Wednesday 24 January 2018

ಭರತನಾಟ್ಯ ಸಾಧಕ 
ನಟನಂ ಕೇಶವಕುಮಾರ್

ದೂರವಾಗುತ್ತಿರುವ ಭಾರತೀಯ ಸಂಸಕ್ರತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಇಂದಿನ ಗುರಿಯಾಗಿದೆ. ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ  ಭರತನಾಟ್ಯ ಅಮೂಲ್ಯ ಕಾಣಿಕೆ ನೀಡುವ ಮೂಲಕ ಜನಪ್ರಿಯವಾಗಿದೆ. ಶಿವಮೊಗ್ಗದಲ್ಲಿ  ಭರತನಾಟ್ಯ ಕೇಂದ್ರವನ್ನು ಆರಂಭಿಸಿ, ನೂರಾರು ಮಕ್ಕಳಿಗೆ ತರಬೇತಿ ನೀಡುತ್ತಿರುವ ವಿದ್ವಾನ್ ಎಸ್. ಕೇಶವಕುಮಾರ್ ಅವರಿಗೆ ಈ ಬಾರಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ  ಘೋಷಿಸಲಾಗಿದೆ.
ಶಿವಮೊಗ್ಗದಲ್ಲಿ ಭರತನಾಟ್ಯ ಕಲಿತ ಪುರುಷರು ನಾಲ್ಕಾರು ಜನ ಇರಬಹುದು. ಆದರೆ ಅವರಾರೂ ಇದನ್ನು ವೃತ್ತಿಯಾಗಿರಿಸಿಕೊಂಡಿಲ್ಲ. ಕೇಶವಕುಮಾರ್ ಮಾತ್ರ ತಾನು ಕಲಿತ ವಿದ್ಯೆ ಇತರಿಗೂ ಸಿಗಬೇಕೆನ್ನುವ ದೃಷ್ಟಿಯಿಂದ ನಟನಂ ಬಾಲ ನಾಟ್ಯ ಕೇಂದ್ರ ಸಂಸ್ಥೆಯನ್ನು 28 ವರ್ಷದ ಹಿಂದೆ ಆರಂಭಿಸಿ, ಅದರ ಮೂಲಕ ಸಹಸ್ರಾರು ನೃತ್ಯಪಟುಗಳನ್ನು ಬೆಳೆಸಿದ್ದಾರೆ, ಬೆಳೆಸುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದ ಹಲವೆಡೆ ತಮ್ಮದೇ ಆದ ನೃತ್ಯ ಕೇಂದ್ರ ನಡೆಸುತ್ತಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್, ಕರ್ನಾಟಕ ಸಂಗೀತದಲ್ಲಿ ಸೀನಿಯರ್, ಮೈಸೂರು ವಿವಿಯಿಂದ  ಮಾಸ್ಟರ್ ಆಫ್ ಡಾನ್ಸ್ ಮತ್ತು ಕುವೆಂಪು ವಿವಿಯಿಂದ  ಕನ್ನಡ ಎಂಎ ಪದವಿ ಪಡೆದಿರುವ ಇವರು, ಭರತನಾಟ್ಯ ಉದ್ದೇಶ ಮೂಲವಾಗಿದ್ದರೂ  ಅದರೊಟ್ಟಿಗೆ ರಾಜ್ಯದ ಪ್ರಸಿದ್ಧ ಜಾನಪದ, ಸುಗ್ಗಿ ಕುಣಿತ, ಲಂಬಾಣಿ, ಕೊರವಂಜಿ ನೃತ್ಯ, ಕೋಲಾಟದ ವೈಭವವೂ ಅಳಿಯದಂತೆ ಮಾಡುತ್ತಿದ್ದಾರೆ. ಯೋಗ ಶಿಬಿರವನ್ನೂ ನಡೆಸುತ್ತಿದ್ದಾರೆ.
ಮಕ್ಕಳಿಗಾಗಿಯೇ ಇರುವ ಈ ಕೇಂದ್ರದ ಸಾಧನೆ ಗಮನಿಸಿ 1993 ರಲ್ಲಿ ನವದೆಹಲಿಯ ರಾಷ್ಟ್ರೀಯ ಬಾಲಭವನ ಮಾನ್ಯತೆ ನೀಡಿದೆ. ಶಿವಮೊಗ್ಗ, ಭದ್ರಾವತಿ, ಕಡೂರು ಸಹಿತ ಒಟ್ಟೂ 8 ಶಾಖೆಗಳ ಮೂಲಕ  ಸುಮಾರು 400 ಮಕ್ಕಳಿಗೆ  ನೃತ್ಯ ಕಲಿಸುತ್ತಿದ್ದಾರೆ. ಭಾರತ ಮಾತ್ರಲ್ಲದೆ, ರಶ್ಯಾ, ನೇಪಾಳ, ಜರ್ಮನಿ. ಕುವೈತ್, ಶ್ರೀಲಂಕಾ, ಜಪಾನ್, ಉಜ್ಬೆಕಿಸ್ಥಾನ್, ಮಂಗೋಲಿಯಾ, ಮಾರಿಶಸ್‌ನಲ್ಲೂ ತಮ್ಮ ಭರತನಾಟ್ಯ ಪ್ರದರ್ಶನ ನೀಡಿ ದೇಶದ ಹೆಮ್ಮೆಯ ಕಲೆಯ ಕಂಪನ್ನು ಪಸರಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ. ದೇವೇಗೌಡ,  ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ,  ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ್ ಜೋಶಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಕೇಶವಕುಮಾರ್ ನಾಟ್ಯ ಪ್ರದರ್ಶನವನ್ನು  ವೀಕ್ಷಿಸಿದ ಪ್ರಮುಖರು. ಇವರ ನೃತ್ಯ ಚಂದನ ವಾಹಿನಿ, ಶಂಕರ ಚಾನೆಲ್‌ನಲ್ಲಿ ಹಲವು ಬಾರಿ ಪ್ರಸಾರವಾಗಿದೆ.
    ನಗರದ ರಿಮಾಂಡ್ ಹೋಮ್‌ನಲ್ಲಿ, ಸರ್ಕಾರಿ ಬಾಲಕಿಯರ ನಿಲಯದಲ್ಲಿ  ಉಚಿತ ನೃತ್ಯ, ಸಂಗೀತ ಶಿಬಿರ ಏರ್ಪಡಿಸುತ್ತಾರೆ. ಕಿವುಡ, ಮೂಗ, ಅಂಧರ ಶಾಲಾ ಮಕ್ಕಳಿಗೆ ಉಚಿತ ಶಿಬಿರ ನಡೆಸಿದ ಖ್ಯಾತಿ ಇವರದ್ದು. ಆರ್ಟ್ ಆಫ್ ಲಿವಿಂಗ್ ನವದೆಹಲಿಯಲ್ಲಿ ಕಳೆದ ವರ್ಷ ನಡೆಸಿದ ಜಾಗತಿಕ ಸಾಂಸಕ್ರತಿಕ ಉತ್ಸವದಲ್ಲಿ, ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರ  ಕಚೇರಿಯಲ್ಲೂ  ಭರತನಾಟ್ಯ ಪ್ರದರ್ಶಿಸಿ ಸಾವಿರಾರು ಕಲಾಪ್ರಿಯರ ಮನಗೆದ್ದಿದ್ದಾರೆ. 
ಸುಮಾರು 17 ಯುವತಿಯರು ಇವರಿಂದ ನೃತ್ಯ ಕಲಿತು ರಂಗಪ್ರವೇಶ ಮಾಡಿರುವುದು ಇವರ ಬಹುದೊಡ್ಡ ಸಾಧನೆಯಾಗಿದೆ. ಗದಗದ ಕಲಾ ವಿಕಾಸ ಪರಿಷತ್ ರಾಷ್ಟ್ರೀಯ ಯುವ ಪ್ರಶಸ್ತ್ತಿಯನ್ನು ಇವರಿಗೆ 2006ರಲ್ಲಿ ನೀಡಿ ಗೌರವಿಸಿದೆ. ಇದರೊಟ್ಟಿಗೆ ರಾಜಕುಮಾರ್ ಸಾಧನ ರತ್ನ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ವಿಶಾಖಪಟ್ಟಣಂನ ಸ್ಕೂಲ್ ಅಫ್ ಥಿಯೇಟರನ ಕಲಾಜೀವ ಪುರಸ್ಕಾರ, ನಾಟ್ಯ ಕಲಾನಿಧಿ,  ನೃತ್ಯ ನಿಪುಣ ಮೊದಲಾದ ನೂರಾರು ಪ್ರಶಸ್ತಿ, ಸನ್ಮಾನಗಳು ಇವರ ಮುಡಿಗೇರಿವೆ. 
....................................  

No comments:

Post a Comment