Wednesday 14 December 2016

ಹಿಂದೂಸ್ಥಾನಿ ಸಂಗೀತದ ಧ್ರುವತಾರೆ
ನೌಷದ್ ಹರ್ಲಾಪುರ


’ತಾಯಿಯಂತೆ ಮಗಳು; ನೂಲಿನಂತೆ ಸೀರೆ’ ಎನ್ನುವುದು ಜನಜನಿತವಾದ ಮಾತು. ಆದರೆ ಇಲ್ಲಿ ಹಾಗಲ್ಲ. ’ತಂದೆಯಂತೆ ಮಗ’. ಏಕೆಂದರೆ ತಂದೆಯ ಕಲೆಯನ್ನು ಇನ್ನಷ್ಟು ಬೆಲೆಗೊಳ್ಳುವಂತೆ ಮಾಡಿದ ಕೀರ್ತಿ ಮಗನಿಗೆ ಸಲ್ಲಬೇಕು. ಅಪ್ಪನ ತೊಡೆಯೇರಿದ್ದೇ ತಪ್ಪಾಗಿ, ಐದರ ಹರೆಯದಲ್ಲೇ ಕಾಡಿಗೆ ತೆರಳಿ, ಭಗವಂತನನ್ನು ಒಲಿಸಿಕೊಂಡ ಧ್ರುವನ ಕಥೆ ನಮಗೆಲ್ಲ ಗೊತ್ತು.  ತನ್ನ ಐದರ ಹರೆಯದಲ್ಲೇ ಅಪ್ಪನ ತೊಡೆಯೇರಿದ್ದೇ ವರವಾಗಿ ಸಂಗೀತಾಭ್ಯಾಸಕ್ಕೆ ತೊಡಗಿದ ಈತನಿಗೆ ಸಂಗೀತ ಸರಸ್ವತಿ ಒಲಿದೇ ಬಿಟ್ಟಳು. ಇವನ ಕಂಠಸಿರಿಯಲ್ಲಿ ಸಂಗೀತ ಶಾರದೆ ಲೀಲಾಜಾಲವಾಗಿ ನರ್ತಿಸುತ್ತಾಳೆ. ಸಂಗೀತವೇ ಇವನ ಉಸಿರು; ಇದರ ಫಲಶ್ರುತಿಯೇ ’ವಾಯ್ಸ್ ಆಫ್ ಇಂಡಿಯಾ ’ ಪ್ರಶಸ್ತಿಯ ಗರಿ!
ಸಂಗೀತಕ್ಕೆ ಮಾರು ಹೋಗದವರಾರೂ ಇಲ್ಲ. ಎಂತಹ ಮನಸ್ಸನ್ನಾದರೂ ಅದು ಸೆಳೆಯುತ್ತದೆ, ರಂಜಿಸುತ್ತದೆ. ಕಲೆಯ ಗುಣವೇ ಅಂತಹುದು. ಕಲೆ ಒಂದು ಆನಂದದ ಅನುಭೂತಿಯನ್ನು ತಂದೀಯುತ್ತದೆ. ಆನಂದದಲ್ಲಿ ಹುಟ್ಟಿ, ಚಲಿಸಿ, ಅದರಲ್ಲೇ ಲೀನವಾಗಬೇಕೆಂಬ ಆತ್ಯಂತಿಕವಾದ ಹಂಬಲಕ್ಕ್ಕೂ ಕಾರಣವಾಗುತ್ತದೆ. ಅಂತಹ ಒಂದು ಆನಂದವನ್ನು  ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಮಗೆ ನೀಡುತ್ತದೆ.
ನೌಷದ್  ಖ್ಯಾತ ಹಿಂದುಸ್ಥಾನಿ ಗಾಯಕ ಹುಮಾಯೂನ್ ಹರ್ಲಾಪುರ ಅವರ ಹಿರಿಯ ಮಗ. ತನ್ನ ಏಳರ ಹರೆಯದಲ್ಲಿ ಮೊದಲ ಪ್ರದರ್ಶನವನ್ನು ನೀಡಿದ ಕೀರ್ತಿಗೆ ಭಾಜನನಾಗಿದ್ದಾನೆ. ಈಗ 23ರ ಹರೆಯದ ಈತ, ಮುಂಬೈ, ಬೆಂಗಳೂರು, ಭೋಪಾಲ್, ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸ್ವತಂತ್ರವಾಗಿ ಪ್ರದರ್ಶನ ನೀಡಿದ್ದಾನೆ. ತಂದೆಯ ಜೊತೆಗೂ ಸಾಕಷ್ಟು ಪ್ರದರ್ಶನ ನೀಡಿ ಜನರನ್ನು ರಂಜಿಸಿದ್ದಾನೆ. ಈತನಿಗೆ ತನ್ನ ತಂದೆಯೇ ಗುರು.  ನೌಷದ್ ಈಗ ಹಿಂದೂಸ್ಥಾನಿ ಸಂಗೀತದ ಮಾಂತ್ರಿಕ ಧಾರವಾಡದ ಪಂಡಿತ್ ಸೋಮನಾಥ್ ಮರಡೂರು ಅವರಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾನೆ.
ನೌಷದ್ ಪ್ರಾಥಮಿಕ ವಿದ್ಯಾಭ್ಯಾಸವನ್ನು  ನಗರದ ಗಾಯತ್ರಿ ವಿದ್ಯಾಲಯದಲ್ಲಿ, ಹೈಸ್ಕ್ಕೂಲನ್ನು ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ, ಪಿಯುವನ್ನು ಡಿವಿಎಸ್‌ನಲ್ಲಿ ಓದಿ, ನಂತರ ಗದುಗಿನ ಪಂಚಾಕ್ಷರಿ ಗವಾಯಿ ಸಂಗೀತ ಮಹಾವಿದ್ಯಾಲಯಕ್ಕೆ ಸೇರ್ಪಡೆಗೊಂಡು ಸಂಗೀತದಲ್ಲೇ ಪದವಿ ಪೂರೈಸಿದ್ದಾನೆ. ಸದ್ಯ ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯದಲ್ಲಿ ಸಂಗೀತ ಎಂ.ಎ. ಓದುತ್ತಿದ್ದಾನೆ. ಅದರ ಮಧ್ಯೆ ತಂದೆ ಜೊತೆ ಸೇರಿ ಕೆಲವೊಮ್ಮೆ ಸ್ವತಂತ್ರವಾಗಿ ಕಾರ್ಯಕ್ರಮ ನೀಡುವುದನ್ನು ಮುಂದುವರೆಸಿದ್ದಾನೆ. ಈ ತರಬೇತಿಯೇ ಆತನನ್ನು ಸಂಗೀತದ ಆಳಕ್ಕೆ ಕೊಂಡೊಯ್ದಿದೆ.
2013-14, 14-15 ಮತ್ತು 15-16ನೆಯ ಸಾಲಿಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಪಡೆಯುತ್ತಿರುವ ನೌಷದ್‌ನದ್ದು ವಯಸ್ಸಿಗೆ ಮೀರಿದ ಹಾಡುಗಾರಿಕೆ. ಲಯ, ಸ್ವರ ಮತ್ತು ತಾಳದೊಂದಿಗೆ ರಾಗಬದ್ಧವಾಗಿ ಹಾಡಲು ಕುಳಿತನೆಂದರೆ ಎಂತಹವರೂ ಮಾರುಹೋಗಬೇಕು.. ತಂದೆಗೆ ಹಿನ್ನೆಲೆಯಾಗಿಯೂ ಹಾಡುತ್ತಿದ್ದಾನೆ. ಕೇವಲ ಹಿಂದುಸ್ಥಾನಿ ಗಾಯನವೊಂದೇ ಅಲ್ಲ, ವಚನ, ಭಕ್ತಿಗೀತೆ, ಭಾವಗೀತೆಯನ್ನೂ ರಾಗಬದ್ಧವಾಗಿ ಹಾಡುವುದರಲ್ಲಿ ಈತ ಎತ್ತಿದಕೈ. ಕೇಂದ್ರದ ಸಂಸ್ಕೃತಿ ಇಲಾಖೆಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಈತ, 2002ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಕಲಾಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಮತ್ತು ವಿದ್ಯಾರ್ಥಿದೆಸೆಯಲ್ಲಿರುವಾಗಲೇ ಅಂದರೆ 2008ರಲ್ಲಿ ಪ್ರತಿಭಾ ಕಾರಂಜಿಯಲ್ಲೂ ರಾಜ್ಯಕ್ಕೆ  ಹಿಂದೂಸ್ಥಾನಿ ಗಾಯನ ಮತ್ತು ಭಾವಗೀತೆಯಲ್ಲಿ ಮೊದಲ ಸ್ಥಾನ  ಗಳಿಸಿದ್ದಾನೆ. ಕಳೆದ ತಿಂಗಳು ಲಕ್ನೋದಲ್ಲಿ ನಡೆದ ’ಕ್ಲಾಸಿಕಲ್ ವಾಯ್ಸ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದು, ಅಲ್ಲಿನ  ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ ಸ್ವೀಕರಿಸಿದ್ದಾನೆ. ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗುತ್ತಿದ್ದಾನೆ.
ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಸಂಗೀತದಲ್ಲೇ ಪಿಎಚ್‌ಡಿ ಮಾಡುವ ಹಿರಿದಾಸೆ ಇವನದು. ತಂದೆಯ ಪ್ರೋತ್ಸಾಹದ ನೆರಳಿನಲ್ಲಿ ಮತ್ತು ಮರಡೂರು ಅವರ ಅಪಾರ ವಿದ್ವತ್ತಿನ ನೆರವಿನಿಂದ ಬೆಳೆಯುತ್ತಿರುವ ಈ ಪ್ರತಿಭೆ ನಾಡಿನೆಲ್ಲೆಡೆ ತನ್ನ ಸಂಗೀತದ ಕಂಪನ್ನು ಪಸರಿಸಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

published on Jan 2, 2016
...........................................

No comments:

Post a Comment