Saturday 6 January 2018

ರಾಷ್ಟ್ರೀಯ ಖೋಖೊ ಉಪನಾಯಕ 
ಮುನೀರ್ ಬಾಶಾ
..............................


ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಅದನ್ನು ಸಾಧಿಸುವ ಛಲ ಬೇಕು. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯನ್ನು ಪ್ರಮುಖವಾಗಿ ತೆಗೆದುಕೊಂಡು ಅದರಲ್ಲಿ ಸಾಧನೆ ಮಾಡಿದರೆ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಅದು ದಾರಿಮಾಡಿಕೊಡುತ್ತದೆ. ಸತತ ಪರಿಶ್ರಮ ಮತ್ತು ಕಠಿಣ ಅಭ್ಯಾಸದಿಂದ ಎಂತಹ ಮಹತ್ತರ ಸಾಧನೆಯನ್ನೂ ಮಾಡಬಹುದು ಎನ್ನುವುದಕ್ಕೊಂದು ಉತ್ತಮ ಉದಾಹರಣೆ ಭದ್ರಾವತಿಯ ವಿದ್ಯಾರ್ಥಿ ಮುನೀರ್ ಬಾಶಾ.
ಭಾರತ ಖೋಖೋ ತಂಡದ ಉಪನಾಯಕನಾಗಿ  ದೇಶವನ್ನು ಪ್ರತಿನಿಧಿಸಿದ ಕೀರ್ತಿ ಇವರದ್ದು. ಮುನೀರ್ ಬಡತನದ ಕುಟುಂಬದಿಂದ ಬಂದವರು. ತಂದೆ ಅಹ್ಮದ್ ಜಾನ್ ಮತ್ತು ತಾಯಿ  ಆರಿಫಾ ಬೇಗಂ ಹೆಚ್ಚಿನ ವಿದ್ಯಾವಂತರೇನಲ್ಲ. ತಂದೆ ಕಾರ್ಮಿಕನಾಗಿ ಕೆಲಸ ಮಾಡಿ ಮಗನನ್ನು ಓದಿಸಿದರು. ಮಗ ಓದಿಗಿಂತ ಕ್ರೀಡೆಯಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದು, ಅದಕ್ಕೆ ತಕ್ಕ ಪ್ರೋತ್ಸಾಹವನ್ನು ಶಿಕ್ಷಕರು ನೀಡಿದರು. ಇದರ ಪರಿಣಾಮವಾಗಿ ಅದರಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಕ್ಕೆ , ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಮುನೀರ್. ಫೆಬ್ರುವರಿಯಲ್ಲಿ  ಗುವಾಹಟಿಯಲ್ಲಿ ಜರುಗಿದ ದಕ್ಷಿಣ ಏಶ್ಯಾ ಕ್ರೀಡಾಕೂಟದಲ್ಲಿ  ಭಾರತ ತಂಡ ಚಿನ್ನದ ಪದಕ ಗೆದ್ದು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮುನೀರ್ ಪ್ರಾಥಮಿಕ ಶಿಕ್ಷಣವನ್ನು ಓದಿದ್ದು ಹೊಸಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲನ್ನು ಶ್ರೀಕೃಷ್ಣ ಪ್ರೌಢಶಾಲೆಯಲ್ಲಿ ಓದಿ ನಂತರ ಪದವಿಗೆ ಸೇರಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ. ವಿದ್ಯಾರ್ಥಿ ದೆಸೆಯಿಂದಲೇ ಖೋಖೋದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಮುನೀರ್ ಅದರತ್ತಲೇ ಹೆಚ್ಚಿನ ಗಮನ ನೀಡುತ್ತ ಸಾಧನೆ ಮಾಡುತ್ತ ಬಂದಿದ್ದಾರೆ. 2005ರಲ್ಲಿ 14ರ ಒಳಗಿನ ಬಾಲಕರ ರಾಷ್ಟ್ರೀಯ ಖೋಖೋ ಪಂದ್ಯಾವಳಿ ಪಟಿಯಾಲಾದಲ್ಲಿ ನಡೆದಾಗ  ಅದರಲ್ಲಿ ಪ್ರಥಮ ಸ್ಥಾನವನ್ನು ತಂಡ ಗಳಿಸುವಂತೆ ಮಾಡಿ ‘ಭಾರತ್ ಅವಾರ್ಡ್’ನ್ನು ಮುಡಿಗೇರಿಸಿಕೊಂಡಿದ್ದಾರೆ. 2006ರಲ್ಲಿ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ 3ನೆಯ ಸ್ಥಾನ, 2207ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಪಿಯು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ತೃತೀಯ, 2008ರಲ್ಲಿ ಆಂದ್ರದಲ್ಲಿ ನಡೆದ ಪಿಯು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮತ್ತೆ ತೃತಿಯ ಸ್ಥಾನ, 2012ರಲ್ಲಿ ಅಖಿಲ ಭಾರತ ಖೊಖೋ ಟೂರ್ನಿಯಲ್ಲಿ ದ್ವಿತಿಯ ಮತ್ತು ತುಮಕೂರಿನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಕರ್ನಾಟಕ ತಂಡ ಮೊದಲ ಸ್ಥಾನ ಗಳಿಸುವಂತೆ ಮಾಡಿದ ಕೀರ್ತಿ ಮುನೀರ್ ಅವರದ್ದು.
ನಂತರ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಅವರು, ಗೋವಾದಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮೂರನೆಯ ಸ್ಥಾನ, ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡ ಮೂರನೆಯ ಸ್ಥಾನ, ಸೋಲಾಪುರದಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪುನಃ ಮೂರನೆಯ ಸ್ಥಾನಕ್ಕೇರುವಂತೆ ಮಾಡಿದ್ದಾರೆ. 2014-15ರಲ್ಲಿ ಕುವೆಂಪು ವಿಶ್ವವಿದ್ಯಾಲಯ ತಂಡದ ನಾಯಕನಾಗಿ 2105ರಲ್ಲಿ ದಕ್ಷಿಣ ವಲಯ ಖೋಖೋ ಟೂರ್ನಿಯಲ್ಲಿ ತಂಡ ದ್ವಿತಿಯ ಸ್ಥಾನ ಪಡೆಯುವಂತೆ ಆಟವಾಡಿದ ಕೀರ್ತಿ ಇವರದ್ದು. ಈ ವರ್ಷದ ಫೆಭ್ರುವರಿಯಲ್ಲಿ ಗುವಾಹಟಿಯಲ್ಲಿ ನಡೆದ ದಕ್ಷಿಣ  ಏಶ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡದ ಉಪನಾಯಕನಾಗಿ ಆಡಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
 ಕಾಲೇಜು ದಿನಗಳಲ್ಲೇ ಇಂತಹ ಅಮೋಘ ಮತ್ತು ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ ಮುನೀರ್‌ಗೆ ಸನ್ಮಾನ, ಗೌರವಗಳು ಹರಿದುಬಂದಿವೆ. ಜಿಲ್ಲೆಯ ಹಲವು ಕಾಲೇಜುಗಳು ಇವರನ್ನು ಕರೆದು ತಮ್ಮ ವಿದ್ಯಾರ್ಥಿಗಳಿಗೆ ಮುನೀರ್ ಸಾಧನೆಯನ್ನು ಪ್ರಚುರಪಡಿಸಿವೆ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಮುಂದೆ ಬರಬೇಕು. ಕ್ರೀಡೆಯಿಂದ ಏನನ್ನಾದರೂ ಸಾಧಿಸಲು ಸಾಧ್ಯ. ಶಾಲಾ- ಕಾಲೇಜು ದಿನಗಳಲ್ಲಿ ಕ್ರೀಡೆಯನ್ನು ನಿರ್ಲಕ್ಷಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ. ಇದನ್ನು ಬಿಟ್ಟು ಯಾವುದಾದರೊದು ಕ್ರೀಡೆಯಲ್ಲಿ ಒಲವು ಬೆಳೆಸಿಕೊಂಡು ಅದನ್ನು ಜೀವನದ ಮತ್ತು ಶಿಕ್ಷಣದ ಒಂದು ಭಾಗವಾಗಿ ಕಲಿಯಬೇಕೆನ್ನುತ್ತಾರೆ ಮುನೀರ್.  ಇವರ ಸಾಧನೆಯನ್ನು ಸರ್ಕಾರ, ಕ್ರೀಡಾ ಪ್ರಾಧಿಕಾರಗಳು ಗುರುತಿಸಿ, ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವಾಗಬೇಕಿದೆ.
,,,,,,,,,,,,,,,,,,,,,,,,,,   

No comments:

Post a Comment