Wednesday 24 January 2018

ಅಂಧರ ಬಾಳಿಕೆ ಬೆಳಕು
ಸಂಪತ್‌ರಾಜ್


 ಕಣ್ಣಿಗೆ ಸಾವಿಲ್ಲ ಎಂಬುದನ್ನು ಇಂದಿನ ಆಧುನಿಕ ವಿಜ್ಞಾನ ಸಾಬೀತುಮಾಡಿದೆ. ಸತ್ಯ. ವ್ಯಕ್ತಿಯ ಮರಣದ ನಂತರ  ಮಣ್ಣಲ್ಲಿ ಮಣ್ಣಾಗಿ ಹೋಗಬಹುದಾದ ಕಣ್ಣುಗಳನ್ನು ಕಳಚಿ ತಂದು ಅಂಧರಿಗೆ ಯಶಸ್ವಿಯಾಗಿ ಆಳವಡಿಸಬಹುದು.  ಇದರಿಂದ ನಾವುಗಳು ಸತ್ತ ಮೇಲೂ ಬೇರೆಯವರ ಬಾಳಿಗೆ ಬೆಳಕಾಗುವುದರ ಮೂಲಕ ಜಗತ್ತನ್ನು ನೋಡಬಹುದು. ಇಂತಹ ಸುಮಾರು 300 ವ್ಯಕ್ತಿಗಳ ಕಣ್ಣುಗಳನ್ನು ಸಂಗ್ರಹಿಸಿ ಅಂಧರ ಬಾಳಿಗೆ ಬೆಳಕಾಗುವಂತಹ ಮಾನವೀಯ ಕಾರ್ಯಗಳನ್ನು ಸದ್ದಿಲ್ಲದೆ ಮಾಡುವವರೊಬ್ಬರು ಭದ್ರಾವತಿಯಲ್ಲಿದ್ದಾರೆ. ಅವರೇ ಸಂಪತ್‌ರಾಜ್ ಬಾಂಟಿಯಾ.
1986 ರಲ್ಲಿ ಕನ್ನಡ ವಾರ ಪತ್ರಿಕೆಯೊಂದರಲ್ಲಿ  ಕಣ್ಣುಗಳನ್ನು ಕೊಡಿ ಎಂಬ  ಬೆಂಗಳೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಯ ಲೇಖನವನ್ನು ಓದಿ ಇದರಿಂದ ಸ್ಫೂರ್ತಿಗೊಂಡವರು ಇವರು ಬಿ ಕಾಂ ಪದವಿ ಹಾಗೂ ಡಿ ಫಾರ್ಮ್ ಪದವೀಧರರು. ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಬೇಕೆಂದುಕೊಂಡಿದ್ದ ಸಮಯದಲ್ಲಿ ಈ ಲೇಖನ  ಅವರ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿತು. ಅದರ ಫಲವಾಗಿ  ಜಿಲ್ಲೆಯ ಪ್ರಪ್ರಥಮ ಐ ಡೊನೇಷನ್ ಸೊಸೈಟಿ ಭದ್ರಾವತಿಯಲ್ಲಿ ಸಾಕಾರಗೊಂಡಿತು.
ಸ್ನೇಹಿತ ಹಾಗೂ ಎಬಿವಿಪಿಯ ಇಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಘುನಂದನ್ ಜೊತೆಗೂಡಿ ಪ್ರಾರಂಭ ಮಾಡಲಾದ ಈ ಕಾರ್ಯಕ್ಕೆ ಡಾ.ಪ್ರಶಾಂತ ಇಸ್ಲೂರು, ಡಾ.ಟಿ.ನರೇಂದ್ರ ಭಟ್ ಸಹಕಾರದೊಂದಿಗೆ ಡಾ.ಸುರೇಶ್ ಇಸ್ಲೂರು 1987 ರ ಸೆಪ್ಟಂಬರ್ 5 ರಂದು ಐ ಡೊನೇಷನ್ ಸೊಸೈಟಿಯನ್ನು ಉದ್ಘಾಟಿಸಿದರು.
ಈ ಮೂಲಕ ನೇತ್ರದಾನದ ಬಗ್ಗೆ ಅರಿವು ಮೂಡಿಸಲು ಶಾಲಾ ಕಾಲೇಜುಗಳಲ್ಲಿ ನೇತ್ರದಾನದ ಬಗ್ಗೆ ಉಪನ್ಯಾಸಗಳನ್ನು ಆರಂಭಿಸಿದರು. ನೇತ್ರದಾನದ ಬೃಹತ್ ಆಂದೋಲನದ ಮೂಲಕ ವ್ಯಕ್ತಿ ಮೃತ ನಂತರ ಅವರ ಕಣ್ಣುಗಳನ್ನು ದಾನ ಮಾಡುವ ನೇತ್ರದಾನಕ್ಕೆ ಬೃಹತ್ ನೊಂದಣಿ ಕಾರ್ಯವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ಅದ್ಭುತ. ಸುಮಾರು ಇದರಿಂದ 300 ಕಣ್ಣುಗಳನ್ನು ಸಂಗ್ರಹಿಸಿ ಅಂಧರಿಗೆ ಅಳವಡಿಸಲು ಸಾಧ್ಯವಾಯಿತು. ಈ ಮಹಾನ್ ಕಾರ್ಯ ಬಹುಶಃ ರಾಜ್ಯದಲ್ಲೇ ಪ್ರಪ್ರಥಮ ಹಾಗೂ ದಾಖಲೆಯ ಸಂಗತಿ.
ನೇತ್ರ ಸಂಗ್ರಹ ಕಾರ್ಯಕ್ಕೆ ದಿನದ 24 ಗಂಟೆಯೂ ಇವರೊಂದಿಗೆ ಡಾ.ಕುಮಾರಸ್ವಾಮಿ, ಡಾ.ಅನುರಾಧಾ  ಸಹಕರಿಸುತ್ತಿದ್ದಾರೆ. ಸಂಗ್ರಹಿಸಿದ ಕಣ್ಣುಗಳನ್ನು ಪ್ರಾರಂಭದಲ್ಲಿ ಶಿವಮೊಗ್ಗದ ಡಾ.ಸುರೇಶ್ ಇಸ್ಲೂರು, ರೋಟರಿ ನೇತ್ರ ಭಂಡಾರ, ಬೆಂಗಳೂರಿನ ಲಯನ್ಸ್ ನೇತ್ರ ಭಂಡಾರ, ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಹಾಗು ಈಗ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿ ಕೊಡುತ್ತಿದ್ದಾರೆ.
  ಜನ ಸಾಮಾನ್ಯರಲ್ಲಿ ನೇತ್ರದಾನದ ಬಗ್ಗೆ ಅಜ್ಞಾನವಿದೆ. ಇನ್ನೊಂದೆಡೆ, ಮೂಢನಂಬಿಕೆ ಅರೆ ತಿಳಿವಳಿಕೆಗಳು ತೊಡಕುಂಟು ಮಾಡುತ್ತಿವೆ. ಯುವಕ- ಮಹಿಳಾ ಸಂಘಗಳು ನೇತ್ರದಾನಕ್ಕೆ ಜನರನ್ನು ಪ್ರೇರೇಪಿಸಬೇಕಿದೆ. ನೇತ್ರದಾನಕ್ಕೆ ಹೆಸರನ್ನು ನೊಂದಾಯಿಸಿ, ಬಂಧುಗಳನ್ನು, ಸ್ನೇಹಿತರನ್ನು ಹುರಿದುಂಬಿಸಬೇಕಿದೆ. ಇದರಿಂದ ಅಂಧರ ಬಾಳಿಗೆ ಆಶಾಕಿರಣವಾಗುತ್ತದೆ ಎನ್ನುತ್ತಾರೆ ಸಂಪತ್‌ರಾಜ್.
ಸದ್ಯ ಇಲ್ಲಿನ ಚನ್ನಗಿರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಎದುರು ಲೇವಾದೇವಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ನಾಮನಿರ್ದೇಶನ ಸದಸ್ಯರಾಗಿ, ಬಿಜೆಪಿ ನಗರ ಘಟಕದ ಕೋಶಾಧ್ಯಕ್ಷರಾಗಿ, ತರುಣ ಭಾರತಿ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆ ಮೂಕ ಪ್ರಾಣಿಗಳ ಬಗ್ಗೆ ತಮ್ಮ ವಿಶೇಷ ಕಾಳಜಿಯನ್ನು ಸಹ ಹೊಂದಿದ್ದು ಹೊಸ ದೆಹಲಿಯ ಪೀಪಲ್ಸ್ ಫಾರ್ ಅನಿಮಲ್ಸ್‌ನ ಅಜೀವ ಸದಸ್ಯರೂ ಹೌದು. ಪ್ರಾಣಿ ಹತ್ಯೆ ಹಾಗೂ ಪ್ರಾಣಿ ಬಲಿ ಕೊಡುವ ಬಗ್ಗೆ ಸಹ ಜನರಲ್ಲಿ ಜಾಗೃತಿಯನ್ನು ಉಂಟು ಮಾಡುತ್ತಿದ್ದಾರೆ. 
         2013 ರ ಸ್ವಾತಂತ್ರ ದಿನಾಚರಣೆಯ ಸಮಯದಲ್ಲಿ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಹಬ್ಬಗಳ ಸಮಿತಿ ಯವತಿಯಿಂದ ಸನ್ಮಾನಿಸಲಾಗಿದೆ.

No comments:

Post a Comment