Wednesday 24 January 2018

ಸಾಮಾಜಿಕ ಕಳಕಳಿಯ
ಡಾ. ರವೀಂದ್ರನಾಥ ಕೋಟಿ


ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ಮಾನವೀಯ ನೆಲೆಯ ಜೊತೆಗೆ ಅವರ ವೃತ್ತಿಯಾಗಿಯೂ ರೋಗಿಯನ್ನು ಗುಣಪಡಿಸುವ ಜವಾಬ್ದಾರಿ ವೈದ್ಯರದ್ದು. ಕೆಲವು ವೈದ್ಯರು ತಮ್ಮ ಸೇವಾಮನೋಭಾವದಿಂದ ಹೆಸರುಗಳಿಸಿ ರೋಗಿಗಳ ಮತ್ತು ಸಾರ್ವಜನಿಕರ ಮನಸ್ಸಿನಲ್ಲಿ ನೆಲೆಸುತ್ತಾರೆ. ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ, ಅಶಕ್ತರಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ. ಇಂತಹ ಮಾನವ ಕಾಳಜಿಯ, ಸೇವೆಯಿಂದಲೇ ಹೆಸರಾಗಿರುವ ಭದ್ರಾವತಿಯ ಡಾ. ರವೀಂದ್ರನಾಥ ಕೋಟಿ ಅವರಿಗೆ ಈ ಬಾರಿಯ ಜೀವಮಾನ ಸಾಧನೆಯ ಪ್ರಶಸ್ತಿ ದೊರೆತಿದೆ.
ಡಾ. ರವೀಂದ್ರನಾಥ ಭದ್ರಾವತಿಯಷ್ಟೇ ಅಲ್ಲ, ಜಿಲ್ಲೆಯಲ್ಲೇ ಹಿರಿಯ ವೈದ್ಯರು. ತಮ್ಮ ಪ್ರಾಥಮಿಕ ವಿದ್ಯಾಭಾಢ್ಯೆಸವನ್ನು ಭದ್ರಾವತಿ ಮತ್ತು ಮೈಸೂರಿನಲ್ಲಿ ಮುಗಿಸಿದ ಬಳಿಕ ಬಳ್ಳಾರಿಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಓದು ಮುಗಿಸಿ ತವರಿನಲ್ಲೇ ಜನರ ಆರೋಗ್ಯ ಸೇವೆ ಆರಂಭಿಸಿದವರು. 1974ರಲ್ಲೇ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿ ಕೋಟಿ ಕ್ಲಿನಿಕ್‌ನ್ನು ತೆರೆದು, ಆನಂತರ ಅದನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು. ಇಲ್ಲಿಂದ ಆರಂಭವಾದ ಅವರ ವೈದ್ಯಜೀವನ ಯಾತ್ರೆ ಇನ್ನೂ ಮುಂದುವರೆದಿದೆ.
 ಭದ್ರಾವತಿಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಯನ್ನು ಸ್ಥಾಪಿಸಿದ ಕೀರ್ತಿ ಇವರದ್ದು. ಇದರ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೇಂದ್ರೀಯ ಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. 68ರ ಹರಯದಲ್ಲೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಕನಿಷ್ಠ 100 ರೋಗಿಗಳನ್ನು ತಪಾಸಿಸುತ್ತಿದ್ದಾರೆ. 
ಉಚಿತ ನೇತ್ರ ಶಿಬಿರ ಮತ್ತು ಆರೋಗ್ಯ ಶಿಬಿರವನ್ನು  ಹಲವು ಬಾರಿ ಏರ್ಪಡಿಸಿ ಸಾವಿರಾರು ಜನರಿಗೆ ನೆರವಾಗುವಂತೆ ಮಾಡಿದ್ದಾರೆ. ಪ್ರತಿವರ್ಷ ಉಚಿತ ಹೃದಯ ತಪಾಸಣೆ ಶಿಬಿರವನ್ನು  ಏರ್ಪಡಿಸುತ್ತಿದ್ದಾರೆ. ಭದ್ರಾವತಿ ಲಯನ್ಸ್ ಕ್ಲಬ್ ಮೂಲಕ ಹತ್ತು ಹಲವು ಸೇವೆಯನ್ನು ಮಾಡಿರುವ ಇವರು ನೇತ್ರದಾನಿ ಡಾ. ಎಂ. ಸಿ. ಮೋದಿ ಮತ್ತು ಅವರ ಮಗ ಡಾ. ಸಿ ಎಂ ಮೋದಿ ಅವರಿಂದ ಶಿಬಿರವನ್ನು ಏರ್ಪಡಿಸಿದ್ದರು. ಸುಮಾರು 500ಕ್ಕೂ ಹೆಚ್ಚು ನೇತ್ರ ಶಸ್ತ್ರಚಿಕಿತ್ಸೆ ಈ ಶಿಬಿರದಲ್ಲಿ ನಡೆದಿತ್ತು. ಈಗ ಬೆಂಗಳೂರಿನ ಮಹಾವೀರ ನೇತ್ರ ಆಸ್ಪತ್ರೆಯವರಿಂದ ಪ್ರತಿವರ್ಷ ಉಚಿತ ಶಿಬಿರ ನಡೆಸುತ್ತಿದ್ದಾರೆ. ರಕ್ತದಾನ ಶಿಬಿರವನ್ನೂ ಸಾಕಷು ಬಾರಿ ಏರ್ಪಡಿಸಿದ್ದಾರೆ.   
ಹೋಮ್ ಗಾರ್ಡ್ಸ್  ಕಮಾಂಡಿಂಗ್ ಆಫೀಸರ್ ಆಗಿಯೂ ಡಾ. ಕೋಟಿ 9 ವರ್ಷ ಕೆಲಸ ನಿರ್ವಹಿಸಿದ್ದಾರೆ. ಇವರ ಕಾಲದಲ್ಲೇ ಮಹಿಳಾ ಹೋಮ್ ಗಾರ್ಡ್ಸ್ ನೇಮಕಾತಿಗೂ ಚಾಲನೆ ಸಿಗುವಂತೆ ಮಾಡಿದ್ದಾರೆ. ಈ ಗಾರ್ಡ್ಸ್‌ಗಳಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ ತರಬೇತಿ,  ತುರ್ತುಪರಿಸ್ಥಿಯನ್ನು ಎದುರಿಸುವ ಬಗ್ಗೆ ತರಬೇತಿ ಕೊಡಿಸಿದ್ದಾರೆ. ಇವರ ಈ ಸೇವೆ ಗಮನಿಸಿ ಭದ್ರಾವತಿ ಹೋಮ್ ಗಾರ್ಡ್ಸ್ ಘಟಕಕ್ಕೆ ಚಿನ್ನದ ಪದಕ ಸಹಿತ ಹಲವು ಪ್ರಶಸ್ತಿ ಲಭಿಸಿದೆ.
ಕಾಲೇಜು ದಿನದಲ್ಲಿಯೇ ಸ್ಕೌಟ್ಸ್, ಗೈಡ್ಸ್, ರೆಡ್ ಕ್ರಾಸ್‌ನಲ್ಲಿ ಕೆಲಸ ಮಾಡಿದ್ದರಿಂದ ಸಮಾಜಸೇವೆಯತ್ತ ಅವರ ಮನಸ್ಸು ತುಡಿಯುತ್ತಿತ್ತು. ವೈದ್ಯರಾದ ಮೇಲಂತೂ ಇದು ಇನ್ನಷ್ಟು ಜಾಸ್ತಿಯಾಗಿ ಸೂಕ್ತ ಅವಕಾಶವೂ ದೊರೆತಿದ್ದರಿಂದ ಉತ್ತಮ ಕೆಲಸ ಮಾಡಲು ಅವಕಾಶವಾಯಿತು ಎನ್ನುತ್ತಾರೆ ಅವರು. 
ಭದ್ರಾವತಿಯಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಆರಂಭಿಸಿದವರು ಡಾ. ಕೋಟಿ. ಈ ಸಂಸ್ಥೆಯ ಮೂಲಕ ಸುತ್ತಮುತ್ತಲ ಮತ್ತು ಪಟ್ಟಣದ ಪುರುಷ, ಮಹಿಳೆಯರಿಗೆ ಬಂದೂಕು ತರಬೇತಿಯನ್ನು ಕೊಡಲಾಗುತ್ತಿದೆ ಇವರ ಇಷ್ಟೆಲ್ಲಾ ಮಹೋನ್ನತ ಸೇವೆ ಗಮನಿಸಿ ದೆಹಲಿ ಮೆಡಿಕಲ್ ಅಸೋಸಿಯೇಶನ್ 2006ರಲ್ಲಿ ಗೌರವಿಸಿದೆ. ಈ ಬಾರಿ ರಾಜ್ಯ ವೈದ್ಯರ ಸಂಘ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
...................................................

No comments:

Post a Comment