Saturday 13 January 2018

ಮಹಿಳಾ ಸಬಲೀಕರಣಕ್ಕೆ ಪಣ 
ವಿನಯಾ ರಾಯ್ಕರ್


ನಿರ್ದಿಷ್ಟ ಗುರಿಯೊಂದಿದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಸಾಧಿಸಬಹುದು. ಇದಕ್ಕೆ ಸ್ವಲ್ಪ ತ್ಯಾಗವನ್ನೂ ಮಾಡಬೇಕಾಗುತ್ತದೆ. ಜೊತೆಗೆ ಸಮಯ, ಅಭಿರುಚಿ ಮತ್ತು ಶಕ್ತಿಯನ್ನು ಇದಕ್ಕೆ ಮೀಸಲಾಗಿಡಬೇಕು. ಇದು ಸಾಧ್ಯವಾದರೆ ಕನಸನ್ನು ಸಾಕಾರಗೊಳಿಸಬಹುದು ಎನ್ನುವುದಕ್ಕೆ ದೈವಜ್ಞ  ಬ್ರಾಹ್ಮಣ ಮಹಿಳಾ ಮಂಡಳಿಯ ರಾಜ್ಯಾಧ್ಯಕ್ಷೆ ವಿನಯಾ ರಾಯ್ಕರ್  ನಮ್ಮೆದುರು ಉದಾಹರಣೆಯಾಗಿ ನಿಲ್ಲುತ್ತಾರೆ.
ವಿನಯಾ ಹೆಸರು ಸಮಾಜಸೇವೆಯಲ್ಲಿ ಸದಾ ಕೇಳಿಬರುತ್ತದೆ. ಸದಾ ಮನೆಯಲ್ಲೇ ಇರುತ್ತಿದ್ದ ತಮ್ಮ ಸಮಾಜದ ಮಹಿಳೆಯರು ಸಮಾಜಮುಖಿಯಾಗಬೇಕು, ಸಬಲೀಕರಣಗೊಂಡು, ಸರಕಾರದ ವಿವಿಧ ಯೋಜನೆಗಳ ನೆರವು ಪಡೆದುಕೊಂಡು ಸ್ವಾವಲಂಬಿಗಳಾಗಬೇಕೆಂಬ ಕನಸು ಕಂಡವರು. ಇದಕ್ಕಾಗಿ ಅವರು ಇಟ್ಟ ಹೆಜ್ಜೆಯೇ ರಾಜ್ಯ ಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘಟನೆಯ ಸ್ಥಾಪನೆ. ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಈ ಸಂಘಟನೆ ರಾಜ್ಯದಲ್ಲಿ ಅತಿ ಹೆಚ್ಚು ಹೆಸರು ಮಾಡಿದೆ. ಜೊತೆಗೆ ಎಷ್ಟೋ ದೈವಜ್ಞ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು, ವಿವಿಧ ಉದ್ಯೋಗ ಆರಂಭಿಸಲು ನೆರವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ.
ಶೈಕ್ಷಣಿಕವಾಗಿ ಹಿಂದುಳಿದ ಈ ಸಮಾಜದವರು ಕೇವಲ ಆಭರಣ ತಯಾರಿಕೆ ಮತ್ತು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಡಿದ್ದರು. ಮಹಿಳೆಯರು ಮನೆಗೆಲಸಕ್ಕೆ ಮಾತ್ರ ಸೀಮಿತರಾಗಿದ್ದರು. ಇತ್ತೀಚೆಗೆ ಆಭರಣ ಉದ್ಯಮದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಕಾಲಿಟ್ಟಿದ್ದರಿಂದ ಅಲ್ಲಿಯೂ ಬಲವಾದ ಪೆಟ್ಟು ಬಿತ್ತು. ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಎದುರಾದಾಗ ವಿನಯಾ ಆಲೋಚಿಸಿದ್ದೇ ಮಹಿಳಾ ಸಂಘಟನೆ. ಮತ್ತು ಈ ಮೂಲಕ ಮಹಿಳೆಯರು ಸಬಲರಾಗುವಂತೆ ಮಾಡುವುದು.
ಇದರ ಫಲವಾಗಿ ಮಹಿಳಾ ತಂಡವೊಂದ್ನು ಕಟ್ಟಿಕೊಂಡು ಸಮಾಜದ ಮಹಿಳೆಯರ ಸಂಘಟನೆಗೆ ಟೊಂಕ ಕಟ್ಟಿ ನಿಂತರು. ಎಲ್ಲ ಜಿಲ್ಲೆ ತಿರುಗಿ ಮಹಿಳೆಯರನ್ನು ಕರೆದು ಸಭೆ ನಡೆಸಿ ಸಂಘಟಿಸಿದರು. ಪ್ರತಿ ಜಿಲ್ಲೆಯಲ್ಲೂ ಸಮಾವೇಶ ಮಾಡಿ ಇನ್ನಷ್ಟು ಹುರುಪನ್ನು ಅವರಲ್ಲಿ ಮೂಡಿಸಿದರು. ಫಲವಾಗಿ ಬೃಹತ್ತ್ತಾಗಿ ಈ ಸಂಘಟನೆ ಬೆಳೆಯುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲ, ಸಮಾಜದ ಅಶಕ್ತ ಮಹಿಳೆಯರಿಗೆ ಊರುಗೋಲಾಗಿದ್ದಾರೆ. ಹೊಲಿಗೆ ಯಂತ್ರ ನೀಡಿದ್ದಾರೆ. ಅನಾರೋಗ್ಯದ ಚಿಕಿತ್ಸೆಗೆ ನೆರವಾಗಿದ್ದಾರೆ. ಮಹಿಳಾ ಸಂಪನ್ಮೂಲ ವ್ಯಕ್ತ್ತಿಗಳನ್ನು ಕರೆಯಿಸಿ ಅವರಿಂದ ಮಾರ್ಗದರ್ಶನ ಮಾಡಿಸಿದ್ದಾರೆ. ಶಿವಮೊಗ್ಗದಲ್ಲಿ ರಾಜ್ಯ ಸಮಾವೇಶವನ್ನು ಎರಡು ದಿನ ನಡೆಸಿ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಕೊಟಿಸಿದ್ದಲ್ಲದೆ, ಅವರಲ್ಲಿರುವ ಪ್ರತಿಭೆ ಹೊರತರಲು ವೇದಿಕೆ ಸಹ ಕಲ್ಪಿಸಿದ್ದರು. ಇಂತಹ ಎರಡನೆಯ ಸಮ್ಮೇಳನವನ್ನು ಈಗ ನಡೆಸುತ್ತಿದ್ದಾರೆ. ಈ ಮೂಲಕ ಇನ್ನಷ್ಟು ಸಮಾಜಮುಖಿಗಳನ್ನಾಗಿ ಮಾಡುವುದು ಅವರ ಉದ್ದೇಶವಾಗಿದೆ.
ದೈವಜ್ಞ ಯುವಕರಿಗೆ, ಯುವತಿಯರಿಗೆ ಅನುಕೂಲವಾಗುವಂತೆ ವಧುವರರ ಶಿಬಿರ ಏರ್ಪಡಿಸುತ್ತಿದ್ದಾರೆ. ಕಳೆದ ವರ್ಷ ಸುಮಾರು 25ಕ್ಕೂ ಹೆಚ್ಚು ನೆಂಟಸ್ತಿಕೆಯನ್ನು ಮಹಿಳಾ ಸಂಘಟನೆಯ ವತಿಯಿಂದ ಮಾಡಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತ ಅವರ ಶಿಕ್ಷಣಕ್ಕೂ ನೆರವು ನೀಡುತ್ತಿದ್ದಾರೆ. ಸ್ವ ಉದ್ಯೋಗಕ್ಕೆ ಪ್ರೇರೇಪಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯನ್ನು ಕಂಡು ಸಮಾಜದ ಅಭಿವೃದ್ಧಿಗೆ ನೆರವು ನೀಡುವಂತೆ ಕೋರಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ ಇವ್ಯಾವುದಕ್ಕೂ ಅವರು ಯಾರಲ್ಲೂ ಧನಸಹಾಯ ಕೇಳಿಲ್ಲ. ಬದಲಾಗಿ ಕೈಯಿಂದಲೇ ವ್ಯಯಿಸುತ್ತಿದ್ದಾರೆ. ಇಂತಹ ಸಮಾಜ ಸೇವಕರು ಸಿಗುವುದು ತೀರಾ ವಿರಳ.
ವಿನಯಾ ಅವರು, ಸದ ಲವಲವಿಕೆಯಿಂದ ಚಟುವಟಿಕೆಯಿಂದಿರುವ ಮಹಿಳೆ. ಇನ್ನರ್‌ವ್ಹೀಲ್ ಜಿಲ್ಲೆ 3180ರ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡಿದ್ದಕ್ಕೆ ಅವರಿಗೆ ಬೆಸ್ಟ್ ಪ್ರೆಸಿಡೆಂಟ್ ಎಂಬ ಪ್ರಶಸ್ತಿ ಲಭಿಸಿದೆ. 1996ರಿಂದ 2001ರವರೆಗೆ ಶಿವಮೊಗ್ಗ ನಗರಸಭೆ ಉಪಾಧ್ಯಕ್ಷೆಯಾಗಿಯೂ ಕೆಲಸ ನಿರ್ವಹಿಸಿದ್ದರಿಂದ ಜನರ ಸ್ಥಿತಿಗತಿ, ಮಹಿಳೆಯರ ಕಷ್ಟದ ಅರಿವನ್ನು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಮಹಿಳೆಯರಿಗೆ ನೆರವಾಗಲು ಮುಂದಾಗಿದ್ದಾರೆ. ಸಬ್ಸಿಡಿಯಾಗಿ ಸಾಲ ದೊರಕಿಸುವುದು, ವಿವಿಧ ಯೋಜನೆಗಳ ಮಾಹಿತಿ ಕೊಡಿಸಿ ಆಸಕ್ತರನ್ನು ಉದ್ಯೋಗವಂತರನ್ನಾಗಿ ಮಾಡುವ ಗುರಿ ಅವರದ್ದಾಗಿದೆ.
ಒಟ್ಟಿನಲ್ಲಿ ದೈವಜ್ಞ ಸಮಾಜದ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ಸಬಲರನ್ನಾಗಿಸುವ ಕಾಯಕಕ್ಕೆ ಪಣತೊಟ್ಟಿದ್ದಾರೆ.
7.1.17
.............................

No comments:

Post a Comment