Tuesday 9 January 2018

ಬಚ್ಚಗಾರಿನ ಸಾಂಸ್ಕೃತಿಕ ರಾಯಭಾರಿ
ಶುಂಠಿ ಸತ್ಯನಾರಾಯಣ ಭಟ್ಟರು  

ಸಂಘಟನೆ ಎನ್ನುವುದೊಂದು ಅಪೂರ್ವ ಕೌಶಲ. ಅದು ಸಂಘಟಕರ ಶಕ್ತಿಯನ್ನು ಆಧರಿಸಿರುತ್ತದೆ. ಅದರಲ್ಲೂ ಒಬ್ಬನೇ ವ್ಯಕ್ತಿ ಸಂಘಟನೆಯನ್ನು ನಡೆಸುವುದೆಂದರೆ ಇನ್ನೂ ಕಷ್ಟ.    ಆದರೆ ಸುದೀರ್ಘ 19 ವರ್ಷಗಳಿಂದ ಸಾಗರ ತಾಲೂಕಿನ ಬಚ್ಚಗಾರು ಗ್ರಾಮದಲ್ಲಿ ‘ಸಂಕಲನ’ ಎಂಬ ಹೆಸರಿನ ಸಂಘಟನೆಯನ್ನು ಹುಟ್ಟುಹಾಕಿರುವ ಶುಂಠಿ ಸತ್ಯನಾರಾಯಣ ಭಟ್ಟರು  ಬಹಳ ಅಚ್ಚುಕಟ್ಟಾಗಿ  ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದೊಂದು ಅಪ್ಪಟ ಸಾಂಸ್ಕೃತಿಕ ಸಂಘಟನೆಯಾಗಿದ್ದು- ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ವೇದಿಕೆಯಾಗಿದೆ. ಸಂಸ್ಕೃತಿಯ ಸಂರಕ್ಷಣೆ, ಸಂವರ್ಧನೆಯೇ ಈ ಸಂಘಟನೆಯ ಸದಾಶಯ.
ಒಬ್ಬ ವ್ಯಕ್ತಿಯಾಗಿ ಭಟ್ಟರು ಇದನ್ನು ಬಹುಸಮರ್ಥವಾಗಿ ಇಲ್ಲಿಯವರೆಗೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ತಮ್ಮೆಲ್ಲ ಸಮಯ, ಅಭಿರುಚಿ ಮತ್ತು ಶಕ್ತಿಯನ್ನು ಇದಕ್ಕೆ ಮೀಸಲಾ
ಗಿಟ್ಟಿದ್ದಾರೆ. ಆಸಕ್ತರಿಂದ ಇದಕ್ಕೆ ಆರ್ಥಿಕ ಬೆಂಬಲ ಪಡೆಯುತ್ತಿದ್ದಾರೆ. ಪ್ರತಿ ಸಲ ಕಾರ್ಯಕ್ರಮ ಮಾಡಿದಾಗಲೂ ಸಂಕಲನದಲ್ಲಿ ಆರ್ಥಿಕವಾಗಿ ವ್ಯವಕಲನವೇ ಜಾಸ್ತಿಯಾದರೂ,  ಅದರಿಂದ   ಕಿಂಚಿತ್ತೂ ಹಿಂದೆ ಸರಿದಿಲ್ಲ. ಮಾತ್ರವಲ್ಲ, ಹೊಸ ಹೊಸ ಸಾಂಸ್ಕೃತಿಕ ಕಾರ್ಯಕ್ರಮಗಳ ಕನಸನ್ನೂ ಮೊಟಕುಗೊಳಿಸಿಲ್ಲ.
  ಉತ್ತಮ ಕಾರ್ಯಕ್ರಮದ ಕನಸುಗಳನ್ನು ಕಾಣುವುದು, ಅದಕ್ಕೆ ತಕ್ಕಂತೆ ಸಂಪನ್ಮೂಲ ಅತಿಥಿಗಳನ್ನು ಅಹ್ವಾನಿಸುವುದು, ಕಾರ್ಯಕ್ರಮದ ರೂಪುರೇಷೆ ಹೆಣೆಯುವುದು, ದಾನಿಗಳಿಂದ ದೇಣಿಗೆ ಸಂಗ್ರಹಿಸುವುದು-ಇವೆಲ್ಲ  ಸಂಘಟನೆಯಲ್ಲಿ ಬಹು ಕಠಿಣ ಕೆಲಸ. ಆದರೆ ಕ್ರಿಯಾಶೀಲರಾದ ಭಟ್ಟರು ಎಲ್ಲವನ್ನೂ ಸರಳ, ಸುಲಭವಾಗಿ ರೂಪಿಸುತ್ತಾರೆ.
ಮೂಲತಃ ಭಟ್ಟರು ಹೊಸನಗರ ತಾಲೂಕಿನ ಸಂಪೆಕಟ್ಟೆಯವರು. ಈಗ ಅವರಿಗೆ 77ರ ತುಂಬುಹರೆಯ. 1955ರಲ್ಲಿ  ಬಚ್ಚಗಾರು ಗ್ರಾಮಕ್ಕೆ ಬಂದು ನೆಲೆನಿಂತವರು. ಯಕ್ಷಗಾನ ಭಾಗವತ ಮತ್ತು ಮದ್ದಳೆ ವಾದಕರಾಗಿದ್ದ ತಂದೆ ರಾಮಕೃಷ್ಣ ಭಟ್ಟರಿಂದ ಯಕ್ಷಗಾನದ ಗೀಳು ಅಂಟಿಸಿಕೊಂಡವರು. ಆದರೆ ಯಕ್ಷಗಾನ ಕಲಾವಿದನಾಗಬೇಕೆಂಬ ಕನಸು ಕಂಡಿದ್ದ ಸತ್ಯನಾರಾಯಣ ಭಟ್ಟರು ಆದದ್ದು ಮಾತ್ರ ಯಕ್ಷಗಾನ ಸಂಘಟಕ. 1977ರಿಂದ 85ರವರೆಗೆ ಅಮೃತೇಶ್ವರಿ ಮೇಳದ ಮ್ಯಾನೇಜರ್  ಆಗಿ ಕೆಲಸ ಮಾಡಿದ ಅನುಭವದೊಂದಿಗೆ, 1988ರಲ್ಲಿ ಬಚ್ಚಗಾರು ಮೇಳವನ್ನು ಹುಟ್ಟುಹಾಕಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಒತ್ತಾಯದ ಮೇರೆಗೆ ಅದನ್ನು ಒಂದು ಡೇರೆ ಮೇಳವನ್ನಾಗಿ ಮಾಡಿದರು. ಡೇರೆ ಮೇಳ ಎಂದರೆ ಆನೆ ಸಾಕಿದಂತೆ ಎನ್ನುವುದು ಅವರಿಗೆ ಗೊತ್ತಿದ್ದರೂ ಆ ಸಾಹಸಕ್ಕೆ ಕೈ ಹಾಕಿದರು. ಇದರಿಂದ ಬಚ್ಚಗಾರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಸಾಂಸಕ್ರತಿಕ ಕಾರ್ಯಕ್ರಮಗಳು ಆರಂಭವಾದವು.  ಭಟ್ಟರ ಸಮರ್ಥ ನಾಯಕತ್ವ,  ಒಳ್ಳೆಯ ಸ್ನೇಹ ಸಂಪರ್ಕದಿಂದ ಬಚ್ಚಗಾರು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿತು. ಇಂದಿಗೂ ಸಾಗರ ತಾಲೂಕಿನಾದ್ಯಂತ ಸಾಂಸ್ಕೃತಿಕವಾಗಿ ಬಚ್ಚಗಾರಿಗೆ ಒಂದು ವಿಶೇಷ ಸ್ಥಾನಮಾನ ಇದೆ ಎಂದರೆ ಆ ಕೀರ್ತಿ ನಿಜಕ್ಕೂ ಭಟ್ಟರಿಗೆ ಸಲ್ಲಬೇಕು.
ಸಾಂಸ್ಕೃತಿಕ ಕಾಳಜಿ-ಕಳಕಳಿ ಇರುವ ಭಟ್ಟರು, ತನ್ನ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಕೂಡ ಅಷ್ಟೇ ಹಠಮಾರಿ. ಹೀಗಾಗಿಯೇ  ಆರ್ಥಿಕವಾಗಿ ಕೈಸುಟ್ಟುಕೊಂಡರೂ, ಸಂಕಲನದ ಕಾರ್ಯಕ್ರಮಗಳು ಮಾತ್ರ ಕಮರಿ ಹೋಗುತ್ತಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಅತಿರಥ-ಮಹಾರಥರೆಲ್ಲ  ಬಚ್ಚಗಾರಿಗೆ ಪ್ರೀತಿಯಿಂದ ಬರುತ್ತಾರೆ. 
ಬನ್ನಂಜೆ ಗೋವಿಂದಾಚಾರ್ಯ, ಶತಾವಧಾನಿ ಆರ್. ಗಣೇಶ್, ಪಾವಗಡ ಪ್ರಕಾಶರಾವ್,  ಅರಳುಮಲ್ಲಿಗೆ ಪಾರ್ಥಸಾರಥಿ, ಅಂಬಾತನಯ ಮುದ್ರಾಡಿ,  ಹೊಸ್ತೋಟ ಮಂಜುನಾಥ ಭಾಗವತ,  ಚಿಟ್ಟಾಣಿ ರಾಮಚಂದ್ರ ಹೆಗಡೆ, ವಿದ್ವಾನ್ ಉಮಾಕಾಂತ್ ಭಟ್ಟ ಮೇಲುಕೋಟೆ, ಮಾಸ್ಟರ್ ಹಿರಣ್ಣಯ್ಯ, ಪ್ರವೀಣ್ ಗೋಡ್ಖಿಂಡಿ. ಬಿ.ಕೆ. ಸುಮಿತ್ರಾ ಮೊದಲಾದವರೆಲ್ಲ ಸಂಕಲನ ಸಂಭ್ರಮದ ಸಾಂಸ್ಕೃತಿಕ ಗಣ್ಯರು.
  ಯಕ್ಷಗಾನ ದಿಗ್ಗಜರ ಪ್ರಸಂಗ ಪ್ರದರ್ಶನಗಳು ಇಲ್ಲಿ ಸಾಕಷ್ಟು ನಡೆದಿವೆ. ಈ ವಯಸ್ಸಿನಲ್ಲೂ ಭಟ್ಟರು ಪಾದರಸದಂತೆ ಓಡಾಡುತ್ತಾರೆ. ಅಚ್ಚಬಿಳುಪಿನ ಪಂಚೆ, ಅಂಗಿ, ಅದರ ಮೇಲೊಂದು ಶಾಲು ಇವರ ಸೀದಾ ಸಾದಾ ಉಡುಗೆ.
ಅವರ ಮಾತಿನಲ್ಲೇ ಹೇಳುವುದಾದರೆ-‘‘ನನ್ನದು ಧನ ಸಂಪಾದನೆಯಲ್ಲ; ಜನ ಸಂಪಾದನೆ. ಸಾಹಿತಿಗಳ, ಕಲಾವಿದರ, ಸಾಹಿತ್ಯಾಸಕ್ತರ ಪ್ರೀತಿ-ವಿಶ್ವಾಸವೇ ನಾನು ಗಳಿಸಿರುವ ಆಸ್ತಿ’’ ಎಂದೆನ್ನುವ ಭಟ್ಟರು ಬಚ್ಚಗಾರಿನ ಸಾಂಸ್ಕೃತಿಕ ರಾಯಭಾರಿಯಲ್ಲದೆ ಮತ್ತೇನು?
...........................

No comments:

Post a Comment