Tuesday 16 January 2018

ಜಾನಪದ ಸಂಪತ್ತಿನ ರಕ್ಷಕಿ
ಕುಮುದಾ ಸುಶೀಲಪ್ಪ 



ನಂಬಿಕೆ, ಆಶಾವಾದ ಮತ್ತು ಮಹಾನ್ ತ್ಯಾಗದಿಂದ ಮಾತ್ರ ಯಾವುದೇ ಗುರಿಯನ್ನು ಈಡೇರಿಸಲು ಸಾಧ್ಯ. ಹೆಲೆನ್ ಕೆಲರ್ ಹೇಳುವಂತೆ- ಸಾಧನೆಯ ಹಾದಿಯಲ್ಲಿ ಸಾಗುವಾಗ ಕನಸು ಕಾಣಬೇಕು. ಆ ಕನಸೇ ನಮ್ಮ ಗುರಿಯಾಗಬೇಕು.
  ಇಂತಹ ಸುಂದರ ಕನಸು ಹೊತ್ತು ಕಷ್ಟಪಟ್ಟು ಅದನ್ನು ಈಡೇರಿಸಿಕೊಂಡು ಸರ್ಕಾರಿ ನೌಕರಿ ಗಿಟ್ಟಿಸಿ, ತಮ್ಮ ಜನಾಂಗಕ್ಕೊಂದು ಭರವಸೆಯ ಆಶಾಕಿರಣವಾದವರು ಕುಮುದಾ. ಇವರಿಗೆ ಈ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಲಭ್ಯವಾಗಿದೆ.
ಇವರು ಹಕ್ಕಿಪಿಕ್ಕಿ ಜನಾಂಗದವರು. ಶಿಕ್ಷಣದ ಗಂಧವೇ ಇಲ್ಲದ ಅಲೆಮಾರಿ ಜನಾಂಗ. ಆದರೆ ಓದಲೇಬೇಕೆಂಬ ಉತ್ಕಟೇಚ್ಛೆ ಅವರಲ್ಲಿ ಒಡಮೂಡಿದಾಗ ಅದನ್ನು ಸವಾಲಾಗಿ ಸ್ವಿಕರಿಸಿ ಸಾದನೆ ಮಾಡಿದವರು. ಇಂಜಿನೀಯರ್ ಆಗಿ ಜೊತೆಗೆ ಕಲೆ ಮತ್ತು ಸಾಹಿತ್ಯ, ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ನಿಜ ಹೇಳಬೇಕೆಂದರೆ, ಅವರದೊಂದು ಸಾಹಸಮಯ ಜೀವನ.  ಕುಮುದಾ ಅವರು ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ವಿಶೇಷ ಅಧ್ಯಯನ ಮಾಡಿ ಗ್ರಂಥ ಪ್ರಕಟಿಸಿದ್ದಾರೆ.
ಮೂಲವೃತ್ತಿಯಾದ ಹಾರ, ಮಣಿಸರ ತಯಾರು ಮಾಡಿ, ಮನೆಗಳಿಗೆ ತೆರಳಿ ಮಾರಾಟ ಮಾಡುವ ಕೆಲಸಕ್ಕೆ ಅಂಟಿಕೊಳ್ಳದೆ, ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಟ್ಟಿದ್ದರಿಂದ ಮಿಂಚಿನಂತೆ ಮೇಲೇರಿದರು. ಶಿಕ್ಷಣವೇ ಶಕ್ತಿ ಎನ್ನುವ ಮಾತನ್ನು ಸಾಧಿಸಿ ತೋರಿಸಿದ್ದಾರೆ. ಬೇಂದ್ರೆ, ಜಿ.ಪಿ. ರಾಜರತ್ನಂ, ಕುವೆಂಪು, ಸರ್ವಪಲ್ಲಿ ರಾಧಾಕೃಷ್ಣನ್ ಕಷ್ಟದ ಜೀವನದಿಂದ ಹೇಗೆ ಲೋಕವಿಖ್ಯಾತರಾದವರೆನ್ನುವುದನ್ನು ಓದಿ ತಾನೂ ಸಹ ಹಾಗೇ ಸಾಧನೆ ಮಾಡಬೇಕೆಂಬ ಛಲದಿಂದ ಓದಿದವರು.
 ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಸಿಇಟಿ ಬರೆದು ಜೆಎನ್‌ಎನ್‌ಸಿಯಲ್ಲಿ  ಬಿಇ ಮುಗಿಸಿದವರು.ವಿದ್ಯೆಯ ಮಧ್ಯದಲ್ಲೇ ಕುಟುಂಬದವರ ಒತ್ತಾಸೆಯಂತೆ ವಿವಾಹ ಬಂಧನಕ್ಕೆ ಸಿಲುಕಿದರೂ, ವಿದ್ಯೆಯನ್ನು ಬಿಡದೆ, ಪತಿ ಸುಶೀಲಪ್ಪ ಸಹಕಾರದಿಂದ ಅದನ್ನು ಪೂರ್ಣಗೊಳಿಸಿ ಇಂಜಿನೀಯರ್ ಆದರು. ಸದ್ಯ ಜೋಗದಲ್ಲಿ ಮೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಕ್ಕಿಪಿಕ್ಕಿ ಜನಾಂಗದ ಮೊದಲ ಇಂಜಿನಿಯರ್ ಎಂಬ ಹೆಗ್ಗಳಿಕೆ ಇವರದ್ದು.
    ಕೇವಲ ಇಂಜಿನಿಯರ್ ಮಾತ್ರವಲ್ಲ, ಇವರದು ಬಹುಮುಖ ಪ್ರತಿಭೆ. ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ವಿವಿಧ ವಿಚಾರ ಸಂಕಿರಣ, ಆದಿವಾಸಿ ಸಮ್ಮೇಳನ, ಗಿರಿಜನ ಸಮ್ಮೇಳನಗಳಲ್ಲಿ ಭಾಗವಹಿಸಿ ಅಲ್ಲಿನ ವಿಚಾರಗಳಿಂದ ಪ್ರೇರಿತರಾಗಿ ಸಮುದಾಯದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಿರಿಜನ ಅಧ್ಯಯನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ನೇಮಕವಾಗಿ ಪುಸ್ತಕ ರಚಿಸಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯಿಂದ ಹಕ್ಕಿಪಿಕ್ಕಿಯ ಪದಗಳು ಫೆಲೋಶಿಪ್‌ಗೆ ಆಯ್ಕೆಯಾಗಿ ಆ ಸಂಬಂಧ ಪುಸ್ತಕ ರಚಿಸಿದ್ದಾರೆ. ಹಕ್ಕಿಪಿಕ್ಕಿ ಕಥೆಗಳು ಕೃತಿ ರಚಿಸಿದ್ದಾರೆ. ಮೈಸೂರಿನ ಗಿರಿಜನ ಸಂಶೋಧನಾ ಕೇಂದ್ರದವರು ರಚಿಸುತ್ತಿರುವ ಹಕ್ಕಿಪಿಕ್ಕಿ ಭಾಷಾಕೋಶದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಪ್ರಾಯೋಜಿತ ಹಕ್ಕಿಪಿಕ್ಕಿ ಜನಾಂಗದ ಸಾಕ್ಷ್ಯಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಬುಡಕಟ್ಟು ಜನಜೀವನ ಮತ್ತು ಸುಧಾರಣೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಸಂವಹನ ನಡೆಸಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದ ಜನಪದ ಕಲೆ, ಪುರಾಣ ಕಥೆಗಳನ್ನು ಕಲೆಹಾಕಲು ಸತತ 3 ದಶಕಗಳಿಂದ ಯತ್ನಿಸುತ್ತಿದ್ದಾರೆ. ಇಂಜಿನಿಯರಿಂಗ್ ಜೊತೆಗೆ ಜಾನಪದದಲ್ಲಿ ಎಂಎ,ಎಂಫಿಲ್ ಪಡೆದಿದ್ದಾರೆ. ಮೊನ್ನೆಯಷ್ಟೇ ಜಾನಪದ ಅಕಾಡೆಮಿಯು 2016ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ಅದರಲ್ಲಿ ಜಾನಪದ ತಜ್ಞ ಪ್ರಶಸ್ತಿ ಇವರಿಗೆ ಲಭಿಸಿದೆ. ಪ್ರೊ. ಬಿ .ಎ. ಗದ್ದಗಿಮಠ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಗೆ ಇವರನ್ನು ಆಯ್ಕೆಮಾಡಲಾಗಿದೆ.  ಉತ್ತಮ ಕವಿಯಿತ್ರಿಯಾಗಿ, ರಾಜ್ಯದ ಅನೇಕ ಸಂವಾದಗಳಲ್ಲಿ ತಮ್ಮ ವಿಚಾರ ಮಂಡಿಸಿದ್ದಾರೆ. ಜನಾಂಗದಲ್ಲಿರುವ ಅಪಾರ ಜಾನಪದ ಸಂಪತ್ತನ್ನು ಪಡೆದುಕೊಂಡು ಅದೇ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ. ಚಲನಚಿತ್ರರಂಗದಿಂದ ಡಿಪ್ಲೊಮಾವನ್ನೂ ಸಹ ಗಳಿಸಿರುವ ಕುಮುದಾ, ನಟಿಯಾಗಿ, ನಿರ್ದೇಶಕಿಯಾಗಿ, ಹಾಡುಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಜಾನಪದ ಸಂಪತ್ತಿನ ರಕ್ಷಣೆಗಾಗಿ ಸದಾ ಹಂಬಲಿಸುವಂತೆ ತಮ್ಮ ಜನಾಂಗದ ಏಳಿಗೆಗಾಗಿಯೂ ಟೊಂಕಕಟ್ಟಿದ್ದಾರೆ.
25.2.17
...........................

No comments:

Post a Comment