Wednesday 10 January 2018

ಅಡಿಕೆ ಬೆಳೆಗಾರರ ಸೇವೆಗೆ ನಿಂತ
ವಿಶ್ವನಾಥ ಕುಂಟುವಳ್ಳಿ  


ಅಡಿಕೆ ಬೆಳೆ ಸದಾ ಸುದ್ದಿಯಲ್ಲಿರುವಂತಹುದು. ಒಮ್ಮೆ ಕೊಳೆ ರೋಗ, ಹಿಡಿಮುಮುಂಡಿಗೆ ರೋಗ, ಹಳದಿ ರೋಗದಿಂದ ತತ್ತರಿಸಿದರೆ, ಮತ್ತೊಮ್ಮೆ ವಿದೇಶಿ ಅಡಿಕೆಯಿಂದಾಗಿ ದರ ಕುಸಿತದಲ್ಲಿ ಸಿಲುಕಿ ಬೆಳೆಗಾರರಿಂದ ಪ್ರತಿಭಟನೆ, ಹೋರಾಟಕ್ಕಿಳಿಯುವಂತಾಗಿದೆ. ಇದರ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ಕೂಲಿಗಳ ಕೊರತೆಯೂ ಅಧಿಕವಾಗಿ ಬಾಧಿಸುತ್ತಿದೆ. ಇದನ್ನು ಮನಗಂಡು  ಅಡಿಕೆ ಕೃಷಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕೂಲಿ ಕೊರತೆಯನ್ನು ಕಡಿಮೆ ಮಾಡುವುದು ಹಾಗೂ  ಆಧುನಿಕ ಯಂತ್ರೋಪಕರಣಗಳನ್ನುತಯಾರಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು  ರೈತ ಕುಟುಂಬದ ಕ್ರಿಯಾಶೀಲ ಮನೋಭಾವದ ವ್ಯಕ್ತಿಯೊಬ್ಬರು ಮಾಡಿ ಈಗ ರಾಜ್ಯ-ಹೊರರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಕುಂಟುವಳ್ಳಿಯ ವಿಶ್ವನಾಥ ಅವರು ಈ ಸಾಧಕರು. ಅಡಿಕೆ  ಬೆಳೆಗಾರರು ಕೂಲಿಕಾರರ ಸಮಸ್ಯೆಯನ್ನು  ಎದುರಿಸುತ್ತಿರುವ ಸಂದರ್ಭದಲ್ಲಿ ಇವರು ತಯಾರಿಸಿದ ಯಂತ್ರೋಪಕರಣಗಳು ವರವಾಗಿ ಮಾರ್ಪಾಟಾಗಿವೆ. ತೀರ್ಥಹಳ್ಳಿ ತಾಲೂಕಿನ ಕುಂಟುವಳ್ಳಿ ಗ್ರಾಮದ ದತ್ತ್ತಾತ್ರಿ ಮತ್ತು ಸರಸ್ವತಿಯಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ವಿಶ್ವನಾಥ ಅವರು ಚಿಕ್ಕವಯಸ್ಸಿನಲ್ಲೇ ಸ್ವಂತದ್ದಾಗಿ ಯಂತ್ರೋಪಕರಣ ತಯಾರಿಸಿ  ಸಾಧನೆ ಮಾಡಬೇಕೆಂಬ ಕನಸು ಕಂಡವರು. ಅದನ್ನೇ ನನಸಾಗಿಸಿದರು ಕೂಡ. ಅವರೂ ಸಹ ರೈತರಾಗಿರುವುದು ಇದಕ್ಕೆ ಮೂಲಪ್ರೇರೇಪಣೆ ಎನ್ನಬಹುದು. ಕಂಡ ಕನಸನ್ನು ನನಸಾಗಿಸುವ ದಾರಿಯಲ್ಲಿ ಸಾಕಷ್ಟು ಎಡರು-ತೊಡರುಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ಮೆಟ್ಟಿನಿಂತು  ಸಾಧನೆಗೈದಿದ್ದಾರೆ ವಿಶ್ವನಾಥ ಅವರು. 
 ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯ ಸೇವಾ ಭಾರತಿ ಶಾಲೆಯಲ್ಲಿ ಮುಗಿಸಿ, ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೊಮಾವನ್ನು ಅಲ್ಲಿನ ಸಹ್ಯಾದ್ರಿ ಪಾಲಿಟೆಕ್ನಿಕ್‌ನಲ್ಲಿ ಮುಗಿಸಿ ಹೊಸ ಸಂಶೋಧನೆಗೆ ಕಾಲಿಟ್ಟು ಈಗ ಅದರಲ್ಲಿ ಯಶಸ್ವಿಯಾಗಿದ್ದಾರೆ.  ಸ್ವತಃ ಅಡಿಕೆ ಕೃಷಿಕರಾಗಿರುವ ವಿಶ್ವನಾಥ, ಬೆಳೆಗಾರರ ಸಂಕಷ್ಟಗಳು ದಿನೇದಿನೇ ಹೆಚ್ಚುತ್ತಿರುವುದನ್ನು ಕಂಡು ಇಂದಿನ ತಂತ್ರಜ್ಞಾನ ಯುಗದಲ್ಲಿ  ಅದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ನಿರ್ಧರಿಸಿ ಆ ದಿಸೆಯಲ್ಲಿ ಹೆಜ್ಜೆ ಇಟ್ಟವರು.
ಸಂಶೋಧಿಸಿದ ಯಂತ್ರವನ್ನು ಅತ್ಯಾಧುನಿಕವಾಗಿ ಮಾರ್ಪಡಿಸಿ ರೈತರಿಗೆ ತಲುಪಿಸಲು ತೀರ್ಥಹಳ್ಳಿಯ  ಮೇಳಿಗೆ ಗ್ರಾಮದ ತಮ್ಮ ಹಳ್ಳಿಯಲ್ಲಿ ವಿ ಟೆಕ್ ಇಂಜಿನಿಯರ್ಸ್  ಎಂಬ ಸಂಸ್ಥೆಯನ್ನು 2008ರಲ್ಲಿ ಹುಟ್ಟು ಹಾಕಿದ್ದಾರೆ. ಇದರ ಮೂಲಕ ಅತಿ ಕಡಿಮೆ ದರದಲ್ಲಿ ಸಾಮಾನ್ಯ ಕೆಲಸಗಾರರೂ  ನಿರ್ವಹಿಸಬಹುದಾದ  ಉತ್ಕೃಷ್ಟ ಯಂತ್ರವನ್ನು ರೈತರಿಗೆ ತಲುಪಿಸಿ ಅವರ ಮನ ಗೆದ್ದಿದ್ದಾರೆ. ಈ ಸಂಸ್ಥೆಯ ಮೂಲಕ ಅವರು ತಯಾರಿಸಿರುವ ಯಂತ್ರಗಳೆಂದರೆ, ಅಡಿಕೆ ಬೆಳೆಯ ಸಂಸ್ಕರಣೆಗೆ ಸಹಾಯವಾಗುವಂತಹ  ನಾಲ್ಕು ಮಾದರಿಯ (ವಿ-1, ವಿ-2, ವಿ-4 ಮತ್ತು ವಿ-6) ಅಡಿಕೆ ಸುಲಿಯುವ ಯಂತ್ರಗಳು, ಅಡಿಕೆಯನ್ನು ಗೊನೆಯಿಂದ ಬೇರ್ಪಡಿಸುವ ಯಂತ್ರ, ಅಡಿಕೆ ಗೊರಬಲನ್ನು ಪಾಲಿಶ್ ಮಾಡುವ ಯಂತ್ರ, ಅಡಿಕೆ ಬೇಯಿಸಲು ತೊಟ್ಟಿ ಮತ್ತು ಒಣಗಿಸಲು ಮೆಷ್ ಟ್ರೇ ಇತ್ಯಾದಿ.
ಎಲ್ಲಾ ಕೃಷಿಗೂ ಇಂದು ಯಂತ್ರೋಪಕರಣ ಅವಶ್ಯ. ಅದಿಲ್ಲದೆ ಕೃಷಿ ನಿರ್ವಹಣೆ ಅಸಾಧ್ಯ ಎನ್ನುವ ವಾತಾವರಣ ಬೆಳೆದಿದೆ. ಇಂದಿನ ದಿನಮಾನಗಳಲ್ಲಿ  ವಿ ಟೆಕ್  ರೈತರ ಪಾಲಿಗೆ ವರದಾಯಕ ಎಂಬಂತಾಗಿದೆ.  ರಾಜ್ಯದ ಮೂಲೆ, ಮೂಲೆಗಳಿಂದ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಇದೆ.  ಎಲ್ಲಾ ವರ್ಗದ ಕೃಷಿಕರಿಗೂ ಇದು ಲಭ್ಯವಾಗುವಂತೆ ಮಾಡಿದ್ದರಿಂದ ರೈತ ವಲಯದಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿದ್ದೇನೆ ಎನ್ನುತ್ತಾರೆ ವಿಶ್ವನಾಥ ಅವರು. .
ರೈತರ ಬೇಡಿಕೆಗೆ ತಕ್ಕಂತೆ ಯಂತ್ರಗಳನ್ನು ಮಾರ್ಪಾಡು ಮಾಡಲಾಗುತ್ತಿದೆ. ಆಧುನೀಕರಣಗೊಳಿಸಲಾಗುತ್ತಿದೆ. ಈ ಯಂತ್ರದಲ್ಲಿ ಅತ್ಯುತ್ತಮ ಗುಣಮಟ್ಟದ  ಮತ್ತು ವಿದೇಶದಿಂದ ಆಮದು ಮಾಡಿಕೊಂಡ ನವೀನ ತಂತ್ರಜ್ಞಾನದ ಬಿಡಿಭಾಗಗಳನ್ನು ಅಳವಡಿಸಲಾಗುತ್ತಿದೆ. ಜೊತೆಗೆ ಇದನ್ನು ಪಡೆದ ರೈತರೊಂದಿಗೆ ಸದಾ ಸಂಪರ್ಕದಲ್ಲಿರುತ್ತೇವೆ. ಈ ಮೂಲಕ ಅವರ ಅನಿಸಿಕೆ ಮತ್ತು ಸಮಸ್ಯೆಯನ್ನು ಅರಿಯುತ್ತಿರುವುದಾಗಿ ಅವರು ವಿವರಿಸುತ್ತಾರೆ.
  37ರ ಹರಯದ ವಿಶ್ವನಾಥ ಅವರ ಕಣ್ಣಲ್ಲಿ ಇನ್ನೂ ಹಲವು ನೂತನ ಆವಿಷ್ಕಾರದ ಕನಸುಗಳಿವೆ. ಅಡಿಕೆ ಬೆಳೆಗಾರರ ಉಪಯೋಗಕ್ಕೆ, ಕಾಲಕ್ಕೆ ತಕ್ಕಂತೆ  ಹೊಸದೇನನ್ನು ಮಾಡಬಹುದೆನ್ನುವ ಚಿಂತನೆ ಮತ್ತು ತುಡಿತದಲ್ಲೇ ಸದಾ ಅವರು  ಮುಳುಗಿರುತ್ತಾರೆ.
..................................

No comments:

Post a Comment