Tuesday 23 January 2018

ಬದುಕು ಬದಲಿಸಿದವರು
ಎ.ಎಸ್. ಶೈಲಜಾ


ಶಿಕ್ಷಕ ವೃತ್ತಿಯು ಅತ್ಯಂತ ಉತ್ಕೃಷ್ಟವಾದುದು. ಇದು ವ್ಯಕ್ತಿಯನ್ನು ರೂಪಿಸುತ್ತದೆ, ಆತನ ಭವಿಷ್ಯವನ್ನು ನಿರ್ಧರಿಸುತ್ತದೆ. ಉತ್ತಮ ಶಿಕ್ಷಕನನ್ನು ವಿದ್ಯಾರ್ಥಿಗಳು ಸದಾ ಸ್ಮರಿಸುತ್ತಾರೆ. ಇದಕ್ಕಿಂತ ದೊಡ್ಡ ಗೌರವ ಶಿಕ್ಷಕನಿಗೆ ಇನ್ನೊಂದಿಲ್ಲ ಎಂದು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಒಂದೆಡೆ ಹೇಳಿದ್ದಾರೆ.
ಎ.ಎಸ್. ಶೈಲಜಾ ಒಬ್ಬ ಮಾತೃಹೃದಯಿ ಶಿಕ್ಷಕಿ. ತನ್ನ ಹವ್ಯಾಸ, ಅಭಿರುಚಿಗಳ ಮೂಲಕ ಮಕ್ಕಳ ಬದುಕನ್ನು ಯಶಸ್ವಿಯಾಗಿ ರೂಪಿಸಿದ್ದಾರೆ. ಶಿಕ್ಷಣದ ಮೂಲಕ ಆ ಮಕ್ಕಳ ಬದುಕಿನ ವಿಧಾನ ಮತ್ತು ಸಾಮಾಜಿಕ ಸ್ಥಾನಮಾನವನ್ನು ಬದಲಿಸಿದ್ದಾರೆ. ಜೊತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ. ಇಂತಹ ಅಪರೂಪದ ಈ ಶಿಕ್ಷಕಿಗೆ ಈ ಬಾರಿ ರಾಜ್ಯ ಪ್ರಶಸ್ತಿ ದಕ್ಕಿದೆ. 
ಜಿಲ್ಲೆಯಲ್ಲಿ ಏಕಮಾತ್ರ ಹಾವಾಡಿಗರ ಕೇರಿ ಇರುವ ಗ್ರಾಮವಿದು. ಇಲ್ಲಿರುವ ಸುಮಾರು 25ರಷ್ಟು ಹಾವಾಡಿಗ ಕುಟುಂಬವಿದೆ. ಇವರು ಹಾವಾಡಿಸುವುದಿಲ್ಲ, ಭಿಕ್ಷೆ ಬೇಡುವುದಿಲ್ಲ. ಬದಲಾಗಿ ನೌಕರಿಯತ್ತ ಮುಖ ಮಾಡಿದ್ದಾರೆ. ಇವರ ಮಕ್ಕಳು ದಿನನಿತ್ಯ ಶಾಲೆಗೆ ಹೋಗುತ್ತಾರೆ. ತರಗತಿಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಈ ರೀತಿ ಊರಿನಲ್ಲಿ ಮತ್ತು ಹಿರಿಯರಲ್ಲಿ ಜಾಗೃತಿ ಮೂಡಿಸಿ, ಮಕ್ಕಳಲ್ಲಿ ಪ್ರೀತಿ ಮೂಡಿಸಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದವರು ಅಲ್ಲಿನ ಶಿಕ್ಷಕಿ  ಶೈಲಜಾ.
 ಸಾಗರ ಮತ್ತು ಹೊಸನಗರ ಗಡಿಭಾಗದಲ್ಲಿರುವ ಗಡಿಕಟ್ಟೆ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರು, ತಾಲೂಕಿನ ಯಾವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ಇಲ್ಲದಷ್ಟು  ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿರುವಂತೆ ಮಾಡಿದ್ದಾರೆ. ಗ್ರಾಮಸ್ಥರ ನೆಚ್ಚಿನ ಶಿಕ್ಷಕಿಯಾಗಿ, ನಾಗರಿಕ ಸಮಾಜದಿಂದ ದೂರವಿದ್ದ, ಕನ್ನಡವೇ ಅರಿಯದ ಈ ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸಿ ಭಾಷಾಜ್ಞಾನ ಮಾಡಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಈಗ ಈ ಮಕ್ಕಳು ಇತರ ಮಕ್ಕಳಂತೆ ಸರಿಸಮವಾಗಿ ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ. ಸಂಸ್ಕೃತ ಶ್ಲೋಕಗಳನ್ನು ಕಲಿತು ಸ್ಪರ್ಧೆಯಲಿ ಭಾಗವಹಿಸುತ್ತಿದ್ದಾರೆ. ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
 ಶಾಲಾ ಮಕ್ಕಳನ್ನು ಈ ರೀತಿ ಸಾಂಸ್ಕೃತಿಕವಾಗಿಯೂ ತಯಾರು ಮಾಡಿದ ಶೈಲಜಾ, ಸಾಧನೆ ಇಷ್ಟಕ್ಕೇ ನಿಂತಿಲ್ಲ. ಅಕ್ಷರ ತುಂಗಾ, ಸಂಪೂರ್ಣ  ಸಾಕ್ಷರತಾ ಆಂದೋಲನದಲ್ಲಿ ಯುವತಿ ಮಂಡಳಿಯನ್ನು ತೊಡಗಿಸಿದ್ದು, ಕಲಿಕಾ ಕೇಂದ್ರ ನಡೆಸುವಂತೆ ಮಾಡಿಸಿದ್ದು, ಅಪ್ನಾ ದೇಶ್ ಮೂಲಕ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು,  ಯುವಜನ ಮೇಳಕ್ಕೆ ಯುವತಿಯರ ತಂಡವನ್ನು ಸಿದ್ಧಗೊಳಿಸಿದ್ದಾರೆ. ಶಾಲೆಗೆ ಅಗತ್ಯ ಪರಿಕರಗಳನ್ನು, ಸಾಧನ, ಮೂಲಸೌಕರ್ಯವನ್ನು ದಾನಿಗಳಿಂದ ಹಣ ಸಂಗ್ರಹಿಸಿ  ಅನುಷ್ಠಾನಗೊಳಿಸಿದ್ದಾರೆ. ಶಾಲಾ ಮೈದಾನ, ವನಕ್ಕಾಗಿ 5.14 ಎಕರೆ ಜಾಗವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೈಲಜಾ ಸ್ವತಃ ನಾಟಕ ಕಲಾವಿದೆ. ಪರಿಸರ ಹೋರಾಟಗಾರ್ತಿ. ನೀನಾಸಂನ ಸಕ್ರಿಯ ಸದಸ್ಯೆ. ಕೆ. ವಿ ಸುಬ್ಬಣ್ಣ ರಂಗಸಮೂಹ, ಜಾನಪದ ಕಣಜ, ಚರಕಾ ಸಂಸ್ಥೆಗಳ ನಾಟಕದಲ್ಲೂ ಅಭಿನಯಿಸಿದ್ದಾರೆ. ಪರಿಸರ ಜಾಗೃತಿ ಆಂದೋಲನದ ಮುಂಚೂಣಿಯಲ್ಲಿ ನಿಂತು ಬೀಜದುಂಡೆ ಅಭಿಯಾನ,  ಗಿಡ ನಡೆಸುವುದನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಪರಿಸರ ಜಾಗೃತಿ ಕಾಲ್ನಡಿಗೆ ಜಾಥಾದಲ್ಲಿಯೂ ಪಾಲ್ಗೊಂಡಿದ್ದರು. ಮದ್ಯವ್ಯಸನಿಗಳ ಕುಟುಂಬಕ್ಕೆ  ಸಂಕಷ್ಟ ಎದುರಿಸುವ ಮತ್ತು ಚಟದಿಂದ ಮುಕ್ತರಾಗುವ  ಮದ್ಯವರ್ಜನೆ ಶಿಬಿರದ ಆಪ್ತ ಸಮಾಲೋಚಕಿಯೂ ಆಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾದರೂ ಪ್ರವೃತ್ತಿಯಲ್ಲಿ ಸಮಾಜ ಮತು ಕಲಾಸೇವಕಿಯಾಗಿ ಜನಜಾಗೃತಿ ಮಾಡುತ್ತ ಮಹತ್ತರ ಸಾಧನೆ ಮಾಡಿದ್ದಾರೆ.
ಈ ಕೆಲಸದಲ್ಲಿ ತನಗೆ ಎಲ್ಲರ ನೆರವಿದೆ. ಸಹಶಿಕ್ಷಕರು, ಸಮುದಾಯದವರು, ಗ್ರಾಮಸ್ಥರು, ಎಸ್‌ಡಿಎಂಸಿಯವರ ನೆರವಿನಿಂದ ಈ ಸಾಧನೆಯಾಗಿದೆ. ಎಲ್ಲರೊಂದಿಗೂ ಚರ್ಚಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವುದರಿಂದ ಸಮುದಾಯದ ಅಭಿವೃದ್ಧಿಯಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ನುಡಿಯುತ್ತಾರೆ ಶೈಲಜಾ
. 9.9.17
........................   

No comments:

Post a Comment