Wednesday 10 January 2018

ಏಕಲವ್ಯ ಪ್ರಶಸ್ತಿ ಮುಡಿದ
ಅರ್ಪಿತಾ


ಕ್ರೀಡೆಗೆ ನಮ್ಮ ದೇಶದಲ್ಲಿ ಪ್ರೋತ್ಸಾಹವಿಲ್ಲ ಎಂಬ ಕೂಗು ಒಂದೆಡೆ ಕೇಳಿಬರುತ್ತಿದ್ದರೂ, ಇನ್ನೊಂದೆಡೆ ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆ ಇಂದಿಗೂ ನಶಿಸದೆ ಹಾಗೆಯೆ ಉಳಿದುಕೊಂಡು ಬಂದಿದೆ. ಆದರೆ ಅಲ್ಲಿನ ಕ್ರೀಡಾಪ್ರತಿಭೆಗಳನ್ನು ಸಕಾಲದಲ್ಲಿ ಬೆಳಕಿಗೆ ತರುವವರು, ವೇದಿಕೆ ಕಲ್ಪಿಸುವವರ ಕೊರತೆ ಇದೆ. ಅಥ್ಲೆಟಿಕ್ಸ್‌ನಲ್ಲಿ ಇಂತಹ ಭರವಸೆಯ ಬೆಳಕನ್ನು ಜಿಲ್ಲೆಯ ಎಂ. ಅರ್ಪಿತಾ  ಮೂಡಿಸುತ್ತಿದ್ದಾರೆ.
ಸಾಗರ ತಾಲೂಕಿನ ಹಿನ್ನೀರಿನ ಪ್ರದೇಶ ಕರೂರು ಹೋಬಳಿಯ ಬ್ರಾಹ್ಮಣ ಕೆಪ್ಪಿಗೆ  ಗ್ರಾಮದ  ಮಂಜುನಾಥ ಮತ್ತು ಬೇಬಿ ದಂಪತಿಯ ಮಗಳಾದ ಅರ್ಪಿತಾ ಈ ಬಾರಿಯ ರಾಜ್ಯ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ ಇವರು ಹೈದ್ರಾಬಾದ್‌ನಲ್ಲಿ ರೈಲ್ವೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದು ಹುಟ್ಟಿದೂರಿನ ಸರ್ಕಾರಿ ಶಾಲೆಯಲ್ಲಿಯೇ. ಆಗಲೇ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದರು.     
ಇದೇ ಸಾಧನೆಯ ಆಧಾರದಲ್ಲಿ ರಾಜ್ಯ ಕ್ರೀಡಾ ಇಲಾಖೆಯು ಇವರನ್ನು ಗುರುತಿಸಿ ಬೆಂಗಳೂರಿನ ಕ್ರೀಡಾ ಶಾಲೆಗೆ ಆಯ್ಕೆ ಮಾಡಿತು. ಅಲ್ಲಿ 8ರಿಂದ 10ನೆಯ ತರಗತಿಯವರೆಗೆ ತರಬೇತಿ ಪಡೆಯುತ್ತಲೇ ಓದು ಮುಂದುವರೆಸಿ ಸಾಧನೆ ಮಾಡುತ್ತಲೇ ಮುಂದುವರೆದರು. ನಂತರ ಪದವಿಗಾಗಿ ಸುರಾನಾ ಕಾಲೇಜಿಗೆ ದಾಖಲಾದರು. ಈ ವೇಳೆ ದೈಹಿಕ ಶಿಕ್ಷಕರಾದ ಬಸವರಾಜ್, ರವಿ ಮತ್ತು  ಬಿ.ಜಿ. ಮಂಜುನಾಥ ಅರ್ಪಿತಾ ಅವರಲ್ಲಿದ್ದ ಪ್ರತಿಭೆಯನ್ನು ಗಮನಿಸಿ ಎಲ್ಲಾ ಪ್ರೋತ್ಸಾಹ ನೀಡಿದರು. ಈ ಶಿಕ್ಷಕರು ನೀಡಿದ ಅಪೂರ್ವ ತರಬೇತಿಯೇ ಇಂದು ಅವರನ್ನು ಏಕಲವ್ಯ ಪ್ರಶಸ್ತಿಗೆ ಭಾಜನರಾಗುವಂತೆ ಮಾಡಿವೆ.
ಕಾಲೇಜು ಓದುವಾಗಲೇ ನ್ಯಾಶನಲ್ ಗೇಮ್ಸ್, ರೂರಲ್ ನ್ಯಾಶನಲ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ  ಬಹುಮಾನವನ್ನು ಗಳಿಸಿದ್ದರು. 18 ವರ್ಷದ ಮೇಲ್ಪಟ್ಟವರಿಗಾಗಿ ನಡೆಯುವ ಫೆಡರೇಶನ್ ಕಪ್ ಕ್ರೀಡಾಕೂಟದಲ್ಲೂ  ಭಾಗವಹಿಸುವ ಅವಕಾಶವೂ ಇವರಿಗೆ ಲಭಿಸಿತ್ತು.  ಆನಂತರ ಬೆಂಗಳೂರಿನ ಫ್ಯೂಸನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ  ತರಬೇತಿಗೆ ಸೇರಿದರು. ಇದು ಖ್ಯಾತ ಕ್ರೀಡಾಪಟು ಪ್ರಮಿಳಾ ಅಯ್ಯಪ್ಪ ಅವರ ಪತಿ ಅಯ್ಯಪ್ಪ ಅವರದ್ದು. ಇಲ್ಲಿಗೆ ಸೇರಿದ ನಂತರ  ಅರ್ಪಿತಾ ಸಾಧನೆ ಹೆಚ್ಚುತ್ತ ಹೋಯಿತು. ಇಂದಿನ ತಮ್ಮೆಲ್ಲ ಸಾಧನೆಗೆ ಅಯ್ಯಪ್ಪ ನೀಡಿದ ತರಬೇತಿಯೇ ಕಾರಣ ಎಂದು ಮನದುಂಬಿ ನುಡಿಯುತ್ತಾರೆ ಅರ್ಪಿತಾ.
 ಇವರು ಪಾಲ್ಗೊಂಡು ಸಾಧನೆ ಮಾಡಿದ ಕ್ರೀಡಾಕೂಟಗಳೆಂದರೆ, 2012ರಲ್ಲಿ ಕೊಲಂಬೋದಲ್ಲಿ 1115ನೆಯ ಏಶಿಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, 2014ರ ನ್ಯಾಶನಲ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿದದಾರೆ. 2015ರ ರಲ್ಲಿ ಕೇರಳದಲ್ಲಿ ನಡೆದ ನ್ಯಾಶನಲ್ ಗೇಮ್ಸ್‌ನಲ್ಲಿ, 2015ರ ರಲ್ಲಿ ಬೆಂಗಳೂರಿನಲ್ಲಿ ನಡೆದ ಫೆಡರೇಶನ್ ಕಪ್ ಕ್ರೀಡಾಕೂಟ, ಅಖಿಲ ಭಾರತ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟ ಮೊದಲಾದವುಗಳಲ್ಲಿ ಪಾಲ್ಗೊಂಡಿದ್ದರು. ಪ್ರಾಥಮಿಕ ಹಂತದಿಂದ ಹಿಡಿದು ಕಾಲೇಜು ದಿನಗಳವರೆಗೆ ಭಾಗವಹಿಸಿದ ಕ್ರೀಡಾಕೂಟಗಳಲ್ಲಿ ಸಾಧನೆ ಏರುತ್ತಲೇ ಇದ್ದುದರಿಂದ 2015ರಲ್ಲಿ ರೈಲ್ವೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ರೈಲ್ವೆಯಲ್ಲೂ ಕ್ರೀಡೆಗೆ ವಿಶೇಷ ಪ್ರೋತ್ಸಾಹ ಇರುವುದರಿಂದ ಅದರ ಮೂಲಕ ಹೆಚ್ಚಿನ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ.
 ಕ್ರೀಡೆಯಲ್ಲಿ ಯಾವತ್ತೂ ತಾಕತ್ತು, ವೇಗ, ಮನೋಶಕ್ತಿ, ಕೌಶಲ್ಯ ಮತ್ತು ಉತ್ಸಾಹ ಅಗತ್ಯ. ದೈಹಿಕ ಸಾಮರ್ಥ್ಯವೊಂದಿದ್ದರೆ ಸಾಲದು. ಮನೋಸಾಮರ್ಥ್ಯವೇ ಇಲ್ಲಿ ಮೇಲು.  ಇದರಿಂದಲೇ ಸಾಧನೆ ಸಿದ್ಧಿ ಸಾಧ್ಯ.  ಕ್ರೀಡೆಯಲ್ಲಿ ಐವತ್ತು ಉಪನ್ಯಾಸಕ್ಕಿಂತ ಒಂದು ತರಬೇತಿ ಹೆಚ್ಚಿನ ಅನುಭವವನ್ನು ನೀಡುತ್ತದೆ ಎನ್ನುವ ಮಾತೊಂದಿದೆ. ಈ ಎಲ್ಲವೂ ತನ್ನನ್ನು ಉನ್ನತ ಸಾಧನೆಗೆ ಪ್ರೇರೇಪಿಸಿವೆ. ತಾನು ಕಷ್ಟದಿಂದ, ಏನೂ ಸೌಲಭ್ಯವಿಲ್ಲದ ಕುಗ್ರಾಮದಿಂದ ಬಂದವನು. ಇಲ್ಲಿಯವರೆಗೆ ಒಳ್ಳೆಯ ತರಬೇತುದಾರರು ಲಭಿಸಿದ್ದರಿಂದ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಅರ್ಪಿತಾ. 
published on 15.10.16
...............................

No comments:

Post a Comment