Monday 8 January 2018

ರಂಗಪ್ರವೇಶಕ್ಕೆ ಅಣಿ
ಹಂಸಾ ವೀರೇಂದ್ರ

ಭರತನಾಟ್ಯ ಅತ್ಯಂತ ಪ್ರಾಚೀನವಾದ, ಆದರೆ ಅಷ್ಟೇ ಶ್ರೀಮಂತವಾದ ಕಲೆ. ಪ್ರೇಕ್ಷಕರನ್ನು ತನ್ಮಯತೆಯಿಂದ ಹಿಡಿದಿಟ್ಟುಕೊಳ್ಳಬಲ್ಲ ಶಕ್ತಿ ಅದಕ್ಕಿದೆ. ಎಷ್ಟು ತನ್ಮಯತೆ, ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾರೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನಯಿಸಲು ಅವರು ಶಕ್ತರಾಗುತ್ತಾರೆ. ಇತ್ತೀಚೆಗೆ ಭರತನಾಟ್ಯ ಕಲಿಯುವವರ ಸಂಖ್ಯೆ ಹಚ್ಚುತ್ತಿದೆ. ಆದರೆ, ಆಳವಾಗಿ ಅಭ್ಯಸಿಸುವವರು ತೀರಾ ವಿರಳ.
 ಜೆಎನ್‌ಎನ್  ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಜಿ.ವಿ. ಹಂಸಾ ಅವರು ನಗರದ ಹೆಸರಾಂತ ಭರತನಾಟ್ಯ ಕಲಾವಿದೆ ಡಾ. ಕೆಎಸ್. ಪವಿತ್ರಾ ಅವರ ಶ್ರೀವಿಜಯ ಕಲಾನಿಕೇತನದಲ್ಲಿ ಸುಮಾರು 11 ವರ್ಷ ಭರತನಾಟ್ಯವನ್ನು ಅಭ್ಯಸಿಸಿ, ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ವತ್ ಮುಗಿಸಿ, ಜೂನ್ 5ರಂದು ರಂಗಪ್ರವೇಶಕ್ಕೆ ಸನ್ನದ್ಧರಾಗಿದ್ದಾರೆ. ಶ್ರೀವಿಜಯ ಸಂಸ್ಥೆಯ ಶಿಷ್ಯೆಯೊಬ್ಬರು ರಂಗಪ್ರವೇಶ ಮಾಡುತ್ತಿರುವುದು ಇದೇ ಮೊದಲು.   
ಶಿವಮೊಗ್ಗದ ನವುಲೆ ಬಡಾವಣೆಯ ಕೆಎಚ್‌ಬಿ ಲೇಔಟ್ ವಾಸಿ ಹಂಸ, ಸುಶಿಕ್ಷಿತ ಕುಟುಂಬದಿಂದ ಬಂದವರು. ನೈತಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಈ ಕುಟುಂಬ  ಹಂಸಾ ಪ್ರತಿಭೆಗೆ ನೀರೆರೆಯಿತು. ಇಂತಹ ವಾತಾವರಣದಲ್ಲಿ ಬೆಳೆದಿದ್ದರಿಂದ ಮತ್ತು ಅದ್ಭುತ ಪ್ರತಿಭೆಯ ಗುರುವೂ ಸಹ ಲಭಿಸಿದ್ದರಿಂದ ಕಲಿಕೆ ಅತ್ಯಂತ ಯಶಸ್ವಿಯಾಗಿ ಸಾಗಿಬಂದಿತು. ಹಂಸಾ ತಂದೆ ವೀರೇಂದ್ರ ಉದ್ದಿಮೆದಾರರಾದರೂ, ತಾಯಿ ಕುಮುದಾ ಗೃಹಿಣಿಯಾದರೂ ಮಗಳ ಕಲಿಕೆಗೆ ಏನೆಲ್ಲ ಬೇಕೋ ಆ ಎಲ್ಲ ಪ್ರೋತ್ಸಾಹವನ್ನು ನೀಡುತ್ತ ಬಂದಿದ್ದಾರೆ. ಅಜ್ಜ ಪ್ರೊ. ಬಿ.ಎಂ ರುದ್ರಪ್ಪ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯರು. ಇವರೆಲ್ಲರ ಪ್ರೋತ್ಸಾಹದಿಂದ ವಿಧೇಯ ವಿದ್ಯಾರ್ಥಿನಿಯಾಗಿ, ಸಮರ್ಪಣಾ ಮನೋಭಾವದಿಂದ ಹಂಸಾ ಯಶಸ್ಸಿನ ಮೆಟ್ಟಿಲೇರಿದ್ದಾರೆ.
ಪ್ರತಿಭಾನ್ವಿತೆಯದ ಹಂಸ 9 ರ ಹರೆಯದಲ್ಲಿದ್ದಾಗಲೇ ನಾಟ್ಯ ಕಲಿಕೆಗೆ ಮುಂದಡಿಯಿಟ್ಟವರು. ಗುರು ಕೆ.ಎಸ್. ಪವಿತ್ರಾ ಅವರ ಸಮರ್ಥ ತರಬೇತಿ, ಮಾರ್ಗದರ್ಶನ ಮತ್ತು ನಿರಂತರ ಪ್ರೋತ್ಸಾಹದಿಂದ ಈಗ ರಂಗಪ್ರವೇಶ ಮಾಡುವ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. ಕಳೆದ ವರ್ಷವಷ್ಟೇ ವಿದ್ವತ್ ಮುಗಿಸಿದ್ದಾರೆ. ಜೊತೆಗೆ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ ಸ್ಕಾಲರ್ ಶಿಪ್‌ಗೂ ಭಾಜನಳಾಗಿದ್ದಾರೆ. ಇದೇ ವೇಳೆ ಕರ್ನಾಟಕ ಸಂಗೀತ ಹಾಡುಗಾರಿಕೆಯಲ್ಲೂ ಎತ್ತಿದಕೈ ಆಗಿರುವ ಹಂಸಾ, ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರ ಶಿಷ್ಯೆಯೂ ಹೌದು. ಹಾಡು, ನೃತ್ಯದ ಮೂಲಕ ಪರಿಪೂರ್ಣ ಕಲಾವಿದೆಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ತನ್ನ ಗುರು ಡಾ. ಪವಿತ್ರಾ ಅವರ ಜೊತೆ ಚಂದನೋತ್ಸವ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೃತ್ಯ ಶಂಕರ, ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಜರುಗಿದ ನವರಾತ್ರಿ ಉತ್ಸವ ಮತ್ತು ಶ್ರೀವಿಜಯದ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ವರ್ಷ ವೈಭವದಲ್ಲಿ  ನರ್ತಿಸಿದ್ದಾರೆ. ಡಾ. ಪವಿತ್ರಾ ಅವರಿಂದ ನಿರ್ಮಿತವಾದ ಕಾವ್ಯ ಕನ್ನಿಕಾ, ನೃತ್ಯ ಶಂಕರ, ಸರ್ವಜ್ಞ ಸಾರ, ಶಿವಭಕ್ತ ಸಾರ, ರಸಋಷಿ ನಮನ, ಕ್ರಿಸ್ತ ಕಾವ್ಯ ಮತು ಶಿವಾರ್ಪಣಂನಲ್ಲೂ  ಪ್ರದರ್ಶನ ನೀಡಿದ್ದಾರೆ.
 ಇವೆಲ್ಲವುಗಳ ಜೊತೆ ಜ್ಞಾನದೀಪ ಶಾಲೆಯಲ್ಲಿ ಸಿಬಿಎಸ್‌ಇ ಓದುವಾಗ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಸಾಕಷ್ಟು ಪ್ರತಿಭೆಯನ್ನು ಹಂಸಾ ಹೊಂದಿದ್ದರು. ಪ್ರೌಢಶಾಲೆಯಲ್ಲಿರುವಾಗ ದಕ್ಷಿಣ ವಲಯ ಸಿಬಿಎಸ್‌ಇ ಬಾಸ್ಕೆಟ್‌ಬಾಲ್ ಮತ್ತು ಹ್ಯಾಂಡ್‌ಬಾಲ್ ಟೂರ್ನಿಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಪ್ರಾಥಮಿಕ ಶಾಲೆಯಿಂದಲೂ ಉನ್ನತ ಶ್ರೇಣಿಯಲ್ಲೇ ತೇರ್ಗಡೆ ಹೊಂದುತ್ತ ಬಂದಿದ್ದಾರೆ. ಪ್ರಸ್ತುತ ಜೆಎನ್‌ಎನ್‌ಸಿಯಲ್ಲಿ  2ನೆಯ ವರ್ಷದ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. 
"ಕಲಾವಿದರಾದವರು ಹೊಸ ವಿಚಾರಧಾರೆಗಳೊಂದಿಗೆ ಪ್ರೇಕ್ಷಕರನ್ನು ತಲುಪಲು ನಿರಂತರ ಪ್ರಯತ್ನಿಸಬೇಕು; ಇಂದಿನ ಯುವಜನಾಂಗವನ್ನು ಕಲೆ ಆಕರ್ಷಿಸುವಂತೆ ಮಾಡಬೇಕು; ಭರತನಾಟ್ಯ ಕಲಾಪ್ರಕಾರದಲ್ಲಿ ಕಲಿಯಲು, ಸಂಶೋಧಿಸಲು ಅನೇಕ ವಿಚಾರಗಳಿವೆ ಎನ್ನುವ ಹಂಸಾ, ಭರತನಾಟ್ಯ ಕಲಾವಿದರು ಆದರಲ್ಲಿ ತಾದಾತ್ಮ್ಯಗೊಂಡಾಗ ಮಾತ್ರ ಪ್ರೇಕ್ಷಕರನ್ನು ತಲುಪಲು ಸಾಧ್ಯ" ಎನ್ನುತ್ತಾರೆ ಹಂಸಾ. 

published on 4.6.16
,,,,,,,,,,,,,,,,,,,,,,,,,,,,,,,

No comments:

Post a Comment