Tuesday 9 January 2018

ಕನ್ನಡ ಚಿತ್ರರಂಗದ ಯುವ ಗಾಯಕಿ
ಇಂಚರಾ ರಾವ್



ಇಂಚರಾ ರಾವ್- ಈ ಹೆಸರನ್ನು  ಶಿವಮೊಗ್ಗದಲ್ಲಿ ಕೇಳಿದವರು ಕಡಿಮೆ. ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಮೆರೆಯುತ್ತಿರುವ ಇವರು ‘ರಂಗಿ ತರಂಗ’ ಚಿತ್ರದ ಕರೆಯೋಲೆ...’ ಹಾಡಿಗೆ ಶ್ರೇಷ್ಠ ಗಾಯಕಿಗಾಗಿ ನೀಡುವ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 ‘ಇಂಚರ’ ಶಿವಮೊಗ್ಗೆಯವರು. ಇವರ ಅಜ್ಜಿ ಮನೆ ಹೊಸನಗರ ತಾಲೂಕಿನ ಹೆಬ್ಬುರುಳಿ ಗ್ರಾಮ. ಆ ಕುಟುಂಬ ಸಂಪೂರ್ಣ ಸಂಗೀತದ ಕಂಪಿನಲ್ಲಿ  ಮುಳುಗಿರುವಂತಹುದು. ಅಜ್ಜ, ಮಾವ ಸಂಗಿತಗಾರರು. ಚಿಕ್ಕಂದಿನಿಂದ ಅಲ್ಲಿಯೇ ಬೆಳೆದ ಇಂಚರಾ ಅದೇ ವಾತಾವರಣವನ್ನು ಮೈಗೂಡಿಸಿಕೊಂಡರು. ಪರಿಣಾಮವಾಗಿ, ಈಗ ಕನ್ನಡದ ಚಲನಚಿತ್ರ ಗಾಯಕಿಯಾಗಿ ಹೆಸರುಗಳಿಸುತ್ತಿದ್ದಾಳೆ.
 ಇವರ ತಾಯಿ ವಿಶಾಲಾಕ್ಷಮ್ಮ. ಇಲ್ಲಿನ ರಾಜೇಂದ್ರನಗರ ರೋಟರಿ ಶಾಲೆಯಲ್ಲಿ ಮುಖ್ಯಾಧ್ಯಾಪಕಿ. ತಂದೆ ಎನ್.ಜಿ.ರಮೇಶ್  ಬಿಸಿನೆಸ್‌ಮನ್. ಈ ದಂಪತಿಗಳ ಏಕಮಾತ್ರ ಪುತ್ರಿ ಇಂಚರಾ ರೋಟರಿ ಶಾಲೆಯಲ್ಲಿ ಎಸ್ಸೆಸೆಲ್ಸಿಯವರೆಗೆ ಓದಿ ಡಿವಿಎಸ್‌ನಲ್ಲಿ ಪಿಯು ಮುಗಿಸಿ ಬೆಂಗಳೂರಿನಲ್ಲಿ ಪದವಿ ಓದಿದ್ದಾರೆ. 
ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಸರಿಗಮಪ’ ಮೂಲಕ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡು, ಇದರಲ್ಲಿ ತೃತಿಯ ಬಹುಮಾನ ಗಳಿಸಿದ್ದರು. ಈ ವೇಳೆ ಅಲ್ಲಿ ನಿರ್ಣಾಯಕರಾಗಿದ್ದ  ಮನೋಮೂರ್ತಿ, ರತ್ನಮಾಲಾ ಪ್ರಕಾಶ್ ಇವರ ಪ್ರತಿಭೆ ಮೆಚ್ಚಿ ಸಿನಿಮಾ ಕ್ಷೇತ್ರಕ್ಕೆ ಪರಿಚಯ ಮಾಡಿಕೊಟ್ಟರು. ಅಲ್ಲಿಯೂ ತನ್ನ ಪ್ರತಿಭೆಯನ್ನು ಯಶಸ್ವಿಯಾಗಿ  ಸಾಬೀತುಪಡಿಸಿದ್ದರಿಂದ ಕನ್ನಡದ ಗಾಯಕಿಯರ ಸಾಲಿನಲ್ಲಿ ಈಗ ಮಿಂಚುತ್ತಿದ್ದಾರೆ.
 ಕಸ್ತೂರಿ ವಾಹಿನಿಯ ‘ಕುಹು ಕುಹು ಕೋಗಿಲೆ’ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು. ಈವರೆಗೆ ಸುಮಾರು 40 ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಇಂಚರಾ, ಸುಮಾರು 200ಕ್ಕೂ ಹೆಚ್ಚು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಕನ್ನಡ ಪ್ರಸಿದ್ಧ ಸಂಗೀತ ನಿರ್ದೇಶಕರಾದ ರಾಜು ಅನಂತಸ್ವಾಮಿ, ವಿ. ಮನೋಹರ್, ಮನೋಮೂರ್ತಿ, ರಾಜೇಶ್ ಕೃಷ್ಣನ್, ವಿಜಯಪ್ರಕಾಶ್, ಭಾರತೀಯ ಚಿತ್ರ ರಂಗದ ದಿಗ್ಗಜ ರಾದ ಎ.ಆರ್. ರೆಹಮಾನ್, ಉದಿತ್ ನಾರಾಯಣ್, ಕುಮಾರ್ ಸೋನು, ‘ಮಾಲ್ಗುಡಿ’ ಶುಭಾ ಸೇರಿದಂತೆ ಹಲವು ಸಂಗೀತ ನಿರ್ದೇಶಕರ ಗಮನ ಸೆಳೆದು ಭರವಸೆ ಮೂಡಿಸಿದ್ದಾರೆ.
‘ನನ್ನ ಸ್ಟೈಲು ಬೇರೇನೆ’ ಎಂಬ ಮೊದಲ ಗೀತೆಯೊಂದಿಗೆ ಸಂಗೀತ ಪಯಣವನ್ನು ಆರಂಭಿಸಿದ ಇಂಚರಾ, ಈ ಚೊಚ್ಚಲ ಗೀತೆಗೆ ಅನ್ವರ್ಥವಾಗುವಂತೆ, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಉದ್ಯಮದ ಗಮನಸೆಳೆದಿದ್ದಾರೆ. ‘ಗೆಳೆಯ’, ‘ಮೊಗ್ಗಿನ ಮನಸ್ಸು’, ‘ಮಳೆ ಬರಲಿ -ಮಂಜು ಇರಲಿ’, ‘ಶ್ರೀಹರಿಕಥೆ’, ಚಿತ್ರಗಳಲ್ಲದೇ ಸಂಗೀತ ನಿರ್ದೇಶಕ ವಿ. ಮನೋಹರ್‌ರವರ ಸಾರಥ್ಯದಲ್ಲಿನ ‘ಚಾಲಿಪೊಲಿಲೊ’, ತುಳು ಚಿತ್ರಗಳಿಗೂ ಹಾಡಿ ದ್ದಾರೆ.  ‘ರಂಗಿತರಂಗ’ ಚಿತ್ರದ ‘ಕರೆಯೋಲೆ’ ಗೀತೆಗೆ ಧ್ವನಿಯಾಗಿರುವ ಇಂಚರ, ಈ ಹಾಡಿಗಾಗಿ 63ನೆಯ ಬ್ರಿಟಾನಿಯಾ ಫಿಲಂಫೇರ್ (ಸೌತ್) ಪ್ರಶಸ್ತಿಗೆ ಭಾಜನರಾಗಿದ್ದಾರೆ.
  ಕಾರ್ಪೋರೇಟ್ ಸಂಸ್ಥೆಗಳ ಕಾರ್ಯಕ್ರಮ ನಿರ್ವಾಹಕಿಯಾಗಿಯೂ ಗಮನಸೆಳೆದಿರುವ ಇಂಚರಾ, ಸುಮಾರು 200ಕ್ಕೂ  ಪ್ರತಿಷ್ಠಿತ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಬಹು ಪ್ರತಿಭೆಯ ಇಂಚರಾ ಹಿರಿಮೆಗೆ ಗರಿಯಾಗಿ ಫಿಲಂಫೇರ್ ಪ್ರಶಸ್ತಿಯ ಜೊತೆಗೆ, ‘ಸೈಮಾ’ ಪ್ರಶಸ್ತಿ ಕೂಡಾ ಲಭಿಸಿದೆ. ಜೂನ್ 30ರಂದು ಸಿಂಗಪೂರ್‌ನಲ್ಲಿ ನಡೆದ  ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ತನ್ನ ಸಂಗೀತ ಕಲಿಕೆಗೆ ತಾಯಿಯೇ ಮೊದಲ ಗುರು, ನಂತರ ಗುರು ಶೃಂಗೇರಿ ನಾಗರಾಜ್ ಅವರಲ್ಲಿ ಕೆಲವು ಕಾಲ ಕಲಿತೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲ್‌ರುವಾಗ ಪ್ರತಿ ಸಂಗೀತ ಸ್ಪರ್ಧೆಗೂ ತಾಯಿ ಸಿದ್ಧಮಾಡಿ ಕಳುಹಿಸುತ್ತಿದ್ದಳು. ಅವಳು ಅಂದು ತನ್ನನ್ನು ತಿದ್ದಿ-ತೀಡಿ ರೂಪಿಸಿದ್ದರಿಂದ ಸಾಧನೆಗೆ ದಾರಿಯಾಗಿದೆ. ಈ ಎಲ್ಲಾ ಶ್ರೇಯಸ್ಸಿಗೆ ಅವರೇ ಕಾರಣ ಎಂದು ಮನದುಂಬಿ ನುಡಿಯುವ ಇಂಚರಾ, ಕಳೆದ ವರ್ಷದ ಶಿವಮೊಗ್ಗ ಯುವ ದಸರಾ ಉದ್ಘಾಟನೆಯನ್ನು ಇವರು ನೆರವೇರಿಸಿದ್ದಾರೆ. ತನ್ನ ಪ್ರಶಸ್ತಿ, ಪುರಸ್ಕಾರಗಳ ಮೂಲಕ, ಮಲೆನಾಡಿಗೆ ಗೌರವ-ಪ್ರತಿಷ್ಠೆಯನ್ನು ತಂದು ಕೊಟ್ಟಿರುವ ಇವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ, ಅವರ ಗಾಯನ, ಸದಾ ಅನುರಣಿಸುತ್ತಿರಲಿ. 
..............................

No comments:

Post a Comment