Tuesday 9 January 2018


  ರಾಷ್ಟ್ರ ಪ್ರಶಸ್ತಿಯ ಗರಿ ಹೊತ್ತ 
ಶಿಕ್ಷಕ ಬೋಜಪ್ಪ  


  ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದ ಜ್ಞಾನವನ್ನು ಕೊಡುವವರಾಗಿರುತ್ತಾರೆ. ಜೀವನದ ಯಶಸ್ಸಿಗೆ ಶಿಕ್ಷಣ ಎನ್ನುವುದು ಕೀಲಿಕೈ ಎನ್ನುವುದನ್ನು ತೋರಿಸಿಕೊಡುತ್ತಾರೆ, ಇದು ಇಂಗ್ಲೀಷ್‌ನಲ್ಲಿರುವ ಒಂದು ಪ್ರಸಿದ್ಧ ಮಾತು.
ಮಕ್ಕಳನ್ನು ಸೃಜನಾತ್ಮಕವಾಗಿ ಬೆಳೆಸುವುದು ನೈಜ ಶಿಕ್ಷಕನ ಮೇಲಿರುವ ಹೊಣೆ. ಮೊದಲು ವಿದ್ಯಾರ್ಥಿಗಳನ್ನು ಆಕರ್ಷಿಸುವ ಗುಣ ಆತನಲ್ಲಿರಬೇಕು, ನಂತರ ಪಾಠ ಮಾಡಬೇಕು. ಈ ಎಲ್ಲ ಕಲೆಯನ್ನು ಅರಿತಿರುವವನು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣನಾಗುತ್ತಾನೆ, ಎಲ್ಲರಿಂದಲೂ ಗುರುತಿಸಲ್ಪಡುತ್ತಾನೆ. ಇದಕ್ಕೊಂದು ಉತ್ತಮ ಉದಾಹರಣೆ, ಈ ವರ್ಷದ ಶಿಕ್ಷಕ ದಿನಾಚರಣೆಯ ದಿನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲಿರುವ ತಳಲೆ ಸರ್ಕಾರಿ ಶಾಲೆಯ ಶಿಕ್ಷಕ ಬಿ.ಬೋಜಪ್ಪ,
 ಶಿಕ್ಷಕ ಎಂದರೆ ಕೇವಲ ಕಲಿಸುವುದಷ್ಟೇ ಅಲ್ಲ, ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳತ್ತ ಸೆಳೆದು ಅವರಲ್ಲಿ ಆ ಬಗ್ಗೆ ಆಸಕ್ತಿ ಮೂಡಿಸುವುದು ಆತನ ಜವಾಬ್ದಾರಿ. ಒಟ್ಟಿನಲ್ಲಿ ಮಕ್ಕಳಿಗೆ ಸರ್ವತೋಮುಖ ಜ್ಞಾನ ಸಿಗಬೇಕು ಎನ್ನುವುದನ್ನು ತೋರಿಸಿಕೊಟ್ಟ ಬೋಜಪ್ಪ. ಸೇವೆಯ ಬಗ್ಗೆ ಒಂದಷ್ಟು ಕಾಳಜಿ, ಜೊತೆಗೊಂದಿಷ್ಟು ಕ್ರಿಯಾಶೀಲತೆ ಮೈಗೂಡಿಸಿಕೊಂಡ ಶಿಕ್ಷಕ ಇವರು. ಜೊತೆಗೆ  ಸರ್ಕಾರಿ ಶಾಲೆ ಮತ್ತು ಸುತ್ತಲಿನ ಪರಿಸರ ಎಷ್ಟು ಚೆನ್ನಾಗಿ ರೂಪಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಹೊಸನಗರ ತಾಲೂಕಿನ ಈರಗೋಡು ಗ್ರಾಮದವರಾದ ಇವರು, ಮೂಲತಃ ಕೃಷಿಕ ಕುಟುಂಬದವರು, ಈರಗೋಡು, ಬಟ್ಟೆಮಲ್ಲಪ್ಪ ಮತ್ತು ಆನಂದಪುರಂನಲ್ಲಿ ಓದಿದ ನಂತರ ಶಿವಮೊಗ್ಗದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡದು ಇತಿಹಾಸ ವಿಷಯದಲ್ಲಿ ಕರ್ನಾಟಕ ವಿವಿಯಿಂದ ಮತ್ತು ಕನ್ನಡ  ವಿಷಯದಲ್ಲಿ ಮೈಸೂರು ಮುಕ್ತ ವಿವಿಯಿಂದ ಎಂ. ಎ. ಪದವಿ ಪಡೆದಿದ್ದಾರೆ. 1994ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ, ಮಸರೂರು, ಹಿರೇಜೇನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 24 ವರ್ಷದ ಸೇವೆ ತನಗೆ ತೃಪ್ತಿ ಕೊಟ್ಟಿದೆ.  ಮಕ್ಕಳಿಗೆ ಪಾಠ ಹೇಳುವುದು, ಅವರೊಂದಿಗೆ ಬೆರೆಯುವುದು ನಿಜಕ್ಕೂ ಸಂತೋಷದ ಕ್ಷಣ ಎನ್ನುತ್ತಾರೆ ಅವರು. 
ಹೊಸನಗರ ತಾಲೂಕಿನ ತಳಲೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬೋಜಪ್ಪ ಅವರ ದಣಿವರಿಯದ ಶಿಕ್ಷಣ ಸೇವೆ ಮತ್ತು ಬಹುಮುಖ ವ್ಯಕ್ತಿತ್ವಕ್ಕೆ ಈ ಪ್ರಶಸ್ತಿ ದೊರೆತಿದೆ. ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಸನ್ನಿವೇಶದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವಲ್ಲಿ ಭೋಜಪ್ಪ ಪಾತ್ರ ಹಿರಿದು. ಮಾತ್ರವಲ್ಲ, ಮಕ್ಕಳು ನೂರಕ್ಕೆ ನೂರು ಹಾಜರಾತಿ ಇರುವಂತೆ ಮಾಡಿದ್ದಾರೆ. ಪೋಷಕರು ಇಲ್ಲವೇ ವಿದ್ಯಾರ್ಥಿಗಳು ಸಲ್ಲದ ನೆಪವೊಡ್ಡಿ ಶಿಕ್ಷಣ ವ್ಯವಸ್ಥೆ ಸ್ಥಗಿತಗೊಳಿಸಿದರೆ ಅವರ ಮನವೊಲಿಸಲು ಭೋಜಪ್ಪ ರೆಡಿ. ಅದು ಸಾಧ್ಯವಾಗದಿದ್ದಾಗ ವಿದ್ಯಾರ್ಥಿಯ ಮನೆಮುಂದೆ ಧರಣಿ ಮಾಡಿದ ನಿದರ್ಶನಗಳೂ ಇವೆ.
ಮಕ್ಕಳ ಶೈಕ್ಷಣಿಕ ಸಾಧನೆ, ಪ್ರತಿಭಾ ಕಾರಂಜಿ ಸ್ಪರ್ಧೆಗೆ ಪ್ರೇರಕ ಶಕ್ತಿಯಾಗಿ ಗಮನ ಸೆಳೆದ ಬೋಜಪ್ಪ ಕೆಲಸ ಮಾಡಿದ ಕಡೆಯಲ್ಲೆಲ್ಲಾ ಪೋಷಕರರೊಂದಿಗೆ ಉತ್ತಮ ಒಡನಾಟದೊಂದಿಗೆ ಅವರ ಮನಸ್ಸಿನಲ್ಲಿ ಶಾಶ್ವತ ಸ್ಥಾನಗಳಿಸಿದ್ದಾರೆ. ಶಾಲೆಗೆ ಬಣ್ಣ ಬಳಿಸಿ, ಹೂಬನ ನಿರ್ಮಿಸುವ ಮೂಲಕ ಇತರೆ  ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಸ್ವತಃ ಯಕ್ಷಗಾನ ಪಾತ್ರಧಾರಿಯಾಗಿರುವ ಇವರು, ಡೊಳ್ಳುಕುಣಿತ, ವೀರಗಾಸೆ, ಕ್ರೀಡಾಪಟುವಾಗಿ, ಚರ್ಚಾಪಟುವಾಗಿ ಮತ್ತು ವಿಶೇಷ ಉಪನ್ಯಾಸದ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಬಹುಮುಖ ಪ್ರತಿಭೆಯಿಂದ ಗಮನಸೆಳೆದಿದ್ದಾರೆ. ಮಕ್ಕಳಿಗೆ ಗ್ರಾಮೀಣ ಕಲೆಯನ್ನು ನಿರಂತರವಾಗಿ ಕಲಿಸುತ್ತಿದ್ದಾರೆ.
2001ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2005ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2006ರಲ್ಲಿ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ಡಾ.ರಾಜಕುಮಾರ್ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಶಿಕ್ಷಕರ ಪ್ರಶಸ್ತಿ ಇವರ ಮುಡಿಗೇರಿದೆ. ಇವೆಲ್ಲ ಪ್ರಶಸ್ತಿಗಳಿಗೂ ಕಲಶಪ್ರಾಯ ಎನ್ನುವಂತೆ 2015-16ನೆ ಸಾಲಿನ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
....................................

No comments:

Post a Comment