Monday 14 November 2016

ಕನ್ನಡ ಕಂಪು ಪಸರಿಸುತ್ತಿರುವ 
ಕನ್ನಡ ಮೂರ್ತಿ

 ..
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕುವೆಂಪು ಕವಿತೆಯ ಈ ಸಾಲುಗಳು ಕೇವಲ ಪಠ್ಯದ ಸಾಲುಗಳಾಗಿಯೋ, ಅಥವಾ ನವೆಂಬರ್ ತಿಂಗಳಲ್ಲೋ ನಮಗೆ ನೆನಪಾಗಬಹುದು. ಆದರೆ ಕನ್ನಡವನ್ನೇ ಉಸಿರಾಗಿಸಿಕೊಂಡು, ತನ್ನ ಕಾಯಕದೊಂದಿಗೆ ಕನ್ನಡ ನಾಡು-ನುಡಿಯ ಸೇವೆ ಮಾಡುತ್ತಿರುವ ಅಪರೂಪದ ವ್ಯಕ್ತಿಯೊಬ್ಬರು  ಶಿವಮೊಗ್ಗದಲ್ಲಿದ್ದಾರೆ. ಕನ್ನಡಕ್ಕಾಗಿ ಇವರ ಹೃದಯ ಸದಾ ತುಡಿಯುತ್ತಿರುತ್ತದೆ; ಮನಸ್ಸು ಮಿಡಿಯುತ್ತಿರುತ್ತದೆ. ಹೌದು, ಇಂಥ ಅಪರೂಪದ ವ್ಯಕ್ತಿಯೇ  ನರಸಿಂಹಮೂರ್ತಿ. ಉಹ್ಞುಂ, ಹೀಗೆಂದರೆ ಯಾರೊಬ್ಬರಿಗೂ ಅರ್ಥವಾಗಲಾರದು. ಆದರೆ ’ಕನ್ನಡ ಮೂರ್ತಿ’ಯೆಂದರೆ ಎಲ್ಲರಿಗೂ ಅರ್ಥವಾದೀತು.
 ಎಲ್ಲರಿಗಿಂತ ಭಿನ್ನವಾಗಿ, ವಿಶಿಷ್ಟವಾಗಿ ಗುರುತಿಸಿಕೊಂಡು, ಕನ್ನಡದ ಕೀರ್ತಿಪತಾಕೆಯನ್ನು ಹಾರಿಸಿದವರು ಕನ್ನಡಮೂರ್ತಿ! ಶಿವಮೊಗ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅಶೋಕ ಹೊಟೇಲ್ ಎದುರಿಗಿರುವ ಇಸ್ತ್ರಿ ಅಂಗಡಿಯೇ ಇವರ ಕಾಯಕ ಸ್ಥಾನ. ಈ ಪುಟ್ಟ ಅಂಗಡಿಯ ತುಂಬೆಲ್ಲ ಕನ್ನಡದ ಅತಿರಥ-ಮಹಾರಥರ ಭಾವಚಿತ್ರಗಳೇ ತುಂಬಿವೆ. ತನ್ನ ಕಾಯಕದ ಮಧ್ಯೆಯೇ ಕನ್ನಡವೇ ಸರ್ವಸ್ವ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ. ಸುಮಾರು 25 ವರ್ಷದಿಂದ ಅಂಗಡಿ ನಡೆಸುತ್ತಿರುವ ಅವರು, ಕನ್ನಡ  ಜಾಗೃತಿ ಮೂಡಿಸುತ್ತಿದ್ದಾರೆ. ಅಶೋಕ ಹೊಟೇಲ್‌ಗೆ ಬಂದ ಬಹುತೇಕರು ಈ ಅಂಗಡಿಯನ್ನು ಗಮನಿಸಿ ಭೇಟಿ ನೀಡುತ್ತಾರೆ. ಅಷ್ಟೊಂದು ಸೂಜಿಗಲ್ಲಿನ ಸೆಳೆತ ಮೂರ್ತಿಯವರ ಅಂಗಡಿಗಿದೆ. ನೋಡಲು ಚಿಕ್ಕದಾದ ಅಂಗಡಿಯಾದರೂ, ಅದು ಚೊಕ್ಕವಾದ ಸಾಹಿತ್ಯದ ಮನೆಯೇ ಆಗಿದೆ. ಕನ್ನಡ ಭುವನೇಶ್ವರಿ, ಕುವೆಂಪು ಮತ್ತು ವರನಟ ರಾಜಕುಮಾರ್ ಅವರ ಬೃಹತ್ ಚಿತ್ರಗಳು, ಎಲ್ಲ ಸಾಹಿತ್ಯ ದಿಗ್ಗಜಗಳ ಫೋಟೊ, ಅವರ ಸಾಹಿತ್ಯ ಸೇವೆಯ ವಿವರ, ಸಾಧನೆಗಳನ್ನು ಸಂಗ್ರಹಿಸಿ ಅಲ್ಬಂ ಮಾಡಿಸಿಟ್ಟಿದ್ದಾರೆ.
ಅಂಗಡಿಯಲ್ಲಿ ಕನ್ನಡದ ಕೆಲವು ಪ್ರಮುಖ ಸಾಹಿತಿಗಳ ಕುರಿತಾದ ಕಿರು ಪುಸ್ತಕ ಪ್ರಕಟಿಸಿ ಇಟ್ಟುಕೊಂಡಿದ್ದು, ಬಂದವರ ಕೈಗೆ ಕೊಟ್ಟು ಓದುವಂತೆ ಪ್ರೇರೇಪಿಸುತ್ತಾರೆ. ಪ್ರತಿವರ್ಷ ತಮ್ಮ ಅಂಗಡಿ ಎದುರು ಪೆಂಡಾಲ್ ಹಾಕಿ ರಾಜ್ಯೋತ್ಸವ ಆಚರಿಸುತ್ತಾರೆ.  ಕನ್ನಡ ಸೇವೆಗೆ ಯಾರಿಂದಲೂ ಬಿಡಿಗಾಸನ್ನೂ ಪಡೆಯದೆ, ತಮ್ಮ ದುಡಿಮೆಯ ಹಣದಿಂದಲೇ ಕನ್ನಡಸೇವೆ ಮಾಡುತ್ತಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರಾದ ಮೂರ್ತಿ, ಎಸ್ಸೆಸ್ಸೆಲ್ಸಿ ನಂತರ ತಾಯಿಯ ತವರು ಶಿವಮೊಗ್ಗಕ್ಕೆ ಬಂದು ನೆಲೆಸಿದರು.  ಹೈಸ್ಕೂಲ್ ಓದುವಾಗಲೇ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿತು. ಅಲ್ಲಿಂದ ಶುರುವಾಗಿ ಇಂದಿನವರೆಗೂ ಬೆಳೆದು ಈ  ಮಟ್ಟಕ್ಕೆ ಬೆಳೆದು ನಿಂತಿದೆ. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರನ್ನು ಗುರು ಎಂದೇ ಕಾಣುವ ಮೂರ್ತಿ, ತನ್ನ ಅಂಗಡಿಗೆ ಅವರು ಭೇಟಿ ನೀಡಿದಾಗ ‘ಕನ್ನಡ ಕಸ್ತ್ತೂರಿ ಇಸ್ತ್ರಿ ಅಂಗಡಿ’ ಎಂದು ಬರೆಯಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅದೇ ಹೆಸರನ್ನು ಇಟ್ಟುಕೊಂಡಿದ್ದಾರೆ. ಸಾಹಿತಿ ನಾ. ಡಿಸೋಜಾ ಈ ಅಂಗಡಿಗೆ ಭೇಟಿ ನೀಡಿದ್ದನ್ನು ಅವರು ಸ್ಮರಿಸುತ್ತಾರೆ.
ಎಲ್ಲರೂ ಬೆಳಿಗ್ಗೆ ದೇವರಿಗೆ ಪೂಜೆ ಮಾಡಿದರೆ ಮೂರ್ತಿ ದೇವರ ಜೊತೆ  ಕನ್ನಡಾಂಬೆಯ ಪೂಜೆ ಮಾಡುತ್ತಾರೆ. ರಾಜ್ಯೋತ್ಸವ ಸಂದರ್ಭದಲ್ಲಿ ಶಾಲೆಗಳಿಗೆ ಸ್ವಂತ ಖರ್ಚಿನಲ್ಲಿ ಕನ್ನಡ ಬಾವುಟ ವಿತರಿಸುತ್ತಾರೆ. ಶಿವಮೊಗ್ಗಕ್ಕೆ ಯಾವುದೇ ಸಾಹಿತಿ, ಕಲಾವಿದರು ಬಂದರೆ ತಮ್ಮ ಅಂಗಡಿಗೆ ಆಹ್ವಾನಿಸಿ ಗೌರವಿಸುತ್ತಾರೆ.  ಪ್ರತಿಯೊಬ್ಬರೂ ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಕನ್ನಡದ ಬಗ್ಗೆ ಮಮಕಾರವಿರಬೇಕು; ಕನ್ನಡಾಂಬೆಗೆ ತಮ್ಮ ಕೈಲಾದ ಸೇವೆಯನ್ನು ಮಾಡಬೇಕು; ನಾಡಿಗೆ ಏನಾದರೂ ಕಾಣಿಕೆ ನೀಡಬೇಕು ಅನ್ನುತ್ತಾರೆ. ಪ್ರಾಯಶಃ ಕವಿ ಕುವೆಂಪು ಅವರ ಕನ್ನಡಕ್ಕಾಗಿ ಕೊರಳೆತ್ತು-ನಿನ್ನ ಧ್ವನಿ ಪಾಂಚಜನ್ಯವಾಗುತ್ತದೆ; ಕನ್ನಡಕ್ಕಾಗಿ ನಿನ್ನ ಕಿರುಬೆರಳೆತ್ತ್ತಿದರೂ ಸಾಕು- ಅದು ಗೋವರ್ಧನಗಿರಿಯಾಗುತ್ತದೆ ಎನ್ನುವ ಮಾತು ಮೂರ್ತಿಯವರಿಗೆ ಸ್ಫೂರ್ತಿಯಾಗಿರಲೂಬಹುದು.
ಕನ್ನಡ ಪುಸ್ತಕಗಳ ಉಚಿತ ಗ್ರಂಥಾಲಯವನ್ನು ಸ್ಥಾಪಿಸುವ ಮಹದಾಸೆ ಹೊಂದಿರುವ ಕನ್ನಡ ಮೂರ್ತಿಯವರ ಕನಸು ನನಸಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
published on nov 21, 2015

....................................

No comments:

Post a Comment