Tuesday 9 January 2018

ಪರಿಸರಸ್ನೇಹಿ ಸೈಕಲ್ ಸಂಶೋಧಕ 
ಶಿವಯೋಗಿ


ಈಗ ಎಲ್ಲಿ ಕೇಳಿದರೂ ಪರಿಸರ ಕಾಪಾಡುವ ಮಾತನಾಡುತ್ತಿದ್ದಾರೆ. ಕೋಟಿ ವೃಕ್ಷ ಆಂದೋಲನ ಆರಂಭವಾಗಿದೆ. ಪರಿಸರದ ಮಹತ್ವ ಈಗ ತಿಳಿಯತೊಡಗಿದೆ. ಕೇವಲ ಗಿಡ ನೆಡುವುದರಿಂದ ಮಾತ್ರ ಪರಿಸರ ಉಳಿವು ಸಾಧ್ಯವಿಲ್ಲ. ಪರಿಸರ ಕಲುಷಿತವಾಗದಂತೆ ಮಾಡುವ ಹೊಣೆಗಾರಿಕೆಯೂ ಹೆಚ್ಚಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವ ವಾಹನಗಳು ಎಲ್ಲೆಡೆ ಹೊಗೆ ಉಗುಳುತ್ತ ಪರಿಸರ ಕಲುಷಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲೊಬ್ಬ ಯುವಕ ಪರಿಸರ ಸ್ನೇಹಿ ಸೌರಶಕ್ತಿ ಸೈಕಲ್ ಸಿದ್ಧಪಡಿಸಿದ್ದಾನೆ. ಇಂಧನ ಬಳಕೆ ಕಡಿಮೆ ಮಾಡುವುದು ಅನಿವಾಂರ್ವಾಗಿರುವುದರಿಂದ ಈ ಯುವಕ ತಯಾರಿಸಿದ ಸೈಕಲ್‌ಗೆ ಹೆಚ್ಚು ಪ್ರಚಾರ ಸಿಗಬೇಕಿದೆ.
ಭದ್ರಾವತಿಯ ಸರ್ಕಾರಿ ವಿಐಎಸ್‌ಎಸ್‌ಜೆ ಸಂಸ್ಥೆಯಲ್ಲಿ ಡಿಪ್ಲೊಮಾ ಮುಗಿಸಿರುವ ಈ ಯುವಕ ಎಸ್. ಎಸ್. ಶಿವಯೋಗಿ ಸೊರಬ ತಾಲೂಕು ಎಲಿವಾಳ ಗ್ರಾಮದ ಬಡರೈತ ಸೋ
ಮಶೇಖರಯ್ಯ ಮತ್ತು ಶಕುಂತಲಾ ಅವರ ಪುತ್ರ. ರೈತಾಪಿ ಕುಟುಂಬದಲ್ಲಿ ಬೆಳೆದ ಈತನಿಗೆ ಪರಿಸರ ಉಳಿಸುವ ಹಂಬಲ ಬಾಲ್ಯದಿಂದಲೂ ಕಾಡಿದ್ದರಿಂದ ಏನಾದರೂ ಹೊಸತನ ಸಾಧಿಸುವ ಛಲವಿತ್ತು, ಕೋಟಿ ಕನಸಿತ್ತು. ಆದರೆ ಕೈಯಲ್ಲಿ ಕಾಸಿರಲಿಲ್ಲ. ನಗರದ ವೆಂಕಟೇಶ ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದುಕೊಂಡು ಹಗಲು ಕಾಲೇಜಿಗೆ ಹೋಗುತ್ತ, ರಾತ್ರಿ ಎಟಿಎಂ ವಾಚ್‌ಮನ್ ಕೆಲಸ ಮಾಡುತ್ತ ಡಿಪ್ಲೋಮಾ ಪಾಸು ಮಾಡಿದ್ದಾನೆ. 
ಹಾಸ್ಟೆಲ್‌ನಲ್ಲಿರುವಾಗಲೇ ಪರಿಸರ ಸಮೃದ್ಧಿ ಸಂಘಟನೆಯನ್ನು ಕೆಲವೇ ಯುವಕರೊಡಗೂಡಿ ರಚಿಸಿಕೊಂಡು ಸುಮಾರು 2500ಕ್ಕೂ ಹೆಚ್ಚು ಸಸಿ ನೆಟ್ಟಿದ್ದಾನೆ. ಬೇಸಿಗೆಯಲ್ಲಿ ಆ ಗಿಡಕ್ಕೆ ನೀರು ಹಾಕುವುದು, ಜನರಲ್ಲಿ ಜಾಗೃತಿ ಮೂಡಿಸಿ ಅವುಗಳ ಬೆಳವಣಿಗೆಗೆ ಕಾರಣನಾಗಿದ್ದಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ವರ್ಷ ಸೌರಶಕ್ತಿ ಚಾಲಿತ ಸೈಕಲನ್ನು ತಯಾರಿಸಿ ನಗರದ ಹಲವೆಡೆ ಪ್ರದರ್ಶನ ಮಾಡಿದ್ದಾನೆ. ಗಂಟೆಗೆ 40 ಕಿ. ಮೀ. ಓಡುವ ಈ ಸೈಕಲ್‌ಗೆ ಬ್ಯಾಟರಿ ಅಳವಡಿಸಲಾಗಿದೆ. ಈಗ ನ್ಯಾಚುರಲ್ ಗ್ರೀನ್ ಸೇವರ್ ಸೈಕಲ್- 2ನ್ನು ತಯಾರಿಸುತ್ತಿದ್ದಾನೆ. ಇದಕ್ಕೆ ನೆದರ್ಲೆಂಡ್‌ನಿಂದ ಬ್ಯಾಟರಿ ತರಿಸಿದ್ದಾನೆ. ಈ ಬ್ಯಾಟರಿ 12 ಸಾವಿರ ರೂ. ಮೌಲ್ಯದ್ದಾಗಿದೆ.
ಈ ಸೈಕಲ್ ಚಕ್ರ ಡಿಸಿ ಮೋಟಾರ್ ಮೂಲಕ ತಿರುಗುತ್ತದೆ. ಚಕ್ರ ತಿರುಗುವ ಮುನ್ನ ವೇಗಕ್ಕೆ ಸೈಕಲ್‌ಗೆ ಅಳವಡಿಸಿರುವ ಬ್ಯಾಟರಿ ಸೌರವಿದ್ಯುತ್ ಬಳಸಿಕೊಂಡು ಚಾರ್ಜ್ ಆಗುತ್ತದೆ.  ಇದರಿಂದ ಮೊಬೈಲ್ ಕೂಡ ಚಾರ್ಜ್ ಮಾಡಬಹುದು. ಈ ಸೈಕಲ್ ಮಾಮೂಲಿ ಸೈಕಲ್‌ನಂತೆ ಎಲ್ಲ ಭಾಗಗಳನ್ನು ಹೊಂದಿದೆ. ದಾನಿಗಳ ನೆರವಿನಿಂದ ಇದು ಸಿದ್ಧವಾಗಿದೆ. ಕಳೆದ ವರ್ಷ ರಚಿಸಿದ ಈ ಸೈಕಲ್ ಗಮನಿಸಿದ ಕೆಲವರು ಈತನಿಂದ ಖರೀದಿಸಿದ್ದಾರೆ. ಇದಕ್ಕೆ ಸುಮಾರು 40 ಸಾವಿರ ರೂ. ಖರ್ಚು ತಗುಲಿದೆ. ಸೈಕಲ್ -2ಕ್ಕೆ 70 ಸಾವಿರ ರೂ. ಖರ್ಚು ಬರಲಿದೆ. ಮುಂದೆ ಇದೇ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆಂಬ ಇಚ್ಛೆಯಿದೆ. ಅದರೆ ಹಣಕಾಸಿನ ಕೊರತೆ ಇದೆ. ಸುಮಾರು 10 ಲಕ್ಷದಷ್ಟು ಹಣ ಬೇಕಿದ್ದು, ಇದು ದೊರೆತಲ್ಲಿ ಸೈಕಲ್ ಉದ್ಯಮವನ್ನೇ ತೆರೆಯುವ ಇಚ್ಛೆ ತನ್ನದು ಎನ್ನುತ್ತಾನೆ ಶಿವಯೋಗಿ.
ಮುಂದಿನ ದಿನಗಳಲ್ಲಿ ಅಂಗವಿಕಲರಿಗೆ ಬೈಕ್ ತಯಾರಿಸುವ ಪ್ರಾಜೆಕ್ಟ್ ಸಿದ್ಧಗೊಳಿಸುತ್ತಿರುವ ಈತ, ಕಂಪನಿ ಬೈಕ್‌ಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಿ ಅಂಗವಿಕಲರಿಗೆ ಸಿಗುವಂತೆ ಮಾಡಬೇಕೆಂಬ ಇಚ್ಛೆ ಹೊಂದಿದ್ದಾನೆ. ಅದೇ ರೀತಿ ರೈಲು ನಿಲ್ದಾಣದಲ್ಲಿ ಅಂಗವಿಕಲರಿಗೆ ತೆರಳಲು ಸೈಕಲ್, ವೃದ್ಧರಿಗೆ ಚಲಿಸಲು ಸೈಕಲ್ ತಯಾರಿಸುವ ಯೋಜನೆ ರೂಪಿಸುತ್ತಿದ್ದಾನೆ. ಹೊಸ ಆವಿಷ್ಕಾರದ ಬಗ್ಗೆ ತೀವ್ರ ಕುತೂಹಲಿಯಾಗಿರುವ ಮತ್ತು ಅಷ್ಟೇ ಚುರುಕುಮತಿ ಈ ಯುವಕ ಸೌಮ್ಯ ಮತ್ತು  ಸರಳ ಸ್ವಭಾವದನು. ತಾನು ಮಾಡಿದ ಸಾಧನೆ ಬಗ್ಗೆ ಅಪಾರವಾದ ಹೆಮ್ಮೆ ಹೊಂದಿದ್ದಾನೆ. ಆದರೆ ಹಣಕಾಸು ನೆರವಿಗೆ ಯಾರೂ ಮುಂದೆ ಬಾರದಿರುವ ಬಗ್ಗೆ ಅಷ್ಟೇ ಬೇಸರ ವ್ಯಕ್ತಪಡಿಸುತ್ತಾನೆ. 
published on 16.7.16
.................................

No comments:

Post a Comment