Tuesday 16 January 2018

ಏಕಲವ್ಯ ನಿಷ್ಠೆಯಿಂದ ಮೇಲೇರಿದ

ಏಳುಮಲೈ (ಕೇಬಲ್‌ಬಾಬು)


ಮನುಷ್ಯ ರಸ್ತೆಯಲ್ಲಿ ಸಾಗುವಾಗ  ಅನೇಕ ತಿರುವುಗಳಿರುತ್ತವೆ. ಸರಿಯಾದ ತಿರುವನ್ನು ಅಯ್ಕೆಮಾಡಿಕೊಂಡವನು ಮಾತ್ರ ತನ್ನ ನಿಗದಿತ ಗುರಿಯನ್ನು ತಲುಪುತ್ತಾನೆ. ನಿಜಜೀವನಕ್ಕೂ ಇದೇ ಮಾತನ್ನು ಅನ್ವಯಿಸಬಹುದು. ಸಿಕ್ಕಂತಹ ಉತ್ತಮ ಅವಕಾಶವನ್ನು ಎಂದೂ ಕೈಚೆಲ್ಲಬಾರದು. ಇದು ವ್ಯಕ್ತಿಯ ಜೀವನದ ಪಥವನ್ನೇ ಬದಲಿಸುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ  ಶಿವಮೊಗ್ಗದ ಮೇಯರ್ ಆಗಿ ಮೊನ್ನೆಯಷ್ಟೇ ಅಧಿಕಾರ ಸ್ವೀಕರಿಸಿರುವ ಏಳುಮಲೈ ಅವರು.
ಏಳುಮಲೈ ಅವರು ಕೇಬಲ್ ಬಾಬು ಎಂದೇ ಪರಿಚಿತರು. ಮಿಳಘಟ್ಟ  (27ನೆಯ ವಾರ್ಡ್)  ಪಾಲಿಕೆ ಸದಸ್ಯರಾಗಿರುವ ಅವರು ಮೃದುಭಾಷಿಕರು, ಅಷ್ಟೇ ಸರಳ, ಸೌಮ್ಯ ಸ್ವಭಾವ. ಯಾರೊಂದಿಗೂ ಸಿಟ್ಟು ಮಾಡಿಕೊಂಡವರಲ್ಲ, ಗಲಾಟೆ, ವಿವಾದ ಇವರಿಗೆ ದೂರ. ಸ್ನೇಹಮಯಿ ವ್ಯಕ್ತಿತ್ವವೇ ಎಲ್ಲರೂ ಮಿತ್ರರಾಗುವಂತೆ ಮಾಡಿದೆ. ಬಡತನದಿಂದ ಮೇಲೆದ್ದು ಬಂದಿದ್ದರಿಂದಲೋ ಏನೋ, ಬಡವರಿಗೆ ಸದಾ ನೆರವಾಗುವ ಮನೋಭಾವ. ಪಾಲಿಕೆ ಸದಸ್ಯರಾಗಿದ್ದಾಗಲೇ ಇವರ ಮನೆ ಎದುರು  ದಿನಂಪ್ರತಿ ಆ ವಾರ್ಡಿನ ಬಡಜನರು ಒಂದಲ್ಲ ಒಂದು ಸಮಸ್ಯೆ ಹೇಳಿಕೊಂಡು ಬರುತ್ತಿದ್ದರು. ಅವನ್ನೆಲ್ಲ ಸಮಾಧಾನ ಚಿತ್ತದಿಂದ ಆಲಿಸಿ ಪರಿಹಾರ ನೀಡುತ್ತಿದ್ದರು. ಇದರಿಂದಾಗಿ ವಾರ್ಡಿನಲ್ಲಿ ಎಲ್ಲರಿಗೂ ಬೇಕಾದವರು.
ಸಾಧನೆಗೆ ಬಡತನವು ಎಂದೆಂದೂ ಹೆಚ್ಚು ಸ್ಫೂರ್ತಿಯನ್ನು ನೀಡುತ್ತದೆ ಎಂಬ ಮಾತು ಇಂಗ್ಲೀಷ್‌ನಲ್ಲಿದೆ. ಏಳುಮಲೈ ಸಹ ಬಡತನದಿಂದ ಮೇಲೆ ಬಂದವರು. ನಗರದ ಬುದ್ಧನಗರದಂತಹ ಕೊಳಚೆ ಪ್ರದೇಶದಲ್ಲಿ ಬೆಳೆಯುವ ವೇಳೆ ಮುಂದೇನು ಮಾಡಬೇಕೆಂಬ ಯೋಚನೆಯಿರಲಿಲ್ಲ. ತಂದೆ ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಪ್ರೌಢಶಾಲೆಯವರೆಗೆ ಮಾತ್ರ  ಓದಿದ ನಂತರ  ಟೇಲರಿಂಗ್ ಕಲಿತರು. ನಾಲ್ಕಾರು ವರ್ಷ ಇದೇ ವೃತ್ತಿಯಲ್ಲಿ ಮುಂದುವರೆದರು. ನಂತರ  ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ 6 ವರ್ಷ ಕೆಲಸ ಮಾಡಿ ಇನ್ನಷ್ಟು ಅನುಭವ ಗಳಿಸಿದರು.
ಮರಳಿ ಶಿವಮೊಗ್ಗಕ್ಕೆ ಬಂದಾಗ ಕೇಬಲ್ ಉದ್ಯಮ ಆಗಷ್ಟೇ ಶುರುವಾಗಿತ್ತು. ಬೆಂಗಳೂರಿನಲ್ಲಿ ಈ ಉದ್ಯಮದ ಅಲ್ಪಸ್ವಲ್ಪ ಪರಿಚಯವಾಗಿತ್ತು. ಆದ್ದರಿಂದ ಕೈಯಲ್ಲಿ ಕಾಸಿಲ್ಲದಿದ್ದರೂ ಇದರಲ್ಲಿ ಮುಂದುವರೆಯಲು ನಿರ್ಧರಿಸಿ, ಕೇವಲ 7 ಸಾವಿರ ರೂ. ಬಂಡವಾಳ ಹೂಡಿ ವೀಡಿಯೋ ಮೂಲಕ ದಿನಕ್ಕೆರಡು ಸಿನಿಮಾ ಹಾಕಿ ತೋರಿಸಲು ಆರಂಭಿಸಿದರು. ಉದ್ಯಮ ದಿನದಿಂದ ಬೆಳೆದಂತೆ ಸಾಕಷ್ಟು ಅನುಭವವೂ ದಕ್ಕಿತು. ಕೆಲವು ವರ್ಷ ಒಬ್ಬನೇ ನಡೆಸಿದರೂ ನಂತರ ಹುಡುಗರನ್ನು ನೇಮಿಸಿಕೊಂಡು ವ್ಯವಹಾರ ಮುಂದುವರೆಸಿದರು. ಇಂದಿಗೂ ಈ ಉದ್ಯಮ ನಡೆಸುತ್ತಿದ್ದಾರೆ.
 ಈ ವೇಳೆ ರಾಜಕೀಯದ ತುಡಿತವೂ ಇತ್ತು, ಮಿತ್ರರೆಲ್ಲ ತಮ್ಮ ಪಕ್ಷಕ್ಕೆ ಬರುವಂತೆ ಕರೆಯುತ್ತಿದ್ದರು. ಆದರೆ ಯಾರೊಂದಿಗೂ ಗುರುತಿಸಿಕೊಂಡಿರಲಿಲ್ಲ. ಪಾಲಿಕೆಯ ಇನ್ನೊಬ್ಬ ಸದಸ್ಯ ಫಾಲಾಕ್ಷಿ ಮೂಲಕ ಕೊನೆಗೂ ಜೆಡಿಎಸ್‌ನ್ನು ಸೇರಿದಾಗ ಅಂದಿನ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ತೀರಾ ಆತ್ಮಿಯರಾದರು. 2008ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಮಿಳಘಟ್ಟದಿಂದ ಕಣಕ್ಕಿಳಿದರು. ಆದರೆ ಕೇವಲ 19 ಮತದಿಂದ ಪರಾಭವಗೊಂಡರು. ಇದರಿಂದ ಎದೆಗುಂದದೆ ರಾಜಕೀಯದಲ್ಲಿ ಇನ್ನಷ್ಟು ಸಕ್ರಿಯರಾದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಅದೇ ಕ್ಷೇತ್ರರಿಂದ ಕಣಕ್ಕಿಳಿದು ಆಯ್ಕೆಯಾದರು. ಅಲ್ಲಿಂದ ಜನಸೇವೆಯನ್ನು ಮುಂದುವರೆಸಿದರು. ಪಾಲಿಕೆಯ ಸದಸ್ಯರಾದ ನಂತರ ಎರಡು ಬಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಪದವಿ ಒಲಿದು ಬಂದಿತು. ಇದು ಆಡಳಿತದಲ್ಲಿ ಸಾಕಷ್ಟು ಅನುಭವವನ್ನು ಅವರಿಗೆ ನೀಡಿತು. ಮೀಸಲಾತಿ ಆಧಾರದಲ್ಲಿ ಈ ಬಾರಿ ಮೇಯರ್ ಆಗುವ ಅವಕಾಶ ಒದಗಿಬಂದಿರುವುದರಿಂದ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಇವೆಲ್ಲವೂ ನೆರವಾಗಲಿವೆ.
ಏಳುಮಲೈ ಅಧಿಕಾರಕ್ಕಾಗಿ ಎಂದೂ ಹಪಹಪಿಸಿದವರಲ್ಲ. ಎಲ್ಲೇ ಯಾರು ಸಿಕ್ಕರೂ ಮುಗುಳ್ನಗುತ್ತಲೇ ಮಾತನಾಡುತ್ತಾರೆ. ಎಲ್ಲರನ್ನೂ ಒಂದೇ ಭಾವದಿಂದ ಕಾಣುವ ಸಜ್ಜನ, ಸಹೃದಯಿ ವ್ಯಕ್ತಿ. ಶಿವಮೊಗ್ಗ ಅಭಿವೃದ್ಧಿಯೊಂದನ್ನೇ ತಾನು ಚಿಂತಿಸುತ್ತೇನೆ. ಯಾವ ರಾಜಕೀಯವೂ ಬೇಕಿಲ್ಲ ಎನ್ನುತ್ತಾರೆ.
..................................
   

No comments:

Post a Comment