Thursday 18 January 2018


ಸೇವೆಯಲ್ಲೇ ಧನ್ಯತೆ ಕಂಡ
ಅನ್ನಪೂರ್ಣಾ
........................

 ಇತರರ ಸೇವೆ ಮಾಡುವ ಮೂಲಕ ನಮ್ಮತನವನ್ನು ನಾವು ಕಂಡುಕೊಳ್ಳಬೇಕು. ಇದರಲ್ಲಿಯೇ ಸಂತಸವನ್ನು ಕಾಣಬೇಕು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಸೇವೆ ಅತ್ಯಂತ ಅವಶ್ಯಕತೆ ಉಳ್ಳವರಿಗೆ ದಕ್ಕಿದಾಗ ಅದು ಶಾಶ್ವತವಾಗುತ್ತದೆ. ಅದರಲ್ಲೂ ವಿಶೇಷವಾಗಿ ರೋಗಿಗಳ ಸೇವೆ ಮರೆಯಲಾಗದ್ದು. ರೋಗಿಗಳ ಸೇವೆಯಲ್ಲೇ ತಮ್ಮನ್ನು ತೊಡಗಿಸಿಕೊಂಡು ಇದಕ್ಕಾಗಿ ಸರ್ಕಾರದಿಂದಲೂ ಗುರುತಿಸಲ್ಪಟ್ಟವರು ಎಚ್.ಟಿ. ಅನ್ನಪೂರ್ಣಾ.
  ಆಸ್ಪತ್ರೆಗೆ ದಾಖಲಾದವರು ಶುಶ್ರೂಷಕರ ಸಮರ್ಪಣಾ ಭಾವದ ಚಿಕಿತ್ಸೆ ಮತ್ತು ಪ್ರೀತಿಯ ಸೇವೆ ಮತ್ತು ಕಾಳಜಿಯಿಂದ ಗುಣಮುಖರಾದಾಗ ಅವರು ವ್ಯಕ್ತಪಡಿಸುವ ಪ್ರೀತಿ, ವಿಶ್ವಾಸ ಬೆಲೆ ಕಟ್ಟಲಾಗದ್ದು, ಇದು ಬೇರೆ ಯಾರಿಗೂ, ಯಾವ ಸಂದರ್ಭದಲ್ಲೂ ಸಿಗದು. ಗುಣಮುಖರಾಗಿ ಮನೆಗೆ ತೆರಳಿದರೂ ಸದಾ ಇಂತಹ ಶುಶ್ರೂಷಕರು ದಿನವೂ ಸ್ಮರಿಸಲ್ಪಡುತ್ತಾರೆ. 
 ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ 25 ವರ್ಷದ ಸೇವಾ ಅನುಭವವನ್ನು ಹೊಂದಿರುವ ಅನ್ನಪೂರ್ಣಾ, ಮೃದು ಹೃದಯಿ. ರೋಗಿಗಳನ್ನು ತಮ್ಮ ಮಕ್ಕಳಂತೆ, ಕುಟುಂಬದವರಂತೆ ಕಾಣುವ ವಾತ್ಸಲ್ಯಮಯಿ. ಬಹುಶಃ ಇದಕ್ಕಾಗಿಯೇ ರೋಗಿಗಳಿಗೆ ಅತ್ಯಂತ ಅಪ್ಯಾಯಮಾನರಾಗಿಬಿಡುತ್ತಾರೆ. ಇನ್ನೊಬ್ಬರ ಕಷ್ಟ, ಸಂಕಷ್ಟಗಳಿಗೆ ಮರುಗುವ ಜೊತೆಗೆ ಅಷ್ಟೇ ಹೃದಯವಂತಿಕೆಯಿಂದ ಸೇವೆ ಮಾಡುವುದು ಎಲ್ಲರಿಗೂ ಕರಗತವಾಗುವುದಿಲ್ಲ.  ಇವರ ಸೇವೆ ಮನಗಂಡು ರಾಜ್ಯ ಸರ್ಕಾರ ಕಳೆದ ವರ್ಷ ನೈಟಿಂಗೇಲ್ ಪ್ರಶಸ್ತಿಯನ್ನು ಪ್ರದಾನ  ಮಾಡಿದೆ.
 ತೀರ್ಥಹಳ್ಳಿ ತಾಲೂಕಿನ ಹರುಮನೆ ಗ್ರಾಮದವರಾದ ಇವರು ಬಡ ಹಾಗೂ ರೈತ ಕುಟುಂಬದಿಂದ ಬಂದವರು. ಪ್ರಾಥಮಿಕ ವಿದ್ಯಾಭ್ಯಾಸದ ನಂತರ ದಾವಣಗೆರೆಯ ಸರ್ಕಾರಿ ಚಿಗಟೇರಿ ಆಸ್ಪತೆಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮತ್ತು ಡಿಪ್ಲೊಮಾ ಇನ್ ಮಿಡ್‌ವೈಫರಿ ಕೋರ್ಸನ್ನು ರ‌್ಯಾಂಕ್ ಸಹ ಪೂರೈಸಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರಿ ಸೇವೆಗೆ ನಿಯುಕ್ತರಾದರು. ಹೊಸನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಆನಂತರ ಮೆಗ್ಗಾನ್‌ಗೆ ವರ್ಗಾವಣೆಗೊಂಡು ಸೇವೆಯಲ್ಲಿದ್ದಾರೆ.
  ಪ್ರೀತಿಯ ಮಾತಿನಿಂದಲೇ ರೋಗಿ ಅರ್ಧದಷ್ಟು ಗುಣಮುಖನಾಗುತ್ತಾನೆ ಎನ್ನುವ ಮಾತಿದೆ. ಈ ಮಾತು ಚಾಲ್ತಿಗೆ ಬರಲು ಅನ್ನಪೂರ್ಣಾ ಅವರಂತಹ ನಿಸ್ವಾರ್ಥ, ಮಾನವೀಯ ಗುಣವುಳ್ಳ ಶುಶ್ರೂಷಕರೇ ಕಾರಣವಿರಬಹುದು. ಅನ್ನಪೂರ್ಣಾ ಸುಮಾರು 200 ನೇತ್ರ ತಪಾಸಣಾ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನೇತ್ರದಾನಿ ಡಾ. ಎಂ. ಸಿ. ಮೋದಿ ಅವರೊಂದಿಗೆ ಸೇವೆ ಸಲ್ಲಿಸಿದ್ದನ್ನು ಇವರು ಮನದುಂಬಿ ನುಡಿಯುತ್ತಾರೆ. ಎಚ್‌ಐವಿ ಏಡ್ಸ್ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಈ ರೋಗಪೀಡಿತರ ಸೇವೆಯನ್ನೂ ಮಾಡಿದ್ದಾರೆ. ತಮ್ಮ ಜ್ಞಾನಮಟ್ಟವನ್ನು ವಿಸ್ತರಿಸಿಕೊಳ್ಳಲು ಹಲವಾರು ಕಾರ್ಯಾಗಾರ ಮತ್ತು ವಿಚಾರಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲೂ ಕಾಲಿಟ್ಟಿರುವ ಇವರು, ಉತ್ತಮ ಹಾಡುಗಾರರೂ ಹೌದು.
ಇವರ ಸೇವೆ ಮನ್ನಿಸಿ 2012-13ರ ಸಾಲಿನಲ್ಲಿ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, 2014-15ರ ಸಾಲಿನಲ್ಲಿ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, ಹೊಸನಗರದ ನಾಗರಿಕ ವೇದಿಕೆ, ಜೋಗ-ಕಾರ್ಗಲ್ ಲಯನ್ಸ್ ಕ್ಲಬ್, ಶಿವಮೊಗ್ಗ ರೋಟರಿ ಕ್ಲಬ್, ಸುವರ್ಣಾ ಲೇಡೀಸ್ ಕ್ಲಬ್, ಸರ್ಕಾರಿ ಮೆಡಿಕಲ್ ಕಾಲೇಜಿನಿಂದ ಉತ್ತಮ ಶುಶ್ರೂಷಕಿ ಪ್ರಶಸ್ತಿ ದಕ್ಕಿದೆ. ಕಳೆದ ಸಾಲಿನ ರಾಜ್ಯ ಮಟ್ಟದ ನೈಟಿಂಗೇಲ್ ಪ್ರಶಸ್ತಿ ಬಂದ ನಂತರ ಇವರನ್ನು ಗುರುತಿಸಿ ಮೆಗ್ಗಾನ್ ಶುಶ್ರ್ರೂಷಕಿಯರ ಸಂಘ ಗೌರವಿಸಿದೆ. ತಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಪತಿ ಎಸ್. ಚಂದ್ರಪ್ಪ ಮತ್ತು ಮಕ್ಕಳು ಎನ್ನುವುದನ್ನು  ಮರೆಯದೆ ಹೇಳುತ್ತ್ತಾರೆ.
ಸೇವೆಯಲ್ಲಿ ಸಕಾರತ್ಮಕ ಮನೋಭಾವವಿರಬೇಕು, ಸ್ವಾರ್ಥವಿರಬಾರದು. ಪ್ರಚಾರಕ್ಕಾಗಿ ಅಥವಾ ತೋರಿಕೆಗಾಗಿ  ಸೇವೆ ಸಲ್ಲದು. ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತುವ, ಜಾಗೃತಿ ಮೂಡಿಸುವ ಮತ್ತು ಧೈರ್ಯ ತುಂಬುವ ಕೆಲಸ ಮಾಡಬೇಕು. ಅನುಕಂಪ ತೋರಿಸುವ ಬದಲು ಅನುಭೂತಿ ಹೊಂದಿರಬೇಕು ಎನ್ನುತ್ತಾರೆ ಅನ್ನಪೂರ್ಣಾ. 
24.6.2017

.............................

No comments:

Post a Comment