Monday 22 January 2018

ಬಹುಮುಖ ಪ್ರತಿಭೆ
 ಸಾನಿಧ್ಯಾ 
ಇಂದಿನ ವಿದ್ಯಾರ್ಥಿಗಳು ಪಠ್ಯದ ಹುಳುಗಳಾಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡರೆ ಇಂತಹ ಅಪವಾದದಿಂದ ಮುಕ್ತವಾಗಬಹುದು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಪ್ರತಿಭೆ ತೋರುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಕೆಲವು ಮಕ್ಕಳು ತಮ್ಮನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದನ್ನು  ಅಲ್ಲಲ್ಲಿ ಕಾಣಬಹುದು. ಸಾಗರದ ಸಾನಿಧ್ಯಾ ಇಂತಹವರಲ್ಲಿ ಒಬ್ಬರು.
 ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಮಾತಿದೆ. ಸಾನಿಧ್ಯಾ ಅವರ ಸಾಹಿತ್ಯಿಕ ಬೆಳವಣಿಗೆಯನ್ನು ಗಮನಿಸಿದರೆ ಮುಂದೆ ಬರಹಗಾರ್ತಿ, ಕವಯಿತ್ರಿಯಾಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ. ಈಗಾಗಲೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕೃತಿಗಳನ್ನು ರಚಿಸಿರುವ ಇವಳಿಗೆ ಸದ್ಯವೇ ನಡೆಯಲಿರುವ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಗ್ಯ ಬಂದೊದಗಿದೆ. 
  ಸಾನಿಧ್ಯ ಸಾಗರದ ಗಾಂಧಿನಗರದ ವಾಸಿ, ಉರ್ದು ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕ ಫಾಲಾಕ್ಷಪ್ಪ ಪಿ.ಎನ್. ಮತ್ತು ಯಲಗಳಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸೌಭಾಗ್ಯ ಡಿ. ದಂಪತಿ ಪುತ್ರಿ. ಈಕೆ ಅಮಟೆಕೊಪ್ಪದ ಹೊಂಗಿರಣ ಶಾಲೆಯಲ್ಲಿ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಸಹೋದರ ಸಾತ್ವಿಕ್ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಇವನೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಚಿತ್ರ ಬಿಡಿಸುವುದು, ಕಥೆ, ಕವನ ರಚನೆ, ಗಾಯನ ಸಾನಿಧ್ಯಳ ಹವ್ಯಾಸವಾಗಿದೆ. ಸಂಗೀತ ಶಿಕ್ಷಕಿ ಸೀತಾ ಬಾಪಟ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾಳೆ. ಕರ್ನಾಟಕ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಈಗ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾಳೆ.  ದೆಹಲಿಯ ನ್ಯಾಷನಲ್ ಬಾಲಭವನದ ವತಿಯಿಂದ ನಡೆಸುವ ‘ಬಾಲಶ್ರೀ ಪ್ರಶಸ್ತಿ’ ಆಯ್ಕೆಗೆ ನಡೆದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.  ಕಲಾಶ್ರೀ ಸ್ಪರ್ಧೆಗೆ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
 ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಪ್ರವೇಶ, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪ್ರಸ್ತುತ ಕನ್ನಡ ರತ್ನ ಅಧ್ಯಯನ ಮಾಡುತ್ತಿದ್ದಾಳೆ.  ಮೈಸೂರಿನ ಹಿಂದಿ ಪ್ರಚಾರ ಪರಿಷತ್ ನಡೆಸಿದ ಹಿಂದಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಜಿಲ್ಲಾ ಮಟ್ಟದ ಅಂತರ ಶಾಲೆ ಕ್ರೀಡಾಕೂಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ‘ಸೋಪಾನ್’ ಎಂಬ ಜಿಲ್ಲಾ ಮಟ್ಟದ ಪುರಸ್ಕಾರ ಲಭಿಸಿದೆ.  ದೆಹಲಿ ದರ್ಶನ ಮತ್ತು ಮುಳುಗಡೆ ಪ್ರದೇಶದಲ್ಲಿ ಒಂದು ದಿನ ಕುರಿತು ಪ್ರವಾಸ ಕಥನ ಬರೆದಿದ್ದಾಳೆ. ಶೈಕ್ಷಣಿಕ ಜೀವನದಲ್ಲಿ ಗ್ರಂಥಾಲಯಗಳ ಪಾತ್ರ, ನಮ್ಮ ಹಿರಿಯರ ಬಗ್ಗೆ ನಮ್ಮ ಕಾಳಜಿಗಳು, ರಾಷ್ಟ್ರೀಯ ಭಾವೈಕ್ಯತೆ, ಪುಸ್ತಕ ನಮಗೆ ಮಿತ್ರರಿದ್ದಂತೆ ಕುರಿತು ಪ್ರಬಂಧ ಬರೆದಿದ್ದಾಳೆ.
ಪ್ರಕೃತಿ ಬೇಕು, ಗ್ರಂಥಾಲಯ, ಮಲೆನಾಡ ಬಾಲೆ, ಅನಾಥ, ಗಡಿಯಾರ, ಜೇನುಗೂಡು, ನಿಸರ್ಗ ಮುಂತಾದ ಕವನಗಳನ್ನು ರಚಿಸಿದ್ದಾಳೆ.  ಟ್ರ್ಯೂ ಗಾಡ್, ರೇನಿ ಡೇ, ಮೈ ಫ್ರೆಂಡ್‌ಶಿಪ್ ಮುಂತಾದ ಇಂಗ್ಲೀಷ್ ಕವನಗಳನ್ನೂ ರಚಿಸಿದ್ದಾಳೆ.
ಇಷ್ಟೊಂದು ಪ್ರತಿಭಾವಂತೆಯಾದ ಸಾನಿಧ್ಯಾಳನ್ನು ಸದ್ಯವೇ ಜರುಗಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ತಾಲೂಕು ಕಸಾಪ ಆಯ್ಕೆ ಮಾಡಿದೆ.
 ಶಿಕ್ಷಣ ಎಂದರೆ ಅದು ಕೇವಲ ಪಠ್ಯದ ಅಭ್ಯಾಸವಲ್ಲ. ಪಠ್ಯದ ಹೊರಗೂ ಮನಸ್ಸನ್ನು, ಬುದ್ಧಿಯನ್ನು ಬೆಳೆಸುವ ಒಂದಿಷ್ಟು ಪೂರಕ ಆಯಾಮಗಳಿವೆ. ಅದು ಕಲೆ, ಸಂಗೀತ, ಸಾಹಿತ್ಯ, ನೃತ್ಯ ಯಾವುದಾದರೂ ಇರಬಹುದು ಎನ್ನುತ್ತಾಳೆ ಸಾನಿಧ್ಯಾ.
19.8.17
...........................

No comments:

Post a Comment