Saturday 13 January 2018

ಯುವಜನತೆಗೆ ಮಾದರಿ
ಪ್ರಿಯಾಂಕಾ ರಾಯ್ಕರ್



ಯುವಜನತೆ ಎಂದರೆ ಕನಸು. ಅವರ ಕನಸಲ್ಲಿ ಸೌಂದರ್ಯವನ್ನು ಕಾಣುವ ಸಾಮರ್ಥ್ಯವಿರುತ್ತದೆ ಎನ್ನುವ ಪ್ರಸಿದ್ಧ ಆಂಗ್ಲ ಉಕ್ತಿಯೊಂದಿದೆ. ಯುವಜನರು ತಮ್ಮ ಮನದಲ್ಲಿರುವ ವಿಚಾರಧಾರೆಗಳನ್ನು ಹೊರಚೆಲ್ಲಿದಾಗ  ಅದ್ಭುತವಾದ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಅಷ್ಟೊಂದು ಶಕ್ತಿಯುತ ಕನಸು ಅವರದ್ದು. ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಹಿರಿದು ಎನ್ನಲಾಗುತ್ತದೆ. ಇದನ್ನು ಸಾಧಿಸಿ ತೋರಿಸುವ ಯುವಜನತೆ ಅಲ್ಲಲ್ಲಿ ಕಂಡುಬರುತ್ತಿದ್ದಾರೆ. ಶಿವಮೊಗ್ಗ ನಗರದಲ್ಲೂ ಇಂತಹ ಯುವ ಪ್ರತಿಯೊಂದು ಸಮಾಜಮುಖಿ ಕಾರ್ಯಗಳಲ್ಲಿತೊಡಗಿಸಿಕೊಂಡು ಅನೇಕ ಮಹತ್ಕಾರ್ಯಗಳನ್ನು ಮಾಡುತ್ತಿದೆ.
ಪ್ರಿಯಾಂಕಾ ರಾಯ್ಕರ್ ಈ ಯುವ ಪ್ರತಿಭೆ. ತನ್ನ ಪ್ರತಿಭೆ ಮೂಲಕವೇ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.  ಸಾಧನೆಗೆ ಯಾವ ಕ್ಷೇತ್ರವಾದರೇನು ಎನ್ನುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಕ್ಷರತೆ, ರಾಷ್ಟೀಯ ಭಾವೈಕ್ಯತೆ, ಅರಣ್ಯಿಕರಣ, ಪರಿಸರ ಜಾಗೃತಿ, ಗ್ರಾಮ ನೈರ್ಮಲ್ಯೀಕರಣ, ಸ್ವಸಹಾಯ ಸಂಘಗಳ ರಚನೆ, ಕ್ರೀಡಾಪಟುಗಳ ಶೋಧನೆ, ಜನಪದ ಕಲೆ ಉಳಿಸುವುದು, ಗ್ರಾಮಸ್ಥರಿಗೆ ಸರ್ಕಾರದ ವಿವಿಧ ಯೋಜನೆಗಳ ಅರಿವು ಮೂಡಿಸುವುದು ಸೇರಿದಂತೆ ಹತ್ತ್ತಾರು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಿಯಾಂಕಾ ನಗರದ ವಿನೋಬನಗರ ವಾಸಿ ಸರೋಜಾ ಮತ್ತು ಚಂದ್ರಹಾಸ ರಾಯ್ಕರ್ ಅವರ ಪುತ್ರಿ. ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್‌ಸಿ ಮುಗಿಸಿ ಸದ್ಯ ಬೆಂಗಳೂರಿನಲ್ಲಿ ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಪ್ರೌಢಶಾಲಾ ದಿನದಿಂದಲೇ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುತ್ತಿದ್ದ ಇವರು, ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು. ಆದರೆ ಪ್ರತಿಭೆ ಬೆಳೆಯಲು ವೇದಿಕೆ ಬೇಕಿತ್ತು. ಇದನ್ನರಿತು ವೇದಿಕೆ ಕಲ್ಪಿಸಿದವರು ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯವರು. ಇದರ ಮುಖ್ಯಸ್ಥ ಜೆ.ನಾಗರಾಜ್ ಅವರು ಪ್ರಿಯಾಂಕ ಅವರಿಗೆ ತಮ್ಮ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಅವಕಾಶ ಕೊಟ್ಟು ಸಮಾಜಮುಖಿಯಾಗಿ ಬೆಳೆಯಲು ತುಂಬು ಸಹಕಾರ ಕೊಟ್ಟಿದ್ದಾರೆ. ಅದರ ಫಲವಾಗಿ ಪ್ರಿಯಾಂಕಾ ಇಂದು ಸಮಾಜ ಸೇವಾಕಾರ್ಯಕರ್ತೆಯಾಗಿ, ಅತ್ಯುತ್ತಮ ನಿರೂಪಕಿಯಾಗಿ ಬೆಳೆದಿದ್ದಾರೆ. 
ಇವರ ಸಾಧನೆ ಗಮನಿಸಿ ಕನಕಶ್ರೀ ಚೇತನ ಪ್ರಶಸ್ತಿಯನ್ನು ಪತಂಜಲಿ ಯೋಗ ಸಂಸ್ಥೆ ನೀಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾದಲ್ಲಿ ಗೌರವಿಸಿದೆ. ಮಾದರಿ ಯುವ ಸಂಸತ್‌ನಲ್ಲಿ ಪ್ರತಿಪಕ್ಷ ನಾಯಕಿಯಾಗಿ ಕೆಲಸ ಮಾಡಿ ಅತ್ಯುತ್ತಮ ವಾಗ್ಮಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿವೇಕಾನಂದ ಕುರಿತು ಮಾತನಾಡುವುದರಲ್ಲಿ ಎತ್ತಿದಕೈ ಆಗಿರುವ ಇವರಿಗೆ ಯುವಸಿಂಹಿಣಿ ಎಂಬ ಬಿರುದು ನೀಡಲಾಗಿದೆ. ಕಾಲೇಜು ದಿನಗಳಲ್ಲಿ ಅಂತರ್ ಕಾಲೇಜು ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸತತ ಬಹುಮಾನಗಳನ್ನು ಗಳಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪತಂಜಲಿ ಸಂಸ್ಥೆಯಿಂದ ಹಲವರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.
ನಾಟಕ, ನೃತ್ಯದಲ್ಲೂ ಸೈ ಎನಿಸಿರುವ ಪ್ರಿಯಾಂಕಾ ಹಲವರು ಪ್ರದರ್ಶನಗಳನ್ನು ನೀಡಿದ್ದಾರೆ. ವಾಲಿಬಾಲ್ ಮತ್ತು ಥ್ರೋ ಬಾಲ್ ಆಟಗಾರ್ತಿಯಾಗಿಯೂ ಮಿಂಚಿದ್ದಾರೆ. ಕನಕದಾಸರ ಕೀರ್ತನೆ, ವಿವೇಕವಾಣಿ, ಸಂಗೊಳ್ಳಿ ರಾಯಣ್ಣ, ಸಹಿತ ಅನೇಕ ಮಹನೀಯರ ಬಗ್ಗೆ ಸುಮಾರು 50ಕ್ಕೂ ಹೆಚ್ಚು ಉಪನ್ಯಾಸವನ್ನು ಜಿಲ್ಲೆಯ ವಿವಿಧೆಡೆ ನೀಡಿದ್ದಾರೆ.  ಉತ್ಸಾಹಿ ಮತ್ತು ಅಷ್ಟೇ ಸಾಮಾಜಿಕ ಕಳಕಳಿಯುಳ್ಳ ಇಂತಹ ಯುವಪ್ರತಿಭೆಗಳಿಗೆ ಇನ್ನಷ್ಟು ನೀರೆರೆಯುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ.
ಯುವಪ್ರತಿಭೆಯನ್ನು ಗುರುತಿಸುವ ಕೆಲಸ ನಡೆಯಬೇಕು. ಸಾಕಷ್ಟು ಯುವ ಪ್ರತಿಭೆಗಲಿಗೆ ವೇದಿಕೆೆ ಇಲ್ಲದೆ ಸೊರಗುತ್ತಿವೆ. ಯುವಜನರನ್ನು  ಮತ್ತು ಅವರಲ್ಲಿರುವ ಕಲೆಯನ್ನು ಬೆಳಕಿಗೆ ತರುವ ಕೆಲಸವಾಗಬೇಕಿದೆ. ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಬೇಕು. ಇದಕ್ಕೆ ತಕ್ಕ ತರಬೇತಿ ಸಿಗುವಂತಾಗಬೇಕು. ಗ್ರಾಮಾಂತರದಲ್ಲಿ ಪ್ರತಿಭೆಗಳು ಕಮರುತ್ತಿವೆ. ಇದಕ್ಕೆ ವೇದಿಕೆ ರೂಪಿತವಾಗಬೇಕು. ಸರಕಾರ ಯುವಜನರ ಶಕ್ತಿಯನ್ನು ಅರ್ಥೈಸಿಕೊಂಡು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ  ನಮ್ಮ ಸಂಸಕ್ರತಿ ಮತ್ತು ಪರಂಪರೆಯನ್ನು ಉಳಿಸಬೇಕೆನ್ನುತ್ತಾರೆ ಪ್ರಿಯಾಂಕಾ.
12.11.16
..............................

No comments:

Post a Comment