Monday 22 January 2018

ಕತೆಗಾರ ಸುಬ್ಬಣ್ಣ 
 ಹೊಸಹಳ್ಳಿ ಬಾಲಸುಬ್ರಹ್ಮಣ್ಯ.



ಇವರು ಕಥೆಗಾರರು, ನಾಟಕಕಾರರರು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ  ಅನುಪಮ ಸೇವೆ ಸಲ್ಲಿಸುತ್ತಿರುವವರು.  30 ವರ್ಷಗಳಿಂದ ಮಕ್ಕಳಿಗಾಗಿ ಕತೆ, ಕವನ, ನಾಟಕಗಳನ್ನು ರಚಿಸಿಕೊಂಡು ಬಂದಿದ್ದಾರೆ. ನಾಡಿನಲ್ಲಿ ಮಕ್ಕಳ ಕಥೆ ಬರೆಯುವವರು ವಿರಳ. ಇಂತಹವರಲ್ಲೊಬ್ಬರು ನಮ್ಮ ಜಿಲ್ಲೆಯಲ್ಲೇ ಇದ್ದಾರೆ. ಅವರೇ ಹೊಸಹಳ್ಳಿ ಬಾಲಸುಬ್ರಹ್ಮಣ್ಯ.
 ಹೊಸಹಳ್ಳಿ-ಮತ್ತೂರಿನವರಾದ ಬಾಲಸುಬ್ರಹ್ಮಣ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಎಂ.ಇಡಿ. ಪದವಿಗಳನ್ನು ಗಳಿಸಿದ್ದಾರೆ. ‘ಮತ್ತೂರು ಸುಬ್ಬಣ’್ಣ ಎಂದು ಪರಿಚಿತರಾಗಿ ಮಕ್ಕಳಿಗಾಗಿ ಅನೇಕ ಕಥೆ,ಕವನ, ನಾಟಕಗಳನ್ನು ಕಳೆದ ಸುಮಾರು  ಮೂರು ದಶಕಗಳಿಂದ ರಚಿಸುತ್ತಿದ್ದಾರೆ. ಅವರ ಮಕ್ಕಳ ಕಥೆಗಳು ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹತ್ತಾರು ಮಕ್ಕಳ ನಾಟಕಗಳು ಆಕಾಶವಾಣಿಯಿಂದ ಬಿತ್ತರವಾಗಿವೆ. ಇವರ ರಚನೆಯ ಮಕ್ಕಳ ನಾಟಕ, ‘ಮಾಡಿದ್ದುಣ್ಣೊ ಮಾಮಣ್ಣ’ , ರಾಜ್ಯಮಟ್ಟದಲ್ಲಿ ಎರಡನೆಯ ಉತ್ತಮ ನಾಟಕವೆಂದು ಪ್ರಶಸ್ತಿಗಳಿಸಿದೆ. ಇವರ ಇನ್ನೊಂದು ಮಕ್ಕಳ ನಾಟಕ, ‘ಒಂದು ಕುರಿಯ ಕಥೆ’, ಬಾಲಭವನದ ನಾಟಕೋತ್ಸವದಲ್ಲಿ ಪಾಲುಗೊಂಡಿದೆ.
ಇವರ  ಮಕ್ಕಳ ಕಥಾಲೋಕ (ಭಾಗ-1) (2016)- ಶಿವಮೊಗ್ಗದ ಕರ್ನಾಟಕ ಸಂಘದ 2016 ನೇ ಸಾಲಿನ ನಾ. ಡಿಸೋಜಾ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ. ಮೊನ್ನೆಯಷ್ಟೇ ಇದರ ಗೌರವ ಸ್ವೀಕರಿಸಿದ್ದಾರೆ. ‘ಆಕಾಶವಾಣಿ’ ಬೆಂಗಳೂರು ಕೇಂದ್ರಕ್ಕಾಗಿ, ಸುಮಾರು 20 ಮಕ್ಕಳ ನಾಟಕಗಳ ರಚನೆ ಮತ್ತು ಪ್ರಸ್ತುತಿ ಮಾಡಿದ್ದಾರೆ. ಮತ್ತು ಈ ಕೇಂದ್ರದ ನಾಟಕ ವಿಭಾಗದಲ್ಲಿ ಬಿ-ಹೈ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ. 
ದೇಶದ ವಿವಿಧ ಕೇಂದ್ರೀಯ ವಿದ್ಯಾಲಯಗಳಲ್ಲಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿ, ಎರಡು ಬಾರಿ ರಾಷ್ಟ್ರಮಟ್ಟದಲ್ಲಿ  ಪ್ರಶಸ್ತಿ ಪಡೆದಿದ್ದಾರೆ. ಮಕ್ಕಳಿಗೆ ಕಥೆಹೇಳುವುದರಲ್ಲೂ ಸಿದ್ಧಹಸ್ತರು ಇವರು. ಇವರು ನಡೆಸಿಕೊಡುವ ‘ಕಥಾಭಿನಯ’ ಕಾರ್ಯಕ್ರಮಗಳೂ ಜನಪ್ರಿಯ. 1987ರಲ್ಲಿ  ಇವರ  ಜನಪ್ರಿಯ ಮಕ್ಕಳ ಕಥಾಸಂಕಲನ, ‘ಅಂಶು ಮತ್ತು ರೊಬೊಟ್’ ಬಿಡುಗಡೆ ಹೊಂದಿದೆ.‘ಸಮಯಪ್ರಜ್ಞೆ’ ಎನ್ನುವ ಇನ್ನೊಂದು ಕಥಾಸಂಕಲನದ ಹೊತ್ತಿಗೆ, ‘ನವಕರ್ನಾಟಕ ಪ್ರಕಾಶನ’ದಿಂದ ಪ್ರಕಟಗೊಂಡಿದೆ. 
  ಸುಬ್ಬಣ್ಣ ಬೆಂಗಳೂರಿನ ಪ್ರತಿಷ್ಠಿತ ಶ್ರೀ ವಿದ್ಯಾಕೇಂದ್ರ, ಪರಿಕ್ರಮ ಶಾಲೆ ಹಾಗೂ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪ್ರಾಂಶುಪಾಲರಾಗಿ,  ಬೆಂಗಳೂರಿನ ವಾಗ್ದೇವಿ ವಿಲಾಸ ಶಾಲಾ ಸಮೂಹದಲ್ಲಿ ‘ಶೈಕ್ಷಣಿಕ ಸಲಹೆಗಾರ’ರಾಗಿ,  ಗುರುರಾಜ ಕರಜಗಿ ಅವರ ‘ಸೃಜನಶೀಲ ಅಧ್ಯಾಪನ ಸಂಸ್ಥ್ಥೆ’ಯಲ್ಲಿ  ಹಿರಿಯ ಸಹೋದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆೆ. 2006ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ  ಬೆಂಗಳೂರಿನ ನಾಗರಬಾವಿಯಲ್ಲಿರುವ ‘ಹಿಲ್ ರಾಕ್ ನ್ಯಾಶನಲ್ ಪಬ್ಲಿಕ್ ಶಾಲೆ’ಯಲ್ಲಿ ನಿರ್ದೇಶಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ‘ಕಾಡಿನ ಕಥೆಗಳು’ ಮಕ್ಕಳ ಕೃತಿಗೆ ‘ಅತ್ತಿಮಬ್ಬೆ ಸಾಹಿತ್ಯ ಪ್ರಶಸಿ’್ತ ಪಡೆದಿದ್ದಾರೆ.‘ಮಕ್ಕಳ ಕಥಾಲೋಕ ಭಾಗ-1’ ಸೇರಿದಂತೆ, ’ಕುಮಾ’ ,‘ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ’ ,‘ವಿಚಿತ್ರ ಸಲಹೆ’ ಇವರ ಲೇಖನಿಯಿಂದ ಮೂಡಿಬಂದಿರುವ ಇತರ ಜನಪ್ರಿಯ ಮಕ್ಕಳ ಸಾಹಿತ್ಯ ಕೃತಿಗಳು.
‘ಅನು ಪ್ರಕಾಶನ’ದ ಮೂಲಕ ಮತ್ತೂರು ಸುಬ್ಬಣ್ಣ, ಮಕ್ಕಳ ಸಾಹಿತ್ಯದ ಹೊತ್ತಿಗೆಗಳನ್ನು ಪ್ರಕಟಿಸುತ್ತಿದ್ದಾರೆ. ಇವರ ಇತರೆ ಹವ್ಯಾಸಗಳೆಂದರೆ,  ಚಿತ್ರಕಲೆ, ಬರವಣಿಗೆ ಮತ್ತು ಛಾಯಾಗ್ರಹಣ. ‘ಕಾಡಿನ ಕಥೆಗಳು’ ಕೃತಿಗೆ ‘ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಯನ್ನು ಸುಬ್ಬಣ್ಣ ಪಡೆದಿದ್ದಾರೆ. ಇವರು ನಡೆಸುವ ಮಕ್ಕಳ ಕಥಾಶಿಬಿರಗಳು ಬಹು ಜನಪ್ರಿಯವಾಗಿವೆ.                                                                                                              ಮಕ್ಕಳಕಥಾಲೋಕ.ಕಾಮ್’ ಎಂಬ ವೆಬ್ ಸೈಟಿನ ಸಂಪಾದಕತ್ವ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ.  ನವದೆಹಲಿಯ ‘ರಾಷ್ಟ್ರೀಯ ನಾಟಕ ಶಾಲೆ’ಯಿಂದ ನಾಟಕ ಕಲೆಯಲ್ಲಿ ತರಬೇತಿ ಪಡೆದಿರುವ ಇವರು, ಶಿವಮೊಗ್ಗ, ಬೆಂಗಳೂರಿನ  ಅನೇಕ ಶಾಲೆಗಳಲ್ಲಿ ‘ಕಥಾಭಿನಯ’ ಕಾರ್ಯಕ್ರಮದ ಆಯೋಜನೆ ಮಾಡಿ ಮಕ್ಕಳಲ್ಲಿ ನಾಟಕ ಅಭಿರುಚಿ ಬೆಳೆಸುವಲ್ಲಿ ಶ್ರಮ ವಹಿಸುತ್ತಿದ್ದಾರೆ.
12.8.17
..............................


No comments:

Post a Comment