Wednesday 24 January 2018

ಜೀವದಾತ ಬಾಲಕ  
ಕೃಷ್ಣ ಡಿ. ನಾಯ್ಕ್



 ಶೌರ್ಯ ಶಬ್ದ ಕೇಳಿದಾಕ್ಷಣವೇ ಮೈ ರೋಮಾಂಚನವಾಗುತ್ತದೆ. ಅದರಲ್ಲೂ ಆಪತ್ತಿನಲ್ಲಿ ಸಿಲುಕಿರುವವರನ್ನು ಜೀವದ ಹಂಗು ತೊರೆದು ರಕ್ಷಿಸುವವರನ್ನು ಕಂಡರೆ ಅವರ ಬಗ್ಗೆ ಇನ್ನೂ ಗೌರವ ಅಧಿಕವಾಗುತ್ತದೆ. ನಗರದ ಬಾಲಕನೊಬ್ಬ ತನ್ನ ಜೀವದ ಹಂಗು ತೊರೆದು ನೀರಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಕ್ಕೆ ರಾಜ್ಯ ಸರ್ಕಾರದ ಈ ವರ್ಷದ ಶೌರ್ಯ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಆತನೇ ಕೃಷ್ಣ ಡಿ. ನಾಯ್ಕ್.
ಕೃಷ್ಣ ನಾಯ್ಕ್ ಸೇವಾಲಾಲ್ ನಗರದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದವನು. ಸದ್ಯ ದುರ್ಗಿಗುಡಿ ಸರ್ಕಾರಿ ಕನ್ನಡ ಮಾಧ್ಯಮದ ಪ್ರೌಢಶಾಲೆಯಲ್ಲಿ 8ನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಸೆಪ್ಟೆಂಬರ್ 23ರಂದು ಥರ್ಮೊಕೋಲ್ ಸಹಾಯದಿಂದ ಈಜಾಡುತ್ತಿದ್ದ ಪಕ್ಕದ ತ್ರಿಮೂರ್ತಿನಗರದ 10 ವರ್ಷದ ಬಾಲಕರಿಬ್ಬರು ಥರ್ಮೊಕೋಲ್ ಮುರಿದು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ಆ ಸಂದರ್ಭದಲ್ಲಿ ಜನರು ಇದನ್ನು ಕಂಡು ಬೊಬ್ಬೆಹಾಕುತ್ತಿದ್ದಾಗ ಅದೇ ಮಾರ್ಗವಾಗಿ ಸೈಕಲ್‌ನಲ್ಲಿ ಬರುತ್ತಿದ್ದ ಕೃಷ್ಣ ನಾಯ್ಕ್ ಹಿಂದೆ- ಮುಂದೆ ಯೋಚಿಸದೆ ನೀರಿಗೆ ಹಾರಿ ಒಬ್ಬನನ್ನು ಎಳೆದು ತಂದು ದಡಕ್ಕೆ ಸೇರಿಸುವಷ್ಟರಲ್ಲಿ ಮತ್ತೊಬ್ಬ ಕೊಚ್ಚಿಕೊಗಿದ್ದ. ಚೆನ್ನಾಗಿ ಈಜುಬಲ್ಲ ಕೃಷ್ಣ ನಾಯ್ಕ್ ತನ್ನ ಸಮಯ ಪ್ರಜ್ಞೆ ಮತ್ತು  ಶೌರ್ಯವನ್ನು ಅಲ್ಲಿ ಪ್ರದರ್ಶಿಸದಿದ್ದರೆ ಇನ್ನೊಬ್ಬ ಬಾಲಕನೂ ನೀರು ಪಾಲಾಗುತ್ತಿದ್ದ.
ಅಂದೇ ಸಾರ್ವಜನಿಕರಿಂದ ಪ್ರಶಂಸೆಗಳ ಸುರಿಮಳೆ ಈತನಿಗೆ ವ್ಯಕ್ತವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಈತನ ಹೆಸರನ್ನು ಹೊಯ್ಸಳನ ಹೆಸರಲ್ಲಿ ಕೊಡಮಾಡುವ ರಾಜ್ಯ ಮಕ್ಕಳ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು. ಆ ಪ್ರಕಾರ ಸರ್ಕಾರ ಈತನಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ಆದರೆ ಈ ಪ್ರಶಂಸೆ ಹೊಟ್ಟೆಯನ್ನೇನೂ ತುಂಬಿಸುವುದಿಲ್ಲವಲ್ಲ.
 ಕೃಷ್ಣ ನಾಯ್ಕ್‌ಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಈತನ ತಂದೆ ದೇವ್ಲಾ ನಾಯ್ಕ್ ಮತ್ತು ತಾಯಿ ವೀಣಾಬಾಯಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟದಲ್ಲಿ ಕೂಲಿ ಮಾಡುತ್ತಿದ್ದಾರೆ. ಅವರಿಗೆ ಮಗ ಮಾಡಿದ ಸಾಹಸಕ್ಕಿಂತ ಆತ ನೀರಿಗೆ ಹಾರಿದ್ದೇ ಹೆದರಿಕೆಯನ್ನು ಹುಟ್ಟಿಸಿದೆ. ಆಗಾಗ ಈಜುವ ಹವ್ಯಾಸವಿರುವುದರಿಂದ ಎಲ್ಲಿ ಅನಾಹುತ ಮಾಡಿಕೊಳ್ಳು ತ್ತಾನೋ ಎಂಬ ಆತಂಕ ಅವರಲ್ಲಿದೆ. ಅದಕ್ಕಾಗಿ ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ದರು. ಆದರೆ ಪಾಲಕರಿಗೆ ಬುದ್ಧಿ ಹೇಳಿ ಶಾಲೆಗೆ ಕಳುಹಿಸುವುದಾಗಿ ಆತನ ಅಕ್ಕ ಮಾಲಾ ಮತ್ತು ಬಾವ ಮಾಲತೇಶ ನಾಯ್ಕ್ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ.
ಬಾವ ಮಾಲತೇಶ್ ಸಹ ಕೂಲಿ ಮಾಡಿಯೇ ಜೀವನ ನಡೆಸುವವರು. ತನ್ನ ಕೂಲಿಯಿಂದಲೇ ಮನೆಯಲ್ಲಿ ಆರು ಜನರನ್ನು ಸಲುಹುವ ಜವಾಬ್ದಾರಿ ಇವರ ಹೆಗಲಮೇಲಿದೆ. ಆದರೂ  ಕೃಷ್ಣನಿಗೆ ಎಸ್ಸೆಸ್ಸೆಲ್ಸಿಯವರೆಗೆ ಶಿಕ್ಷಣ ಕೊಡಿಸುವುದಾಗಿ ಹೇಳುತ್ತಾರೆ. 
 ಶೌರ್ಯ ನಾನಂದುಕೊಂಡಿದ್ದಕ್ಕಿಂತ, ನನ್ನಲ್ಲಿರುವ ಶಕ್ತಿಗಿಂತ ಹೆಚ್ಚಿನ ಗೌರವವನ್ನು ತಂದುಕೊಟ್ಟಿದೆ. ಅಂಜದೆ, ಅಳುಕದೆ ನೀರಿಗೆ ಜಿಗಿದರೆ ಮಾತ್ರ ಅನಾಹುತದ ಸಂದರ್ಭದಲ್ಲಿ ನೀರಿಗೆ ಬಿದ್ದವರನ್ನು ಕಾಪಾಡಲು ಸಾಧ್ಯ. ಯೋಚಿಸುತ್ತ ಕಾಲಕಳೆದರೆ ಧೈರ್ಯ ಹೊರಟುಹೋಗುತ್ತದೆ. ದೈಹಿಕ ಶಕ್ತಿಗಿಂತ ಇಲ್ಲಿ ಮಾನಸಿಕ ಶಕ್ತಿಗೆ ಹೆಚ್ಚು ಮಹತ್ವ ಕೊಡಬೇಕು ಎನ್ನುತ್ತಾನೆ ಕೃಷ್ಣ. 
ಪ್ರಶಸ್ತಿ ಬಂದ ಸುದ್ದಿ ಕೇಳಿ ಹಲವರು ಗೌರವಿಸಿ ಹೋಗಿದ್ದಾರೆ. ಊರಿನ ಜನ ಈತನ ಶೌರ್ಯವನ್ನು ಕೊಂಡಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಕುಟುಂಬದೊಂದಿಗೆ ಬೆಂಗಳೂರಿಗೆ ಹೋಗಿ ಬರಲು ಅಷ್ಟೊಂದು ಹಣವಿಲ್ಲದ್ದರಿಂದ ಮಾ ಡೆವಲಪರ್ಸ್ ಮತ್ತು ಕೆಲವು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ಬೆಂಗಳೂರಿನ ಮೆಗಾವತ್ ಚಾರಿಟೆಬಲ್ ಟ್ರಸ್ಟ್ ಆತನ ಮುಂದಿನ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಹೇಳಿದೆ. ಈ ಸಾಧನೆಯ ಮೂಲಕ ಕೃಷ್ಣನ ಬದುಕು ಹಸನಾಗಲಿ. 
18.11.17
......................................

No comments:

Post a Comment