Thursday 25 January 2018

ಪತ್ರಕರ್ತ, ಹೋರಾಟಗಾರ
ದಿ. ಕೆ.ಎನ್. ಭಟ್


 ವ್ಯಕ್ತಿ ಬಯಸುವುದೇ ಒಂದು, ಆಗುವುದೇ ಇನ್ನೊಂದು. ಆದರೆ ಕೈಹಿಡಿದ ಯಾವುದೇ ವೃತ್ತಿಗೆ ತನ್ನನ್ನು ಸಮರ್ಪಿಸಿಕೊಂಡರೆ, ಅದರಲ್ಲಿ ನಿಷ್ಠೆ, ಆಸಕ್ತಿ ತೋರಿದರೆ ಅದು ಆತನನ್ನು ಉನ್ನತಕ್ಕೇರಿಸುತ್ತದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ನಮ್ಮನ್ನಗಲಿದ ಸಾಗರದ ಪತ್ರಕರ್ತ ಕೆ.ಎನ್. ಭಟ್ ಅವರು.
ಭಟ್ ಅವರ ಸಾಧನೆಯ ಕ್ಷೇತ್ರ ಒಂದೆರಡಲ್ಲ, ಸಜ್ಜನರಾಗಿ, ಎಲ್ಲರೊಳಗೊಂದಾಗುವ ಗುಣ ಹೊಂದಿ, ಸಾಮಾಜಿಕ ಕಳಕಳಿಯೊಂದಿಗೆ ಅನೇಕ ಜನಪರ ಕೆಲಸ ಮಾಡಿದರು. ಇದರ ಜೊತೆಗೆ ಪತ್ರಕರ್ತರಾಗಿಯೂ ಆ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾರೆ. 61ರ ಹರಯದ ಅವರಲ್ಲಿ ಇನ್ನೂ ಸಾಧನೆಯ ಛಲವಿತ್ತು, ಹಂಬಲವಿತ್ತು. ಯಾರನ್ನೂ ನೋಯಿಸದ, ತೊಂದರೆ ಕೊಡದ ಅವರು, ಸಾಗರದಲ್ಲಿ ಅಷ್ಟೇ ಏಕೆ, ಶಿವಮೊಗ್ಗ ಜಿಲ್ಲೆಯಲ್ಲೇ ಹೆಸರುಗಳಿಸಿದ್ದರು. ಪತ್ರಕರ್ತರಾದರೂ ವಿಶೇಷವಾಗಿ ಅನೇಕ ಹೋರಾಟಗಳ ಮೂಲಕ ಜನಮನ ಸೆಳೆದವರು.
 ಕೆ.ಎನ್. ಭಟ್ ಅವರ ಪೂರ್ಣ ಹೆಸರು ಕೃಷ್ಣ ನಾರಾಯಣ ಭಟ್. ಮೂಲತ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ತಂದೆ ನಾರಾಯಣ ಭಟ್. ತಾಯಿ ಮನೋರಮಾ. ಬಡ ಕುಟುಂಬದಲ್ಲಿ ಜನಿಸಿದ ಭಟ್ಟರು ಊರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಆನಂತರ ಬದುಕು ಕಟ್ಟಿಕೊಳ್ಳಲು ಹೊರಟಿದ್ದು ಹೈದರಾಬಾದ್‌ಗೆ. ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು 1980 ರ ಸುಮಾರಿಗೆ ಶಿವಮೊಗ್ಗಕ್ಕೆ ವಾಪಸಾದರು. ಶಿವಮೊಗ್ಗದಲ್ಲಿ ಪೇಪರ್ ಬಾಬುರಾವ್ ಎಂದೇ ಖ್ಯಾತರಾಗಿದ್ದ ಬಾಬುರಾವ್ ಅವರ ಪುತ್ರ ಅಶೋಕ್ ಅವರ ಜೊತೆ ಹಿಂದು, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಏಜೆನ್ಸಿ ನಡೆಸುತ್ತಿದ್ದರು. ಕೆಲವು ವರ್ಷದ ನಂತರ ಸಾಗರಕ್ಕೆ ಹೋಗಿ ನೆಲೆಯೂರಿ, ಅಲ್ಲಿ ಇದೇ ಪತ್ರಿಕೆಗಳ ಸಬ್ ಏಜೆನ್ಸಿ ಮಾಡಿದರು. ಇವುಗಳ ಜೊತೆಗೆ ಇನ್ನಿತರೆ ವಾರ, ಮಾಸಿಕ ಪತ್ರಿಕೆಗಳ ಏಜೆನ್ಸಿ ಪಡೆದುಕೊಂಡರು.
ಇದೇ ವೇಳೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಏಜೆನ್ಸಿ ಪಡೆದುಕೊಂಡರಲ್ಲದೇ ಅದರ ವರದಿಗಾರರೂ ಆಗಿ ನೇಮಕಗೊಂಡರು. ಪತ್ರಕರ್ತರಾಗಿ ಸಾಗರ ತಾಲೂಕು ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದವರು. ಇದರಿಂದಾಗಿಯೇ ಭಟ್ಟ ಅವರು ಪ್ರಸಿದ್ಧರಾದರು. ಸಾಗರದಲ್ಲಂತೂ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಪತ್ರಕರ್ತರ ತಾಲೂಕು ಸಂಘದ ಅಧ್ಯಕ್ಷರಾಗಿ, ರಾಜ್ಯ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಕಲೆ, ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಭಟ್ಟರು, ಯಕ್ಷಗಾನ ಸಂಘಟಕರಾಗಿ ಸಾಗರದಲ್ಲಿ ಅನೇಕ ಯಕ್ಷಗಾನ ಪ್ರದರ್ಶನ ನಡೆಸಿದ್ದಲ್ಲದೆ, ಮಹಾನ್ ಕಲಾವಿದರನ್ನು ಕರೆಯಿಸಿ ತಾಳಮದ್ದಲೆಯನ್ನೂ ಏರ್ಪಡಿಸುತ್ತಿದ್ದರು. ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದರು. ತಮ್ಮ ವೃತ್ತಿಯ ಜೊತೆಗೆ ಯಕ್ಷಗಾನ ಸಂಘಟನೆ, ರೈಲ್ವೆ ಬ್ರಾಡ್‌ಗೇಜ್ ಹೋರಾಟದಲ್ಲೂ ಕೆಲಸ ಮಾಡಿದ್ದರು. ಅಶಕ್ತ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ವಿದ್ಯಾ ಪೋಷಕ್ ಸಂಸ್ಥೆಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಅನೇಕ ಬಡ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಧನ ಸಹಾಯ ಪಡೆದು ಶಿಕ್ಷಣ ಪೂರೈಸಲು ಭಟ್ ನೆರವು ನೀಡಿದ್ದರು.
. ಭಟ್ ಅವರಿಗೆ ಅರ್ಪಣಾ ಮತ್ತು ಅಪೂರ್ವಾ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಬ್ಬರಿಗೂ ಉತ್ತಮ ಶಿಕ್ಷಣ ಒದಗಿಸಿಕೊಟ್ಟು ಉನ್ನತ ಹುದ್ದೆ ಸಿಗುವಂತೆ ಮಾಡಿದ್ದಾರೆ. ಸ್ಥಳೀಯ ಕೆಲವು ಪತ್ರಿಕೆಗಳಿಗೂ ಅಂಕಣ ಬರೆಯುತ್ತಿದ್ದರು. ಅವರ ಬರಹದಲ್ಲಿ ಹೊಸ ಹೊಳಹು ಕಾಣಬಹುದಿತ್ತು. ಅವರ ಸರಳತೆ, ಸಹೃದಯತೆ ಮತು ಮಾನವ ಸಹಜ ಪ್ರೀತಿ ಎಂದೂ ಮರೆಯಲಾಗದ್ದು.
9.2.17
 .......................................



No comments:

Post a Comment