Monday 14 November 2016

ಕುಂಚದೊಂದಿಗೆ ಸರಸವಾಡುವ ಚಿಣ್ಣ
ಪ್ರಣೀಲ್

"ಬೆಳೆಯ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತೊಂದಿದೆ. ಮಕ್ಕಳು ಬಾಲ್ಯದಲ್ಲಿ ಯಾವ ಕ್ಷೇತ್ರದಲ್ಲಿ ಆಸಕ್ತಿ ಇಟ್ಟು ಕಲಿಯುತ್ತಾರೋ, ಯಾವ ವಿಷಯಕ್ಕೆ ಗಮನ ಕೊಡುತ್ತಾರೊ ಆ ಕ್ಷೇತ್ರ ಅಥವಾ ವಿಷಯದಲ್ಲಿ ನಿಷ್ಣಾತರಾಗುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ನಗರದ ವಿದ್ಯಾರ್ಥಿ ಪ್ರಣೀಲ್ ಬಿ. ಸತಾರೆ.
ಹೌದು, ನಗರದ ವಾಸವಿ ಶಾಲೆಯ ವಿದ್ಯಾರ್ಥಿ ಪ್ರಣೀಲ್ ಚಿತ್ರಕಲೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯಪ್ರಶಸ್ತಿಗೆ ಭಾಜನನಾಗಿದ್ದಾನೆ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈತ  ಕಲಾತ್ಮಕವಾಗಿ ಚಿತ್ರಗಳನ್ನು  ಬಿಡಿಸುವುದರಲ್ಲಿ ಸಿದ್ಧಹಸ್ತ. ಐದನೆಯ ತರಗತಿಯಲ್ಲಿ ಓದುತ್ತಿರುವ ಈತ, ನಗರದ ಖ್ಯಾತ ರವಿವರ್ಮ ಚಿತ್ರಕಲಾ ಶಾಲೆಯ ವಿದ್ಯಾರ್ಥಿ. ಈತನಿಗೆ ಚಿತ್ರಕಲೆಯಲ್ಲಿರುವ ಪ್ರತಿಭೆಯನ್ನು ಗುರಿತಿಸಿ, ಅದಕ್ಕೆ ಪ್ರೋತ್ಸಾಹದ ನೀರು-ಗೊಬ್ಬರ ಹಾಕಿ ಬೆಳೆಸಿದವರು ರವಿವರ್ಮ ಚಿತ್ರಕಲಾ ಶಾಲೆಯ ಗುರುಗಳಾದ ಶ್ರೀಧರ ಕಂಬಾರ್ .
 ಪ್ರಣೀಲ್ ಚಿತ್ರಕಲೆಯಲ್ಲಷ್ಟೇ ಅಲ್ಲ, ವಿದ್ಯಾಭ್ಯಾಸದಲ್ಲೂ ಮುಂದು. ಈತ ನಗರದ ದಂತವೈದ್ಯ ಡಾ. ಭರತ್ ಮತ್ತು ಡಾ. ಲಲಿತಾ ಅವರ ಪುತ್ರ. ಬಾಲ್ಯದಲ್ಲೇ ಈತನ ಚಿತ್ರಕಲಾ ಆಸಕ್ತಿ ಗಮನಿಸಿ ಪಾಲಕರು ಪಠ್ಯದ ಜೊತೆ  ಚಿತ್ರಕಲೆ ಕಲಿಯಲು ಪ್ರೇರೇಪಿಸಿ ಚಿತ್ರಕಲಾ ಶಾಲೆಗೆ ಸೇರಿಸಿದರು. ಪರಿಣಾಮವಾಗಿ ಅದರಲ್ಲಿ ಈಗ ಮಹತ್ತರ ಸಾಧನೆಯನ್ನು ಮಾಡುತ್ತಿದ್ದಾನೆ. ಈವರೆಗೆ ಸುಮಾರು 200ಕ್ಕೂ ಹೆಚ್ಚು ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ, ಪ್ರಶಸ್ತಿ ಗಳಿಸಿದ್ದಾನೆ. ರಾಜ್ಯದಲ್ಲಿ ಎಲ್ಲೇ ಚಿತ್ರಕಲಾ ಸ್ಪರ್ಧೆ ಇದ್ದರೂ  ಕಲಾಶಿಕ್ಷಕ ಕಂಬಾರ್ ಅವರ ಮಾರ್ಗದರ್ಶನ ಪಡೆದು ಆತನನ್ನು ಪಾಲಕರು ಕರೆದೊಯ್ಯುತ್ತಿದ್ದಾರೆ.
  ಇತ್ತೀಚೆಗೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಏರ್ಪಡಿಸಿದ್ದ ಹಸಿರು ಉಳಿಸಿಕೊಂಡು ಸ್ಮಾರ್ಟ್ ಸಿಟಿ ನಿರ್ಮಿಸುವುದು ಹೇಗೆ  ಎಂಬ ಪರಿಕಲ್ಪನೆಯ ಚಿತ್ರಕಲಾ ಸ್ಪರ್ಧೆಯಲ್ಲೂ ಪಾಲ್ಗೊಂಡು ತನ್ನ ಚಿತ್ರದ ಮೂಲಕ ಇದನ್ನು ನಿರೂಪಿಸಿ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಈತನಲ್ಲಿ ಎಳೆವೆಯಿಂದಲೇ ಚಿತ್ರಕಲೆ ಮೈಗೂಡಿ ಬಂದಿರುವುದರಿಂದ ಹಂತಹಂತವಾಗಿ ಅದು ಮೈದುಂಬಿಕೊಂಡಿದೆ. ಈತನ ಕುಂಚದಿಂದ ಬಣ್ಣ ತುಂಬಿಕೊಂಡ ಚಿತ್ರಗಳು ಜೀವಪಡೆದು ನಲಿಯುವಂತೆ ಭಾಸವಾಗುತ್ತವೆ. ಈ ಪೋರನ ಅನುಪಮ ಸಾಧನೆಯನ್ನು ಗಮನಿಸಿಯೇ 2015ರ ಸಾಲಿನ ’ಅಸಾಧಾರಣ ಪ್ರತಿಭೆ’ ಎಂದು  ಕರ್ನಾಟಕ ಸರ್ಕಾರ ಗುರುತಿಸಿದೆ.  ಮಾತ್ರವಲ್ಲ, ಇತ್ತೀಚೆಗೆ ನಡೆದ ಮಕ್ಕಳ ದಿನಾಚರಣೆಯಂದು ಬೆಂಗಳೂರಿನ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಂದ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.
ಅಂಚೆ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಈತ ಮೂರನೆಯ ಸ್ಥಾನ ಗಳಿಸಿದ್ದರೆ, ಮಂಡ್ಯದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. ಕಳೆದ ವರ್ಷ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈತನನ್ನು ಸನ್ಮಾನಿಸಿ ಗೌರವಿಸಿದೆ. ವಾಸವಿ ಶಾಲೆಯವರೂ ಸಹ ಈತನ ಪ್ರತಿಭೆ ಗಮನಿಸಿ ಗೌರವಿಸಿದ್ದಾರೆ. ತೋಟಗಾರಿಕಾ ಇಲಾಖೆಯ ಫಲಪುಷ್ಪ ಮೇಳದ ನಿಮಿತ್ತ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲೂ ಎರಡನೆಯ ಸ್ಥಾನ ಗಳಿಸಿದ್ದಾನೆ.
  ಮುಂದಿನ ದಿನಗಳಲ್ಲಿ ಈತನನ್ನು ಗ್ರೇಡ್ ಪರೀಕ್ಷೆಗಳಿಗೆ ತಯಾರು ಮಾಡುವ ಹಂಬಲವನ್ನು ಪಾಲಕರು ಹೊಂದಿದ್ದಾರೆ. ಚಿತ್ರಕಲೆಯಲ್ಲಿ ಹೇಳಿಕೊಟ್ಟ ವಿಷಯಗಳನ್ನು ಸರಿಯಾಗಿ ಗ್ರಹಿಸುವ ಶಕ್ತಿ ಈತನಲ್ಲಿದೆ. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡುವ ಮೂಲಕ ಸಾಧನೆ ಮಾಡುತ್ತಿದ್ದಾನೆ ಎನ್ನುತ್ತಾರೆ ಶಿಕ್ಷಕ ಕಂಬಾರ್.
 ಕಲೆ ಸರ್ವೋತ್ಕೃಷ್ಟವಾದುದು, ಸರ್ವಜನಾನಂದಕಾರಿಯಾದುದು. ಜನರ ಮೈ-ಮನ, ಹೃದಯದಲ್ಲಿ ಅದು ನೆಲೆಗೊಳ್ಳುವಂತಹುದು.  ರಸದೃಷ್ಟಿ, ರಸಸೃಷ್ಟಿ ಕಲೆಯ ಅಂತರಂಗದಲ್ಲಿ ಅಡಗಿದೆ ಎನ್ನುತ್ತಾರೆ ಕವಿಗಳು. ಅದರಂತೆ ಇದನ್ನು ಸಾಕ್ಷೀಕರಿಸುವ ಮೂಲಕ ದೇಶ ಮೆಚ್ಚುವಂತಹ, ವಿಶ್ವ ಬೆಳಗುವಂತಹ ಉತ್ತಮ ಕಲಾವಿದನಾಗಿ ಪ್ರಣೀಲ್ ಕೀರ್ತಿಯ ಉತ್ತುಂಗ ಶಿಖರವನ್ನು ತಲುಪಲಿ ಎನ್ನುವುದು ಎಲ್ಲರ ಆಶಯ.
published on28-11-2015

No comments:

Post a Comment