Saturday 12 November 2016

ಗಮಕ ಕ್ಷೇತ್ರದ ಅರಳುಪ್ರತಿಭೆ 
ರಕ್ಷಿತಾ ಅವಧಾನಿ


ಪ್ರಕಟಿತ ದಿನಾಂಕ& 10.10.2015

’ಹಿತ್ತಲ ಗಿಡ ಮದ್ದಲ್ಲ’ ಎನ್ನುವುದಕ್ಕೆ ಜ್ವಲಂತ ನಿದರ್ಶನ ನಮ್ಮ ಭಾರತೀಯ ಯುವಜನತೆ. ಹೆಜ್ಜೆಹೆಜ್ಜೆಗೂ ಪಾಶ್ಚಾತ್ಯರ ಅಂಧಾನುಕರಣೆ! ಉಡುಗೆ-ತೊಡುಗೆ. ಆಹಾರ-ವಿಹಾರ, ಕ್ಲಬ್-ಪಬ್, ಕುಣಿತ-ಸಂಗೀತ ಎಲ್ಲದರಲ್ಲೂ ಪಾಶ್ಚಾತ್ಯ ಸಂಸ್ಕೃತಿಯ ವಿಕೃತವಾದ, ಮೌಲ್ಯವಿಹೀನವಾದ ಅನುಕರಣೆ, ಅನುಸರಣೆ! ಕಿವಿಗಡಚ್ಚಿಕ್ಕುವ ವಾದ್ಯಗಳ ಆರ್ಭಟಕ್ಕೆ ಒಂದೋ ಕಿವಿತಮಟೆ ಹರಿದುಹೋಗಬೇಕು; ಇಲ್ಲವೇ ಕಿವಿ ಕಿವುಡಾಗಬೇಕು. ಇನ್ನು ಕುಣಿತವೋ .... ಮದಿರೆಯೇರಿಸಿದ ಮರುಳರ ಹಾಗೆ. ಹೌದು, ಪಾಶ್ಚಾತ್ಯ ಸಂಸ್ಕೃತಿಯ ಅಗ್ಗದ, ಅಬ್ಬರದ ಮನರಂಜನೆಗೆ ಮರುಳಾಗಿ ಅದರ ಪ್ರಭಾವಕ್ಕೊಳಗಾಗಿ, ಈ ನೆಲದ ಸಾರ-ಸತ್ವವನ್ನು ಮರೆತೇ ಬಿಟ್ಟಿರುವ ನಮ್ಮ ಯುವಜನಾಂಗದ ನಡುವೆಯೇ, ಈ ನೆಲದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಯುವಪ್ರತಿಭೆಗಳು ಅಲ್ಲೊಂದು -ಇಲ್ಲೊಂದು ಇವೆ ಎನ್ನುವುದು ನಿಜಕ್ಕೂ ಸಮಾಧಾನದ ಸಂಗತಿ. ಅಂತಹ ಅಪರೂಪದ ಅರಳುಪ್ರತಿಭೆ ಗಮಕ ಗ್ರಾಮ ಹೊಸಹಳ್ಳಿಯ ಗಮಕಿ ರಕ್ಷಿತಾ ಅವಧಾನಿ.
ಉತ್ತಮ ಸ್ವರಮಾಧುರ್ಯ ಹೊಂದಿರುವ ರಕ್ಷಿತಾ ತನ್ನ ವಿದ್ಯಾಭ್ಯಾಸದ ಜೊತೆಜೊತೆಗೆ ಭರತನಾಟ್ಯ, ಕರ್ನಾಟಕ ಸಂಗೀತ, ಗಮಕ ವಾಚನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದಿನ ತಲೆಮಾರಿಗೆ ಗಮಕ ಕಲೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಅಪಸ್ವರದ ನಡುವೆಯೇ ರಕ್ಷಿತಾ ಅವಧಾನಿ ತಾನು ಗಮಕ ಸಂಗೀತವನ್ನು ಅಭ್ಯಸಿಸುತ್ತಲೇ ಇತರರಿಗೆ ಹೇಳಿಕೊಡುತ್ತಿರುವುದು ವಿಶೇಷವೇ. ಎಂ.ಕಾಂ ವಿದ್ಯಾರ್ಥಿನಿಯಾಗಿರುವ ರಕ್ಷಿತಾ ಹೊಸಹಳ್ಳಿಯ ವಿದ್ವಾಂಸ, ಪ್ರಖ್ಯಾತ ಗಮಕಿ ರಾಜಾರಾಮಮೂರ್ತಿ ಮತ್ತು ವಿಜಯಲಕ್ಷ್ಮೀ ಅವರ ಸುಪುತ್ರಿ. ತಂದೆ ನಡೆದ ದಾರಿಯಲ್ಲೇ ಮುಂದುವರೆಯುತ್ತಿರುವ ರಕ್ಷಿತಾ ತಂದೆಯಂತೆಯೇ ಗಮಕವನ್ನು ಉಳಿಸಿ-ಬೆಳೆಸಲು ಮುಂದಾಗಿದ್ದಾರೆ. ಇಂದಿನ ಯುವ ಗಮಕಿಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಆರಂಭದಲ್ಲಿ ಕೇಶವಮೂರ್ತಿಯವರ ಬಳಿ ಗಮಕ ಕಲಿಕೆ ಆರಂಭಿಸಿ, ನಂತರ ತಂದೆಯ ಮಾರ್ಗದರ್ಶನದಲ್ಲಿ ಗಮಕ ಅಭ್ಯಾಸ ಮುಂದುವರೆಸಿದರು. ಈಗ ಗಮಕ ವಾಚನ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಗಮಕದಲ್ಲಿ ಪ್ರಥಮ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಇವರು, ಈಗಾಗಲೇ ಮಕ್ಕಳ ಗಮಕ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ತುಮಕೂರು, ಉಡುಪಿ, ಬೆಂಗಳೂರು ಮತ್ತು ಶಿವಮೊಗ್ಗದ ಹಲವೆಡೆ ಇವರ ಹತ್ತಾರು ಕಾರ್ಯಕ್ರಮ ನಡೆದಿದೆ. ಗಮಕ ವಾಚನ ಮತ್ತು ವ್ಯಾಖ್ಯಾನ ಇವರ ಆಸಕ್ತಿಯ ಕ್ಷೇತ್ರ. ಇವರ ಹಾಡುಗಾರಿಕೆಗೆ ಎಂತಹವರೂ ತಲೆದೂಗಲೇಬೇಕು.
ರಕ್ಷಿತಾ ಶಿವಮೊಗ್ಗದ ಸಮನ್ವಯ ಸಂಸ್ಥೆಯಲ್ಲಿ ಕಳೆದ 5 ವರ್ಷಗಳಿಂದ ಸಕ್ರಿಯ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದು, ಅವರು ಆಯೋಜಿಸುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುವ ಪ್ರಮುಖರಲ್ಲಿ ಒಬ್ಬರು. ಜೊತೆಗೆ ಜೂನಿಯರ್ ಗಾಯಕರಿಗೆ ಇವರು ಮಾರ್ಗದರ್ಶನ ಮಾಡುತ್ತಾರೆ. ಆಡಿಷನ್‌ಗಳನ್ನು ನಡೆಸಿಕೊಡುತ್ತಾರೆ. ಸಮನ್ವಯ ಸಂಸ್ಥೆಯ ಹಿರಿಯ ಸದಸ್ಯೆಯಾಗಿ ಅದರ ಯಶಸ್ಸಿನಲ್ಲಿ ಭಾಗಿಯಾಗಿರುವ ಕಾರಣ ಸಂಸ್ಥೆಯ ಮುಖ್ಯಸ್ಥ ಕಾಶೀನಾಥ್ ’ಸಮನ್ವಯ ಸಾಧನೆ ಪ್ರಶಸ್ತಿ’ಯನ್ನು ಕಳೆದ ಸ್ವಾತಂತ್ರ್ಯೋತ್ಸವದಲ್ಲಿ  ಪ್ರದಾನ ಮಾಡಿ ಪ್ರೋತ್ಸಾಹಿಸಿದ್ದಾರೆ.
ತಾನು ತೊಡಗಿಸಿಕೊಂಡಿರುವ ಕೆಲಸದಲ್ಲಿ ಯಶಸ್ಸು ಸಾಧಿಸುವುದಕ್ಕಾಗಿ ನಿರಂತರ ಶ್ರಮ ಪಡುವುದು ಇವರ ವೈಶಿಷ್ಟ್ಯ . ಇದರ ಜೊತೆಗೆ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನವನ್ನೂ ನೀಡಿದ್ದಾರೆ.  ಶಿವಮೊಗ್ಗದಲ್ಲಿ ನಡೆದ ವಾಯ್ಸ್ ಆಫ್ ಕರ್ನಾಟಕ ಸ್ಪರ್ಧೆಯಲ್ಲಿ ರನ್ನರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಡುಗಾರಿಕೆ ಮೂಲಕ ಉತ್ತಮ ಹೆಸರು ಗಳಿಸಿರುವ ರಕ್ಷಿತಾ, ಸಮನ್ವಯ ಸಂಸ್ಥೆಯಿಂದ ಬೆಳಕಿಗೆ ಬಂದೆ ಎನ್ನುವುದನ್ನು ಸ್ಮರಿಸುತ್ತಾರೆ. ಗಮಕದಲ್ಲೇ ಏನಾದರೂ ವಿಶೇಷ ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ. ಗಮಕ ಕಲಿಕೆಯಿಂದ ನೆನಪಿನ ಶಕ್ತಿ ಅಧಿಕವಾಗುತ್ತದೆ ಎನ್ನುವುದು ಅವರ ಅಭಿಮತ.
 ಈ ಅರಳುಪ್ರತಿಭೆ ಗಮಕ ಲೋಕದ ಉಜ್ವಲ ನಕ್ಷತ್ರವಾಗಿ ಪ್ರಜ್ವಲಿಸಲಿ.
...............................   ,,,,,,,,,,,,,,,,,,,,,,,


No comments:

Post a Comment