ವಿವರಿಸುತ್ತವೆ. ಸಮಯಪ್ರಜ್ಞೆಯಿಂದ ಎಷ್ಟೆಲ್ಲ ಸಮಸ್ಯೆ ಪರಿಹರಿಸಬಹುದು, ಏನೆಲ್ಲ ಅನಾಹುತ ತಪ್ಪಿಸಬಹುದು, ಜೀವ ಉಳಿಸಬಹುದು. ಅಂತಹುದೇ ಒಂದು ಕೆಲಸವನ್ನು ಇಲ್ಲೊಬ್ಬ ಶಾಲಾ ಬಾಲಕಿ ಮಾಡುವ ಮೂಲಕ ರಾಜ್ಯ ಶೌರ್‍ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.  

ಒಂದು ವರ್ಷದ ಹಿಂದೆ ಶಾಲೆಯಿಂದ ಮನೆಗೆ ಬಂದ ೪ನೆಯ ತರಗತಿ ಓದುವ ತುಂಟ ಧನುಷ್ ಟಿವಿ ವೀಕ್ಷಣೆಗೆ ಸ್ವಿಚ್ ಹಾಕಲು ಮುಂದಾಗುತ್ತಾನೆ. ಟಿವಿ ಆನ್ ಆಗಲಿಲ್ಲ. ವೈರ್ ಹಿಡಿದು ಅಲ್ಲಾಡಿಸಲೆತ್ನಿಸಿದಾಗ ಆತನಿಗೆ ಭಾರೀ ಪ್ರಮಾಣದಲ್ಲಿ ಶಾಕ್ ಹೊಡೆಯುತ್ತದೆ. ಕಾರಣ ಆತನ ಕೈಲಿ ಹಿಡಿದಿದ್ದ ವೈರ್‌ನ ಭಾಗವನ್ನು ಇಲಿ ಕಡಿದಿತ್ತು. ಅದರಿಂದ ತಪ್ಪಿಸಿಕೊಳ್ಳಲಾಗದೆ ಆತ ಒದ್ದಾಡುತ್ತಿದ್ದ. ಹೆದರಿ ಕೂಗಾಡುತ್ತಾನೆ. ಈತನ ಜೊತೆ ಶಾಲೆಯಿಂದ ಮನೆಗೆ ಬಂದಿದ್ದ, ೫ನೆಯ ತರಗತಿ ಓದುವ  ಅಕ್ಕ ಪ್ರಾರ್ಥನಾ ಊಟ ಮಾಡುತ್ತಿದ್ದಳು. ತಮ್ಮನ ಕೂಗಾಡುವಿಕೆಯನ್ನು ಕೇಳಿ ಊಟದ ತಟ್ಟೆ ಇಟ್ಟು ಓಡಿಬಂದು ನೋಡುತ್ತಾಳೆ. ಕೈಲಿದ್ದ ವೈರ್‌ನಿಂದ ಶಾಕ್ ಹೊಡೆದು ಸಹೋದರ  ಅಪಾಯದ ಸ್ಥಿತಿಯಲ್ಲಿದ್ದ. ಕೈ ಹಿಡಿದು ಎಳೆದರೂ ಕರೆಂಟ್ ಬಿಡಲಿಲ್ಲ. ಹಿಂದೆ ಮುಂದೆ ನೋಡದೆ ಆತನ ಶರ್ಟ್ ಕಾಲರನ್ನು ಹಿಡಿದು ಬಲವಾಗಿ ಆತನನ್ನು ಎಳೆಯುತ್ತಾಳೆ. ಆಗ ವೈರ್ ಬಿಟ್ಟು ಆತ ಸರಿಯುತ್ತಾನೆ. ಇದರಿಂದ ಆತನ ಜೀವ ಉಳಿಯುತ್ತದೆ.

ಹೀಗೆ ಜೀವ ಹೋಗುವ ಹಂತದಲ್ಲಿದ್ದ ಸಹೋದರನನ್ನು ರಕ್ಷಿಸಿದ ಪ್ರಾರ್ಥನಾಳ ಕೀರ್ತಿ ಎಲ್ಲೆಡೆ ಜಾಹೀರಾಗುತ್ತದೆ. ಸನ್ಮಾನಗಳು  ನಡೆಯುತ್ತವೆ. ಶ್ಲಾಘನೆಗೆ ಒಳಗಾಗುತ್ತಾಳೆ. ಕೆಲವು ಸಂಘಟನೆಗಳು ಈಕೆಗೆ ಶೌರ್‍ಯ ಪ್ರಶಸ್ತಿ ಕೊಡಿಸಬೇಕೆಂದು ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಾರೆ. ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಂದೆಗೆ ಸಿದ್ಧಗೊಳಿಸಿ ಅಧಿಕಾರಿಗಳಿಗೆ ತಲುಪಿಸುತ್ತಾರೆ. ಅದು ಬೆಂಗಳೂರಿಗೆ ಕಳುಹಿಸಲ್ಪಟ್ಟು ಈ ವರ್ಷ ಮೊನ್ನೆ ಜರುಗಿದ ಮಕ್ಕಳ ದಿನದಂದು ಪ್ರಾರ್ಥನಾಳಿಗೆ ಕಿತ್ತ್ತೂರು ಚೆನ್ನಮ್ಮ ಶೌರ್‍ಯ ಪ್ರಶಸ್ತಿ ರಾಜ್ಯಪಾಲರಿಂದ ಕೊಡಲ್ಪಟ್ಟಿತು.   

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉರಗನಹಳ್ಳಿಯಲ್ಲಿ ನಡೆದಿದ್ದ ಘಟನೆ ಇದು. ಇಲ್ಲಿನ ರೈತ ಧನಂಜಯ ಮತ್ತು ನೀಲಾವತಿ ಅವರ ಇಬ್ಬರು ಮಕ್ಕಳಿವರು. ಉರಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಓದುತ್ತಿದ್ದಾರೆ. ಶಾಕ್ ಹೊಡೆದ ಮತ್ತು ರಕ್ಷಿಸಿದ ಸುದ್ದಿಯನ್ನು ಶಾಲೆಯ ಮುಖ್ಯ ಶಿಕ್ಷಕಿಗೆ ತಿಳಿಸುತ್ತಾರೆ. ಆನಂತರ ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿಯಾಗುತ್ತದೆ. ಸ್ಥಳೀಯರು ಪ್ರಶಸ್ತಿಗೆ ಅರ್ಜಿ ಹಾಕಲು ತಂದೆಗೆ ಸೂಚಿಸುತ್ತಾರೆ. ಆದರೆ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಅವರು ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಹೆಗಡೆ ಅವರನ್ನು ಕಾಣುತ್ತ್ತಾರೆ. ಅವರು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಿದ್ಧ್ದಪಡಿಸಿಕೊಡುವ ಮೂಲಕ ರಾಜ್ಯ ಪ್ರಶಸ್ತಿಗೆ ಶಿಫಾರಸಾಗುವಂತೆ ಮಾಡುತ್ತಾರೆ. 

 ಪ್ರಶಸ್ತಿಯು ೧೦ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಬಾಲಕಿ ಪ್ರಾರ್ಥನಾಳ ಸಮಯಪ್ರಜ್ಞೆ ಅಥವಾ ಅನಾಹುತದ ಸಮಯದಲ್ಲಿ ತೋರಿದ ಬುದ್ಧಿವಂತಿಕೆ ಸಹೋದರನ ಜೀವ ಉಳಿಸಿದೆ. ಅದಕ್ಕೆ ತಾನೆ ಹೇಳುವುದು ಸಮಯಪ್ರಜ್ಞೆ  ಮೆರೆಯಬೇಕೆಂದು. 

ಶಿವಮೊಗ್ಗ ಜಿಲ್ಲೆಗೆ ಇದೇ ಮೊದಲಬಾರಿ ಈ ಪ್ರಶಸ್ತಿ ಪ್ರಾರ್ಥನಾಳಿಂದ ಬಂದಂತಾಗಿದೆ.  

published on 21 nov 2022

.....................



No comments:

Post a Comment