Thursday 18 January 2018

 ರಂಗಕರ್ಮಿ, ಶಿಲ್ಪ, ಮೂರ್ತಿ ಕಲಾವಿದ
ಎಸ್.ಜಿ.ನರಸಿಂಹಮೂರ್ತಿ



ನಮ್ಮೊಳಗಿನ ನಮ್ಮತನವನ್ನು ಕಂಡುಕೊಳ್ಳುವ ಕಲೆಯೇ ನಾಟಕ. ಇದನ್ನು ಗಮನಿಸಿಯೇ ಇಂಗ್ಲೀಷ್‌ನಲ್ಲಿ ಒಂದು ಮಾತಿದೆ. ಕಲೆಯೊಂದಿಗೆ ಬದುಕು. ಇದು ನಿನಗೆ ಒಳಿತನ್ನುಂಟು ಮಾಡುತ್ತದೆ ಎಂದು. ಈ ರೀತಿ ಕಲೆಯೊಂದಿಗೆ ಬದುಕುತ್ತಿರುವವರು, ಕಲೆಯನ್ನೇ  ಉಸಿರನ್ನಾಗಿ ಮಾಡಿಕೊಂಡವರು, ನಮ್ಮಲ್ಲಿ ಸಾಕಷ್ಟಿದ್ದಾರೆ.   ಇಂತಹವರಲ್ಲಿ ಒಬ್ಬ ಅಪರೂಪದ ರಂಗ ಕಲಾವಿದ ಭದ್ರಾವತಿಯ ಎಸ್. ಜಿ. ನರಸಿಂಹಮೂರ್ತಿ.
ನರಸಿಂಹಮೂರ್ತಿ ಅವರು ಹೆಸರು ಕೇಳದವರಿಲ್ಲ. ಇವರು ಕೇವಲ ರಂಗಕರ್ಮಿ ಮಾತ್ರವಲ್ಲ, ಶಿಲ್ಪಕಲಾವಿದ, ಮೂರ್ತಿ ಕಲಾವಿದರೂ ಹೌದು. ಭದ್ರಾವತಿಯ ಎಂಪಿಎಂನ ಅರಣ್ಯ ವಿಭಾಗದಲ್ಲಿ ಹಿರಿಯ ಕ್ಷೇತ್ರ ಸಹಾಯಕರಾಗಿ ಸೇವೆ ಸಲ್ಲಿಸುತ್ತಲೇ ನಾಟಕ ಕ್ಷೇತ್ರವನ್ನು ಅಲ್ಲಿನ ಕಾರ್ಮಿಕರೊಂದಿಗೆ ಸೇರಿ ಶ್ರೀಮಂತಗೊಳಿಸಿದವರು. ನವೋದಯ ಕಲಾ ಸಂಘ, ಶಾಂತಲಾ ಕಲಾವೇದಿಕೆಯ ಸ್ಥಾಪಕರಾಗಿ ಆಸಕ್ತ ಜನರಿಗೆಲ್ಲ ನಾಟಕದಲ್ಲಿ ಪಾತ್ರ ಮಾಡಲು ಅವಕಾಶ ಕೊಟ್ಟು, ನಾಟಕದ ಸವಿಯನ್ನು ಹಂಚಿದವರು. 
ಮೂಲತಃ ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿಯವರಾದ ಶಂಕರಮೂರ್ತಿ ಭದ್ರಾವತಿಯಲ್ಲಿ ನೆಲೆಕಂಡುಕೊಂಡಿದ್ದಾರೆ. ಇವರ ತಂದೆ ಮುರಿಗೇಂದ್ರಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿ ಈಸೂರು ದಂಗೆಯ ವೇಳೆ ಜೈಲು ವಾಸ ಅನುಭವಿಸಿದವರು. ತಂದೆಯ ಅನುಭವವನ್ನೇ ವಿಷಯವನ್ನಾಗಿಟ್ಟುಕೊಂಡು ನಾಟಕ ರಂಗಕ್ಕಿಳಿದ ಇವರು 100 ಕ್ಕೂ ಹೆಚ್ಚಿನ ಕಲಾವಿದರನ್ನು ಸೇರಿಸಿಕೊಂಡು ಈಸೂರಿನ ಈ ಶೂರರು ಎಂಬ ನಾಟಕ ಆಡಿಸಿದ್ದಾರೆ. ಭದ್ರಾವತಿಯ ಸಮಸ್ಯೆಯನ್ನು ಇಟ್ಟುಕೊಂಡು ವಂಕಿಪುರ-ಬೆಂಕಿಪುರ ಎಂಬ ನಾಟಕವನ್ನು ರಚಿಸಿ ಆಡಿಸಿದ್ದಾರೆ. ನಟನೆ ಮತ್ತು ನಿರ್ದೇಶನದತ್ತ ಇವರಿಗೆ ವಿಶೇಷ ಆಸಕ್ತಿ. ಅದರಲ್ಲೂ ಮಹಿಳಾ ಪಾತ್ರದಲ್ಲಿ ಇವರು ಎತ್ತಿದ ಕೈ. ವಿವಿಧ ನಾಟಕಗಳಲ್ಲಿ  104 ಬಾರಿ ನಟಿಯ ಪಾತ್ರವನ್ನು ಮಾಡಿದ್ದಾರೆ. ಈ ನಾಟಕ ಒಂದು ಚಿನ್ನ ಮತ್ತು ಒಂದು ಬೆಳ್ಳಿಯ ಪದಕದೊಂದಿಗೆ ರಾಜ್ಯ ಮಟ್ಟದಲ್ಲಿ ಬಹುಮಾನ ಗಳಿಸಲು ಕಾರಣವಾಯಿತು.
ಇವರ ಇತರ ನಾಟಕಗಳೆಂದರೆ ಪತನ, ಪ್ರೇತಗಳು, ಕನಸು-ನನಸು, ಮೀನಿನ ಹೆಜ್ಜೆ, ಆವಾಹನೆ ಮೊದಲಾದವು. 64ರ ಹರಯದ ಶಂಕರಮೂರ್ತಿ, ತಮ್ಮ 19ರ ಹರಯದಲ್ಲೇ ನಾಟಕದ ಗೀಳು ಅಂಟಿಸಿಕೊಂಡವರು. ಇಂದಿಗೆ 45 ವರ್ಷದ ರಂಗಭೂಮಿಯ ಅನುಭವವನ್ನು ಗಳಿಸಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.  ಸೆಟ್ ಡಿಸೈನರ್ ಆಗಿ, ಕಲಾವಿದರಾಗಿ ಇಂದಿಗೂ ರಂಗಭೂಮಿಯಲ್ಲಿ ಹೊಸತನವನ್ನು ಸಾಧಿಸುವ ಛಲವನ್ನು ಹೊಂದಿರುವ ಶಂಕರಮೂರ್ತಿ ಇದೇ ಮೊದಲ ಬಾರಿಗೆ ರಂಗಗೊಂಚಲು ಎಂಬ ಕೃತಿಯನ್ನು ಹೊರತರುತ್ತಿದ್ದಾರೆ. ಸದ್ಯದಲ್ಲೇ ಇದು ಬಿಡುಗಡೆಯಾಗಲಿದೆ.
  ಮೂರ್ತಿ ನಿರ್ಮಾಣದಲ್ಲಿ ಸಿದ್ಧಹಸ್ತರಾದ ಇವರು, ಗಣಪತಿಯ ಅತ್ಯಂತ ದೊಡ್ಡ ಮೂರ್ತಿ ಮಾಡುವುದರಲ್ಲಿ ಸಿದ್ಧಹಸ್ತರು.  ವಿಶೇಷವೆಂದರೆ, ಸುಮಾರು 18 ದಿನ ಕನ್ನಡ ವರನಟ ರಾಜಕುಮಾರ್ ಜೊತೆ ಇದ್ದು, ನಂತರ ಅವರ ಮಣ್ಣಿನ ವಿಗ್ರಹವನ್ನು ತಯಾರಿಸಿ ಭೇಷ್ ಎನಿಸಿಕೊಂಡಿದ್ದಾರೆ. ಣೇಶ ಚೌತಿ ಸಂದರ್ಭದಲ್ಲಿ ಗಣೇಶನ ಸಾಕಷ್ಟು ಮೂರ್ತಿಯನ್ನು ಬೇಡಿಕೆಯ ಮೇರೆಗೆ  ತಯಾರಿಸುತ್ತಾರೆ.
ಜಿಲ್ಲೆಯಲ್ಲಿ ಪಪ್ರಥಮ ಮಹಿಳಾ ಕಲಾ ವೇದಿಕೆ ಶಾಂತಲಾ ಕಲಾ ವೇದಿಕೆಯನ್ನು 1973ರಲ್ಲಿ ಹುಟ್ಟುಹಾಕಿದ ಕೀರ್ತಿ ಇವರದು. ಇದರಡಿಯಲ್ಲಿ ಸುವಿ ಬಾ ಸಂಗ ಎಂಬ ಜಾನಪದ ನಾಟಕವನ್ನು ಕಲಾವಿದರಿಗೆ ತರಬೇತಿ ಕೊಟ್ಟು ಆಡಿಸಿದ್ದಾರೆ. ಇದಕ್ಕೆ ರಾಜ್ಯಮಟ್ಟದಲ್ಲಿ ಮೊದಲ ಬಹುಮಾನ ಲಭಿಸಿದೆ.  ಗಾಂಧಿ ಮತ್ತು ಮೂರು ಮಂಗಗಳು ಎಂಬ ವಿಡಂಬನಾತ್ಮಕ ನಾಟಕವನ್ನು ಇವರು ರಚಿಸಿದ್ದಾರೆ. ಇದು ಮುಂಬೈನಲ್ಲಿ ಪ್ರದರ್ಶಿತವಾಗಿದೆ. ಇತ್ತೀಚಿನ ಬೆಳವಣಿಗೆಯಾದ ನೋಟು ಅಮೌಲ್ಯೆಕರಣವನ್ನು ಇಟ್ಟುಕೊಂಡು ಮೌಲ್ಯ ಎಂಬ ನಾಟಕವನ್ನು ರಚಿಸಿದ್ದಾರೆ. ತಾವಾಡಿಸಿದ ಎಲ್ಲ ನಾಟಕವನ್ನು ಉಚಿತವಾಗಿ ಪ್ರೇಕ್ಷರಿಗೆ ತೋರಿಸಿದ್ದಲ್ಲದೆ ನಾಟಕದ ನಂತರ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಇಂದಿಗೂ ಜನಮಾನಸದಲ್ಲಿ ಶಂಕರಮೂರ್ತಿ ಅವರ ಹೆಸರು ಅಚ್ಚಳಿಯದೆ ನಿಲ್ಲುವಂತಾಗಿದೆ.
17.6.2017
...........................

No comments:

Post a Comment