Tuesday 23 January 2018

ದಾಖಲೆಯ ರಕ್ತದಾನಿ
ಯಜ್ಞನಾರಾಯಣ


18ನೆಯ ವರ್ಷಕ್ಕೆ ಯೌವ್ವನ ಬರುತ್ತದೆ, ವಾಹನ ಚಾಲನೆಗೆ ಅನುಮತಿ ಸಿಗುತ್ತದೆ. ಆ ವರ್ಷದಿಂದಲೇ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವವುಳಿಸುವ ಜವಾಬ್ದಾರಿಯನ್ನು ಆರಂಭಿಸಿ ಎನ್ನುವ ಮಾತಿದೆ. ರಕ್ತದಾನದಿಂದ ನಾವು ಕಳೆದುಕೊಳ್ಳುವಂತದ್ದೇನಿಲ್ಲ. ಬದಲಿಗೆ ಒಂದು ಜೀವವನ್ನು ಉಳಿಸಿದಂತಾಗುತ್ತದೆ. ತಾಯಿಯ ಕಣ್ಣೀರು ಮಗುವಿನ ಜೀವ ಉಳಿಸದೆ ಇರಬಹುದು, ಆದರೆ ನಾವು ದಾನ ಮಾಡುವ ಒಂದು ಹನಿ ರಕ್ತ  ಆ ಜೀವವನ್ನು ಉಳಿಸಬಲ್ಲದು.
ರಕ್ತದಾನ ಮಹಾದಾನ ಎಂದು ತಿಳಿದು ರಕ್ತ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಜಾಗೃತಿ  ಉಂಟಾಗುತ್ತಿದೆ. ಶಿವಮೊಗ್ಗದಲ್ಲಿ ರಕ್ತದಾನ ಮಾಡಿ ದಾಖಲೆ ಮಾಡಿದವರಿದ್ದಾರೆ. ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಎಸ್. ಜಿ. ಯಜ್ಞನಾರಾಯಣ 106 ಬಾರಿ ರಕ್ತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ, ಇತರರಿಗೆ ಮಾದರಿಯಾಗಿದ್ದಾರೆ. ಯಜ್ಞನಾರಾಯಣ ಅವರಿಗೆ ಈಗ 77ರ ಹರಯ. ರಕ್ತದಾನಿಗಳಿಗೆ ಇವರು ಪ್ರೇರಕ ಶಕ್ತಿಯಾಗಿದ್ದಾರೆ.
ಮೂಲತಃ ಹೊಸನಗರ ತಾಲೂಕಿನ ನಗರದವರಾದ ಇವರು ಡಿಪ್ಲೊಮಾ ಇನ್ ಫಾರ್ಮಸಿ ಓದಿ ನಗರದ ಜ್ವರಾರಿ ಕಂಪನಿಯಲ್ಲಿ 18 ವರ್ಷ ಕೆಲಸ ಮಾಡಿ ಅನುಭವ ಗಳಿಸಿ ಆನಂತರ ತಮ್ಮದೇ ಆದ ಮೆಡಿಕಲ್ ಅಂಗಡಿಯನ್ನು ಆರಂಭಿಸಿದರು. ನಗರದ ಜೆಪಿಎನ್ ರಸ್ತೆಯಲ್ಲಿರುವ ರಮ್ಯಾ ಮೆಡಿಕಲ್‌ನ್ನು 37 ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ತಮ್ಮ ಪುತ್ರಿ ರಮ್ಯಾ ಹೆಸರಿನಲ್ಲೇ ಇದನ್ನು ಸ್ಥಾಪಿಸಿದ್ದಾರೆ.
ಎ ಪೊಸಿಟಿವ್ ರಕ್ತದ ಗ್ರುಪ್ ಇವರದ್ದು. 1974ರಲ್ಲಿ ಪ್ರಥಮ ಬಾರಿಗೆ ರಕ್ತ ನೀಡುವ ಅವಕಾಶ ಎದುರಾಯಿತು. ಆಗ ರಕ್ತದಾನ ಎಂದರೇನು ಎನ್ನುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಆದರೂ ರಕ್ತದಾನ ರೋಗಿಗೆ ಇದ್ದ ಅವಶ್ಯಕತೆ ಅರಿತು ಮಾಡಿದರು. ಆಗ ಶಿವಮೊಗ್ಗದಲ್ಲಿ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ರಕ್ತ ಪಡೆಯಲಾಗುತ್ತಿತ್ತು. ಆನಂತರ ರೋಗಿಗಳಿಗೆ ಮತ್ತು ಅಪಘಾತಕ್ಕೀಡಾದವರಿಗೆ ರಕ್ತ ಬೇಕಾದಾಗ ಅಲ್ಲಿನ ಸಿಬ್ಬಂದಿ ಮತ್ತು ವೈದ್ಯರು ಸತತವಾಗಿ ಇವರನ್ನು ಸಂಪರ್ಕಿಸತೊಡಗಿದರು. ಇದರಿಂದ ರಕ್ತದಾನ ಮಾಡುತ್ತ ಬಂದರು.
ಇವರ ರಕ್ತದಾನದದ ಬಗ್ಗೆ ಅರಿತ ಹಲವರು ಕೂಡ ರಕ್ತದಾನಕ್ಕೆ ಮುಂದಾದರು. ಕ್ರಮೇಣ ರಕ್ತದಾನಿಗಳ ಸಂಖ್ಯೆ ಬೆಳೆಯತೊಡಗಿತು. ರಕ್ತದಾನಿಗಳ ಇಚ್ಛೆಯಂತೆ 2009ರಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಶಿವಮೊಗ್ಗದಲ್ಲಿ ಈ ಸಂಸ್ಥೆ ನೂರಾರು ರಕ್ತದಾನಿಗಳನ್ನು ಪ್ರತಿವರ್ಷ ಹುಟ್ಟುಹಾಕುತ್ತಲೇ ಇದೆ. ಯುವಕರಿಗೆ ಮಾರ್ಗದರ್ಶಕರಾಗಿರುವ ಯಜ್ಞನಾರಾಯಣ ಅವರ ರಕ್ತದಾನದ ಯಶೋಗಾಥೆ ಅರಿತು ರಾಜ್ಯಮಟ್ಟದಲ್ಲಿ ಸನ್ಮಾನ, ಗೌರವಗಳು ಸಂದಿವೆ. ಭಾರತೀಯ ಔಷಧ ನಿಯಂತ್ರಕರ ಸಂಘದಿಂದ ರಾಜ್ಯಮಟ್ಟದ ಸನ್ಮಾನ ಇವರಿಗೆ ದೊರೆತಿದೆ. ಬೆಂಗಳೂರಿನ ಇಮ್ಮಡಿ ಪುಲಿಕೇಶಿ ಸಂಸ್ಥೆಯವರು ಅದೇ ಹೆಸರಿನಲ್ಲಿ ಸನ್ಮಾನಿಸಿ ಬಿರುದು ನೀಡಿದ್ದಾರೆ. ಶಿವಮೊಗ್ಗದ ರೋಟರಿ ಕ್ಲಬ್ ಸಹಿತ ಹತ್ತಾರು ಸಂಸ್ಥೆಗಳು ಗೌರವಿಸಿವೆ. 
ಕಳೆದ ವಾರವಷ್ಟೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದವರು ಇವರ ಸಾಧನೆಯನ್ನು ಮನ್ನಿಸಿ ಅದ್ದೂರಿಯ ಗೌರವ ಅರ್ಪಿಸಿದ್ದಾರೆ. ಇವರ ಪತ್ನಿ ವಿಜಯಾ ಭದ್ರಾವತಿ ಆಕಾಶವಾಣಿಯ ಕಲಾವಿದೆಯಾಗಿದ್ದಾರೆ. ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇವರ ಸಹೋದರ ಎನ್ನುವುದು ಇನ್ನೊಂದು ವಿಶೇಷ. ಮರಣಾನಂತರ ತಮ್ಮ ದೇಹ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ ಮತ್ತು ಕಣ್ಣನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ನೀಡುವುದಾಗಿ  ಘೋಷಿಸಿಕೊಂಡಿದ್ದಾರೆ.
ನನ್ನಿಂದ ರಕ್ತ ಪಡೆದು ಬದುಕುಳಿದವರು, ಆರೋಗ್ಯದಿಂದಿರುವವರು ಇಂದಿಗೂ ತಮ್ಮಲ್ಲಿಗೆ ಬಂದು ಸ್ಮರಿಸುತ್ತಾರೆ. ಇಂತಹ ಮಹಾನ್ ಕಾರ್ಯ ಮಾಡಿದ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ ಯಜ್ಞನಾರಾಯಣ.
23.9.2017
.......................... 
       

No comments:

Post a Comment