Friday 5 January 2018

ಪೊಲೀಸ್ ಇಲಾಖೆಯಲ್ಲೊಬ್ಬ ಸಾಧಕ
ಉದಯಕುಮಾರ್ ನಾಯ್ಡು

 ಎರಡೆರಡು ಕಲೆಗಳಲ್ಲಿ ನಿಪುಣರಾಗಿರುವವರು ತೀರಾ ವಿರಳ. ಕ್ರೀಡೆಯಲ್ಲಿ ಸಾಧನೆ ಮಾಡಿದವರು ಸಂಗೀತ ಅಥವ ಇನ್ನಿತರ ಕ್ಷೇತ್ರಗಳತ್ತ ಗಮನಸಹರಿಸುವುದು ಕಡಿಮೆ. ಏಕೆಂದರೆ ದೈನಂದಿನ ದೈಹಿಕ ಕಸರತ್ತಿನ ಜೊತೆ ಅವರಿಗೆ ಇತರ ಕಲೆಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಸಂಗೀತ, ಕಲಿಯುವವರಿಗೂ ಇತರೇ ಕಲೆಗಳತ್ತ ಚಿತ್ತಹರಿಸಲು ಅವಕಾಶ ಸಿಗುವುದಿಲ್ಲ. ಆದರೆ, ಇಲ್ಲೊಬ್ಬ ಕ್ರೀಡಾಪಟು ಅರ್ಥಾತ್ ಪವರ್ ಲಿಫ್ಟರ್ ಸುಗಮ ಸಂಗೀತ ಕ್ಷೇತ್ರದಲ್ಲೂ ಮಿಂಚುವ ಮೂಲಕ ರಾಜ್ಯದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ, ತಮ್ಮ ಊರಿನ ಹೆಸರನ್ನು ಎತ್ತರಕ್ಕೇರಿಸಿದ್ದಾರೆ. ಅವರೇ ಸಾಗರದ ಉದಯಕುಮಾರ್ ನಾಯ್ಡು.
ನಾಯ್ಡು ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿದ್ದಾರೆ. ವೃತ್ತಿಯಿಂದ ಪೊಲೀಸ್ ಆಗಿ ನಾಗರಿಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದಾದರೂ ಪ್ರವೃತ್ತಿಯಿಂದ ಕ್ರೀಡಾಪಟು ಮತ್ತು ಉತ್ತಮ ಹಾಡುಗಾರರೂ ಆಗಿ ಹೆಸರುಗಳಿಸಿದ್ದಾರೆ. ತಮ್ಮ 50ರ ಹರಯದಲ್ಲೂ ಇಂದಿಗೂ ಸಹ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
1984ರಲ್ಲಿ ಚಿನ್ನದ ಪದಕವನ್ನು ಗಳಿಸುವ ಮೂಲಕ ಪದಕಗಳ ಬೇಟೆ ಆರಂಭಿಸಿದ ಇವರು, ಇಂದಿಗೂ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದಲ್ಲೆಲ್ಲಾ ಪ್ರಶಸ್ತಿ ಮುಡಿಗೇರಿಸಿಯೇ ಮರಳುತ್ತಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಯೋಗ್ಯತಾ ಪ್ರಮಾಣಪತ್ರ ಇವರಿಗೆ ದಕ್ಕಿದೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಬಾಚಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯೂ ಸಹ ಇವರ ಮುಡಿಗೇರಿದೆ. ಮಧ್ಯಪ್ರದೇಶ, ಮುಂಬೈ, ಅಹಮದ್‌ನಗರ, ಕೇರಳದ ಅಲಪ್ಪುಜಾ, ಭಿಲಾಯ್, ಚೆನ್ನೈನಲ್ಲಿ ನಡೆದ ಸ್ಪರ್ಧೆಗಳಲ್ಲಿ ಪದಕ ಧರಿಸಿಯೇ ಬಂದಿದ್ದಾರೆ.
ಇದರೊಟ್ಟಿಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಇವರ ಹೆಸರು ಬಹುದೊಡ್ಡದು. ಭಕ್ತಿಗೀತೆ, ಭಾವಗೀತೆಯನ್ನು ತನ್ಮಯದಿಂದ ಹಾಡುವಾಗ ಎಂತಹವರೂ ಸಹ ಆ ರಾಗ, ಲಯಕ್ಕೆ ತಲೆದೂಗಲೇಬೇಕು. ಮಧುರ ಕಂಠವು ಇವರಿಗೆ ಸಿಕ್ಕ ದೊಡ್ಡ ವರವಾಗಿದೆ. ಹೆಸರಾಂತ ಸಂಗೀತ ನಿದೇಶಕ ಕಲ್ಯಾಣ್ ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಡಾ. ರಾಜಕುಮಾರ್, ವಿಷ್ಣುವರ್ಧನ್, ವಿನಯಾಪ್ರಸಾದ್, ದರ್ಶನ್ ಮೊದಲಾದವರ  ಜೊತೆ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿ ಮತ್ತು ಕನ್ನಡದ ಬಹುತೇಕ ಚಾನೆಲ್‌ಗಳ ಕಾರ್ಯಕ್ರಮದಲ್ಲೂ ಹಾಡಿದ್ದಾರೆ. ಖ್ಯಾತ ಸುಗಮಸಂಗಿತ ಕಲಾವಿದರೂ ಸಾಥ್ ನೀಡಿದ್ದಾರೆ. ಇಷ್ಟೇ ಏಕೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವ, ಗಣೇಶ ಚತುರ್ಥಿ, ಸಂಘ- ಸಂಸ್ಥೆಗಳ ವಾರ್ಷಿಕೋತ್ಸವ, ದೇವಾಲಯಗಳ ಕಾರ್ಯಕ್ರಮದಲ್ಲಿ ತಮ್ಮ ಗಾಯನ ಸುಧೆಯನ್ನು ಹರಿಸಿದ್ದಾರೆ.  ಚಂಬಲ್ ಕಣಿವೆಯ ಸಮೀಪವಿರುವ ಜೌರ ಎಎಂಬಲ್ಲಿ ನಡೆದ ರಾಷ್ಟ್ರೀಯ ಯುವ ಮೇಳದಲಿ ಭಾಗವಹಿಸಿ ಹಾಡಿದ ಕೀರ್ತಿ ನಾಯ್ಡು ಅವರದ್ದು. ಇವರ ಈ ಸಾಧನೆಗೆ ಹರಿದುಬಂದ ಪ್ರಶಸ್ತಿಗಳು ಸಾಲುಸಾಲು.
2007ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪಶ್ರಸ್ತಿ, ನಾಡರತ್ನ, ರಾಷ್ಟ್ರರತ್ನ,  ವಿಶ್ವಮಾನವ ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಕಾಯಕರತ್ನ, ಶ್ರೀಗಂಧ ಸಿಂಧೂರ ಮೊದಲಾದ ಪ್ರಶಸ್ತಿಗಳು ಇವರ ಕಂಠಸಿರಿಗೆ ಸಂದಿವೆ. 2014ರಲ್ಲಿ ಕೀನ್ಯಾದೇಶದಲ್ಲಿ ನಡೆದ ವಿಶ್ವ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇವರು ಕಾಂರ್ಕ್ರಮ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡದ ಮಧ್ಯೆ ಇತರೆ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಸುಲಭದ ಕೆಲಸವಲ್ಲ. ಜೊತೆಗೆ, ಅಲ್ಲಿನ ಕಾಂರ್ಭಾರವೇ ಇತರೇ ಹವ್ಯಾಸಗಳನ್ನು ಸ್ಥಗಿತಗೊಳಿಸಿಬಿಡುತ್ತದೆ. ಇಂತಹುದರಲ್ಲಿ ನಾಯ್ಡು ಅವರು, ಇಲಾಖೆಯ ದೈನಂದಿನ ಕೆಲಸದ ನಡುವೆಯೂ ಹಾಡು ಎಂದರೆ ಹಾಡುತ್ತಾರೆ. ಭಾರ ಎತ್ತುವುದನ್ನೂ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇರುವ ಅಪೂರ್ವ ಪ್ರತಿಭೆಗಳಲ್ಲಿ ಇವರದು ಎದ್ದು ಕಾಣುವ ವ್ಯಕ್ತಿತ್ವ. ಇಂತಹ ಪ್ರತಿಭೆಗಳಿಗೆ ಇಲಾಖೆಯವರು ಪ್ರೋತ್ಸಾಹ ನೀಡಿದ್ದಾರೆ. ವಾರ್ಷಿಕ ಕಾರ್ಯಕ್ರಮದ ಸಂದರ್ದಲ್ಲಿ ಸನ್ಮಾನಿಸುವ ಕೆಲಸವನ್ನು ಹಿರಿಯ ಅಧಿಕಾರಿಗಳು ಮಾಡುವ ಮೂಲಕ ಅವರಲ್ಲಿ ಇನ್ನಷ್ಟು ಕಲಾಚೈತನ್ಯ ಮೂಡುವಂತೆ ಮಾಡುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುವಾಗಿ ಮಿಂಚುತ್ತಿರುವ ನಾಯ್ಡು, ಭದ್ರಾವತಿ ಆಕಾಶವಾಣಿ ಕಲಾವಿದರೂ ಆಗಿದ್ದಾರೆ.

26.3.2016
.........................................

No comments:

Post a Comment