Tuesday 9 January 2018

ಹುಟ್ಟೂರು ಅಭಿವೃದ್ಧಿ ಕಾಳಜಿಯ
ಕಾನ್‌ಸ್ಟೇಬಲ್ ಹಾಲೇಶಪ್ಪ 

ಸಮಾಜ ಸೇವೆಯಿಂದ ಸಿಗುವಷ್ಟು ಆತ್ಮಸಂತೋಷ ಯಾವ ಪ್ರಶಸ್ತಿಯಿಂದಲೂ ಸಿಗುವುದಿಲ್ಲ.  ಒಂದು ಗ್ರಾಮದ ಅಥವಾ ಜನರ ಬದುಕಿನಲ್ಲಿ ಮೂಲಭೂತ ಬದಲಾವಣೆಗಳನ್ನು, ಊರಿನ ಅಭಿವೃದ್ಧಿಯನ್ನು ಮಾಡಲು ಎಲ್ಲರಿಗೂ ಮನಸ್ಸು ಬರುವುದಿಲ್ಲ. ಹಣ ಮತ್ತು ಮನಸ್ಸಿದ್ದವರೆಲ್ಲ ಮಾಡುವುದೂ ಇಲ್ಲ. ಇದಕ್ಕೆ ವಿಶೇಷ ಕಳಕಳಿ ಬೇಕು, ಕನಸು ಬೇಕು. ಇಂತಹ ಸಾವಿರಾರು ಕನಸುಗಳನ್ನು ಹೊತ್ತ ಯುವಕನೊಬ್ಬ  ಈ ಮಹತ್ತರ ಕೆಲಸಕ್ಕೆ  ಮುನ್ನುಡಿ ಬರೆದಿದ್ದಾನೆ. ಗ್ರಾಮದ ಅಭಿವೃದ್ಧಿಗೆ ಯುವಕರ ತಂಡ ಕಟ್ಟಿಕೊಂಡು ಸ್ವತಃ ನಿರತನಾಗಿದ್ದಾನೆ. ಅವನೇ ಹಾಲೇಶಪ್ಪ.
     ತಾನು ಸರ್ಕಾರಿ ಕೆಲಸದಲ್ಲಿದ್ದರೂ ತನ್ನ ಹುಟ್ಟೂರು ಅಭಿವೃದ್ಧಿ ಕಾಣಬೇಕು. ದುಡಿದ  ಹಣದಲ್ಲಿ ಕೆಲವಷ್ಟನ್ನಾದರೂ ಇದಕ್ಕಾಗಿ ವಿನಿಯೋಗಿಸಬೇಕು ಎನ್ನುವ ಇವರು, ಯಾರಲ್ಲೂ ಇದಕ್ಕಾಗಿ ಹಣ ಕೇಳುತ್ತಿಲ್ಲ, ಪಡೆಯುತ್ತಿಲ್ಲ. ಸರ್ಕಾರದ ಯೋಜನೆಯಿಂದಲೇ ಎಲ್ಲವನ್ನೂ ಜನರಿಗೆ ಕೊಡಿಸಬೇಕು. ಅದರ ಸದ್ಬಳಕೆಯಾಗಬೇಕು. ಆ ಮೂಲಕ ಊರಿನ ಜನತೆಗೆ ಆಧುನಿಕ ಜ್ಞಾನದ ಅರಿವಾಗಬೇಕು. ಅದೇ ರೀತಿ ಸೌಲಭ್ಯಗಳು ಸಿಗುವಂತಾಗಬೇಕು. ಎಲ್ಲಾ ರಂಗಗಳಲ್ಲೂ ಗ್ರಾಮಸ್ಥರು ಮುಂಚೂಣಿಯಲ್ಲಿರಬೇಕೆನ್ನುವ ಗುರಿ ಹಾಕಿಕೊಂಡಿದ್ದಾರೆ.
 ಹಾಲೇಶಪ್ಪ ಜಿಲ್ಲಾ ಪೊಲಿಸ್ ಇಲಾಖೆಯಲ್ಲಿ ಎಂಟು ವರ್ಷಗಳಿಂದ ಕಾನ್‌ಸ್ಟೇಬಲ್. ಇತ್ತೀಚೆಗಷ್ಟೇ ಹೊಸನಗರದಿಂದ ಶಿವಮೊಗ್ಗದ ಕೋಟೆ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದಾರೆ.
ಹೊಳೆಹೊನ್ನೂರು ಸಮೀಪದ ಢಣಾಯಕಪುರದವರು. ಬಡಕುಟುಂಬದಿಂದ, ಬಂದ ಇವರು, ಭದ್ರಾವತಿಯಲ್ಲಿ ಸರ್ಕಾರಿ ಐಟಿಐನಲ್ಲಿ ಪದವಿ ಪಡದು ಎಟಿಎಲ್ ಕೋರ್ಸ್ ಮುಗಿಸಿ ನಗರದ ಪರ್ಫೆಕ್ಟ್ ಅಲಾಯೆನ್ಸ್‌ನಲ್ಲಿ  6 ವರ್ಷ ಕೆಲಸ ಮಾಡಿದ್ದಾರೆ. ಎಲ್ಲಿ ಕೆಲಸ ಮಾಡಿದರೂ ಅವರ ಮನಸ್ಸಿನಲ್ಲಿ ಸದಾ ಕೊರೆಯುತ್ತಿದ್ದು ಸಂಪೂರ್ಣ ಗ್ರಾಮಾಭಿವೃದ್ಧಿ ಮತ್ತು ಜನರಲ್ಲಿ ಹೊಸತನವನ್ನು ತುಂಬಬೇಕೆನ್ನುವುದಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಡಿ ಇಟ್ಟ ಇವರಿಗೆ ಸಮಾನಮನಸ್ಕ ಯುವಕರ ಪಡೆ ಸಿಕ್ಕಿತು. ಅವರೆಲ್ಲ ಸೇರಿ ಸ್ನೇಹಬಳಗ ಯುವಕ ಸಂಘ ಕಟ್ಟಿದರು.
ಈಗ ಸುಸ್ಥಿರ ಗ್ರಾಮ, ಸೋಲಾರ್ ಗ್ರಾಮಕ್ಕೆ ಮುನ್ನುಡಿ ಬರೆದಿದ್ದಾರೆ. ಇದರ ಪರಿಣಾಮ ಸುಮಾರು 180 ಮನೆ ಇರುವ ಈ ಊರಿನಲ್ಲಿ ಈಗ 34 ಮನೆಗೆ ಧರ್ಮಸ್ಥಳ ಸ್ವಸಹಾಯ ಸಂಘದ ನೆರವಿನಿಂದ ಸೋಲಾರ್ ಬೆಳಕು ವ್ಯವಸ್ಥೆ ಕಲ್ಪಿಸಲಾಗಿದೆ.  ಜೊತೆಗೆ ಎರಡು ದೇವಸ್ಥಾನಗಳು ಸೋಲಾರ್ ಕಂಡಿವೆ. ಪ್ರತಿ ಮನೆಗೆ 4 ಲೈಟು ಕೊಡಲಾಗಿದೆ. ಶೇ. 95ರಷ್ಟು ಬಡವರೇ ಇರುವ ಈ ದೊಡ್ಡ ಹಳ್ಳಿಯ ಎಲ್ಲ ಮನೆಗೂ ಕೆಲವೇ ತಿಂಗಳಲ್ಲಿ ಸೋಲಾರ್ ಉರಿಯಲಿದೆ.  ಅದೇ ರೀತಿ ಊರನ್ನು ಸಂಪೂರ್ಣ ಮದ್ಯಮುಕ್ತ ಮಾಡಲಾಗಿದೆ. ಒಂದೇ ಒಂದು ಸಾರಾಯಿ ಅಂಗಡಿ ಇಲ್ಲ. ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಯತ್ನವೂ ಸಾಗಿದೆ. ಕಳೆದ ಆರೇಳು ವರ್ಷಗಳಿಂದ ಸ್ವತಃ ಹಾಲೇಶಪ್ಪ ಒಮ್ಮೆಯೂ ಪ್ಲಾಸ್ಟಿಕ್ ಚೀಲ ಹಿಡಿದಿಲ್ಲ. ಇದರೊಟ್ಟಿಗೆ ಪರಿಸರ ಕಾಳಜಿ ಬೆಳೆಸುವುದೂ ಸಾಗಿದೆ. ಸಾಮುದಾಯಿಕ ಸಹಭಾಗಿತ್ವದಲ್ಲಿ ಸುಮಾರು 1500 ಗಿಡಗಳನ್ನು ಈ ತಂಡ ವರ್ಷ ನೆಟ್ಟಿದೆ.
ಈ ಎಲ್ಲ ಕೆಲಸಕ್ಕೆ  ಕೆಲವರು ಅಸಹಕಾರ ಮನೋಭಾವನೆ ತೋರಿದ್ದೂ ಇದೆ. ಆದರೂ ಎದೆಗುಂದೆ ಯುವಕ ಪಡೆ ಮುನ್ನುಗ್ಗುತ್ತಿದೆ. ಗ್ರಾಮಸ್ಥರಾರೂ ಶಿಕ್ಷಣ ವಂಚಿತರಾಗಬಾರದು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂಬ ಆಂದೋಲನವೂ ಚಾಲ್ತಿಯಲ್ಲಿದೆ. ಶಾಲಾ ಮಕ್ಕಳಲ್ಲಿ ಪರಿಸರ ಕಾಪಾಡುವ ಬಗ್ಗೆ ಅರಿವು ಮೂಡಿಸಲು ಅವರಿಂದಲೇ ಗಿಡ ನೆಡಿಸಿದ್ದಾರೆ. ಹಾಲೇಶಪ್ಪ 22 ಬಾರಿ ರಕ್ತದಾನ ಮಾಡಿದ್ದಾರೆ. 4 ಬಡ ಹೆಣ್ಣು ಮಕ್ಕಳಿಗೆ ತಾವೇ ಫೀಸ್ ನೀಡಿ ಅವರ ಕಲಿಕೆಗೆ ನೆರವಾಗಿದ್ದಾರೆ. ಇಂತಹ ಉದಾತ್ತ ಮನೋಭಾವದೊಂದಿಗೆ ಗ್ರಾಮಾಭಿವೃದ್ಧಿಗೆ ಮುಂದಾಗಿದ್ದಾರೆ.
  ಬದಲಾವಣೆಯಾಗಬೇಕೆಂಬ ಮನೋಭಾವ ಮೊದಲು ನಮ್ಮಲ್ಲಿ ಬೆಳೆಯಬೇಕು.  ಹುಟ್ಟಿದರ ಊರಿಗೆ ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು, ಮಾದರಿಯಾಗಬೇಕು. ನಮ್ಮಂತೆ ಇನ್ನಷ್ಟು ಯುವಜನರು ಮುಂದೆ ಬರುವಂತಾಗಬೇಕು, ಹತ್ತರ ಜೊತೆ ಹನ್ನೊಂದಾಗಬಾರದು ಎನ್ನುವುದು ಅವರ ಅಭಿಮತ.
...............................

No comments:

Post a Comment