Tuesday 16 January 2018

ಜೋಗಿ ಜಾನಪದ ಸ್ಟಾರ್
ನಾಗರಾಜ ತೋಂಬ್ರಿ.





 ನಮ್ಮ ನಿಜವಾದ ಸಂಸ್ಕೃತಿ ಅಡಗಿರುವುದೇ ಜಾನಪದದಲ್ಲಿ. ಬದುಕಿನ ಪ್ರತಿ ಅಂಶವೂ ಜಾನಪದದ ಸೊಗಡಿನಲ್ಲೇ ಇದೆ. ಅದರಲ್ಲೂ ಇದರ ಅತಿ ಹೆಚ್ಚಿನ ಪರಿಣಾಮವಿರುವುದು ನಮ್ಮ ಕಲೆಗಳ ಮೇಲೆ. ಜಾನಪದ ಕಲೆಗಳೆಂದರೆ ಈ ಮಣ್ಣಿನ ಮಕ್ಕಳಿಗೆ ಕಿವಿ ನಿಮಿರುತ್ತದೆ.  ಇದರಿಂದ ಪ್ರೇರಿತವರಾಗದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇಂತಹ ಅತ್ಯಮೂಲ್ಯ ಜಾನಪದ ಕಲೆಗಳಲ್ಲಿ ಜೋಗಿ ಜಾನಪದ ಕಲೆಗೆ ವಿಶಿಷ್ಟ ಸ್ಥಾನವಿದೆ. ಜೋಗಿ ಜನಾಂಗದ ಕೆಲವು ಯುವಕರು ಇಂದಿಗೂ ಆ ಕಲೆಯನ್ನು ಉಳಿಸಿ ಬೆಳೆಸುವತ್ತ ಮಹತ್ತರ ಹೆಜ್ಜೆ ಇಡುತ್ತಿದ್ದಾರೆ. ಅಂತಹವರಲ್ಲಿ ಒಬ್ಬರು ನಾಗರಾಜ ತೋಂಬ್ರಿ.
ನಾಗರಾಜ ಅವರು ಯುವ ಕಲಾವಿದರು. ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಕಾಪಾಡುವ ಜವಾಬ್ದಾರಿಯನ್ನು ಅವರು ಹೊತ್ತು, ತನ್ನಂತೆಯೇ ಉತ್ಸಾಹವಿರುವ ಸುಮಾರು 9 ಯುವಕರ ಗುಂಪನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ದುರ್ಗಾಮಾತೆ ಜಾನಪದ ಕಲಾತಂಡ ಎಂಬ ಹೆಸರಿಟ್ಟು ಅದರಡಿಯಲ್ಲಿ ಕಲೆಯ ಪ್ರದರ್ಶನ ನೀಡುತ್ತ ಮತ್ತು ಉಳಿಸುವ ಕೆಲಸ ಮಾಡುತ್ತಿದ್ದಾರೆ.  ಜಿಲ್ಲೆಯ ಆನಂದಪುರ ಸುತ್ತಮುತ್ತ ಈ ಜನಾಂಗದವರು ಇದ್ದು, ಅವರು ಇದರ ಉಳಿವಿಗೆ ಯತ್ನ ನಡೆಸುತ್ತಿದ್ದಾರೆ. ಕೆಲವು ವರ್ಷದ ಹಿಂದಿನವರೆಗೆ  ಜೋಗಿಪದ ಅಥವಾ ತಂಬೂರಿ ಪದ ಹಾಡುವ ಮೂಲಕ ಊರೂರು ಸುತ್ತಿ ಸಂಪಾದನೆ ಮಾಡುತ್ತಿದ್ದುದು ನೆನೆಪಿರಬಹುದು. ಈಗ  ಆ ರೀತಿ ಊರೂರು ಸುತ್ತುವವರು ಇಲ್ಲ. ಆದರೆ ನಶಿಸುತ್ತಿರುವ ಆ ಕಲೆಯನ್ನು ಉಳಿಸುವ ಕೆಲಸವನ್ನು ಜೋಗಿ ಜನಾಂಗದವರು ಮಾಡುತ್ತಿದ್ದಾರೆ.
ನಾಗರಾಜ ತೋಂಬ್ರಿ ಅವರು  ಸುಮಾರು 20 ವರ್ಷಗಳಿಂದ ತಮ್ಮ ತಂದೆ ಹಾಗೂ ಚಿಕ್ಕಪ್ಪ ಅವರಿಂದ ಬಳುವಳಿಯಾಗಿ ಬಂದ ಕಲೆಯನ್ನು  ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಕಲೆಯಲ್ಲಿ ಬರುವ ಮಹಾರಾಜರ ಕಥೆ, ಅರ್ಜುನ ಜೋಗಿ ಹಾಡು, ಗೀಗೀ ಪದ, ತತ್ವ ಪದ, ಜನಪದ ಕಥೆಗಳನ್ನು ಇವರು ಹಾಡುತ್ತಾರೆ. ಹಳ್ಳಿ ಮತ್ತು ನಗರಗಳಲ್ಲಿ ಜನಪದ ಕಾರ್ಯಕ್ರಮವನ್ನು ಇವರು ನೀಡುತ್ತಿದ್ದಾರೆ. ಆರೋಗ್ಯ ಮತ್ತು ವಾರ್ತಾ, ಪ್ರಚಾರ, ಯುವ ಸಬಲೀಕರಣ, ಕನ್ನಡ ಸಂಸ್ಕೃತಿ ಇಲಾಖೆಯವರ ವಿವಿಧ ಯೋಜನೆಗಳ ಅರಿವನ್ನು ಗ್ರಾಮೀಣರಲ್ಲಿ ಮೂಡಿಸುವ ದೃಷ್ಟಿಯಿಂದ ಸರ್ಕಾರ ಜಾನಪದ ಕಲಾವಿದರ ಮೂಲಕ ಕಾರ್ಯಕ್ರಮ ಮತ್ತು ತರಬೇತಿ ಕೊಡಿಸುತ್ತಿದ್ದು, ಇದರಲ್ಲಿ ನಾಗರಾಜ ಅವರು, ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲಿ ಅತ್ಯಧಿಕ ಕಾರ್ಯಕ್ರಮ ಕೊಟ್ಟಿದ್ದಾರೆ. ಕೇವಲ 7ನೆಯ ತರಗತಿ ಓದಿರುವ ಇವರು, ಜೋಗಿ ಕಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ರಾಜ್ಯ, ಹೊರರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಜನಜಾಗೃತಿಗೆ ಇವರನ್ನು ನಿಯೋಜಿಸಲಾಗಿತ್ತು. ಜಾನಪದ ಸ್ಟಾರ್ ಎಂಬ ಬಿರುದನ್ನು ಆರೋಗ್ಯ ಇಲಾಖೆ ಇವರಿಗೆ ನೀಡಿದೆ. 
35 ರ ಹರಯದ ನಾಗರಾಜ ಅವರ ಸಾಧನೆಯನ್ನು ಗಮನಿಸಿ ಹಲವಾರು ಗೌರವ, ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕೊಚ್ಚಿನ್‌ನ ಹೃದಯವಾಹಿನಿ ಜಾನಪದ ಪ್ರಶಸ್ತಿ, ಕಾಸರಗೋಡಿನ ಕರಾವಳಿ ಕಲಾಪ್ರಶಸ್ತಿ, ಬೆಂಗಳೂರಿನ ವೀರಶೈವ ಸಂಸ್ಥೆ ಕೊಡಮಾಡುವ ಕಾಯಕಶ್ರೀ ಪ್ರಶಸ್ತಿ,  ಬೆಂಗಳೂರಿನ ಶ್ರೀಗಂಧ ಕಲಾ ನಕ್ಷತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆನಂದಪುರಂನ ಮುರುಘಾಮಠದಿಂದ, ಶಿವಮೊಗ್ಗದ ಬಸವಕೇಂದ್ರದಿಂದ, ಸಾಗರ ತಾಲೂಕು ಯುವ ಒಕ್ಕೂಟದಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಭದ್ರಾವತಿ ಆಕಾಶವಾಣಿಯ ಕಲಾವಿದರಾಗಿದ್ದಾರೆ. 
ಯುವಜನಾಂಗ ಇಂದು ಕಲೆಯನ್ನು ದೂರಮಾಡುತ್ತಿದೆ. ವಿಜ್ಞಾನ, ತಂತ್ರಜ್ಞಾನಕ್ಕೆ ಮಾರುಹೋಗಿರುವ ಯುವಜನಾಂಗ ಜನಪದವನ್ನು ಮರೆಯುತ್ತಿದೆ. ಹೀಗೆಯೇ ಮುಂದುವರೆದರೆ ಕಲೆ ನಶಿಸುತ್ತದೆ. ಜೋಗಿಯಂತಹ ಅಪೂರ್ವ ಕಲೆಯನ್ನು ಉಳಿಸುವ ಕೆಲಸದಲ್ಲಿ ಸದಾ ನಿರತನಾಗಿದ್ದೇನೆ. ಇದಕ್ಕೆ ಸಾರ್ವಜನಿಕರ, ಸಂಘ-ಸಂಸ್ಥೆಗಳ ಮತ್ತು ಸರ್ಕಾರದ ಸಹಭಾಗಿತ್ವ ಅಗತ್ಯ. ಜನಪದ ಸಂಸ್ಥೆಗಳು, ಅಕಾಡೆಮಿಗಳು ಈ ಬಗ್ಗೆ ಗಮನ ಹರಿಸಬೇಕು.  ಜೋಗಿ ಕಲಾವಿದರನ್ನು ಗುರುತಿಸಬೇಕು. ಅವರ ಕಲೆ ಉಳಿಸಲು ಅಕಾಡೆಮಿಯವರು ಆದ್ಯತೆ ಕೊಡಬೇಕು, ತರಬೇತಿ ಶಿಬಿರ ನಡೆಸಬೇಕು, ವಿಶ್ವವಿದ್ಯಾಲಯಗಳಲ್ಲಿ ಪೀಠ ಸ್ಥಾಪಿಸಬೇಕು. ಪಠ್ಯಗಳಲ್ಲಿ ಈ ಕಲೆಯ ಬಗ್ಗೆ ಪಾಠ, ಪದ್ಯ ಅಳವಡಿಸಿದರೆ ಯುವಜನರಿಗೆ ಒಂದಷ್ಟು ಮಾಹಿತಿ ದೊರೆತು ಅದರ ಉಳಿವಿಗೆ ಸಹಕಾರಿಯಾಗಬಹುದು ಎನ್ನುತ್ತಾರೆ ನಾಗರಾಜ.
8.4.17
.......................................

No comments:

Post a Comment