Monday 22 January 2018

ಕೆಎಎಸ್ ಸಾಧನೆಯ ಶಿಕ್ಷಕಿ
ರೇಣುಕಾದೇವಿ 



ಕಂಡ ಕನಸನ್ನು ಗುರಿಯಾಗಿಸಿಕೊಂಡು, ಅದನ್ನು ಕಾರ್ಯರೂಪಕ್ಕೆ ತರಲು ಸತತ ಪರಿಶ್ರಮಪಟ್ಟರೆ ಅದರಿಂದ ಯಶಸ್ಸು ಗಳಿಸಬಹುದು. ಈ ಹಿನ್ನೆಲೆಯಲ್ಲಿ ಹೆಲೆನ್ ಕೆಲ್ಲರ್ ಹೇಳಿರುವ, ಆಶಾವಾದವನ್ನು ನಂಬಿ ಕೆಲಸ ಮಾಡಿದರೆ ಅದರಿಂದ ಸಾಧನೆಗೈಯ್ಯಲು ಸಾಧ್ಯ. ಭರವಸೆ ಮತ್ತು ಆತ್ಮವಿಶ್ವಾಸ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ.
ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ರೇಣುಕಾದೇವಿ, ಮೊದಲ ಯತ್ನದಲ್ಲೇ ಕೆಎಎಸ್ ಪಾಸುಮಾಡುವ ಮೂಲಕ ಸಾಧಕರಿಗೆ ಮಾದರಿಯಾಗಿದ್ದಾರೆ. 12 ವರ್ಷದಿಂದ ಶಿಕ್ಷಕಿಯಾಗಿದ್ದುಕೊಂಡು ನಿರಂತರ ಅಧ್ಯಯನ ಮತ್ತು ಗಳಿಸಿದ ಅನುಭವವೇ ಇವರಿಗೆ ಕೆಎಎಸ್ ಸಾಧನೆಗೆ ಅನುಕೂಲವಾಯಿತು. ಪಠ್ಯದ ಹೊರತಾದ ಓದು, ಪರಿಶ್ರಮ ಮತ್ತು ಸಾಧನೆ ಮಾಡಬೇಕೆಂಬ ಛಲ ಇವರಲ್ಲಿ ಸದಾ ಕಾಡುತ್ತಿತ್ತು. ಇದಕ್ಕಾಗಿ ಸಮಯವನ್ನೆಲ್ಲ ಸದುಪಯೋಗಪಡಿಸಿಕೊಂಡು, ಅಂಬೇಡ್ಕರ್ ಮತ್ತು ವಿವೇಕಾನಂದರ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಎಡೆಬಿಡದೆ ಶ್ರಮವಹಿಸಿ ಕೆಎಎಸ್ ಬರೆದಿದ್ದರು.
ಪರಿಕ್ಷೆ ತಯಾರಿಗೆಂದು ವರ್ಷಗಟ್ಟಲೆ ಕಾಲ ವ್ಯಯಿಸದೆ, ಯಾವ ಕೋಚಿಂಗ್‌ಗೂ ತೆರಳದೆ, ಯಾರಿಂದಲೂ ಸಹಾಯ ಪಡೆದುಕೊಳ್ಳದೆ ಸ್ವಪ್ರಯತ್ನದಿಂದಲೇ ಮೇಲೆ ಬಂದ ಸಾಧಕಿ ರೇಣುಕಾದೇವಿ. ಇವರಿಗೆ ಈಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆಗೆ ಅವಕಾಶ ದೊರೆತಿದೆ. ಆದರೆ ಇನ್ನೂ ಅಧಿಕ ಸಾಧನೆ ಮಾಡಬೇಕೆಂದು ನಿರ್ಧರಿಸಿ ಮತ್ತೆ ಕೆಎಎಸ್ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಏಕೆಂದರೆ, ಇವರ ಆಸೆ  ಉಪವಿಭಾಗಾಧಿಕಾರಿ ಆಗಬೇಕೆನ್ನುವುದು. ಕೆಎಎಸ್‌ನಲ್ಲಿ ಸಾರ್ವಜನಿಕ ಆಡಳಿತವನ್ನು ಮುಖ್ಯ  ವಿಷಯವನ್ನು ತೆಗೆದುಕೊಂಡು ಶಾಲೆ, ಕುಟುಂಬ, ಇತರೇ ಜಂಜಡಗಳ ಮಧ್ಯೆಯೂ ಸತತ ಓದು ಮುಂದುವರೆಸಿ, ಅನುಭವವನ್ನೇ ಬಳಸಿಕೊಂಡು ಸಾಧನೆ ಮಾಡಿದ್ದಾರೆ.
ಮೂಲತಃ ಭದ್ರಾವತಿಯ ಹೊಸಮನೆಯವರಾದ ರೇಣುಕಾ, ಓದಿದ್ದು ತೀರ್ಥಹಳ್ಳಿ ತಾಲೂಕಿನ ವಿವಿಧ ಶಾಲೆಯಲ್ಲಿ. ಇವರ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಇಲ್ಲಿಯೇ   ಶಿಕ್ಷಣ ಪಡೆದರು. ಆನಂತರ ಮೈಸೂರು ವಿವಿಯಿಂದ ಕನ್ನಡದಲ್ಲಿ ಎಂಎ ಮತ್ತು ಕುವೆಂಪು ವಿವಿಯಿಂದ ಬಿಇಡಿ ಪದವಿ ಪಡೆದಿದ್ದಾರೆ. ಇವರ ಪತಿ ವಿಶ್ವನಾಥ ಕೃಷಿಕರಾಗಿದ್ದು, ಇಬ್ಬರು ಗಂಡುಮಕ್ಳನ್ನು ಹೊಂದಿದ್ದಾರೆ. ಮದುವೆಯಾದ ನಂತರ ಪದವಿ, ಸ್ನಾತಕೋತ್ತರ ಓದಿ ಶಿಕ್ಷಕಿಯಾಗಿರುವ ಇವರು, ಕುಟುಂಬದವರ ನೆರವಿನಿಂದ ಉನ್ನತ ಸಾಧನೆ ಮಾಡಿದವರು. ಇವರಿಗೆ 2014ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ತಾಲೂಕು ಮಟ್ಟದಲ್ಲಿ ಹಲವು, ಸನ್ಮಾನ, ಗೌರವಗಳು ಇವರನ್ನರಸಿ ಬಂದಿವೆ. ಕಳೆದ ವಾರ ತಾಲೂಕು ಸರ್ಕಾರಿ ನೌಕರರ ಸಂಘದವರು ಕೆಎಎಸ್ ಪಾಸು ಮಾಡಿದ ಶಿಕ್ಷಕಿ ಎಂಬ ಹಿನ್ನೆಲೆಯಲ್ಲಿ ಗೌರವಿಸಿದ್ದಾರೆ.
ಪುಸ್ತಕದ ಹೊರತಾಗಿ  ಕಲೆ, ಸಂಸ್ಕೃತಿ, ಸಾಹಿತ್ಯದ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದಕ್ಕೆ ಇವರು ಆದ್ಯತೆ ಕೊಟ್ಟವರು. ಇದರಿಂದಾಗಿಯೇ ಇವರು ಕೆಲಸ ಮಾಡಿದ ಶಿರೂರು ಶಾಲೆ ಪ್ರತಿಭಾ ಕಾರಂಜಿಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿತ್ತು. ರೇಣುಕಾ ಸಹ ಆಶುಭಾಷಣದಲ್ಲಿ ಮೂರು ಬಾರಿ ರಾಜ್ಯ ಮಟ್ಟದಲ್ಲಿ ಮೊದಲ ಪ್ರಶಸ್ತಿ ಪಡೆದಿದ್ದಾರೆ. ಸಾಹಿತ್ಯಾಭಿಮಾನಿಯಾಗಿ, ಕವಿಯೂ ಆಗಿದ್ದಾರೆ. ಕವನ ಸಂಕಲನವೊಂದನ್ನು ಪ್ರಕಟಿಸಿದ್ದಾರೆ. ಕಂಸಾಳೆ ನೃತ್ಯ, ಕಾರ್ಯಕ್ರಮ ನಿರೂಪಣೆಯಲ್ಲೂ ಹೆಸರು ಗಳಿಸಿದ್ದಾರೆ. ಸದ್ಯ ಮೇಗರವಳ್ಳಿಯಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ, ಜೆಸಿಐ, ಸಾಹಿತ್ಯ ಪರಿಷತ್‌ನಲ್ಲೂ ಸಕ್ರಿಯರಾಗಿ ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
 ಸಾಧನೆ ಮಾಡಬೇಕೆಂಬ ಹಂಬಲ, ತುಡಿತವಿತ್ತು. ಇದಕ್ಕೆ ಹಲವು ಬಾರಿ ಅಡ್ಡಿ ಎದುರಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆದರೂ ಎದೆಗುಂದದೆ ಸಾಧಿಸಲೇಬೇಕೆಂಬ ಛಲವಿತ್ತು. ಧೈರ್ಯದಿಂದ ಬಂದ ಪರಿಸ್ಥಿಯನ್ನೆಲ್ಲ ಎದುರಿಸಿ ಸಾಧನೆ ಮಾಡಿದ್ದೇನೆ ಎನ್ನುವ ರೇಣುಕಾ, ಉತ್ತಮ ಮತ್ತು ಜನಮೆಚ್ಚಿದ ಶಿಕ್ಷಕಿಯಾಗಿಯೂ ಮಾದರಿಯಾಗಿದ್ದಾರೆ. 
5.8.17
....................

No comments:

Post a Comment