Tuesday 16 January 2018

ಅಭಿಜಾತ ರಂಗಕಲಾವಿದೆ
ಕವಿತಾ ಭದ್ರಾವತಿ.

....................................
ನೀನು ಕಲಾವಿದನಾಗಿಯೇ ಜನಿಸಿದ್ದರೆ, ನಿನಗೆ ಬದುಕಿನ ಆಯ್ಕೆಗೆ ಬೇರೆ ಮಾರ್ಗದ ಅವಶ್ಯಕತೆ ಇಲ್ಲ. ಆದರೆ ಕಲಾವಿದನಾಗಿ ಮುಂದುವರೆಯಲು ಹೋರಾಡಬೇಕು  ಎಂಬ ಮಾತು ಇಂಗ್ಲಿಷ್‌ನಲ್ಲಿದೆ. ಹುಟ್ಟು ಕಲಾವಿದರಾಗಿರುವವರಿಗೆ ಇದು ಅನ್ವಯಿಸುತ್ತದೆ. ಪಾಲಕರು ಕಲಾವಿದರಾಗಿದ್ದಲ್ಲಿ ಬಹುತೇಕ ಸಂದರ್ಭದಲ್ಲಿ ಅವರ ಮಕ್ಕಳು ಕಲಾವಿದರಾಗುತ್ತಾರೆ. ಅಂದರೆ ಕಲೆ ಅವರ ರಕ್ತದಲ್ಲೇ ಬಂದಿರುತ್ತದೆ. ಇಂತಹ ಒಬ್ಬ ಅಭಿಜಾತ ರಂಗಕಲಾವಿದೆ ಭದ್ರಾವತಿಯಲ್ಲಿದ್ದಾರೆ. ಅವರೇ ಕವಿತಾ ಭದ್ರಾವತಿ.
ಶಿವಮೊಗ್ಗ ಜಿಲ್ಲೆಯಲ್ಲಿ  ನಾಟಕ ಕಂಪನಿಗಳು ಇಲ್ಲದಿರಬಹುದು. ಆದರೆ ಇಲ್ಲಿಯ ಜನರಿಗೆ ಕಂಪನಿ ನಾಟಕಗಳ ಪರಿಚಯವಿದೆ. ನಗರಕ್ಕೆ ಬಂದು ಪ್ರದರ್ಶಿಸುವ ನಾಟಕ ಕಂಪನಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾರೆ. ಪ್ರತಿವರ್ಷ ಒಂದೆರಡು ಕಂಪನಿಗಳು ಬಯಲುಸೀಮೆಯ ಜಿಲ್ಲೆಯಿಂದ ಇಲ್ಲಿಗೆ ಬಂದು ನಾಟಕ ಪ್ರದರ್ಶಿಸುತ್ತಾರೆ. ಸದ್ಯ ರಾಯಚೂರಿನ ಸಂಗಮೇಶ್ವರ ನಾಟ್ಯ ಕಲಾ, ಆಶಾಪುರ ಇಲ್ಲಿ ನಾಟಕ ಪ್ರದರ್ಶಿಸುತ್ತಿದೆ. ಈ ತಂಡದಲ್ಲಿ ಕವಿತಾ ಒಬ್ಬ ಪ್ರಮುಖ ಪಾತ್ರಧಾರಿಯಾಗಿದ್ದಾರೆ.
ಸುಮಾರು 70ರ ದಶಕದಲ್ಲಿ  ಭದ್ರಾವತಿಯಲ್ಲಿ ಸೋಮಶೇಖರಯ್ಯ ಪುರಾಣಿಕಮಠ ಎನ್ನುವ ಪ್ರಸಿದ್ಧ ರಂಗಕಲಾವಿದರಿದ್ದರು. ಅವರ ಮಡದಿ ಶಶಿಕಲಾ ಸಹ ನಾಟಕ ಕಲಾವಿದೆ. ಅವರ ಪುತ್ರಿಯೇ ಕವಿತಾ. ಪುರಾಣಿಕಮಠ್ ಮೂಲತಃ ಭದ್ರಾವತಿ ತಾಲೂಕಿನ ಹೆಬಸೂರಿನವರು. ಈ ದಂಪತಿ ಹೆಸರಾಂತ ನಾಟಕ ಸಂಘಗಳಲ್ಲಿ  ಪಾತ್ರನಿರ್ವಹಿಸಿ ಖ್ಯಾತಿಗಳಿಸಿದವರು. ಕವಿತಾ ಸಹ ಪಾಲಕರೊಂದಿಗೆ ಊರೂರು ತಿರುಗಿದವರು. ಬಾಲಕಿಯಾಗಿರುವಾಗಲೇ ನಾಟಕದತ್ತ ಒಲವು ಬೆಳೆಯಿತು. ಆದರೆ  ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಕವಿತಾ, ದಾವಣಗೆರೆಯಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಬೆಳೆದು 7ನೆಯ ತರಗತಿವರೆಗೆ ಮಾತ್ರ ಓದಿದರು. ನಂತರ ನಾಟಕ ಕಂಪನಿಗಳು ಕೈಬೀಸಿ ಕರೆದವು. ಈ ಸಂದರ್ಭದಲ್ಲಿ ವಿವಿಧ ನಾಟಕ ಸಂಘಗಳು ದಾವಣಗೆರೆಯಲ್ಲಿ ಹೆಸರುಗಳಿಸಿದ್ದವು. ಚಿಕ್ಕಮ್ಮ ಪ್ರೋತ್ಸಾಹ ನೀಡಿದ್ದರಿಂದ ಅಲ್ಲಿಯೇ ನಾಟಕ ಪ್ರವೇಶಿಸಿ ಹಲವು ವರ್ಷ ವೃತ್ತ್ತಿ ಮುಂದುವರೆಸಿದರು. ಆದರೆ ಹಣದ ವಿಚಾರದಲ್ಲಿ ಚಿಕ್ಕಮ್ಮಳೊಂದಿಗೆ ಎದುರಾದ ಕೆಲವು ಸಮಸ್ಯೆಗಳಿಂದಾಗಿ ದಾವಣಗೆರೆಯನ್ನು ಬಿಟ್ಟು ಬೇರೆ ನಾಟಕ ಕಂಪನಿಗಳಿಗೆ ಪ್ರವೇಶಿಸಿದರು. ಸದ್ಯ ಅದರಲ್ಲೇ ಪಳಗಿ ಪ್ರಮುಖ ಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ.
  ಕವಿತಾ ರಾಜ್ಯದ ಹಲವಾರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ, ಕೊಟ್ಟೂರೇಶ್ವರ ನಾಟಕ ಸಂಘ, ಕುಮಾರೇಶ್ವರ ನಾಟ್ಯ ಸಂಘ, ಗುಬ್ಬಿ ನಾಟಕ ಕಂಪನಿ,  ಕುಮಾರವಿಜಯ ನಾಟ್ಯ ಸಂಘ ಚಿತ್ತರಗಿ, ಖಾಸ್ನತೇಶ್ವರ ನಾಟಕ ಸಂಘ ತಾಳಿಕೋಟೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಪ್ರಮುಖವಾಗಿ ಅಭಿನಯಿಸಿದ ಕೆಲವು ನಾಟಕಗಳೆಂದರೆ-  ಸಾಮಾಜಿಕ ಮತ್ತು ಹಾಸ್ಯ ನಾಟಕಗಳಾದ ಖಾನಾವಳಿ ಚೆನ್ನಿ, ಮೂಕನ ಮದುವೆ, ಕುಂಟ ಕೋಣ ಮೂಕ ಜಾಣ, ಐತಿಹಾಸಿಕ ನಾಟಕಗಳಾದ ನಾಗಲಿಂಗಲೀಲೆ, ಬಸವೇಶ್ವರ ಮಹಾತ್ಮೆ, ರೇಣುಕಾ ಯಲ್ಲಮ್ಮ ಮಹಾತ್ಮೆ, ಸತ್ಯ ಹರೀಶ್ಚಂದ್ರ ಮೊದಲಾದವು.
 ನಾಟಕ ಕಂಪನಿಗಳ ಕೆಲಸದಲ್ಲಿ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಇದೆ. ಒಬ್ಬ ಕಲಾವಿದೆಯಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜನರ ನಾಡಿಮಿಡಿತಗಳನ್ನು ಅರ್ಥ ಮಾಡಿಕೊಂಡು ಅಭಿನಯಿಸಬೇಕಾಗುತ್ತದೆ ಎನ್ನುವ ಕವಿತಾ, ನಾಟಕ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಜೊತೆಗೆ ಸಾರ್ಥಕತೆಯನ್ನೂ ಕಂಡುಕೊಂಡಿದ್ದೇನೆ. ಕಲಾವಿದೆಯಾಗಿ ಹುಟ್ಟಿರುವುದೇ ತನ್ನ ಭಾಗ್ಯ. ಪಾಲಕರ ಇಚ್ಛೆಯಂತೆ ಅದೇ ವೃತ್ತಿಯನ್ನು ಮುಂದುವರೆಸಿದ್ದೇನೆ. ಇಂದಿನ ದಿನಗಳಲ್ಲಿ ಜನರ ಪ್ರೋತ್ಸಾಹ ಸ್ವಲ್ಪ ಕಡಿಮೆ ಇದ್ದರೂ ಕಂಪನಿ ನಾಟಕಗಳ ಪ್ರಾಮುಖ್ಯತೆ ಕಡಿಮೆ ಆಗಿಲ್ಲ. ಶಿವಮೊಗ್ಗದಲ್ಲಿ ಈ ಹಿಂದೊಮ್ಮೆ ಕಂಪನಿ ನಾಟಕದಲ್ಲಿ ಅಭಿನಯಿಸಿದ್ದೆ ಎನ್ನುತ್ತಾರೆ ಸುಮಾರು ಎರಡುವರೆ ದಶಕಗಳಿಂದ ಕೆಲಸ ಮಾಡಿ, ವಿವಿಧ ಜಿಲ್ಲೆಯನ್ನು ಸುತ್ತಾಡಿರುವ ಕವಿತಾ.       
ಜೊತೆಗೆ ಆರ್ಕೆಸ್ಟ್ರಾದಲ್ಲಿ ಹಾಡುವುದು, ನರ್ತಿಸುವುದು ಇವರ ಹವ್ಯಾಸ. ಭದ್ರಾವತಿ ಬೀಟ್ಸ್ ಆರ್ಕೆಸ್ಟ್ರಾ ನಡೆಸುವ ವಾಸು ಅವರ ಪತ್ನಿಯಾಗಿರುವ ಕವಿತಾ ಅವರಿಗೆ 7ನೆಯ ತರಗತಿಯಲ್ಲಿ ಓದುವ ಮೈತ್ರೇಯಿ ಎನ್ನುವ ಮಗಳಿದ್ದಾಳೆ.
25.3.17
,,,,,,,,,,,,,,,,,,,,,,,,,,

No comments:

Post a Comment