Monday 8 January 2018

ಹೆಮ್ಮೆಯ ಕವಯಿತ್ರಿ
ದೀಪ್ತಿ ಭದ್ರಾವತಿ


ಸಾಹಿತ್ಯ ಕ್ಷೇತ್ರಕ್ಕೆ ಇತ್ತೀಚೆಗೆ ಈ ತಲೆಮಾರಿನ ಅನೇಕ ಯುವಕ-ಯುವತಿಯರು ಕಾಲಿಡುತ್ತಿದ್ದಾರೆ. ಇದರಿಂದ ಸಾಹಿತ್ಯಕ್ಕೆ ಆಧುನಿಕ ಸ್ಪರ್ಶ  ಸಿಗುತ್ತಿದೆ. ಹಿರಿಯ ಲೇಖಕರ, ಕವಿಗಳ, ಸಾಹಿತಿಗಳ ರಚನೆಯಿಂದ ಪ್ರಭಾವಿತರಾದವರು, ಹೊಸ ಸಾಹಿತ್ಯ ಸೃಷ್ಟಿಗೆ ಒಳಗಾದವರೂ ಇದರಲ್ಲಿದ್ದಾರೆ. ಅನೇಕ ಈ ಕವಿ, ಸಾಹಿತಿಗಳು ರಾಜ್ಯಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದರೆ, ಇನ್ನೂ ಹಲವರು ಛಾಪು ಮೂಡಿಸುವತ್ತ ಬರವಣಿಗೆಯಲ್ಲಿ ಸಾಗಿದ್ದಾರೆ. ಈ ರೀತಿ ಛಾಪು ಮೂಡಿಸಿದವರಲ್ಲಿ ದೀಪ್ತಿ ಭದ್ರಾವತಿ ಒಬ್ಬರು.
ಭದ್ರಾವತಿ ವಾಸಿಯಾದ ದೀಪ್ತಿ ಅವರ ‘ಆ ಬದಿಯ ಹೂವು’  ಕೃತಿಗೆ ಈ ವರ್ಷದ ಮಾಸ್ತಿ ಕಥಾ ಪ್ರಶಸ್ತಿಗೆ ಭಾಜನವಾಗಿದೆ. ಈ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಯನ್ನು ಛಾಪಿಸಿದ್ದಾರೆ.  ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಕಥೆ ಬರೆದರೂ ಕವನಗಳ ಮೂಲಕವೇ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲೆ ಮತ್ತು ರಾಜ್ಯದ ಹಲವಾರು ಸಾಹಿತ್ಯಿಕ ಸಮಾರಂಭಗಳಲ್ಲಿ ಕವನ ವಾಚನ ಮಾಡುವ ಮೂಲಕ ಬಹುತೇಕ ಜನರಿಗೆ ಕವಯಿತ್ರಿಯಾಗಿಯೇ ಪರಿಚಿತರು.       
 ದೀಪ್ತಿ ಕಾಲೇಜು ದಿನಗಳಿಂದಲೇ ಸಾಹಿತ್ಯ ರಚನೆಗೆ ತೊಡಗಿದವರು. ಆದರೆ ಆಗ ಅಷ್ಟೊಂದು ಗಂಭೀರವಾಗಿ ಅದರಲ್ಲಿ ತೊಡಗಿಸಿಕೊಳ್ಳದಿದ್ದರೂ ಬರಹದ ಕುತೂಹಲ ಮತ್ತು ಹೊಸತನಕ್ಕೆ ತಮ್ಮನ್ನು ತೆರೆದುಕೊಳ್ಳುವ, ಗುರುತಿಸಿಕೊಳ್ಳುವ  ಉತ್ಕಟೇಚ್ಛೆ ಅವರಲ್ಲಿತ್ತು. ಇದರಿಂದ ಸೃಜನಾತ್ಮಕ ಕವಿತೆಗೆ ಆಗಲೇ ನಾಂದಿ ಹಾಡಿದ್ದ ಅವರು, ಕಳೆದ ಐದಾರು ವರ್ಷಗಳಿಂದ ಗಂಭೀರವಾಗಿ ಸಾಹಿತ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಅದರಲ್ಲೂ ಕವನದ ಮೂಲಕವೇ  ಸಾಹಿತ್ಯ  ರಂಗಸಜ್ಜಿಕೆೆಯನ್ನು ಏರಿದ್ದಾರೆ.
 2011ರಲ್ಲಿ ‘ಕಾಗದದ ಕುದುರೆ’ ಕವನ ಮೂಲಕ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಇಡುವ ಪ್ರಯತ್ನ ಮಾಡಿ ಯಶಸ್ವಿಯಾದ ನಂತರ, 2012ರಲ್ಲಿ ‘ಗ್ರೀನ್ ರೂಮಿನಲ್ಲಿ’ ಕವನ ಸಂಕಲನ
ಬರೆದರು. ಇಲ್ಲಿಂದ ಸ್ವಲ್ಪ ಗಟ್ಟಿಗೊಂಡು  2015 ರಲ್ಲಿ ಕಥಾ ಸಂಕಲನ ‘ಆ ಬದಿಯ ಹೂವು’ ರಚಿಸಿದ್ದಾರೆ. ಇವರ ಸಾಹಿತ್ಯ ಕೃತಿಗೆ ಸಂದ ಪ್ರಶಸ್ತಿಗಳು ಅನೇಕ. ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇವರು ಕೊಡಮಾಡುವ ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ,  ಮುಂಬೈಯ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಶಾರದಾ ವಿ ರಾವ್ ದತ್ತಿ ನಿಧಿ ಪ್ರಶಸ್ತಿ,  ಧಾರವಾಡದ ಹರಪನಹಳ್ಳಿ ಭೀಮವ್ವ ಪ್ರಶಸ್ತಿ,  ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ,  ಈ ವರ್ಷ ಮಾಸ್ತಿ ಕಥಾ ಪ್ರಶಸ್ತಿ ಇವರ ಮುಡಿಗೇರಿವೆ. ಇದಲ್ಲದೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಸ್ಪರ್ಧೆ ಬಹುಮಾನ, ಚೇತನಧಾರ ಟ್ರಸ್ಟ್ ಕಾವ್ಯ ಪ್ರಶಸ್ತಿ, ಗುರುಸಿದ್ಧ ಬಸವಶ್ರೀ ಪ್ರಶಸ್ತಿ, ವಿವಿಧ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.
 ಶಿವಮೊಗ್ಗ ಜಿಲ್ಲೆ ಕುವೆಂಪು, ಲಂಕೇಶ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ಮೊದಲಾದ ಕವಿಗಳ ಬೀಡು. ಇವರ ಜೊತೆಗೆ ಕೆ.ಎಸ್. ನಿಸಾರ್ ಅಹಮದ್, ಸ. ಉಷಾ ಅವರಂತಹವರಿಗೆ ಕವಿತೆ ಬರೆಯಲು ಪ್ರೇರೇಪಿಸಿದ ಪುಣ್ಯಭೂಮಿ. ಮಲೆನಾಡಿನ ಮತ್ತು ಸಹ್ಯಾದ್ರಿಯ ಹಸಿರು, ಸಿರಿ ಸಂಪತ್ತು, ಕಾಡು-ಮೇಡು, ಜಲಧಾರೆ ಅನೇಕರಿಗೆ ಕವನದ ಸ್ಫೂರ್ತಿ. ಇಂತಹ ರುದ್ರರಮಣೀಯ ಮಲೆನಾಡಿನಲ್ಲಿ ಕವಿತೆಗಳು ಸಾಲುಸಲಾಗಿ ರಚಿತವಾಗಿವೆ. ಇವರಿಂದ ಪ್ರೇರಿತವಾದ ಈ ತಲೆಮಾರಿನ ಹಲವರೂ ಸಹ ಇದೇ ದಾರಿಯಲ್ಲಿ ಸಾಗಿದ್ದಾರೆ. ಇದು ಜಿಲ್ಲೆಯಲ್ಲಿರುವ ಸಾಹಿತ್ಯದ ಗಾಳಿಯನ್ನು ಅಥವಾ ಮಣ್ಣಿನ ಗುಣವನ್ನು ಎತ್ತಿ ತೋರಿಸುತ್ತದೆ. 
ಇವರ ಪೂರ್ವಜರು ಮೂಲತ: ದಕ್ಷಿಣ ಕನ್ನಡದವರು. ಅಲ್ಲಿಯ ಮಣ್ಣಿನಗುಣವೇ ಇವರನ್ನು ಬರೆವಣಿಗೆ ಕ್ಷೇತ್ರದತ್ತ ಬಹುತೇಕ ಎಳೆದುತಂದಿರಬಹುದು. ಸದ್ಯ ಇವರ ಪಾಲಕರು ಕೊಪ್ಪ ತಾಲ್ಲೂಕಿನ ನಕ್ಕರಿಕೆಯಲ್ಲಿ ವಾಸವಾಗಿದ್ದಾರೆ.  ಪತಿ ಶ್ರೀಹರ್ಷ ಭದ್ರಾವತಿಯಲ್ಲಿ ಪತ್ರಕರ್ತರಾಗಿದ್ದಾರೆ. ಮಗಳು ಸ್ನಿಗ್ಧ. ಇವರೆಲ್ಲರ ಬೆಂಬಲದೊಂದಿಗೆ ನಾಟಕ ಅಭಿನಯ, ಯಕ್ಷಗಾನ, ತಾಳಮದ್ದಲೆಯಲ್ಲೂ ಇವರು ಪಾತ್ರಧಾರಿಯಾಗಿದ್ದಾರೆ. 
..................................

No comments:

Post a Comment