Monday 14 November 2016

ಏಕಲವ್ಯ ನಿಷ್ಠೆಯ ಕಲಾಕಾರ
 ಮಂಜೇಶ್

"ಕಲಿಯೆ ಮನಸಿರೆ ಸಾಕು, ಕಲಿಸೆ ಮಣ್ಣಿನ ಗೊಂಬೆ" ಇದು ರಸಋಷಿ ಕುವೆಂಪು ಅವರ ’ಬೆರಳ್ಗೆ ಕೊರಳ್’ ನಾಟಕದ ಒಂದು ನುಡಿ; ಏಕಲವ್ಯನ ನಿಷ್ಠೆಗೆ ಹಿಡಿದ ಕೈಗನ್ನಡಿ. ಪ್ರಾಯಶಃ ಈ ಮಾತು ಬಹುಮುಖೀ ಪ್ರತಿಭೆಯ ಮಂಜೇಶ್ ಅವರಿಗೂ ಅನ್ವಯವಾಗುತ್ತದೆ. ಹಿತ್ತಲಗಿಡ ಮದ್ದಲ್ಲ’ ಎಂಬಂತಿರುವ, ಪ್ರಚಾರದ ಗೀಳಿಲ್ಲದೆ ಕಲಾರಾಧನೆಯಲ್ಲಿ ತೊಡಗಿರುವ ಅಸಾಮಾನ್ಯ ಕಲಾವಿದ ಈತ.
ಕಲೆಗೂ ಬಡತನಕ್ಕೂ ಅದೆಂತಹ ನಂಟಿದೆಯೋ ಗೊತ್ತಿಲ್ಲ. ಬಹುತೇಕ ಕಲಾವಿದರೆಲ್ಲ ಬಡವರಾಗಿರುತ್ತಾರೆ. ಆದರೂ ತಮ್ಮ ಪ್ರತಿಭೆಯನ್ನು  ಬೆಳೆಸಿಕೊಂಡು ಅವಕಾಶಕ್ಕಾಗಿ ತಡಕಾಡುತ್ತಾರೆ. ಅದೃಷ್ಟ ಜತೆಗಿದ್ದವರಿಗೆ ಅವಕಾಶದ ಮೂಲಕ ಕಲಾವಿದರಾಗುವ ಭಾಗ್ಯ; ಅದೃಷ್ಟಹೀನರಿಗೆ ಅವರಲ್ಲಿರುವ ಕಲೆ ಅರಳುವ ಬದಲು ಕಮರುವ ದೌರ್ಭಾಗ್ಯ.   ಮಂಜೇಶ್‌ಗೆ ಹೇಳಿಕೊಳ್ಳುವಂತಹ ಅವಕಾಶ ಸಿಗದೇ ಹೋದರೂ, ಮಿಂಚುತ್ತಿರುವ ಅಪರೂಪದ ಬಹುಮುಖೀ ಪ್ರತಿಭೆ.
ಬಡತನದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ಈ ಯುವಕ ಒಂದಲ್ಲ, ಎರಡಲ್ಲ, ನಾಲ್ಕಾರು ಕಲೆಗಳ ಮೂಲಕ ಪ್ರಕಾಶಿಸುತ್ತಿದ್ದಾನೆ. ರಾಜ್ಯಾದ್ಯಂತ ಕಾರ್ಯಕ್ರಮ ನೀಡುತ್ತಿದ್ದಾನೆ. ಹಿಂದೂಸ್ಥಾನಿ ಸಂಗೀತ, ವಾಲ್ ಪೇಂಟಿಂಗ್, ಗಾಯನಕ್ಕೆ ತಕ್ಕಂತೆ ಚಿತ್ರ ಬಿಡಿಸುವುದು, ಆರ್ಟ್ ಡೆಕೋರೇಶನ್, ವಚನ, ಭಕ್ತಿಗೀತೆಗಳ ಹಾಡುಗಾರಿಕೆಯ ಜೊತೆಗೆ ಅವುಗಳಿಗೆ ಸಂಗೀತ ನಿರ್ದೇಶನ ನೀಡುವ ಮಟ್ಟಕ್ಕೆ ಬೆಳೆದಿದ್ದಾನೆ.
ನಗರದ ಸಮನ್ವಯ ಕಚೇರಿಗೆ ಹೋದವರು ಅಲ್ಲಿ ಗೋಡೆಯ ಮೇಲಿನ ಚಿತ್ರ ಗಮನಿಸಿ, ಚಿತ್ರದ ವಿನ್ಯಾಸಕ್ಕೆ ಮಾರುಹೋಗುತ್ತಾರೆ; ಕಲಾಕಾರ ಯಾರೆಂದು ಪ್ರಶ್ನಿಸುತ್ತಾರೆ. ಮಂಜೇಶ್ ಇವುಗಳ ಜನಕ. ಉತ್ತಮ ಕಂಠ ಮಾಧುರ್ಯವೂ ಈತನಿಗೆ ವರವಾಗಿದೆ. ವಚನವಿರಲಿ, ಭಕ್ತಿಗೀತೆ ಇರಲಿ, ಭಾವಗಿತೆ ಇರಲಿ ಎಲ್ಲವನ್ನು ಅಷ್ಟೇ ಸುಂದರವಾಗಿ ಹಾಡುವುದರಲ್ಲಿ ಈತ ನಿಸ್ಸೀಮ. ಹಳೆಯ ಹಾಡುಗಳನ್ನಂತೂ ಆಯಾಯ ಗಾಯಕರ ಧ್ವನಿಯಲ್ಲೇ ಮಧುರವಾಗಿ ಹಾಡುತ್ತ ಪ್ರೇಕ್ಷಕರನ್ನು ಗಂಧರ್ವಲೋಕಕ್ಕೆ ಕರೆದೊಯ್ಯುತ್ತಾನೆ.
ಮಂಜೇಶ್ ನಾಗರಾಜಪುರ ಬಡಾವಣೆಯ ವಾಸಿ. ಐಸ್ ಮಾರುವ ತಂದೆ, ತರಕಾರಿ ಮಾರುವ ತಾಯಿಯನ್ನು ಸಾಕುವ ಜವಾಬ್ದಾರಿಯನ್ನು ಹೊತ್ತ ಮಂಜೇಶ್ ಪಿಯುವರೆಗೆ ಓದಿದ ನಂತರ ಆರಿಸಿಕೊಂಡಿದ್ದು, ಚಿತ್ರಕಲೆಯನ್ನು.  ಪೆನ್ಸಿಲ್ ಮೂಲಕ ಅತ್ಯಂತ ಮನೋಜ್ಞವಾಗಿ ಚಿತ್ರ ಬಿಡಿಸಿ ಗಮನ ಸೆಳೆದ ಈತ ಅಲ್ಲಿಂದ ಮುಂದೆ ಹೆಜ್ಜೆ ಇಟ್ಟು ಗೋಡೆಗಳ ಮೇಲೆ ಅವುಗಳನ್ನು ಬಿಡಿಸುವುದನ್ನು ಆರಂಭಿಸಿದ. ಇದರಿಂದ ಕಲೆ ಮತ್ತಷ್ಟು ಸಿದ್ದಿಸಿತು. ಖಾಸಗಿ ಕಂಪನಿಗಳು ತಮ್ಮ ಜಾಹೀರಾತನ್ನು ಗೋಡೆಗಳ ಮೇಲೆ ಬರೆಯಲು ಈತನನ್ನು ಆಯ್ಕೆಮಾಡಿಕೊಂಡರು. ರಾಜ್ಯದಾದ್ಯಂತ ಸುತ್ತಿ ಈ ಕೆಲಸ ಮಾಡುತ್ತಿರುವಂತೆಯೇ  ಹಾಡಿಗೆ ತಕ್ಕ ಚಿತ್ರವನ್ನೇಕೆ ಬರೆಯಬಾರದೆಂಬ ಆಲೋಚನೆ ಎದುರಾಯಿತು. ಇದನ್ನೂ ಶುರುವಿಟ್ಟುಕೊಂಡ. ಅದರಲ್ಲೂ ಯಶಸ್ವಿಯಾದ.
 ಹಿಂದುಸ್ಥಾನಿ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇದ್ದುದರಿಂದ ಭದ್ರಾವತಿಯಲ್ಲಿ ಅಭ್ಯಾಸ ಆರಂಭಿಸಿದ. ಕಳೆದ 8 ವರ್ಷಗಳಿಂದ ಶಿವಮೊಗ್ಗ ವೇಣುಗೋಪಾಲ್ ಅವರಲ್ಲಿ ಹಾಡುಗಾರಿಕೆ ಕಲಿಕೆ ಮುಂದುವರೆಸಿದ್ದಾನೆ ದಾಸರಪದ, ಭಜನೆ, ಭಕ್ತಿಗೀತೆ, ಭಾವಗೀತೆಗಳಿಗೆ ರಾಗ ಸಂಯೋಜನೆಯನ್ನೂ ಕೈಗೆತ್ತಿಕೊಂಡು ಅದರಲ್ಲೂ ಸೈ ಎನಿಸಿಕೊಂಡಿದ್ದಾನೆ. ವಿಶೇಷವೆಂದರೆ, ಈತ  ಕಲಿಯಲಾರಂಭಿಸಿದ ಎಲ್ಲ ಕಲೆಗಳಲ್ಲೂ ಯಶಸ್ವಿಯಾಗಿ, ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಹಂಸಲೇಖ ಅವರ ಗಾನಯಾನ ಸಂಗೀತ ತಂಡದಲ್ಲಿ ಸೇರಿಕೊಳ್ಳಲು ಆಹ್ವಾನ ಬಂದಿದ್ದರೂ ಅದನ್ನು ನಿರಾಕರಿಸಿ ಸ್ವತಃ ಕಲಾ ಪ್ರದರ್ಶನ ನಡೆಸುತ್ತಿದ್ದಾನೆ. ಸದ್ಯ ಅಯ್ಯಪ್ಪಸ್ವಾಮಿಯ ಕುರಿತಾದ ಹಾಡುಗಳ ಆಡಿಯೋ ವೀಡಿಯೊ ಕಾರ್ಯವನ್ನು ನಡೆಸುತ್ತಿದ್ದಾನೆ.  ಇದರೊಟ್ಟಿಗೆ ಮದುವೆಮಂಟಪಗಳ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುವುದು, ಆಸಕ್ತರಿಗೆ ಮನೆಯ ಗೋಡೆಯನ್ನು ಅಲಂಕರಿಸಿಕೊಡುವುದು ಇವರ ಕೆಲಸ.
 ಸಮನ್ವಯ ಸಂಸ್ಥೆಯ ಮುಖ್ಯಸ್ಥ ಕಾಶೀನಾಥ, ಈತನ ಪ್ರತಿಭೆಯನ್ನು ಕಂಡು ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಅಲ್ಲಿ ಹಾಡುಗಾರ, ಆಡಿಶನ್ ನಡೆಸಿಕೊಡುವವನಾಗಿ ಕೆಲಸ ಮಾಡುತ್ತಿದ್ದಾನೆ. ಇಂತಹ ಬಹುಮುಖ ಪ್ರತಿಭೆಯ ಯುವಕನನ್ನು ಜನತೆ ಇನ್ನಷ್ಟು ಪ್ರೋತ್ಸಾಹಿಸಬೇಕಿದೆ. ರಾಜ್ಯಮಟ್ಟದಲ್ಲಿ ಮಂಜೇಶ್ ಹೆಸರು ಪಸರಿಸುವಂತಾಗಬೇಕಿದೆ.
published on 26-12.2015

....................................................

No comments:

Post a Comment