Tuesday 16 January 2018

ಸುಶ್ರಾವ್ಯ ಕಂಠಸಿರಿಯ
 ಸುಹಾನಾ ಸಯ್ಯದ್


ಸಂಗೀತವು ಜಗತ್ತನ್ನು ಮತ್ತು ಒಡೆದ ಮನಸ್ಸುಗಳನ್ನು ಒಂದುಗೂಡಿಸುತ್ತದೆ ಎಂಬ ಮಾತಿದೆ.  ಭಾರತ ಬಹುಸಂಸ್ಕೃತಿಯನ್ನು ಹೊಂದಿದ್ದರೂ ಅನೇಕತೆಯಲ್ಲಿ ಏಕತೆ ಎನ್ನುವ  ಉತ್ತಮ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಇಲ್ಲಿ ಕಲೆ, ಸಂಸ್ಕೃತಿಗೆ ಯಾವಾಗಲೂ ಬೆಲೆ, ಪ್ರಾಮುಖ್ಯತೆ, ಪ್ರೋತ್ಸಾಹ ಇದೆ. ಜೊತೆಗೆ ಮತಬೇಧವಿಲ್ಲ. ಬಿಸ್ಮಿಲ್ಲಾ ಖಾನ್, ಫಯಾಜ್ ಖಾನ್, ಸಂತ ಶಿಶುನಾಳ ಶರೀಫರು ಹಿಂದೂ ದೇವರ ನಾಮಗಳನ್ನು ಹಾಡಿದ್ದಾರೆ. ಕ್ರಿಶ್ಚಿಯನ್ ಮತಕ್ಕೆ ಸೇರಿದ ಗಾಯಕ ಯೇಸುದಾಸ್ ಹಾಡದ ಭಕ್ತಿಗೀತೆಗಳೇ ಇಲ್ಲ.
ಇಂತಹ ಪರಂಪರೆ ಈಗಲೂ ಮುಂದುವರೆದಿದೆ. ಇತ್ತೀಚಿಗೆ ಯುವಪ್ರತಿಭೆ ಸಾಗರದ ಸುಹಾನಾ ಸಯ್ಯದ್ ತನ್ನ ಅಮೋಘ ಕಂಠಸಿರಿಯಿಂದ ಎಲ್ಲೆಡೆ ಖ್ಯಾತಳಾಗಿದ್ದಾರೆ. ಕೇವಲ ಸಂಗೀತ ಮಾತ್ರವಲ್ಲ, ನಾಟಕ, ಯಕ್ಷಗಾನದಲ್ಲೂ ಸೈ ಎನಿಸಿಕೊಂಡಿರುವ ಇವರು, ಕಳೆದ ವಾರದಿಂದ ಝೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್- 13ರಲ್ಲಿ        ಸ್ಪರ್ಧಿಯಾಗಿದ್ದಾರೆ.
ಸುಹಾನಾ ಈ ಸ್ಪರ್ಧೆಯ ಮೊದಲ ದಿನ ತಮ್ಮ ಮಧುರ ಕಂಠದಿಂದ ಹಾಡಿದ ದೇವರಸ್ತುತಿಗೆ ಸ್ಪರ್ಧೆಯ ನಿರ್ಣಾಯಕರಾದಿಯಾಗಿ ಇಡೀ ಕರ್ನಾಟಕವೇ ತಲೆದೂಗಿ ಭೇಷ್ ಎಂದಿದೆ. ಸಂಗೀತಕ್ಕೆ ಅಥವಾ ಕಲೆಗೆ ಯಾವುದೇ ಜಾತಿ, ಮತ, ಭಾಷೆ, ಪ್ರಾಂತ್ಯ, ಲಿಂಗ ಬೇಧವಿಲ್ಲ. ಎಲ್ಲ್ಲ ಜಾತಿಯವರು ಎಲ್ಲ ಹಾಡುಗಳನ್ನೂ ಹಾಡಬಹುದು. ಅದು ಅವರವರ ಕಂಠಸಿರಿಯಿಂದ ಇನ್ನಷ್ಟು ಬೆಳಗುತ್ತದೆ. ಇತಿಹಾಸ ಕಾಲದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಗೀತ ವಿದ್ವಾಂಸರಾಗಿದ್ದುದು ಎಲ್ಲರಿಗೂ ತಿಳಿದ ವಿಷಯ.
ಸುಹಾನಾ ಸಾಗರ ತಾಲೂಕು ಭೀಮನಕೋಣೆಯ ವಾಸಿ. ಇವರ ತಂದೆ ಸಯ್ಯದ್ ಮುನೀರ್ ಮತ್ತು ತಾಯಿ ನಸ್ರೀನ್ ಪರ್ವೀನ್ ಇಬ್ಬರೂ ಶಿಕ್ಷಕರು. ಸುಹಾನಾ ಬಾಲ್ಯದಿಂದಲೇ ಪ್ರತಿಭಾನ್ವಿತೆ, ನಾಲ್ಕನೆಯ ತರಗತಿಯಲ್ಲಿದ್ದಾಗಲೇ ಪ್ರತಿಭೆ ಪ್ರದರ್ಶಿಸಿ ಮೊಟ್ಟಮೊದಲ ಬಾರಿ ಬಹುಮಾನ ಗೆದ್ದಿದ್ದರು. ಮಗಳಲ್ಲಿರುವ ಪ್ರತಿಭೆಗೆ ನೀರೆರೆದು ಪೋಷಿಸುವ ಕೆಲಸವನ್ನು ಪಾಲಕರು ಸದಾ ಮಾಡುತ್ತ ಬಂದಿದ್ದರಿಂದ ಅವರು ಅದರಲ್ಲೇ ಪಳಗಲು ಸಾಧ್ಯವಾಯಿತು. ಜೊತೆಗೆ ವಿವಿಧ ಕಲೆಗಳತ್ತ ಹೆಜ್ಜೆ ಇಡಲು ಕಾರಣವಾಯಿತು.
ಪ್ರಾಥಮಿಕ ಶಿಕ್ಷಣವನ್ನು ಭೀಮನಕೋಣೆಯಲ್ಲಿ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಹೆಗ್ಗೋಡಿನಲ್ಲಿ, ಪದವಿಯನ್ನು ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜಿನಲ್ಲಿ ಪಡೆದು, ಈಗ ಬೆಂಗಳೂರಿನಲ್ಲಿ ಪ್ರಥಮ ವರ್ಷದ ಎಂಬಿಎ ಓದುತ್ತಿದ್ದಾರೆ. ಕಲೆಯಲ್ಲಿ ಎಷ್ಟು ಪ್ರತಿಭಾನ್ವಿತರೋ ಓದಿನಲ್ಲೂ  ಅಷ್ಟೇ ಚುರುಕುಮತಿಯವರು. ಸಾಗರದ ರಾಘವೇಂದ್ರ ಬೀಜಾಡಿ ಎಂಬ ಸಂಗೀತ, ಯಕ್ಷಗಾನ ಗುರುಗಳಲ್ಲಿ ಎರಡನ್ನೂ ಅಭ್ಯಾಸ ಮಾಡಿದ್ದಾರೆ. ಜೊತೆಗೆ ನೀನಾಸಂ ರಂಗಶಾಲೆಯಲ್ಲೂ ನಾಟಕ ಅಭ್ಯಾಸ ಮಾಡಿ ರಾಜ್ಯ, ಅಂತಾರಾಜ್ಯದಲ್ಲಿ ಹಲವೆಡೆ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ನಾಟಕ ಮತ್ತು ಯಕ್ಷಗಾನದಲ್ಲಿ ಮುಸ್ಲಿಂ ಸಮುದಾಯದವರಿರುವುದು ಬೆರಳೆಣಿಕೆಯಷ್ಟು. ಅದರಲ್ಲೂ ಸಹ ಉನ್ನತಿಯನ್ನು ಸಾಧಿಸಿದ ಕೀರ್ತಿ ಸುಹಾನಾ ಅವರದ್ದು. ಮಗಳ ಪ್ರತಿಭೆ ಬೆಳಗಲು ತಂದೆ-ತಾಯಿ ಸಹಿತ ಕುಟುಂಬದ ಎಲ್ಲರೂ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ.
   ಜನವರಿ 27ರಂದು ಶಿವಮೊಗ್ಗದಲ್ಲಿ ಸರಿಗಮಪ ಆಡಿಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿ ಆಯ್ಕೆಯಾದ ನಂತರ ಬೆಂಗಳೂರಿನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಗೆ ತೆರಳಿ ಅಲ್ಲಿಯೂ ಉತ್ತಮ ಪ್ರದರ್ಶನದೊಂದಿಗೆ ಸಾಧನೆ ತೋರಿದರು. ಅವರಲ್ಲಿದ್ದ ಕಲೆ ಪ್ರಕಟಗೊಳ್ಳಲು ಒಂದು ಉತ್ತಮ ವೇದಿಕೆ ಈಗ ಈ ಮೂಲಕ ಸಿಕ್ಕಂತಾಗಿದೆ.
ಯಾವುದೇ ವ್ಯಕ್ತಿಯಲ್ಲಿರುವ ಕಲೆಯ ಪ್ರದರ್ಶನಕ್ಕೆ ಯಾರೂ ಅಡ್ಡಿಪಡಿಸಬಾರದು. ಅದಕ್ಕೆ ಸಾಮಾಜಿಕ, ಧಾರ್ಮಿಕ ನಿರ್ಬಂಧ ಹೇರಬಾರದು. ಹೀಗೆ ಮಾಡುತ್ತ ಹೋದರೆ ಪ್ರತಿಭೆಗಳು ಬೆಳಗುವ ಬದಲು ಮುರುಟಿ ಹೋಗುತ್ತವೆ. ಎಲ್ಲಾ ಜಾತಿಗಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅವುಗಳನ್ನು ಬೆಳಕಿಗೆ ತಂದು ವೇದಿಕೆಗೆ ಪ್ರದರ್ಶಿಸುವ  ಕೆಲಸವಾಗಬೇಕೇ ವಿನಾ ಬೆದರಿಸುವ, ಹಿಸುಕುವ ಕೆಲಸ ಮಾಡಬಾರದು. ನನ್ನಂತೆಯೇ ಇತರರು ಧೈರ್ಯದಿಂದ ವೇದಿಕೆ ಏರಬೇಕೆಂಬ ಆಸೆ ನನ್ನದು. ಅದಕ್ಕೆ ಎಲ್ಲರೂ ಸಹಕರಿಬೇಕು ಎನ್ನುತ್ತಾರೆ ಸುಹಾನಾ.   
11.3.17
,,,,,,,,,,,,,,,,,,,,,,,,,,,

No comments:

Post a Comment