Tuesday 16 January 2018

ರೋಗಿಗಳ ಹೃದಯ ಗೆದ್ದ
   ಶುಶ್ರ್ರೂಷಕಿ ಶಕುಂತಲಾ 

...........................................
ನೀನೆಷ್ಟು ಉತ್ತಮ ಸೇವೆ ಮಾಡುವೆ ಎನ್ನುವುದಕ್ಕಿಂತ ಎಷ್ಟು ರೋಗಿಗಳ ಹೃದಯ ಗೆದ್ದಿರುವೆ ಎನ್ನುವುದು ಮುಖ್ಯ, ರೋಗಿಗಳು ನಿನ್ನ ಹೆಸರನ್ನು ಮರೆಯಬಹುದು, ಆದರೆ ನಿನ್ನ ಸೇವೆಯನ್ನು ಎಂದಿಗೂ ಮರೆಯಲಾರರು- ಇದು ಮದರ್ ತೆರೆಸಾ ಅವರ ಮಾತು. ಶುಶ್ರೂಷಕಿ ಆಗಿರುವವರಿಗೆ ಈ ಮಾತು ಅನ್ವಯಿಸುತ್ತದೆ.  ಇಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆ ಎಂದರೆ ಮೂಗುಮುರಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಅಲ್ಲಿಯೂ ಮಾನವೀಯತೆ, ಜನಪರ ಕಾಳಜಿ, ಪ್ರೀತಿ, ಸಹೋದರತ್ವ, ಹೃದಯ ಶ್ರೀಮಂತಿಕೆ ಕಣ್ಮರೆಯಾಗುತ್ತಿದೆ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ.
ಆದರೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಎಲ್ಲ ಗುಣಗಳನ್ನು ಮೈವೆತ್ತ, ರೋಗಿಗಳ ಪಾಲಿಗೆ ತಾಯಿಯಂತಿರುವ ಶುಶ್ರೂಷಕಿಯೊಬ್ಬರಿದ್ದಾರೆ. ಮದರ್ ತೆರೆಸಾ ಅವರ ಮಾತನ್ನು ಚಾಚೂತಪ್ಪದೆ ಪಾಲಿಸುವ ಇವರಿಗೆ ಈ ಬಾರಿ ರಾಜ್ಯ ಪ್ರಶಸ್ತಿ ದಕ್ಕಿದೆ. ಕಾರಣ ಸೇವೆಯಲ್ಲಿ ಅವರು ತೊಡಗಿಸಿಕೊಂಡಿದ್ದು, ರೋಗಿಗಳನ್ನು ದೇವರಂತೆ ಕಂಡಿದ್ದು. ಅವರೇ  ಡಿ. ಬಿ. ಶಕುಂತಲಾ.
   ಮೆಗ್ಗಾನ್ ಆಸ್ಪತ್ರೆಯ ಹಿರಿಯ ಶುಶ್ರೂಷಕಿ, ಜನಪರ ಕಾಳಜಿ - ಸೇವೆಯ ಮೂಲಕ ಉತ್ತಮ ಹೆಸರು ಸಂಪಾದಿಸಿರುವ  ಶಕುಂತಲಾ ಅವರಿಗೆ  ರಾಜ್ಯ ಮಟ್ಟದ ’ಸರ್ವೋತ್ತಮ ಸೇವಾ’ ಪ್ರಶಸ್ತಿ ನೀಡಲ್ಪಟ್ಟಿದೆ. ಈ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರಪ್ರಥಮ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿಯಾಗಿದ್ದಾರೆ. 68 ನೆಯ ಗಣರಾಜೋತ್ಸವದಂದು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಶಕುಂತಲಾ ಅವರಿಗೆ ಪ್ರಶಸ್ತಿ ಪತ್ರ, ನಗದು ನೀಡಿ ಅಭಿನಂದಿಸಿದ್ದಾರೆ.
   32 ವರ್ಷದಿಂದ ಸೇವೆಯಲ್ಲಿರುವ ಶಕುಂತಲಾ ಮಾರ್ಚ್ ಅಂತ್ಯಕ್ಕೆ ಸೇವಾನಿವೃತ್ತಿ ಹೊಂದಲಿದ್ದಾರೆ.  ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಮ್ಮ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಿರುವುದು ಅವರಲ್ಲಿ ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿದೆ. ಶಕುಂತಲಾ ಮೆಗ್ಗಾನ್‌ನ ರಕ್ತನಿಧಿಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ರಕ್ತದಾನದ ಮಹತ್ವದ ಬಗ್ಗೆ ವ್ಯಾಪಕ ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಂಘಸಂಸ್ಥೆಗಳ ನೆರವಿನೊಂದಿಗೆ ದೊಡ್ಡ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಸೇವೆ ಗುರುತಿಸಿ ಪ್ರತಿಷ್ಠಿತ ’ಫ್ಲೋರೆನ್ಸ್ ನೈಟಿಂಗೇಲ್’ ಪ್ರಶಸ್ತಿ ದೊರೆತಿದೆ. ಜೊತೆಗೆ ಸ್ಥಳೀಯವಾಗಿ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ..
ಶುಶ್ರೂಷಕ ಹುದ್ದೆಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಕಾರಣದಿಂದಲೇ ಅವರನ್ನು ಆಸ್ಪತ್ರೆಯಲ್ಲಿರುವ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ಅಧಿಕಾರಿಗಳ ಸಮಿತಿ ಹಾಗೂ ಮಡಿಲು ಕಿಟ್ ಗುಣಮಟ್ಟ ಪರೀಕ್ಷಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿನ ಸಿಬ್ಬಂದಿಗಳ ಬಗ್ಗೆ ಜನಮಾನಸದಲ್ಲಿ ನಕಾರಾತ್ಮಕ ಭಾವನೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಅಭಿಪ್ರಾಯ ಸುಳ್ಳಾಗಿಸುವ ನಿಟ್ಟಿನಲ್ಲಿ  ಕಾರ್ಯನಿರ್ವಹಣೆ ಮಾಡಿದರು. ಶುಶ್ರೂಷಕಿ ಹುದ್ದೆಗೆ ನ್ಯಾಯ ಕಲ್ಪಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡಿದರು. ಸುಮಾರು 30 ವರ್ಷಗಳ ಅವಿರತ ಸೇವೆಯಲ್ಲಿ ತಮ್ಮ ಬಳಿ ಆಗಮಿಸಿದ ಸಾವಿರಾರು ಬಡ, ಅನಕ್ಷರಸ್ಥ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ಶುಶ್ರೂಷಕಿಯರು ರೋಗಿಗಳೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ.
 ಸರ್ಕಾರಿ ನೌಕರ ಸಂಘದ ಮಾಜಿ ನಿರ್ದೇಶಕಿಯಾಗಿ, ಚುಂಚಾದ್ರಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆಯಾಗಿರುವ ಇವರು, ಜಿಲ್ಲಾ ಒಕ್ಕಲಿಗ ಸಂಘದ ಹಾಲಿ ನಿರ್ದೇಶಕಿಯೂ ಹೌದು. 
 ರೋಗಿಗಳು ನಮ್ಮ ಮೇಲಿಟ್ಟಿರುವ ನಂಬಿಕೆ ಚ್ಯುತಿಬಾರದಂತೆ ಹಾಗೂ ಸರ್ಕಾರ ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬ ಧ್ಯೇಯವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಇಷ್ಟು ದಿನಗಳ ತಮ್ಮ ಸೇವೆ ತೃಪ್ತಿ ಕೊಟ್ಟಿದೆ. ’ಸರ್ವೋತ್ತಮ’ ಪ್ರಶಸ್ತಿ ಇನ್ನಷ್ಟು ಸಂತೃಪ್ತಿ ನೀಡಿದೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ. ತನ್ನ ಸೇವೆ ಸಾರ್ಥಕಗೊಳ್ಳುವಂತೆ ಮಾಡಿದೆ ಎಂದು ಮನದುಂಬಿ ನುಡಿಯುತ್ತಾರೆ ಶಕುಂತಲಾ.
Published on 4.2.17
------------------------------

No comments:

Post a Comment