Tuesday 16 January 2018

ಜಿಲ್ಲೆಯ ಹೆಮ್ಮೆಯ ಕಲಾಕುವರ
ಎಂ. ಎಂ. ಜಿನೇಂದ್ರ.


ಈತನಿಗೆ ಬಾಲ್ಯದಿಂದಲೂ ಚಿತ್ರ ಬರೆಯುವ, ಗೆರೆ ಎಳೆದಾಡುತ್ತಾ ಕನಸಿನ ಚಿತ್ರ ಬಿಡಿಸುವ ಹವ್ಯಾಸವಿತ್ತು. ಎಳೆವಯಸ್ಸಿನಲ್ಲೇ ಅಂಟಿದ ಹವ್ಯಾಸ ಬಿಡಲೇ ಇಲ್ಲ. ಜೊತೆಗೆ  ಹುಟ್ಟಿದೂರಿನ ಪರಿಸರ  ಪ್ರಕೃತಿ ಸಹ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಶಿಲ್ಪಕಲೆಯೂ ಈತನನ್ನು ಕೈಬೀಸಿ ಕರೆಯಿತು. ಈ ಎರಡೂ ಕಲೆಗಳು ಮೇಳೈಸಿ ಈತನನ್ನು ರಾಜ್ಯಕ್ಕೆ ಪರಿಚಯಿಸಿದವು. ಜಿಲ್ಲೆಯ ಈ ಕಲಾಕುವರನೇ ಎಂ. ಎಂ. ಜಿನೇಂದ್ರ.
ಜಿನೇಂದ್ರ ಸಾಗರ ತಾಲೂಕಿನ ಮಳ್ಳೋಡಿ ಗ್ರಾಮದವರು. ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಬಿ.ಎಫ್.ಎ.ಪದವಿ ವ್ಯಾಸಂಗಕ್ಕಾಗಿ ಶಿವಮೊಗ್ಗದ ವರ್ಧಮಾನ ವಿದ್ಯಾರ್ಥಿ ನಿಲಯದಲ್ಲಿದ್ದಾಗ ಇವರ ಚಿತ್ರಕಲಾ ಹವ್ಯಾಸಕ್ಕೆ ಉತ್ತಮ ಅವಕಾಶಗಳಾದವು. ಶಿವಮೊಗ್ಗದ ಪ್ರಸಿದ್ಧ ಚಿತ್ರಕಲಾವಿದರಾಗಿ " ವರ್ಣಬ್ರಹ್ಮ" ಖ್ಯಾತಿಯ ಎಸ್.ಆರ್.ವೆಂಕಟೇಶ್ ಅವರ ಶಿಷ್ಯರಾದರು. ಚಿತ್ರಕಲಾಭ್ಯಾಸಕ್ಕೆ ಉತ್ತಮ  ಮಾರ್ಗದರ್ಶನ ದೊರೆಯಿತು. . ಕಲಾಅಭ್ಯಾಸಗಳು ನಿರಂತರಗೊಂಡು ಇವರಲ್ಲಿನ ಚಿತ್ರಕಲಾ ನೈಪುಣ್ಯತೆಯು ಅಭಿವ್ಯಕ್ತಿಗೊಂಡು ಪೂರ್ಣಮಟ್ಟದಲ್ಲಿ ಅನಾವರಣಗೊಳಿಸಿದವು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ "ಜಕಣಾಚಾರಿ ಪ್ರಶಸ್ತಿ" ಪುರಸ್ಕೃತಶಿಲ್ಪಿ  ಕಾಶೀನಾಥ್ ಅವರ ನಿಕಟತೆ ಹಾಗೂ ಗುರುಬಾಂಧವ್ಯವು ಇವರನ್ನು ಶಿಲ್ಪಕಲಾವಿದರನ್ನಾಗಿಯೂ ರೂಪಿಸಿತು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಚಿತ್ರಕಲಾಭ್ಯಾಸದೊಡನೆ, ಹಲವು ಖ್ಯಾತ ಚಿತ್ರಕಲಾವಿದರ ಸಂಪರ್ಕದಲ್ಲಿ ಕಲೆಯ ಮೌಲ್ಯಯನ್ನು ಪೂರ್ಣಮಟ್ಟದಲ್ಲಿ ಅರಿತು, ಚಿತ್ರಕಲೆಯಲ್ಲಿ ಪದವಿಪಡೆದು, ವೃತ್ತಿಯಾಗಿಸಿಕೊಂಡು   ಮುಂದುವರೆದರು. ಈ ಎಲ್ಲಾ ಪರಿಣತೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ನೆಲೆಗೊಂಡು, ಶಿಲ್ಪ ಮತ್ತು ಚಿತ್ರಕಲಾ ಪ್ರತಿಭೆಯನ್ನು ವಿಶೇಷವಾಗಿ ಬಿಂಬಿಸಿ, ಪ್ರದರ್ಶಿಸಿ ಜನಮನ ಸೂರೆಗೊಂಡಿದ್ದಾರೆ, ಇದಕ್ಕಾಗಿ ಲಗ್ಗೆರೆ ಬಡಾವಣೆಯಲ್ಲಿ "ಚಿತ್ತಾ ಆರ್ಟ್ಸ್ ಸ್ಟುಡಿಯೋ" ಸ್ಥಾಪಿಸಿಕೊಂಡು, ತಾವು ಯಶಸ್ಸು ಹೊಂದುತ್ತಾ, ಹಲವಾರು ಉದಯೋನ್ಮುಖ ಕಲಾವಿದರಿಗೂ ಸ್ಫೂರ್ತಿನೀಡಿ ಬೆಂಬಲಿಸುತ್ತಿದ್ದಾರೆ.
ರೇಖಾಚಿತ್ರ, ವರ್ಣಚಿತ್ರಗಳೊಂದಿಗೆ ಉಬ್ಬುಶಿಲ್ಪ, ಸ್ಥಿರ ಶಿಲ್ಪಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಾವೀಣ್ಯತೆ ಗಳಿಸುತ್ತಿದ್ದಾರೆ. ಸಮಾರಂಭಗಳಲಿ,್ಲ ಧಾರ್ಮಿಕ ಮಹೋತ್ಸವಗಳಲ್ಲಿ ವಿಶೇಷ ವರ್ಣಾ-ಕಲಾತ್ಮಕ ವೇದಿಕೆ,ಸೆಟ್ ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಹಲವು ಚಲನಚಿತ್ರಗಳಿಗೂ ಸಂದರ್ಭೋಚಿತವಾಗಿ ಸೆಟ್ ನಿರ್ಮಿಸಿಕೊಟ್ಟಿರುವುದು ಇವರ ಹೆಗ್ಗಳಿಕೆಯಾಗಿದೆ. ಸುಮಾರು 8-9 ವರ್ಷಗಳಲ್ಲಿ ಚಿತ್ರ ಮತ್ತು ಶಿಲ್ಪ ಕಲಾಕ್ಷೇತ್ರದಲ್ಲಿ ಅನುಭವ ಗಳಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ "ಏಕವ್ಯಕ್ತಿ" ಚಿತ್ರಕಲಾ ಪ್ರದರ್ಶನ ಏರ್ಪಡಿಸಿ. ಅಪಾರ ನೋಡುಗರ ಮೆಚ್ಚುಗೆ ಗಳಿಸಿದ್ದಾರೆ.
5-6 ವರ್ಷಗಳಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟತೆಯಲ್ಲಿ ಹಲವಾರು ರಾಜ್ಯಮಟ್ಟದ ಕಲಾಶಿಬಿರಗಳಲ್ಲಿ, ಭಾರತೀಯ ವಿದ್ಯಾಭವನವು ಏರ್ಪಡಿಸಿದ್ದ "ಘರ್‌ವಾಲೇ ಆರ್ಟ್‌ಕ್ಯಾಂಪ್" ಹಾಗೂ ಹಲವು ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು  ಪ್ರದರ್ಶಿಸಿ, ಪ್ರಶಂಸೆಗೊಳಗಾಗಿದ್ದಾರೆ. ಗಾಜನೂರು ನವೋದಯ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ್ದರು. 2014ರ ಡಿಸೆಂಬರ್‌ನಲ್ಲಿ ಲೀಲಾ ಪ್ಯಾಲೇಸ್‌ನಲ್ಲಿ ನಡೆದ  ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಚಿತ್ರಕಲಾವಿದರೊಂದಿಗೆ ಇವರ ಚಿತ್ರಕಲಾಕೃತಿಗಳು ಪ್ರದರ್ಶಿತಗೊಂಡಿದ್ದು, ಇವರ ಪ್ರಬುದ್ಧ ಕಲಾಪ್ರಾವೀಣ್ಯತೆಗೆ ಸಾಕ್ಷಿಯಾಗಿದೆ, ತುಮಕೂರಿನಲ್ಲಿ ಮಹಾನಗರದಲ್ಲಿ ಡಿ.25ರಂದು ಶ್ರುತ ಮಹಿಳಾ ಜೈನ್ ಮಿಲನ್‌ನ 12ನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದ ಇವರ ವರ್ಣ ಮತ್ತು ರೇಖಾ ಚಿತ್ರಗಳ ಪ್ರದರ್ಶನವು ಅಪಾರ ಜನಮನ್ನಣೆ ಗಳಿಸಿದೆ.
 ಇವರ ವರ್ಣಚಿತ್ರಗಳಲ್ಲಿ ಇವರ ಹುಟ್ಟಿದೂರಿನ ಪರಿಸರದ ಚಿತ್ರಣಗಳು ಮನಮೋಹಕವಾಗಿ ಬಂದಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಸುಮಾರು 10ಕ್ಕೂ ಹೆಚ್ಚಿನ ಕಲಾಪ್ರದರ್ಶನ ನೀಡಿದ್ದಾರೆ. ಕಳೆದ ವಾರ ಶಿವಮೊಗ್ಗದಲ್ಲಿ ತನ್ನ ಗುರು ವೆಂಕಟೇಶ್ ಸ್ಮರಣಾರ್ಥ ಮಿತ್ರ ಎಸ್. ಆರ್. ಗಿರೀಶ್ ಜೊತೆ ಸೇರಿ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. 
  ಸಾಗರ ತಾಲೂಕಿನ ಹಲವು ಗೆಳೆಯರನ್ನು ಸಂಘಟಿಸಿಕೊಂಡು "ಪೃಚ್ಛನಾ ಜೈನ್ ಅಸೋಸಿಯೇಷನ್" ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಚಿತ್ರಕಲೆಯಲ್ಲಿ ವಿಶೇಷವಾದುದ್ದನ್ನು ಸಾಧಿಸುವ ಮಹತ್ವಾಕಾಂಕ್ಷೆಯಲ್ಲಿ ಕಳೆದ ಜನವರಿ 9ರಂದು ಗಿನ್ನಿಸ್, ಲಿಮ್ಕಾ ದಾಖಲೆಗಾಗಿ  ನಿರಂತರ 24 ಗಂಟೆ ಕಾಲ ನೂರು ಮೀಟರ್ ಕ್ಯಾನ್‌ವಾಸ್ ಮೇಲೆ ಚಿತ್ರ ಬಿಡಿಸಿ ಸಾಧನೆ ಮಾಡಿದ್ದಾರೆ.
11.2.17
............................... 
                                                 
                                                                       

No comments:

Post a Comment