Saturday 12 November 2016

ತುಂಡು ಭೂಮಿಯಲ್ಲಿ ಚಿನ್ನದ ಬೆಳೆ ತೆಗೆವ
ಅಪೂರ್ವ ರೈತ ಧರ್ಮಪ್ಪ
........................................................

ನೇಗಿಲ ಯೋಗಿಯು ನಾನು
ಮಣ್ಣಿನ ಭೋಗಿಯು ನಾನು
ಎನ್ನುವ ಪಲ್ಲವಿ, ಅನುಪಲ್ಲವಿಯನ್ನೇ ಉಸಿರಾಗಿಸಿಕೊಂಡು, ನಿಸರ್ಗದ ಬಯಲು ವೇದಿಕೆೆಯಲ್ಲಿ ’ಕಾಯಕವೇ ಕೈಲಾಸ’ ಎಂದು ಬದುಕುತ್ತಿರುವ ಸ್ವಾಭಿಮಾನಿ, ಮಾದರಿ ರೈತ ಧರ್ಮಪ್ಪ.  ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಧರ್ಮಪ್ಪ ಅವರು ದಾರಿದೀಪವಾಗಿದ್ದಾರೆ. ಧರ್ಮಪ್ಪ ಅವರ ಬಳಿ ಇರುವುದು ಕೇವಲ ಎರಡೇ ಎರಡು ಎಕರೆ ಭೂಮಿ. ಅದರಲ್ಲೂ ಒಂದು ಎಕರೆ ಮಾತ್ರ ನೀರಾವರಿ ಭೂಮಿ;  ಇನ್ನೊಂದು ಎಕರೆ ಒಣಭೂಮಿ. ಧರ್ಮಪ್ಪನವರ ಕೃಷಿಸಾಹಸ ಈ ದೇಶದ ಅನ್ನದ ಸಮಸ್ಯೆಗೊಂದು ಸಮರ್ಥವಾದ ಉತ್ತರ. ಕೃಷಿಗೆ ಫಲವತ್ತಾದ ಭೂಮಿ ಬೇಕು; ಸಮೃದ್ಧವಾದ ನೀರು ಬೇಕು; ಅದನ್ನು ಎತ್ತಿ ಹಾಕಲು ಪಂಪು ಬೇಕು; ಪಂಪಿಗೆ ಕರೆಂಟು ಬೇಕು; ಸುಧಾರಿತ ಬೀಜ ತಳಿ ಬೇಕು; ಬ್ಯಾಂಕಿನಿಂದ ಇದಕ್ಕೆಲ್ಲ ಸಾಲ ಬೇಕು; ಸಬ್ಸಿಡಿ ಬೇಕು ಎಂದು ಬೊಬ್ಬೆ ಹೊಡೆಯುವ, ಕೃಷಿ ಫೂಮಿಯನ್ನು ಪಾಳು ಬಿಡುವ ಸೋಮಾರಿ ಕೃಷಿಕರಿಗೆ ಧರ್ಮಪ್ಪ ಅವರು ನಿಜಕ್ಕೂ ಮಾದರಿ.
 ತುಂಡುಭೂಮಿಯ ಕೃಷಿಕನೊಬ್ಬ ಉತ್ತಮವಾಗಿ ಕಟ್ಟಿಕೊಂಡು, ತನ್ನ ಮೂವರೂ ಪುತ್ರರಿಗೆ ಇಂಜಿನಿಯರಿಂಗ್ ಓದಿಸಿ, ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ರೈತ ಆತ್ಮಹತ್ಯೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ರೈತ ಅದ್ಹೇಗೆ  ಸಾಧನೆ ಮಾಡಿದ ಎಂದು ಗಮನಿಸಿದರೆ ಎಂತಹವರಾದರೂ ಮೂಗಿನ ಮೇಲೆ ಬೆರಳಿಡಬೇಕು.
ಧರ್ಮಪ್ಪ ಭದ್ರಾವತಿ ಸಮೀಪದ ಸಂಕ್ಲೀಪುರ ಗ್ರಾಮದವರು. ಓದಿದ್ದು ಒಂದನೆಯ ಕ್ಲಾಸು. ಇರುವುದು ಎರಡು ಎಕರೆ ಜಮೀನು. . ಇಂತಹ ಸ್ಥಿತಿಯಲ್ಲಿ ಜಮೀನು ಮಾಡಿಕೊಂಡು ಮೂವರು ಗಂಡುಮಕ್ಕಳೊಂದಿಗೆ ಸಂಸಾರ ಸಾಗಿಸುವುದೇ ದುಸ್ತರ. ಆದರೂ ಇವರು  ಕಷ್ಟಪಟ್ಟು, ಇಷ್ಟಪಟ್ಟು ದುಡಿದು ಬದುಕನ್ನು ಕಟ್ಟಿಕೊಂಡಿದ್ದಾರೆ. ತನ್ನ ಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ.
ಒಂದು ಎಕರೆ ನೀರಾವರಿ ಭೂಮಿಯಲ್ಲಿ ಕಬ್ಬು-ಭತ್ತ ಬೆಳೆದರೆ, ಇನ್ನೊಂದು ಎಕರೆ ಒಣಭೂಮಿಯಲ್ಲಿ ಏನು ಬೆಳೆಯಬೇಕೆಂದು ಚಿಂತಿಸುವಾಗಲೇ ಅಡಕೆ ಬೆಳೆಯುವಂತೆ ಮಿತ್ರರಾರೋ ಕೊಟ್ಟ ಸಲಹೆ ಪ್ರಕಾರ ಅದನ್ನು ನೆಟ್ಟರು. ಈಗ ತೋಟ ಉತ್ತಮ ಫಸಲು ನೀಡುತ್ತಿದೆ. ಒಣಭೂಮಿಯಲ್ಲಿ ಪಂಪ್‌ಸೆಟ್ ಹಾಕಿಸಿ ಅಡಕೆ ತೋಟ ನಳನಳಿಸುವಂತೆ ಮಾಡಿದ್ದಾರೆ. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರೂ ಹೆದರದೆ ಅದನ್ನೆಲ್ಲ ತೀರಿಸಿದ್ದಾರೆ. ಈ ಮಧ್ಯೆ ಮೂವರು ಮಕ್ಕಳಿಗೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿಸಿದ್ದಾರೆ. ಇವರ ಶಿಕ್ಷಣಕ್ಕೂ ಸಾಲ ಮಾಡಿ, ಅದನ್ನೂ ಸಹ ಬೆಳೆಯಿಂದ ಬಂದ ಹಣದಲ್ಲೇ ತೀರಿಸಿದ್ದಾರೆ. ಇಬ್ಬರು ಮಕ್ಕಳು ಈಗ ಎಚ್‌ಎಎಲ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ದುಡಿಯುತ್ತಿದ್ದಾರೆ. ಇನ್ನೊಬ್ಬ ನೌಕರಿಯ ಹುಡುಕಾಟದಲ್ಲಿದ್ದಾನೆ.
ತಾನು ಮತ್ತು ಪತ್ನಿ ಕೇವಲ ಒಂದನೆಯ ತರಗತಿ ಓದಿದ್ದರೂ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಿ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಹೊಲ, ತೋಟದ ಕೆಲಸ ಮುಗಿಸಿ ಗ್ರಾಮದ ಇತರ ಮನೆಗಳಿಗೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇಷ್ಟೊಂದು ದುಡಿಮೆಯ ವ್ಯಕ್ತಿಯನ್ನು ಭೂತಾಯಿ ಚೆನ್ನಾಗಿ ಸಾಕಿ ಸಲುಹಿದೆ. ‘ದುಡಿಮೆಯೇ ದುಡ್ಡಿನ ತಾಯಿ’ ಎನ್ನುವ ಮಾತು ಇವರಂತಹವರಿಗೆ ಅಕ್ಷರಶಃ. ಸಲ್ಲುತ್ತದೆ. ಈಗ ಟಿಲ್ಲರ್, ಬೈಕ್ ಖರೀದಿಸಿದ್ದಾರೆ. ಆರ್‌ಸಿಸಿ ಮನೆ ಕಟ್ಟಿಕೊಂಡಿದ್ದಾರೆ.ಯಾವುದೇ ದುಶ್ಚಟಗಳು ಇವರಲ್ಲಿಲ್ಲ. ಹೊಲ, ಮನೆ, ದುಡಿಮೆ ಇವೇ ಅವರ ಮಂತ್ರ.
ಹೈನುಗಾರಿಕೆಯಲ್ಲೂ ಇವರು ಹಿಂದೆ ಬಿದ್ದಿಲ್ಲ. ಜಮೀನು ಜೊತೆಯೇ ಆಕಳು, ಎಮ್ಮೆಯನ್ನು ಕಟ್ಟಿಕೊಂಡಿದ್ದಾರೆ. ಹೊಲಕ್ಕೆ ಬೇಕಾಗುವಷ್ಟು ಗೊಬ್ಬರವನ್ನು  ತಯಾರು ಮಾಡಿಕೊಳ್ಳುತ್ತಾರೆ. ಏಕವ್ಯಕ್ತಿಯಾಗಿ ದುಡಿಯುವ ಗಂಡನಿಗೆ ಹೆಂಡತಿ ಸಾಥ್ ನೀಡುತ್ತಿದ್ದಾಳೆ. ಕಡಿಮೆ ಜಮೀನಿದೆ ಎಂದು ಯಾವತ್ತೂ ಕೊರಗದೆ ಇರುವ ಜಮೀನನ್ನೇ ಹೊನ್ನು ಬೆಳೆಯುವ ಭೂಮಿಯನ್ನಾಗಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ಇವರು ಮಾಡಿದ ಸಾಧನೆ ಕಂಡು ಇಡೀ ಗ್ರಾಮಸ್ಥರೇ ಅಚ್ಚರಿಪಟ್ಟಿದ್ದಾರೆ    
ಕೃಷಿಯಲ್ಲಿ ಲಾಭ ಗಳಿಸಬೇಕಾದರೆ ಹೆಚ್ಚು ಭೂಮಿ ಇರಬೇಕೆನ್ನುವವರೇ ಅಧಿಕ. ಆದರೆ ಇರುವ ಜಮೀನಿನಲ್ಲೇ ಹೇಗೆ ರ್ಜರಿ ಲಾಭ ಮಾಡಬಹುದು ಎನ್ನುವುದಕ್ಕೆ ಮಾರ್ಗ ಗೊತ್ತಿರಬೇಕು. ಸಾಂಪ್ರದಾಯಿಕ ಕೃಷಿಗೆ ಕಟ್ಟುಬೀಳಬಾರದು. ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿಕೊಳ್ಳಬೇಕು. ಆಗ ಮಾತ್ರ ಸ್ವಾವಲಂಬಿಗಳಾಗಲು ಸಾಧ್ಯ ಎನ್ನುವ ಧರ್ಮಪ್ಪ, ತನ್ನ ಜಮೀನಿಗೆ ಅನೇಕರು ಭೇಟಿ ನೀಡಿ ಸಾಧನೆ ನೋಡಿ ’ಭೇಷ್’ ಎಂದು ಬೆನ್ನುತಟ್ಟಿದ್ದಾರೆ ಎಂದು ಸಂತಸದಿಂದ ನುಡಿಯುತ್ತಾರೆ.
 ಸಾಲ ಮಾಡಿಕೊಂಡಾಕ್ಷಣ ಹೆದರಬಾರದು. ಒಂದೇ ಬೆಳೆಗೆ ಜೋತುಬೀಳಬಾರದು. ಭೂಮಿಯ ಜೊತೆ ಚೆನ್ನಾಗಿ ತೊಡಗಿಸಿಕೊಂಡರೆ ಸಾಧನೆ ಮಾಡಿ ಸಾಲ ತೀರಿಸಲು ಸಾಧ್ಯ. ರೈತರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಸಾಗುವಳಿ ಮಾಡಬೇಕು ಎನ್ನುತ್ತಾರೆ ಧರ್ಮಪ್ಪ.
"ಭೂಮಿತಾಯಿ ಎಂದೂ ಬಂಜೆಯಲ್ಲ; ಬರಡಲ್ಲ. ನನ್ನ  ಹಾಗೆಯೇ ನೀವೂ ಹಸುರಿನ ಬೀಜಬಿತ್ತಿ; ಕಷ್ಟಪಟ್ಟು, ಇಷ್ಟಪಟ್ಟು ದುಡಿಯಿರಿ. ಪ್ರಕೃತಿಮಾತೆ ನಿಮ್ಮನ್ನು ತಕ್ಕೈಸಿಕೊಂಡು ಬೆಳೆಸುತ್ತಾಳೆ" ಎನ್ನುವುದು ರೈತಸಮುದಾಯಕ್ಕೆ ಧರ್ಮಪ್ಪನವರ ಕಿವಿಮಾತು.
Published on sep- 26, 2015
...........................................

1 comment:

  1. ಸರ್ ಆಡಿಸನ್

    Addisonfinancialorporation@gmail.com

    ಹಲೋ ನಿಮಗೆ ಆರ್ಥಿಕವಾಗಿ ಹಿಂಡಿದ ಅಗತ್ಯವಿದೆಯೇ? ಸಾಲ ಮತ್ತು ಸಾಲಗಳನ್ನು ಪಾವತಿಸಲು ನೀವು ಹಣ ಬೇಕೇ? ನಿಮ್ಮ ಸ್ವಂತ ವ್ಯವಹಾರವನ್ನು ಸ್ಥಾಪಿಸಲು ನೀವು ಹಣವನ್ನು ಹುಡುಕುತ್ತಿದ್ದೀರಾ? ನೀವು ವಿವಿಧ ಉದ್ದೇಶಗಳಿಗಾಗಿ ಖಾಸಗಿ ಅಥವಾ ವ್ಯವಹಾರ ಸಾಲ ಅಗತ್ಯವಿದೆಯೇ? ದೊಡ್ಡ ಯೋಜನೆಗಳಿಗೆ ನೀವು ಕ್ರೆಡಿಟ್ ಬಯಸುವಿರಾ? ಇಂದು ನಮ್ಮಿಂದ ಸಾಲವನ್ನು ಪಡೆದುಕೊಳ್ಳಿ ಮತ್ತು ಲಾಭದಾಯಕ ಏನನ್ನಾದರೂ ಪ್ರಾರಂಭಿಸಿ. ನಾವು ನಮ್ಮ ಗ್ರಾಹಕರೊಂದಿಗೆ ಸೌಹಾರ್ದ ಸಂಬಂಧವನ್ನು ಸ್ಥಾಪಿಸಿದ್ದೇವೆ ಎಂದು 100% ಭರವಸೆ ನಮ್ಮ ಕಾರ್ಯಾಚರಣೆಗಳು. ಯಾವುದೇ ಕ್ರೆಡಿಟ್ ಚೆಕ್ ಸಾಲಗಳು, ಯಾವುದೇ ಮೇಲಾಧಾರ, ತುರ್ತು ಹಂತಗಳು, ನಾವು ಕ್ಷಿಪ್ರ ಹಣಕಾಸು ಮತ್ತು ಕಡಿಮೆ ಬಡ್ಡಿ ದರವನ್ನು 3% ಒದಗಿಸುತ್ತೇವೆ. ಹಣಕಾಸಿನ ವೈಫಲ್ಯಕ್ಕೆ ಇದು ಕಾರಣವಾಗಿದೆ? ಇಂದು, ನಮ್ಮನ್ನು ಇ-ಮೇಲ್ ಮೂಲಕ ulaş ಯು: addisonfinancialorporation @ gmail.

    ಅಡಿಸನ್ ಫೈನಾನ್ಷಿಯಲ್ ಕಾರ್ಪೊರೇಶನ್ @ gmail.

    ಅಡಿಸನ್ ಕಂಪನಿ

    ReplyDelete