Thursday 18 January 2018

ಕಾಯಕಕ್ಕಿಲ್ಲ ಅಂಧತ್ವ
ಮಲ್ಲೇಶಪ್ಪ 

 ಮಲ್ಲೇಶಪ್ಪ ಹುಟ್ಟು ಕುರುಡ. ಆದರೆ ಅವರ ಕುರುಡುತನ ಎಂದಿಗೂ ಜೀವನದಲ್ಲಿ ಅಡ್ಡಿಯಾಗಲೇ ಇಲ್ಲ. ಏಕೆಂದರೆ ಅಂಧತ್ವವಿರುವುದು ದೃಷ್ಟಿಗೆ ಮಾತ್ರವೇ ಅವರ ದೂರದೃಷ್ಟಿಗಲ್ಲ ಎಂಬ ಮಾತಿದೆ. ಆ ಪ್ರಕಾರ ಮಲ್ಲೇಶಪ್ಪ ಇಂದಿಗೂ ಸ್ವಾವಲಂಬಿ ಜೀವನ ಸಾಗಿಸುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಂಧರಿಗೆ ಮಾರ್ಗದರ್ಶಿಯಾಗಿದ್ದಾರೆ.
ಆಶಾವಾದವು ಜೀವನದಲ್ಲಿ ಏನನ್ನಾದರೂ ಸಾಧಿಸಲು ನೆರವಾಗುತ್ತದೆ. ಮಾಡುವ ಕೆಲಸದಲ್ಲಿ  ಸರಿಯಾಗಿ ಭರವಸೆ ಮತ್ತು ವಿಶ್ವಾಸವಿಡಬೇಕು. ಆಗ ಎಂತಹ ಸಾಧನೆಯನ್ನಾದರೂ ಮಾಡಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇವರು ಉದಾಹರಣೆ. ಮಲ್ಲೇಶಪ್ಪ ವೈರ್ ಖುರ್ಚಿಯನ್ನು ಹೆಣೆಯುವ ಕಾಯಕ ಮಾಡುತ್ತಿದ್ದಾರೆ. ಇದೇ ಕೆಲಸ ಅವರಿಗೆ ಉತ್ತಮ ಹೆಸರನ್ನೂ ಸಹ ತಂದುಕೊಟ್ಟಿದೆ. ಖುರ್ಚಿಯ ಚೌಕಟ್ಟನ್ನು ಅಳವಡಿಸಿ, ಪಟಪಟನೆ ವೈರ್‌ನಿಂದ ಸುತ್ತುತ್ತ, ಸುಂದರವಾಗಿ, ಅಷ್ಟೇ ನೈಪುಣ್ಯದಿಂದ, ನಯ-ನಾಜೂಕಿನಿಂದ  ನೇಯುತ್ತಾರೆ. 
48ರ ಹರಯದ ಮಲ್ಲೇಶಪ್ಪ ಅನಕ್ಷರಸ್ಥ. ನ್ಯಾಮತಿ ಸಮೀಪದ ಸುರಹೊನ್ನೆ ಗ್ರಾಮದವರಾದ ಇವರು, ಮನೆಯಲ್ಲಿ ಸಣ್ಣ ವಿಷಯಕ್ಕೆ ತಂದೆಯೊಂದಿಗೆ ಸುಮರು 35 ವರ್ಷದ ಹಿಂದೆಯೇ ಗಲಾಟೆ ಮಾಡಿಕೊಂಡು, ಇದರಿಂದ ಬೇಸತ್ತು  ಮನೆ ಬಿಟ್ಟು ಬಂದವರು. ಮಾರುತಿ ವ್ಯಾನಿನಲ್ಲಿ ಹಳ್ಳಿಗಳಿಗೆ ತಿರುಗುತ್ತ ಲಾಟರಿ ಟಿಕೆಟ್ ಮಾರುವ ಮೂಲಕ ಜೀವನ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಬೆಂಗಳೂರಿನ ಜೀವನ್‌ಬಿಮಾ ನಗರದಲ್ಲಿ ಅಂಧರಿಗೆ ಉಚಿತವಾಗಿ ಕೌಶಲ್ಯ ತರಬೇತಿ ಕೇಂದ್ರವಿರುವ ಬಗ್ಗೆ ಮಲ್ಲೇಶಪ್ಪ ಅವರಿಗೆ ಮಾಹಿತಿ ನೀಡಿದರು.  ಅಲ್ಲಿಗೆ ತೆರಳಿ ಎರಡು ವರ್ಷ ತರಬೇತಿ ಪಡೆದ ನಂತರ ಶಿವಮೊಗ್ಗಕ್ಕೆ ಬಂದು ವೈರ್ ಖುರ್ಚಿ ನೇಯುವ ಕೆಲಸ ಆರಂಭಿಸಿದರು.
 ಆಗ ವೈರ್ ಖುರ್ಚಿಗಳು ಅಧಿಕವಿರುತ್ತಿದ್ದರಿಂದ ಕೈತುಂಬಾ ಕೆಲಸ ಸಿಗುತ್ತಿತ್ತು. ಸುಮಾರು 20 ಜನರ ತಂಡ ಕಟ್ಟಿ ಈ ಕೆಲಸವನ್ನು ಅವರು ಮಾಡುತ್ತಿದ್ದರು.  ಬರಬರುತ್ತ ಇಂತಹ ಖುರ್ಚಿಗಳು ಕಡಿಮೆಯಾದ್ದರಿಂದ ಕೆಲಸಗಾರರೂ ಸಹ  ಅವರದ್ದೇ ಆದ ಮಾರ್ಗ ಹುಡುಕಿಕೊಂಡರು. ಆದರೆ ಮಲ್ಲೇಶಪ್ಪ ಮಾತ್ರ ಈ ವೃತ್ತಿಯನ್ನು  ಬಿಡಲಿಲ್ಲ.  ಇವರ ಕೆಲಸಕ್ಕೆ ಎಷ್ಟು ಬೇಡಿಕೆ ಇದೆ ಎಂದರೆ ಇವರ ಮನೆಗೆ ಎಷ್ಟೋ ಜನರು ಖುರ್ಚಿಗಳನ್ನು ತಂದು ಕೊಡುತ್ತಾರೆ. ಹಗಲಿಡೀ ವಿವಿಧ ಕಚೇರಿಗಳಲ್ಲಿ ಖುರ್ಚಿಯ ನೇಯ್ಗೆ ಕೆಲಸ ಮಾಡುತ್ತಾರೆ. ಸಂಜೆ ಮನೆಯಲ್ಲೇ ಈ ಕೆಲಸ ಮಾಡುತ್ತಾರೆ. ಇದಕ್ಕೆ ಅವರ ಪತ್ನಿ ಮಂಜುಳಾ ಸಹಕರಿಸುತ್ತಾರೆ. ಮಂಜುಳಾ ಸಹ ಅಂಗವಿಕಲೆಯಾಗಿದ್ದು, ಅವರು ಕೃಷಿ ಮತ್ತು ತೋಟಗಾರಿಕೆ ವಿವಿಯ ಮಹಿಳಾ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಾರೆ.
ಮುಂದಿನ ದಿನಗಳಲ್ಲಿ ಮನೆಯಲ್ಲೇ ಚಾಕ್‌ಪೀಸ್ ಮತ್ತು ಮೇಣದಬತ್ತಿ ಘಟಕ ಆರಂಭಿಸುವ ಯೋಜನೆಯನ್ನು ಮಲ್ಲೇಶಪ್ಪ ಹೊಂದಿದ್ದಾರೆ. ನವುಲೆಯ ತ್ರಿಮೂರ್ತಿನಗರದ ವಾಸಿಯಾಗಿರುವ ಇವರಿಗೆ, ಅಂಗವಿಕಲರ ಮಾಸಾಶನ ಬರುತ್ತಿದೆ. ಇದರ ಹೊರತಾಗಿ ಬೇರೆ ಯಾವ ಸೌಲಭ್ಯವೂ ಸರಕಾರದಿಂದ ಸಿಕ್ಕಿಲ್ಲ. ಇಬ್ಬರು ಪುತ್ರರಿದ್ದು, ಅವರು ಹೈಸ್ಕೂಲ್ ಓದುತ್ತಿದ್ದಾರೆ. ರೋಟರಿ ಕ್ಲಬ್‌ನವರು  ಮತ್ತು ಓಂ ಗಣೇಶ್ ಮೋಟಾರ್ಸ್  ಮಾಲಕ ಭಾಸ್ಕರ್ ಕಾಮತ್ ತನ್ನ ಜೀವನದಲ್ಲಿ ಮರೆಯಲಾರದಷ್ಟು ನೆರವು ನೀಡಿದ್ದನ್ನು ಸ್ಮರಿಸುತ್ತಾರೆ. ಕ್ಲಬ್‌ನವರೇ ಇವರ ವಿವಾಹ ಮಾಡಿಸಿ, ಮನೆಯನ್ನೂ ನಿರ್ಮಿಸಿಕೊಟ್ಟಿದ್ದಾರೆ. 
ತನ್ನ ಮಕ್ಕಳು ಓದಿ ವಿದ್ಯಾವಂತರಾಗಿ ಸ್ವಂತ ಕಾಲಮೇಲೆ ನಿಲ್ಲುವ ಯತ್ನ ಮಾಡಬೇಕು. ಅವರು ತನ್ನಂತೆಯೇ ನೇಯ್ಗೆ ಕಲಿಯಲು ಮುಂದಾಗುವುದು ಬೇಡ. ಅಂಗವೈಕಲ್ಯ ಅಥವಾ ಅಂಧರಾದವರೂ ಸಹ ಮನೆಯಲ್ಲಿ ಕುಳಿತುಕೊಳ್ಳದೆ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಮುಂದಾಗಬೇಕು. ಸಿಗುವ ವಿವಿಧ ಅವಕಾಶವನ್ನು ಬಳಸಿಕೊಳ್ಳಬೇಕು. ಅಲ್ಪ ದುಡಿಮೆಯಾದರೂ ಸರಿ, ಸ್ವಾವಲಂಬಿಯಾಗಿ, ನೆಮ್ಮದಿಯ ಜೀವನ ನಡೆಸಬೇಕು.   ಎನ್ನುವ ಮಲ್ಲೇಶಪ್ಪ, ಅಂಧರು ಜಗತ್ತನ್ನು ಕಾಣದೇ ಇರಬಹುದು. ಆದರೆ ತಮಗನಿಸಿದ್ದನ್ನು ಕೆಲಸದ ಮೂಲಕ ಮಾಡಿ ತೋರಿಸುತ್ತಾರೆ ಎನ್ನುತ್ತಾರೆ.
...............................    

No comments:

Post a Comment