Tuesday 23 January 2018

 
ಶತಮಾನದ ಶಾಲೆಗೆ ಕಾಯಕಲ್ಪ
  ತಸ್ವೀರ್ ಅಹಮದ್ 


ಶಿಕ್ಷಣ ಎನ್ನುವುದು ಬಕೆಟ್ ತುಂಬುವ ವಸ್ತುವಲ್ಲ, ಬದಲಾಗಿ ದೀಪವನ್ನು ಹಚ್ಚುವುದು. ಈ  ಜ್ಯೋತಿ ಬೆಳಗುವ ಕೆಲಸವನ್ನು ಅನೇಕ ಮಹನೀಯರು ಇತ್ತೀಚೆಗೆ ಮಾಡುತ್ತಿದ್ದಾರೆ. ಅದರಲ್ಲೂ ಸಕಾರಿ ಶಾಲೆಗಳು ಅತಿ ಹಳೆಯದಾಗಿದ್ದು, ಅವುಗಳನ್ನು ತಾವು ವಹಿಸಿಕೊಂಡು ಅಥವಾ ದತ್ತು ಪಡೆದುಕೊಂಡು ಮುನ್ನಡೆಸುವ ಜವಾಬ್ದಾರಿಯನ್ನು ಹೊರುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಕೊಡಲಾಗಿದೆ. ಕೆಲವು ಸಂಘಟನೆಗಳು ಇದನ್ನು ದತ್ತು ಪಡೆದರೆ, ಇನ್ನೂ ಕೆಲವರು ವೈಯಕ್ತಿಕವಾಗಿ ದತ್ತು ಪಡೆದುಕೊಂಡಿದ್ದಾರೆ. ಶ್ರೀಮಂತರು ದತ್ತು ಪಡೆದು ಶಾಲೆ ನಡೆಸುವಂತಹುದೂ ಇದೆ. ಇಂತಹವರಲ್ಲಿ ಕೆಲವು ಹೃದಯವಂತ  ಶ್ರೀಮಂತರು ಇದನ್ನು ದತ್ತು ಪಡೆದಿದ್ದೂ ಇದೆ.  ಈ ಮೂಲಕ ಸಾಮಾಜಿಕ ಜವಾಬ್ದಾರಿ ಇದೆ ಎನ್ನುವುದನ್ನು ತೋರಿಸಿಕೊಡುತ್ತಿರುವವರು ಬಲು ಅಪರೂಪ. ಅಂತಹವರಲ್ಲಿ ತಸ್ವೀರ್ ಅಹ್ಮದ್ ಒಬ್ಬರು.
ತಸ್ವೀರ್ ಅವರು ಕುಂಸಿಯಲ್ಲಿರುವ ಶತಮಾನದ ಹಿಂದಿನ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ. ಈಗ ಈ ಶಾಲೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಗಿದೆ. ಆದರೆ ಸೌಲಭ್ಯ ಮತ್ತು ಮಕ್ಕಳಿಲ್ಲದೆ ಸೊರಗುವಂತಾಗಿತ್ತು.  ಆದರೆ ತಸ್ವೀರ್, ಇಂತಹ ಸರ್ಕಾರಿ ಶಾಲೆಯನ್ನು ಅನಾಥಗೊಳಿಸಲು ಬಿಡದೆ ಅಭಿವೃದ್ಧಿಪಡಿಸಿ ಉಳಿಸಲು ಮುಂದಾಗಿದ್ದಾರೆ.
 ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಸದಸ್ಯರಾಗಿರುವ ಎಚ್. ತಸ್ವೀರ್ ಅಹಮದ್, ನಾಲ್ಕು ತಿಂಗಳ ಹಿಂದೆ ಈ ಶಾಲೆಯನ್ನು ಸರ್ಕಾರದಿಂದ ದತ್ತು ಪಡೆದು 19 ಮಕ್ಕಳಿದ್ದಲ್ಲಿ ಈಗ ಅದು 72ಕ್ಕೆ ಏರುವಂತೆ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಮೂವರು ಶಿಕ್ಷಕರು ಹಾಗೂ ಒಬ್ಬ ಸಹಾಯಕಿಯನ್ನು ನೇಮಿಸಿದ್ದಾರೆ.  ಅಕ್ಕಪಕ್ಕದ ಊರುಗಳಿಂದ ಈ ಶಾಲೆಗೆ ಮಕ್ಕಳು ಬರಲು ಅನುಕೂಲವಾಗುವಂತೆ ಮಿನಿ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಇದಕ್ಕೆ ಸ್ವಂತ ಖರ್ಚಿನಲ್ಲಿ ನಿರ್ವಾಹಕ ಹಾಗೂ ಚಾಲಕನನ್ನು ನೇಮಿಸಿದ್ದಾರೆ. ಊರಿನಲ್ಲಿ ಉರ್ದು ಶಾಲೆಯ ಬಗ್ಗೆ ಕಾಳಜಿ ಕಡಿಮೆ ಇರುವುದನ್ನು ಅರಿತು ಇಂಗ್ಲಿಷ್ ಮಾಧ್ಯಮದಲ್ಲಿಯೂ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದ್ದಾರೆ.
ಶಾಲೆಯನ್ನು ದತ್ತು ಪಡೆದ ನಂತರ ಅವರು ಮಾಡಿದ ಮೊದಲ ಕೆಲಸವೆಂದರೆ, ಸುತ್ತಮುತ್ತಲ ಹಳ್ಳಿಗಳಾದ ಚೊರಡಿ, ಗುಂಡೂರು, ಹಳೆಕುಂಸಿ ಗ್ರಾಮಕ್ಕೆ ಶಿಕ್ಷಕರೊಂದಿಗೆ ತೆರಳಿ ಈ ಶಾಲೆಯಲ್ಲಿ ದೊರೆಯುವ ಸೌಲಭ್ಯ ಮತ್ತು ಗುಣಮಟ್ಟದ ವಿದ್ಯಾಭ್ಯಾಸದ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು. ಆಗ ಶಾಲೆಗೆ ಮಕ್ಕಳು ಬರಲು ವಾಹನ ಸೌಲಭ್ಯ ಇಲ್ಲದಿರುವುದು ಮತ್ತು ಶಿಕ್ಷಕರ ಕೊರತೆ ಕೇಳಿಬಂದಿದ್ದರಿಂದ ವಾಹನವನ್ನೂ ಖರೀದಿಸಿದರು, ಶಿಕ್ಷಕರನ್ನು ನೇಮಿಸಿಕೊಂಡರು. ಸುತ್ತಮುತ್ತಲ ಗ್ರಾಮದ ಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು ಎಂಬ ದೃಷಿಯಿಂದ ಇನ್ನೂ ಹತ್ತು ಹಲವು ಯೋಜನೆ ರೂಪಿಸಲು ಸನ್ನದ್ಧರಾಗಿದ್ದಾರೆ.
ಶಾಲೆಗೆ ನೂತನ ಕಟ್ಟಡದ ಅವಶ್ಯಕತೆ ಇರುವುದನ್ನು ಮನಗಂಡು ಅದಕ್ಕೆ ನೀಲಿನಕ್ಷೆ ರೂಪಿಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಹಲವರು ಉತ್ತಮ ಉದ್ಯೋಗದಲ್ಲಿರುವುದರಿಂದ ಅವರೂ ಸಹ ಕೈಲಾದ ನೆರವು ನೀಡುವುದಾಗಿ ಘೋಷಿಸಿರುವುದು ತಸ್ವೀರ್ ಅವರ ಕಾರ್ಯಕ್ಕೆ ಇನ್ನಷ್ಟು ಬಲಬಂದಂತಾಗಿದೆ.  ಒಂದು ಕಾಲದಲ್ಲಿ ಹೆಸರಾಂತ ಶಾಲೆಯಾಗಿದ್ದ ಇದನ್ನು ಮತ್ತೆ ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ತಮ್ಮ ಕುಟುಂಬದ ಅನೇಕರು ಈ ಶಾಲೆಯಲ್ಲಿ ಓದಿದ್ದಾರೆ. ಮೈಸೂರು ಅಬ್ದುಲ್  ರಹೀಮ್ ಸಾಹೇಬರು ಆರಂಭಿಸಿದ ಈ ಶಾಲೆ ಮತ್ತೆ ಜಿಲ್ಲೆಯಲ್ಲಿ ಪ್ರಖ್ಯಾತವಾಗುವಂತೆ ಮಾಡುತ್ತೇನೆ ಎನ್ನುವ ಛಲ ಮತ್ತು ವಿಶ್ವಾಸದೊಂದಿಗೆ ತಸ್ವೀರ್  ಮುಂದಡಿ ಇಟ್ಟಿದ್ದಾರೆ. 
4.10.17
.............................................

No comments:

Post a Comment