Wednesday 24 January 2018


86ರ ಅಜ್ಜ ಕ್ರೀಡಾಪಟು 
ರಾಮೇಗೌಡ


ಮನುಷ್ಯನಿಗೆ ವಯಸ್ಸು ಎನ್ನುವುದು ದೇಹಕ್ಕಾಗುತ್ತದೆಯೇ ವಿನಾ ಮನಸ್ಸಿಗಲ್ಲ. ಇದರಿಂದಾಗಿಯೇ ಬಹುತೇಕ ನಿವೃತ್ತರು ಹೆಚ್ಚು ಕ್ರಿಯಾಶೀಲರಾಗುತ್ತಾರೆ. ನಾವು ಹಿರಿಯರಲ್ಲ, ಬದಲಾಗಿ ರೀಸೈಕಲ್ ಆದ ಯುವಕರು ಎಂದು ಇವರು ಹೇಳುತ್ತಾರೆ.  ಇದೇ ವೇಳೆ, ಜೀವನದಲ್ಲಿ ವಯಸ್ಸನ್ನು ಮರೆತು ಸಾಧನೆ ಮಾಡಬೇಕು, ಮುನ್ನುಗ್ಗಬೇಕು ಎನ್ನುವ ಮಾತು ನೆನೆಪಿಗೆ ಬರುತ್ತದೆ.   
 ಕೆಲಸದಿಂದ ನಿವೃತ್ತರಾದ ನಂತರ ಎಷ್ಟೋ ಜನರು  ಮನೆಯಿಂದ ಹೊರಬರುವುದೇ ಇಲ್ಲ. ಇನ್ನೂ ಕೆಲವರಿಗೆ ನಿವೃತ್ತಿಯೇ ಹೊಸ ಜೀವನಕ್ಕೆ, ಸಾಧನೆಗೆ, ಕಾರಣವಾಗುತ್ತದೆ. ಹೊಸತನದ ತುಡಿತಕ್ಕೆ ಕಾತರರಾಗಿರುತ್ತಾರೆ. ಜೀವನದಲ್ಲಿ ಇನ್ನಷ್ಟು ಉತ್ಸಾಹಿಯಾಗಿರಲು, ಹಲವರಿಗೆ ಮಾದರಿಯಾಗಲು ನಿರ್ಧರಿಸುತ್ತಾರೆ. ಇಂತಹವರಲ್ಲಿ  ಈ ಬಾರಿಯ ಹಿರಿಯ ನಾಗರಿಕ ದಿನಾಚರಣೆಯಂದು ಕ್ರೀಡಾ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಗೆ ಪುರಸ್ಕೃತರಾದ ಭದ್ರಾವತಿಯ ಕ್ರೀಡಾಪಟು ರಾಮೇಗೌಡ ಒಬ್ಬರು.
  ಜಿಲ್ಲೆಯಲ್ಲಿ ರಾಮೇಗೌಡರ ಹೆಸರು ಕೇಳದವರಿಲ್ಲ. ಅವರು ತಮ್ಮ ನಿವೃತ್ತಿ ಮೊದಲು ಮಾಡಿದ ಕೆಲಸಕ್ಕಿಂತ ಹೆಚ್ಚಾಗಿ ಕ್ರೀಡಾಪಟುವಾಗಿಯೇ  ಆನಂತರ ಜನಪ್ರಿಯರಾಗಿದ್ದಾರೆ. ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟುವಾದ ಹೆಚ್.ರಾಮೇಗೌಡ ಮೂಲತಃ ತುರುವೇಕೆರೆಯವರು. ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಶಿಫ್ಟ್ ಇಂಜಿನೀಯರ್ ಆಗಿ 39 ವರ್ಷ ಸೇವೆ ಸಲ್ಲಿಸಿ 58 ವರ್ಷಕ್ಕೆ ನಿವೃತ್ತರಾದರು. ತಮ್ಮ ನಿವೃತ್ತಿಯ ನಂತರ ಎರಡು ವರ್ಷಗಳ ಕಾಲ ವೇಗದ ಓಟ, ವೇಗದ ನಡಿಗೆ ಸೇರಿದಂತೆ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ತರಬೇತಿ ಪಡೆದರು. ಇದೇ ಅವರ ಹೊಸ ಜೀವನಕ್ಕೆ, ಸಾಧನೆಗೆ ತಿರುವು ನೀಡಿತು.
 ಆನಂತರ ನಿರಂತರವಾಗಿ ತಾಲೂಕು, ಜಿಲ್ಲೆ, ರಾಜ್ಯ, ಅಂತರರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದು ದಾಖಲೆಯನ್ನು ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ಇವರು ಮಾಡಿರುವಷ್ಟು ದಾಖಲೆಯನ್ನು ದೇಶದಲ್ಲಿ ಯಾವ ಹಿರಿಯ ಕ್ರೀಡಾಪಟುವೂ ಮಾಡಿಲ್ಲ ಎನ್ನುವುದು. ಇದುವರೆಗೂ ಇವರು ಒಟ್ಟು 215 ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅದರಲ್ಲಿ 170 ರಲ್ಲಿಪ್ರಥಮ ಸ್ಥಾನ, 45 ರಲ್ಲಿ ದ್ವಿತಿಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಇವರಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದರೂ ಇನ್ನೂ ಸಾಧಿಸಬೇಕು ಎಂಬ ಛಲವಿದೆ. ಅವರು ನಡೆದಾಡುವಾಗ, ಇನ್ನೂ ಚಿರಯುವಕನಂತೆ ಕಾಣುತ್ತಾರೆ. ನಡೆದಾಡುವ, ಓಡುವ  ಎಲ್ಲಾ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಅಥವಾ ದ್ವಿತಿಯ ಸ್ಥಾನವನ್ನು ಪಡೆದೇ ತೀರುವ ಗುರಿಯನ್ನು ಹೊಂದಿ ಇಂದಿಗೂ ದಿನ ನಿತ್ಯ ನಡಿಗೆ ಹಾಗೂ ಓಟದ ತರಬೇತಿ ಪಡೆಯುತ್ತಿದ್ದಾರೆ. ಇವರ ಈ ಸಾಧನೆ ಇಂದಿನ ಕಿರಿಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.
ಈ ಹಿರಿಯನ ಸಾಧನೆ ಗಮನಿಸಿ ಸಂದ ಪುರಸ್ಕಾರಗಳು ನೂರಾರು. ಇತ್ತೀಚೆಗೆ ಆಚರಿಸಲಾದ ಹಿರಿಯ ನಾಗರಿಕ ದಿನಾಚರಣೆಯಲ್ಲಿ ರಾಜ್ಯ ಸರ್ಕಾರ ಗೌರವಿಸಿ ಒಂದು ಲಕ್ಷ ರೂ. ನಗದು ನೀಡಿದೆ.  ಈ ಹಣವನ್ನು ಅವರು ತಮ್ಮ ಸ್ವಂತಕ್ಕೆ ಬಳಸದೆ ಆರು ಅನಾಥಾಶ್ರಮಗಳಿಗೆ ನೀಡಲು ಮುಂದಾಗಿದ್ದಾರೆ. 86 ರ ಈ ಅಜ್ಜ ಸೋಲಿಲ್ಲದ ಸರದಾರರನಾಗಿ, ಅಷ್ಟೇ ಮಾನವೀಯ ಮತ್ತು ಅಂತಃಕರಣ ಉಳ್ಳವರಾಗಿದ್ದಾರೆ. ಈವರೆಗೆ ಕ್ರೀಡೆಗಾಗಿ ಸ್ವಂತ ಮೂರು ನಿವೇಶನ ಸೇರಿದಂತೆ  ಲಕ್ಷಾಂತರ ರೂ. ವ್ಯಯಿಸಿದ್ದಾರೆ. ಯಾವ ಬಹುಮಾನದ ಹಣವನ್ನೂ ಸ್ವಂತಕ್ಕೆ ಬಳಸಿಲ್ಲ. ದಾನಿಯೂ, ನಿರಂತರ ಕ್ರೀಡಾಸಾಧಕನೂ ಆಗಿ  ತಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದಾರೆ. 
ಪ್ರತಿನಿತ್ಯ 5ರಿಂದ 10 ಕಿ. ಮೀ. ವಾಕಿಂಗ್, ರನ್ನಿಂಗ್ ಮಾಡುತ್ತೇನೆ. ಆದ್ದರಿಂದಲೇ ಇಂದಿಗೂ ಆರೋಗ್ಯವಂತನಾಗಿದ್ದೇನೆ. ಇಂದಿನ ಯುವಕರು ಇದೇ ರೀತಿ ಸಾಧನೆ ಮಾಡಬೇಕು. ಕಷ್ಟಪಟ್ಟು ಮುಂದೆ ಬರಬೇಕು ಎಂದು ಸಲಹೆ ನೀಡುತ್ತಾರೆ. 
..................................

No comments:

Post a Comment