Thursday 18 January 2018

ಶ್ರೇಷ್ಠ, ಮಾದರಿ ಕೃಷಿಕ 
ಜಗದೀಶ ನಾಯ್ಕ್


  ನಮ್ಮ ನಾಗರಿಕತೆ ಮತ್ತು ಸ್ಥಿರ ಆರ್ಥಿಕತೆಯ ಬುನಾದಿಯೇ ಕೃಷಿ ಎಂಬ ಮಾತಿದೆ. ಕೃಷಿಯು ಸಹ್ಯ ಉದ್ಯೋಗವಾಗಬೇಕಾದರೆ ಅದು ಲಾಭದಾಯಕವಾಗಬೇಕು. ಆಧುನಿಕತೆಯನ್ನು ಬಳಸಿಕೊಂಡು,  ಸಾವಯವದ ಮೂಲಕ ಅತ್ಯುನ್ನತ ಸಾಧನೆಯನ್ನು ಹಲವು ಕೃಷಿಕರು ಮಾಡುತ್ತಿದ್ದಾರೆ. ಈ ಮೂಲಕ ಕೃಷಿಯನ್ನು ಉಳಿಸುವತ್ತ, ಸಂಸ್ಕೃತಿಯನ್ನಾಗಿ ಬೆಳೆಸುವತ್ತ ದಾಪುಗಾಲಿಟ್ಟಿದ್ದಾರೆ. ಈ ಮೂಲಕ ಸಾಧನೆ ಮಾಡಿದ, ಶ್ರೇಷ್ಠ ಮತ್ತು ಮಾದರಿ ಕೃಷಿಕರೆಂದರೆ ಜಗದೀಶ ನಾಯ್ಕ್.
 ಜಗದೀಶ  ಅವರು ಶಿವಮೊಗ್ಗ ನಗರ ವ್ಯಾಪ್ತಿಯಲ್ಲೇ ಇರುವ ಮಲವಗೊಪ್ಪದವರು. ಒಟ್ಟು 5 ಎಕರೆ ಜಮೀನನ್ನು ಹೊಂದಿರುವ ಇವರು ಎಕರೆಗೆ 46 ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ಮಾಡಿದ್ದಾರೆ. ಪ್ರತಿ ವರ್ಷ ಸರಾಸರಿ 40 ಕ್ವಿಂಟಾಲ್ ಬೆಳೆಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ವ್ಯವಸಾಯದ ಪದ್ಧತಿ. ಅವರೆಂದೂ ರಾಸಾಯನಿಕ ಗೊಬ್ಬರ ಅಥವಾ ಔಷಧಿಯ ಗೊಡವೆಗೆ ಹೋಗದೆ ಕೊಟ್ಟಿಗೆ ಗೊಬ್ಬರ, ಮತ್ತು ಜೀವಾಮೃತವನ್ನು ಮಾತ್ರ ಬಳಸುತ್ತಿದ್ದಾರೆ. ಇವರ ಪತ್ನಿ ಲಕ್ಷ್ಮೀಬಾಯಿ ಸಾಥ್ ಕೊಡುತ್ತಿದ್ದಾರೆ. ಕೂಲಿಗಳನ್ನೆಂದೂ ಬಳಸದೆ ಏನೇ ಕೆಲಸ ಇದ್ದರೂ ಪತಿ-ಪತ್ನಿಯೇ ನಿರ್ವಹಿಸುತ್ತಾರೆ. ದಿನಿವಿಡೀ ದುಡಿಮೆಯೇ ಇವರ ಸಾಧನೆಯ ಗುಟ್ಟು. ಭತ್ತದ ಹೊರತಾಗಿ ಸುಮಾರು 2 ಎಕ್ರೆಯಲ್ಲಿ  ಸೌತೆಕಾಯಿ, ಬೀನ್ಸ್, ಇತರೆ ತರಕಾರಿ ಬೆಳೆದಿದ್ದಾರೆ. 6 ಗುಂಟೆ ಜಾಗದಲ್ಲಿ 6 ಕ್ವಿಂಟಾಲ್ ಸೌತೆಕಾಯಿ ಬೆಳೆದು ದಾಖಲೆ ಮಾಡಿದ್ದಾರೆ. ತರಕಾರಿಯನ್ನು ಎಪಿಎಂಸಿಯಲ್ಲೇ ಮಾರಾಟ ಮಾಡುವ ಮೂಲಕ ಉತ್ತಮ ದರ ಪಡೆಯುತ್ತಿದ್ದಾರೆ.
ಇವರ ಇನ್ನೊಂದು ಸಾಧನೆ ಎಂದರೆ ಜೀವಸಾರ ಘಟಕವನ್ನು ಆರಂಭಿಸಿದ ಜಿಲ್ಲೆಯ ಪ್ರಪ್ರಥಮ ರೈತ ಎನ್ನುವುದು. ಗೋಮೂತ್ರ, ಮತ್ತಿತರ ವಸ್ತುಗಳನ್ನು ಹಾಕಿ ಜೀವಸಾರ ತಯಾರಿಸಿ ಬೆಳೆಗಳಿಗೆ ನೀಡುವುದರಿಂದ ರೋಗರಹಿತ, ಬಲಿಷ್ಠ ಮತ್ತು ಭರ್ಜರಿ ಬೆಳೆ ಸಾಧ್ಯ ಎನ್ನುವುದನ್ನು ಈ ಮೂಲಕ ಕಂಡುಕೊಂಡಿದ್ದಾರೆ. ಇವರ ಕೃಷಿ ಸಾಧನೆಯನ್ನು ಸಚಿವ ಕೃಷ್ಣ ಬೈರೇಗೌಡ ಸ್ವತಃ ವೀಕ್ಷಿಸಿದ್ದಾರೆ. ಕೃಷಿ, ತೋಟಗಾರಿಕೆ ಮತ್ತು ಕೃಷಿ ವಿವಿಯವರು ಆಗಾಗ ಭೇಟಿ ನೀಡಿ ಸಹಕಾರ, ಮಾರ್ಗದರ್ಶನ ನೀಡುತ್ತಿದ್ದಾರೆ. 
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳು ಇವರ ಹೊಲಕ್ಕೆ ಭೇಟಿ ನೀಡಿ ಆಧ್ಯಯನಕ್ಕೆ ಬೇಕಾದ ಮಾಹಿತಿ ಪಡೆಯುತ್ತಾರೆ. ಇವರ ಸಾಧನೆ ಇಂದು- ನಿನ್ನೆಯದಲ್ಲ. ತಂದೆಯ ಕಾಲದಿಂದಲೂ ಮುನ್ನಡೆಸಿಕೊಂಡು ಬಂದಿದ್ದಾರೆ. ಸ್ವಂತ ಮತ್ತು ಪರಿಶ್ರಮದ ದುಡಿಮೆಯಿಂದಲೇ ಸಾಧನೆ ಸಾಧ್ಯ ಎನ್ನುವ ಗುಟ್ಟನ್ನು ಅವರು ಕಂಡುಕೊಂಡಿದ್ದಾರೆ. ಸುಮಾರು 2 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಅದೂ ಸಹ ಉತ್ತಮ ಫಲ ಕೊಡುತ್ತಿದೆ. ಇದರ ಜೊತೆಗೆ ಒಬ್ಬ ಮಗನನ್ನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್  ಓದಿಸುತ್ತಿದ್ದಾರೆ. ಮಗಳು ಶಿವಮೊಗ್ಗದಲ್ಲಿ ಪದವಿ ಓದುತ್ತಿದ್ದಾಳೆ. ಇವರೂ ಸಹ ರಜಾ ದಿನದಲ್ಲಿ ತಂದೆಗೆ ಕೃಷಿಯಲ್ಲಿ ನೆರವಾಗುತ್ತಾರೆ. ಒಂದರ್ಥದಲ್ಲಿ ಕೃಷಿಯೇ ಇವರ ದಿನಚರಿ, ಮೂಲಮಂತ್ರ.
 ಜಗದಿಶ ಅವರ ಸಾಧನೆ ಗಮನಿಸಿ 2011ರಲ್ಲಿ ತಾಲೂಕಿನ ಎರಡನೆಯ ಅತ್ಯುತ್ತಮ ರೈತ, 2016ರಲ್ಲಿ ಪಾಲಿ ಹೌಸ್‌ನಲ್ಲಿ ಭರ್ಜರಿ ತರಕಾರಿ ಬೆಳೆದಿದ್ದಕ್ಕೆ ಉತ್ತಮ ಕೃಷಿಕ ಪ್ರಶಸ್ತಿ ದಕ್ಕಿದೆ. ಕಳೆದ ವರ್ಷದ ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಮೊನ್ನೆಯಷ್ಟೇ ಮುಖ್ಯಮಂತ್ರಿ ಅವರಿಂದ ಪ್ರದಾನ ಮಾಡಲ್ಪಟ್ಟಿದೆ. ಶಿವಮೊಗ್ಗ ದಸರಾ ಮತ್ತು ಬಂಜಾರಾ ಟ್ರಸ್ಟ್‌ನವರು ಸಹ ಇವರನ್ನು ಗೌರವಿಸಿದ್ದಾರೆ.
ಇಂತಹ ಶ್ರಮಜೀವಿ ಕೃಷಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಕಷ್ಟಪಟ್ಟರೆ ಕೈತುಂಬಾ ಲಾಭವಿದೆ. ಆದರೆ ಇಂದಿನ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ನಮ್ಮ ಸಂಸಕ್ರತಿಯೇ ಕೃಷಿ. ಅದನ್ನು ಉಳಿಸಿ ಬೆಳೆಸಿದರೆ ನಾಡು ಸಮೃದ್ಧಿಯಾಗುತ್ತದೆ ಎನ್ನುತ್ತಾರೆ ಜಗದೀಶ್.
1.7.17
.............................  

No comments:

Post a Comment