Saturday 6 January 2018

ಏಕವ್ಯಕ್ತಿ ನಾಟಕದ ಬಹುಮುಖೀ ಪ್ರತಿಭೆ
ಸುಪ್ರಿಯಾ ರಾವ್


ಸುಪ್ರಿಯಾ ರಾವ್ ’ಮೈಥಿಲಿ’ ಏಕವ್ಯಕ್ತಿ ನಾಟಕದ ಮೂಲಕ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮನೆಮಾತು. ಏಕವ್ಯಕ್ಕಿ ನಾಟಕ ಪ್ರದರ್ಶನ ನಿಜಕ್ಕೂ ಸವಾಲಿನ ಕೆಲಸವೇ ಸರಿ. ಆದರೆ ಸುಪ್ರಿಯಾ ಅವರಿಗೆ  ಪಾತ್ರದ ಪರಕಾಯ ಪ್ರವೇಶ ಬಹು ಲೀಲಾಜಾಲ. ರಂಗದ ಮೇಲೆ ಮಿಂಚಿನ ಸಂಚಾರ; ಆಯಾಯ ಪಾತ್ರಕ್ಕನು ಗುಣವಾದ ಆಂಗಿಕ ಚಲನವಲನ; ಧ್ವನಿಯ ಏರಿಳಿತ. ಒಟ್ಟಿನಲ್ಲಿ ಹೇಳಬೇಕೆಂದರೆ ಏಕವ್ಯಕ್ತಿ ನಾಟಕಪ್ರಕಾರಕ್ಕೆ ಈಕೆ ’ಏಕಮೇವಾದ್ವಿತೀಯ’ ಎಂದರೆ ಅಚ್ಚರಿಯೇನಿಲ್ಲ. ಬಹು   ಪಾತ್ರಗಳ ನಾಟಕದಲ್ಲೂ ಸಹ ಅತ್ಯುತ್ತಮ ಕಲಾವಿದೆಯಾಗಿ ಹೊರಹೊಮ್ಮಿ, ಪ್ರಶಸ್ತಿಗಳ ಗರಿಯನ್ನು ಮುಡಿಗೇರಿಸಿಕೊಂಡ ಹಿರಿಮೆ ಇವರದ್ದು. ಎರಡು ಪ್ರಕಾರಗಳ ನಾಟಕಗಳಿಗೂ ಸೈ ಎನ್ನಿಸಿಕೊಂಡು ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವಪ್ರತಿಭೆ ಸುಪ್ರಿಯಾ, ಸುಗಮ ಸಂಗೀತ ಮತ್ತು ಕರ್ನಾಟಕ ಸಂಗೀತಗಳ ಮೂಲಕವೂ ಕನ್ನಡಿಗರಿಗೆ ಚಿರಪರಿಚಿತರು.
ಹಾಗೆ ನೋಡಿದರೆ ಇವರಿಗೆ ಕಲೆ ಎನ್ನುವುದು ಪರಂಪರೆಯಿಂದ ಬಂದ ಬಳುವಳಿ. ತಂದೆ ಸುರೇಶ್‌ರಾವ್ ಭದ್ರಾವತಿಯ ಎಂಪಿಎಂನಲ್ಲಿ ಅಧಿಕಾರಿಯಾಗಿದ್ದುಕೊಂಡೇ ನಾಟಕ ಕಲಾವಿದರಾಗಿ ಪ್ರಸಿದ್ಧಿ ಹೊಂದಿದವರು; ತಾಯಿ ಸೀತಾಲಕ್ಷ್ಮೀ ಗೃಹಿಣಿಯಾಗಿರುವುದರ ಜೊತೆಗೆ, ಸುಗಮ ಸಂಗೀತದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಇವರೀರ್ವರ ಪ್ರತಿಭೆಯನ್ನೂ ಮೈಗೂಡಿಸಿಕೊಂಡು, ತಾನೇ ತಾನಾಗಿ ಗುರುತಿಸಿಕೊಂಡು ಲೋಕಮುಖಕ್ಕೆ ಪ್ರಕಟವಾದವರು ಸುಪ್ರಿಯಾ ರಾವ್. ಹಾಗೆಂದು ಶಾಲಾ-ಕಾಲೇಜು ದಿನಗಳಲ್ಲಿ ಇವರ ನಾಟಕಪ್ರತಿಭೆ ಅಷ್ಟೊಂದು ಮಟ್ಟಿಗೆ ಅನಾವರಣಗೊಂಡಿರಲಿಲ್ಲವೆಂದೇ ಹೇಳಬೇಕು. ಕಾಲೇಜು ದಿನಗಳವರೆಗೆ ಕೇವಲ ಸುಗಮ ಸಂಗೀತದಲ್ಲಿ ಮಾತ್ರ ಹೆಸರುಗಳಿಸಿದ್ದರು.
ಭದ್ರಾವತಿಯಲ್ಲಿ ಪ್ರಾಥಮಿಕ ಓದು ಮುಗಿಸಿದ ಇವರು, ನಗರದ ಪ್ರತಿಷ್ಠಿತ ಎಡ್ಯುರೈಟ್ ಕಾಲೇಜಿನಲ್ಲಿ ಪದವಿ ಪಡೆದು, ನಂತರ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದಕ್ಕೂ ಮೊದಲು ಭದ್ರಾವತಿಯ ವಿಐಎಸ್ಸೆಲ್ ಹಿರಣ್ಣಯ್ಯ ಅವರಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಸುಗಮ ಸಂಗೀತದಲ್ಲಿ ಅಪಾರ ಆಸಕ್ತಿ ಇದ್ದುದರಿಂದ ಆಗಲೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ನಂತರ ಟಿವಿ ಶೋಗಳಾದ ಎದೆ ತುಂಬಿ ಹಾಡುವೆನು,  ಸ್ಟಾರ್ ಸಿಂಗರ್, ಸರಿಗಮಪ ಮೊದಲಾದುವುಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ವಿಕಾಸ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿಯೂ ಕೆಲಸ ಮಾಡಿದ ಅನುಭವ ಇವರದ್ದು.
ಕಳೆದ ನಾಲ್ಕಾರು ವರ್ಷಗಳಿಂದೀಚೆಗೆ ನಾಟಕ ರಂಗದಲ್ಲಿ ಮಿಂಚುತ್ತಿರುವ ಇವರು, ಗಿರಿಜಾ ಕಲ್ಯಾಣ ಮತ್ತು ಕಿತ್ತೂರು ನಿರಂಜನಿ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿ. ಕಿತ್ತ್ತೂರು ನಿರಂಜನಿ ನಾಟಕದಲ್ಲಿ ನಿರಂಜಿನಿಯಾಗಿ ಪಾತ್ರ ಮಾಡಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಈವರೆಗೆ 6 ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಅವರು ಹೆಸರು ಗಳಿಸುವಂತೆ ಮಾಡಿದ್ದು ಮೈಥಿಲಿ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ಏಕವ್ಯಕ್ತಿ ನಾಟಕವಿದು. 1 ಗಂಟೆ 10 ನಿಮಿಷದ ಈ ನಾಟಕ ಈಗಾಗಲೇ ಬೆಂಗಳೂರು, ತುಮಕೂರು, ಮುಂಬೈ, ಶಿವಮೊಗ್ಗ  ಮೊದಲಾದೆಡೆ 16 ಪ್ರದರ್ಶನ ಕಂಡಿದೆ. ಇದರ ಮೂಲಕ ಏಕವ್ಯಕ್ತಿ ನಾಟಕದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಪರಿಪೂರ್ಣ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಈಗ ಈ ಪ್ರಕಾರದ ನಾಟಕದ ಹೊಸ ಆಯಾಮ, ಸಾಧ್ಯಾಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. 
ಇವರ ಇನ್ನೊಂದು ವಿಶೇಷತೆ ಎಂದರೆ, ನಾಟಕದ ಪಾತ್ರಧಾರಿಯಾಗಿ ಅಷ್ಟೇ ಅಲ್ಲ, ಕಾಸ್ಟ್ಯೂಮ್ ಡಿಸೈನರ್ ಆಗಿ, ಸಂಗೀತದ ಕಂಪೋಸರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಶಿವಮೊಗ್ಗ ರಂಗಾಯಣದವರು ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ವಿವಿಧ ತರಬೇತಿ ನೀಡಿದ್ದಾರೆ. ಇವೆಲ್ಲವುಗಳ ಒತ್ತಡದ ಮಧ್ಯೆಯೂ ಮನೆಯಲ್ಲೇ ಸುಗಮ ಸಂಗೀತ ತರಗತಿ ನಡೆಸುತ್ತಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಬಹುಮುಖೀ ಸಿದ್ಧಿ-ಸಾಧನೆಗಳು ಇನ್ನಷ್ಟು ಪ್ರಖರವಾಗಿ ಪ್ರಜ್ವಲಿಸಲಿ.
published on 9.4.2016

,,,,,,,,,,,,,,,,,,,,,,,,,,,,,,,,,,,,

No comments:

Post a Comment