Tuesday 9 January 2018

ಅನಾಥ ಶವಗಳಿಗೆ ದಿಕ್ಕುತೋರುವ
ತಿಪ್ಪೇಸ್ವಾಮಿ (ರಾಜು)

ಸೇವೆ  ಮಾಡಲು ಕಾಲೇಜಿನ ಪದವಿ ಬೇಕಿಲ್ಲ. ಹೃದಯ ತುಂಬಿದ ದಯೆ ಮತ್ತು ವಾತ್ಸಲ್ಯ ಇರಬೇಕು. ಆತ್ಮ ಪ್ರೀತಿ ಬೇಕು ಎಂಬ ಮಾತಿದೆ.  ಏಕೆಂದರೆ ಸೇವೆ ಎನ್ನುವುದು ಯಾರೂ ಹೇಳಿಕೊಟ್ಟು ಅಥವಾ ಕಲಿಸಿ ಬರುವಂತಹದ್ದಲ್ಲ. ನಮ್ಮಲ್ಲಿರುವ ಮಾನವೀಯತೆಯೂ ಸೇವೆಗೆ ಕಾರಣವಾಗುತ್ತದೆ.
ಶಿವಮೊಗ್ಗ ನಗರದಲ್ಲಿ ಇಂತಹ ವ್ಯಕ್ತಿಯೊಬ್ಬರಿದ್ದಾರೆ. ಅವರು ಅನಾಥರ, ಬೀದಿ ಪಾಲಾದವರ, ಅಪರಿಚಿತ, ಅನಾಥ ಶವಗಳ ಅಂತ್ಯಸಂಸ್ಕಾರದ ಸೇವೆ ಮಾಡುತ್ತಿದ್ದಾರೆ. ನಗರದ ಅಶೋಕನಗರದ  ವಾಸಿ ತಿಪ್ಪೇಸ್ವಾಮಿ (ರಾಜು) ಈ ವ್ಯಕ್ತಿ.  ವೃತ್ತಿಯಿಂದ ಅಂಬ್ಯುಲೆನ್ಸ್ ಚಾಲಕ ಮತ್ತು ಮಾಲಕ. ಇವರ ಸೇವೆ ಇವತ್ತು ನಿನ್ನೆಯದಲ್ಲ. ಸುಮಾರು 12 ವರ್ಷಕ್ಕೂ ಮೀರಿದ್ದು. ಈವರೆಗೆ ಸುಮಾರು ಒಂದು ಸಾವಿರ ಅನಾಥ ಶವಗಳನ್ನು ಸಾಗಿಸಿ ಮುಕ್ತಿ ನೀಡಿದ್ದಾರೆ. ಇಂತಹ ಮಾನವೀಯ ಅಂತಃಕರಣವುಳ್ಳ ಇವರಿಗೆ ಇತ್ತೀಚೆಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಸನ್ಮಾನಿಸಿದ್ದಾರೆ.
ತಿಪ್ಪೇಸ್ವಾಮಿ ಓದಿದ್ದು ಪಿಯು ಮಾತ್ರ. ನಂತರ ಓಮ್ನಿ ಖರೀದಿಸಿ ಬಾಡಿಗೆಗೆ ಇಟ್ಟಿದ್ದರು. ಈ ವೇಳೆ ಅವರಿಗೆ ಅಂಬುಲೆನ್ಸ್ ಮೂಲಕ ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ಸೇವೆ ನೀಡ
ಬೇಕೆಂಬ ವಿಚಾರ ಮೂಡಿದ್ದರಿಂದ ಅಂಬ್ಯುಲೆನ್ಸ್ ಖರೀದಿಸಿದರು. ಒಮ್ಮೆ ಅಂಬ್ಯುಲೆನ್ಸ್‌ನಲ್ಲಿ ಹೋಗುವಾಗ ರಸ್ತೆಯಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದು ಚಿಂದಿಯಾಗಿದ್ದ ಭಿಕ್ಷುಕನೊಬ್ಬನ ದೇಹವನ್ನು ಕಂಡು ಪೊಲೀಸರಿಗೆ ತಿಳಿಸಿ ಅದನ್ನು ಮೇಲೆತ್ತಿ ಆಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಂ ನಂತರ ಅಂತ್ಯಕ್ರಿಯೆ ನಡೆಸಿದ್ದರು. ಇದೇ ಅವರಿಗೆ ಮೊದಲ ಹೆಜ್ಜೆಯಾಯಿತು. ನಂತರ ಇಂತಹ ಸಾವಿರಾರು ಅನಾಥ ಶವಗಳಿಗೆ ದಿಕ್ಕು ತೋರಿಸಿದರು.
  ಶಿವಮೊಗ್ಗದಲ್ಲಿ ಎಲ್ಲೇ ಅನಾಥ ಶವ ಸಿಕ್ಕಲಿ, ಅನಾಥರು ಜೀವಂತರವಿರಲಿ ಅಥವಾ  ನರಳುತ್ತಿರಲಿ, ಇವರ ಸೇವೆಗೆ ತಿಪ್ಪೇಸ್ವಾಮಿ ಹಾಜರ್. ಜೀವವಿದ್ದರೆ ಅವರಿಗೆ ಆಹಾರ, ಬಟ್ಟೆ ವ್ಯವಸ್ಥೆ ಮಾಡಿಸಿ, ಅವಶ್ಯವಿದ್ದರೆ ಮೆಗ್ಗಾನ್‌ಗೆ ದಾಖಲಿಸುತ್ತಾರೆ. ಆಸ್ಪತ್ರೆಯಲ್ಲಿ ಇವರು ಸುಮಾರು 15 ವರ್ಷದಿಂದ ಚಿರಪರಿಚಿತರಾಗಿರುವುದರಿಂದ ಇವರು ಕರೆತಂದ ರೋಗಿಗಳಿಗೆ ವೈದ್ಯರು ಚಿಕಿತ್ಸೆ ಇಲ್ಲ ಎನ್ನುವುದಿಲ್ಲ. ನರಳುತ್ತಿದ್ದ ಇಂತಹ ಎಷ್ಟೋ ಅನಾಥರನ್ನು ರಕ್ಷಿಸಿದ ಕೀರ್ತಿ ಇವರದ್ದು.  ಕೊಳೆತು ಹುಳುವಾಗಿರುವ, ಮೇಲೆತ್ತಲೂ ಆಗದೆ ದುರ್ವಾಸನೆ ಬೀರುವ, ಶವಗಳನ್ನು ಎತ್ತಿ ತಮ್ಮ ಅಂಬ್ಯುಲೆನ್ಸ್‌ನಲ್ಲಿ ಹಾಕಿಕೊಂಡು ತಂದು ಆಸ್ಪತ್ರೆ ಶವಾಗಾರಕ್ಕೆ ಸೇರಿಸಿ ನಂತರ ಅಂತ್ಯಕ್ರಿಯೆಗೆ ಸಹಕರಿಸುತ್ತಾರೆ. ಇಂತಹ ಶವಗಳ ಪಂಚನಾಮೆ ಸಾಕ್ಷಿಗೆ ತಾವೇ ಮೂವರನ್ನು ಕರೆದುಕೊಂಡು ಬರುತ್ತಾರೆ. ಒಟ್ಟಿನಲ್ಲಿ ದೂರುದಾರ, ವಾರಸುದಾರ ಮತ್ತು ಸಾಗಾಣಿಕೆದಾರ ಮತ್ತು ಅಂತ್ಯಕ್ರಿಯೆ ನಡೆಸುವ ಮೂಲಕ ತಮ್ಮ ಹೃದಯವಂತಿಕೆಯನ್ನು ತೋರುತ್ತಿದ್ದಾರೆ.
ಪೊಲೀಸರಿಗೆ ಅಪಘಾತ, ಶವ ಪತ್ತೆ ಬಗ್ಗೆ ಮಾಹಿತಿ ಬಂದಾಕ್ಷಣ ಅವರು ಮೊದಲು ಕರೆ ಮಾಡುವುದೇ ತಿಪ್ಪೇಸ್ವಾಮಿಯವರಿಗೆ. ಏಕೆಂದರೆ ಬೇರೆ ಯಾವ ಅಂಬ್ಯುಲೆನ್ಸ್ ಚಾಲಕರೂ ಇಂತಹ ಸೇವೆ ಮಾಡುವುದಿಲ್ಲ. ಹಗಲು- ರಾತ್ರಿ ಎನ್ನದೆ ಸದಾ ಸೇವೆಗೆ ಸನ್ನದ್ಧರಾಗಿರುವ ಇವರು ಯಾವತ್ತ್ತೂ ಪೊಲೀಸ ಕರೆಯನ್ನು ನಿರ್ಲಕ್ಷಿಸಿಲ್ಲ. ಅನಾಥರು ಎಲ್ಲಿಯಾದರೂ ಕಂಡುಬಂದಲ್ಲಿ ಅವರಿಂದ ಮಾಹಿತಿ ಪಡೆದು ಅವರ ರಕ್ಷಣೆ ಮಾಡುತ್ತಾರೆ. 
ಮಂಗಳೂರು, ಮಣಿಪಾಲ, ಬೆಂಗಳೂರು ಮೊದಲಾದೆಡೆ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವುದಲ್ಲದೆ ಅಲ್ಲಿ ವೈದ್ಯರಿಗೆ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆ ರೋಗಿಗೆ ಸಿಗುವಂತೆ ಮಾಡುತ್ತಿದ್ದಾರೆ. ಇದರಿಂದಲೇ ಅವರು ಜನಪ್ರಿಯರಾಗಿದ್ದಾರೆ. ಇವರ ಅನುಪಮ ಮತ್ತು ಯಾವ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಯನ್ನು ಮನ್ನಿಸಿ ಅರಿವು ಸಂಸ್ಥೆ, ರೋಟರಿಯವರು ಸನ್ಮಾನಿಸಿದ್ದಾರೆ. ತಾನು ಸೇವೆ ಮಾಡಿದ್ದಕ್ಕೆ ಯಾರಿಂದಲೂ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ಮಾನವೀಯತೆ ಮೆರೆಯುತ್ತಿದ್ದಾರೆ. ಮಾನವೀಯತೆಯೇ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ತಿಪ್ಪೇಸ್ವಾಮಿಯಂತಹವರು ಇನ್ನಷ್ಟು ಹೆಚ್ಚಬೇಕಿದೆ. 
published on 23,7. 16
..............................

No comments:

Post a Comment