Thursday 18 January 2018

ಅಭಿನಯ ರಾಣಿ
ಮಹತಿ ವೈಷ್ಣವಿ ಭಟ್


ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಗಾದೆ ಮಾತಿದೆ.  ಮಕ್ಕಳು ತಮ್ಮ ಎಳೆವಯಸ್ಸಿನಲ್ಲಿ ಯಾವ ರೀತಿ ಕಲೆ, ಸಂಸ್ಕಾರ, ಸನ್ನಡತೆಗಳನ್ನು ಬೆಳೆಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯುತ್ತಾರೋ ಮುಂದೆ ಅದೇ ಮಾರ್ಗದಲ್ಲಿ ಸಾಗುತ್ತಾರೆ, ಸುಸಂಸ್ಕೃತ ಸಂಪನ್ನರಾಗುತ್ತಾರೆ. ಅವರಲ್ಲಿರುವ ಕಲೆ ಅಥವಾ ಇನ್ನಿತರ ಪ್ರತಿಭೆಯನ್ನು ಪತ್ತೆ ಮಾಡಿ ಆ ಸಂದರ್ಭದಲ್ಲೇ ನೀರೆರೆದರೆ ಅದು ಚಿಗುರಿ, ಬೆಳೆದು ಮುಂದೆ ಹೆಮ್ಮರವಾಗಲು ಸಾಧ್ಯವಾಗುತ್ತದೆ.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರ ಜಗತ್ತಿಗೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ಬೇಕು. ಒಮ್ಮೆ ಇಂತಹ ಅವಕಾಶ ಸಿಕ್ಕರೆ ಅವರು ತಮ್ಮಲ್ಲಿರುವ ಅದ್ಭುತ ಪ್ರತಿಭೆಯನ್ನು ಹೊರಹಾಕಿ ಹೇಗೆ ಪ್ರಸಿದ್ಧರಾಗಬಲ್ಲರು ಎನ್ನುವುದಕ್ಕೆ  ಕೋಣಂದೂರಿನ ಮಹತಿ ವೈಷ್ಣವಿ ಭಟ್ ಉತ್ತಮ ಉದಾಹರಣೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ  ಡ್ರಾಮಾ ಜೂನಿಯರ್ಸ್ ಮೂಲಕ ಅಭಿನಯಕ್ಕೆ ಕಾಲಿಟ್ಟ ಮಹತಿ, ಈಗ ರಾಜ್ಯದಾದ್ಯಂತ ಪ್ರದರ್ಶಿತವಾಗುತ್ತಿರುವ ಎಳೆಯರು ನಾವು ಗೆಳೆಯರು ಎಂಬ ಮಕ್ಕಳ ಚಲನಚಿತ್ರದಲ್ಲಿ ಎಲ್ಲರೂ ಕೊಂಡಾಡುವ ರೀತಿಯಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಕೋಣಂದೂರಿನ ಡಾ. ಕೆ. ಎಸ್. ಮುರಳೀಧರ್ ಮತ್ತು ಡಾ. ಸುಚಿತ್ರಾ  ಅವರ ಪುತ್ರಿಯಾದ ಮಹತಿ,  ನ್ಯಾಶನಲ್ ರೆಸಿಡೆನ್ಶಿಯಲ್ ಸ್ಕೂಲ್‌ನ 6ನೆಯ ತರಗತಿಯ ವಿದ್ಯಾರ್ಥಿನಿ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಈಕೆ ಸದಾ ಮುಂದು. ಡ್ರಾಮಾ ಜೂನಿಯರ್ಸ್‌ನಲ್ಲಿ ಲವಲವಿಕೆಯಿಂದ, ಅಷ್ಟೇ ಸೊಗಸಾಗಿ ಯೋಧನ ಹೆಂಡತಿಯಾಗಿ, ಅಂಗವಿಕಲನ ತಾಯಿಯಾಗಿ, ಗಯ್ಯಾಳಿ ಹೆಂಡತಿಯಾಗಿ, ಮಗುವನ್ನು ಕಳೆದುಕೊಂಡ ತಾಯಿಯಾಗಿ,  ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ಸಿಂಧುವಾಗಿ, ಭಸ್ಮಾಸುರನನ್ನು ಸಂಹರಿಸಿದ ಮೋಹಿನಿಯಾಗಿ, ತರಕಾರಿ ನಿಂಗವ್ವಳಾಗಿ, ಕೊಳಗೇರಿಯಲ್ಲಿ ಬದುಕುವವಳಾಗಿ, ಪೊಲೀಸನ ಹೆಂಡತಿಯಗಿ ಮನಸೆಳೆದಿದ್ದಾಳೆ.
ತನ್ನ ಚುರುಕಿನ ಮಾತಿನ ಮೋಡಿಯಿಂದ ಕರ್ನಾಟಕದಲ್ಲಿ ಕ್ವೀನ್ ಆಫ್ ಎಕ್ಸ್‌ಪ್ರೆಶನ್, ಡಿಂಪಲ್ ಕ್ವೀನ್, ಏಂಜಲ್ ಮಹತಿ ಎಂದೆಲ್ಲ ಅಭಿಮಾನಿಗಳಿಂದ ಕೊಂಡಾಡಲ್ಪಟ್ಟಿದ್ದಾಳೆ. ನಟನೆಯಲ್ಲಿ ನಿರ್ಣಾಯಕರ ಕಣ್ಣಾಲಿಗಳನ್ನು ತೇವಗೊಳಿಸಿದ, ಮೂರು ಬಾರಿ ಅತ್ಯುತ್ತಮ ನಾಟಕ ಕಲಾವಿದೆ ಪ್ರಶಸ್ತಿ ಪಡೆದಿರುವ ಮಲೆನಾಡಿನ ಈ ಪಾದರಸದ ಪೋರಿ, ಸಂಗೀತ, ಕವನ ರಚನೆ, ಹಾಡು, ಭಾಷಣ ಮತ್ತು ನಿರೂಪಣೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದಾಳೆ. ತನ್ನ ತಾಯಿ ಮತ್ತು ತಾತ ವಿದ್ವಾನ್ ಬಿ.ಎಸ್. ನಾಗರಾಜ್ ಅವರಲ್ಲಿ ಸಂಗೀತ ಕಲಿಯುತ್ತಿದ್ದಾಳೆ. ಅವರ ಕುಟುಂಬವೇ ವಿವಿಧ ಕಲೆ, ಆಸಕ್ತಿಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಈಕೆಗೂ ಇದು ರಕ್ತಗತವಾಗಿ ಮೂಡಿಬಂದಿದೆ.   
 ಈಕೆಯ ಸಹಜ ಅಭಿನಯ ವಿಶಿಷ್ಟವಾದುದು. ಸದಾ ನಗುಮೊಗದ, ಕೇಳಿದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುವ, ಪಾದರಸ ವ್ಯಕ್ತಿತ್ವದ ಮಹತಿಯ ಸಾದನೆಯನ್ನು ಗಮನಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯು ಚಿಣ್ಣರ ದಸರಾಕ್ಕೆ ಮುಖ್ಯ ಅತಿಥಿಯಾಗಿ ಕರೆದು ಗೌರವಿಸಿದೆ. ವಿಜಯದಶಮಿಯಂದು ಚಿತ್ರದುರ್ಗ ಮುರುಘಾಮಠದಲ್ಲಿ ಎರಡು ನಾಟಕ ಪ್ರದರ್ಶಿಸಿ ಸ್ವಾಮೀಜಿಯಿಂದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಶಿವಮೊಗ್ಗದ ಆಧಾರ ರಕ್ತದಾನಿಗಳ ಸಂಘ, ರಿಪ್ಪನ್‌ಪೇಟೆಯ ಕರ್ನಾಟಕ ಸುಗಮ ಸಂಗೀತ ಪರಿಷತ್, ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಮತ್ತು ಶಾರದಾಂಬಾ ಸಾಂಸ್ಕೃತಿಕ ಕಲಾ ಸಂಘದವರು ಈ ಪ್ರತಿಭೆಯನ್ನು ಸನ್ಮಾನಿಸಿ ಹರಸಿದ್ದಾರೆ.   
ಮೊದಲಿನಿಂದಲೂ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ನಾಟಕಗಳನ್ನು ನೋಡುತ್ತಿದ್ದೆ. ಇದರಿಂದ ನಾಟಕದಲ್ಲಿ ಅಭಿನಯಿಸುವ ಆಸಕ್ತಿ ಬಂತು. ಕನ್ನಡ ನಾಟಕದಲ್ಲಿ ಅವಕಾಶವೂ ಸಿಕ್ಕಿತು. ಅಲ್ಲಿಂದ ಅಭಿನಯದ ಕಲೆ ಚಾಲ್ತಿಗೆ ಬಂತು ಎನ್ನುವ ಮಹತಿ, ಶಾಲೆಯಲ್ಲಿ ಸಹಪಾಠಿಗಳು ನನ್ನ ರಜಾ ದಿನದ ಕಲಿಕೆಯ ನೋಟ್ಸ್‌ಗಳನ್ನು ನೀಡಿ ಸಹಕರಿಸುತ್ತಿದ್ದಾರೆ. ಇದರಿಂದ ಕಲಿಕೆಗೆ ತೊಂದರೆಯಾಗುತ್ತಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಇನ್ನಷ್ಟು ಅವಕಾಶಗಳು ಬಂದಿವೆ. ಹೆಸರಾಂತ ನಿರ್ದೇಶಕರು ಮಾತನಾಡಿದ್ದಾರೆ. ಮುಂದಿನ ಹೆಜ್ಜೆ ತೀರ್ಮಾನಿಸಿಲ್ಲ ಎನ್ನುತ್ತಾರೆ.
ಮಲೆನಾಡಿನ ಈ ಪುಟ್ಟ ಪ್ರತಿಭೆ ಕಲೆ ಮತ್ತು ಸಾಂಸ್ಕೃತಿಕ, ರಂಗದಲ್ಲಿ ಇನ್ನಷ್ಟು ಬೆಳೆದು ಮಿಂಚಲಿ ಎನ್ನುವುದು ಎಲ್ಲರ ಹಾರೈಕೆ.
10.6.17
...........................................  

No comments:

Post a Comment